Sunday 27 November 2016

ವಿದ್ಯಾರಣ್ಯರು-ವೇದಾಂತ ದೇಶಿಕರು ಅದೈತ-ವಿಶಿಷ್ಠಾದ್ವೈತದ ಅಪೂರ್ವ ಸಂಗಮ



ನಾಥಮುನಿ ಪವಿತ್ರ ಗ್ರಂಥಗಳನ್ನು ಪುನಃ ಪಡೆದರೆ, ಅದನ್ನು ಯಮುನ ಮುನಿ ವ್ಯಾಪಕವಾಗಿ ಪ್ರತಿಪಾದಿಸಿದರು. ನಂತರ ಬಂದ ರಾಮಾನುಜಾಚಾರ್ಯರು ಅದನ್ನು ವ್ಯಾಖ್ಯಾನಿಸಿದರೆ ಆ ನಂತರದ ದಿನಗಳಲ್ಲಿ ವಿಜ್ಞಾನ ರೂಪದಲ್ಲಿ ಕ್ರಮಬದ್ಧಗೊಳಿಸುವುದಕ್ಕಾಗಿ ಅವುಗಳನ್ನು ವೇದಾಂತ ದೇಶಿಕರಿಗೆ ನೀಡಲಾಯಿತು. ಇದು 13ನೇ ಶತಮಾನದಲ್ಲಿದ್ದ ಶ್ರೀವೈಷ್ಣವ ಸಿದ್ಧಾಂತದ ಆಚಾರ್ಯ ವೇದಾಂತ ದೇಶಿಕರ ಬಗೆಗಿನ ವರ್ಣನೆ. ವೇದಾಂತ ದೇಶಿಕರು ಶ್ರೀವೈಷ್ಣವ ಆಚಾರ್ಯರಾಗಿದ್ದರೂ ಅವರ ಕವಿತ್ವ, ತರ್ಕ, ಭೋಧನೆಗಳನ್ನು ಜೀವಿಸುತ್ತಿದ್ದ ಜೀವನ ಕ್ರಮದಿಂದ ಅನೇಕ ಅದ್ವೈತ ತತ್ವದ ಅನುಯಾಯಿಗಳು ವೇದಾಂತ ದೇಶಿಕರನ್ನು ಅತ್ಯಂತ ಪೂಜನೀಯ ಭಾವನೆಯಿಂದ ಕಾಣುತ್ತಾರೆ. ಶ್ರೇಷ್ಠ ಅದ್ವೈತ ವಿದ್ವಾಂಸರಾಗಿದ್ದ ಅಪ್ಪಯ್ಯ ದೀಕ್ಷಿತರಂತೂ ವೇದಾಂತ ದೇಶಿಕರನ್ನು "ಕವಿ-ತಾರ್ಕಿಕ ಸಿಂಹಂ" (ಕವಿ- ತಾರ್ಕಿಕರ ನಡುವಿನ ಸಿಂಹ) ಅಂದರೆ ತರ್ಕಬದ್ದವಾಗಿ ವಾದ ಮಾಡುವುದರಲ್ಲಿ ಅವರನ್ನು ಮೀರಿಸಲು ಸಾಧ್ಯವಿರಲಿಲ್ಲ ಎಂದು ಬಣ್ಣಿಸಿ ನಮಿಸಿದ್ದಾರೆ.

ಅಪ್ಪಯ್ಯ ದೀಕ್ಷಿತರು ವೇದಾಂತ ದೇಶಿಕರ ಕವಿತ್ವ- ತರ್ಕದ ವಿದ್ವತ್ ಪ್ರೌಢಿಮೆಯನ್ನು ವರ್ಣನೆ ಮಾಡುತ್ತಾ ಹೀಗೆ ಹೇಳುತ್ತಾರೆ. "ಇತ್ಥಂ ವಿಚಿನ್ತ್ಯ ಸರ್ವತ್ರ ಭಾವಾಃ ಸಂತಿ ಪದೇ ಪದೇ ಕವಿ ತಾರ್ಕಿಕ ಸಿಂಹಸ್ಯ ಕಾವ್ಯೇಷು ಲಲಿತೇಷ್ವಪಿ". ಅಂದರೆ ವೇದಾಂತ ದೇಶಿಕರ ಅತ್ಯಂತ ಸರಳ ಹಾಗೂ ಮೃದು ರಚನೆಯ ಪ್ರತಿ ಹಂತದಲ್ಲೂ ಪ್ರತಿ ಪದಗಳಲ್ಲೂ ಕವಿತ್ವದ ಶ್ರೇಷ್ಠತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು. ವೇದಾಂತ ದೇಶಿಕರು ಕೇವಲ ಕವಿತ್ವ-ತರ್ಕದ ವಿದ್ವತ್ತಿನ ಗಣಿಯಾಗಿರಲಿಲ್ಲ, ಅವರಲ್ಲಿ ಮಾನವ ಬುದ್ಧಿಶಕ್ತಿ ಪ್ರಜ್ಞೆಗೆ ತಿಳಿದ ಎಲ್ಲಾ ಕಲೆ-ವಿಜ್ಞಾನದ ಆಳವಾದ ಜ್ಞಾನದ ಬ್ರಹ್ಮಾಂಡವೇ ಇತ್ತು ಅದು ತಾತ್ವಿಕ ವೈಭವ, ನೈತಿಕ ಶ್ರೇಷ್ಠತೆ ಮತ್ತು ಸೌಂದರ್ಯದ ವೈಭವದಿಂದ ಕಂಗೊಳಿಸುತ್ತಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಅದಕ್ಕಾಗಿಯೇ ಅವರನ್ನು ಸರ್ವತಂತ್ರ ಸ್ವತಂತ್ರ( ಎಲ್ಲಾ ಕಲೆಗಳ ನಿಪುಣ) ಎಂದು ಶ್ರೇಷ್ಠ ವಿದ್ವಾಂಸರು ಬಣ್ಣಿಸಿದ್ದಾರೆ.      

ವೇದಾಂತ ದೇಶಿಕರ ಒಂದು ವೈಶಿಷ್ಟ್ಯವೇನೆಂದರೆ ಅವರು ತಮ್ಮ ಕವಿತ್ವವನ್ನು ತತ್ವಜ್ಞಾನದಿಂದ ಶ್ರೀಮಂತಗೊಳಿಸಿದ್ದರು. ತತ್ವಶಾಸ್ತ್ರವನ್ನು ಕವಿತ್ವದಿಂದಲೂ ಅಲಂಕೃತಗೊಳಿಸಿದ್ದರು. ಅವರು ಬೋಧನೆಗಳನ್ನೇ ಜೀವಿಸುತ್ತಿದ್ದರು. ಗೃಹಸ್ಥರಾಗಿದ್ದರೂ ಸಂತಶ್ರೇಷ್ಠ, ಋಷಿತುಲ್ಯರಂತೆ ಜೀವಿಸಿದ್ದರು. ಮುಘಲರ ಆಕ್ರಮಣದಿಂದ ಸನಾತನ ಧರ್ಮವನ್ನು ರಕ್ಷಿಸುವುದಕ್ಕೆ ವಿಜಯನಗರ ಸಾಮ್ರಾಜ್ಯಸ್ಥಾಪನೆಗೆ ಯತಿಗಳಾಗಿ ಸನ್ಯಾಸಿಗಳಾಗಿ, ದೇವತಾ ಸದೃಷ್ಯ ಸಂತರಾಗಿ ವಿದ್ಯಾರಣ್ಯರು ಮಾರ್ಗದರ್ಶನ ನೀಡಿದ್ದರು. ವಿದ್ಯಾರಣ್ಯರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರೂ ಸಹ ವಿದ್ಯಾರಣ್ಯರಂತೆಯೇ ಸನಾತನ ಧರ್ಮದ ರಕ್ಷಣೆಯ ವಿಷಯದಲ್ಲಿ ಅವಿಸ್ಮರಣೀಯರಾಗಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಯಾವೆಲ್ಲಾ ಘಟನೆಗಳು ವಿದ್ಯಾರಣ್ಯರನ್ನು ಇನ್ನಿಲ್ಲದಂತೆ ಕಾಡಿದ್ದವೋ ಅಂಥಹದ್ದೇ ಘಟನೆಗಳು ವೇದಾಂತ ದೇಶಿಕರ ಜೀವನದಲ್ಲಿಯೂ ನಡೆದಿದೆ. ಸಿದ್ಧಾಂತದ ಕವಲು  ಯಾವುದಾದರೇನಂತೆ ಅವುಗಳೆಲ್ಲದಕ್ಕೂ ಬುಡವಾಗಿರುವ ಸನಾತನ ಧರ್ಮದ ಸಂಸ್ಥಾಪನೆಯೊಂದೇ ವಿದ್ಯಾರಣ್ಯರಿಗೂ ಅವರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರಿಗೂ ಇದ್ದ ಗುರಿಯಾಗಿತ್ತು. ವಿದ್ಯಾರಣ್ಯರು ಸನಾತನ ಧರ್ಮದ, ಆ ಧರ್ಮದ ಜ್ಞಾನವಾರಿಧಿಯಾಗಿದ ಗ್ರಂಥಗಳ ಏಳ್ಗೆಗೆ ಹೇಗೆ ಅವಿರತ ಶ್ರಮವಹಿಸಿದ್ದರೋ ಅವರ ಸಹಪಾಠಿಗಳಾಗಿದ್ದ ವೇದಾಂತರೂ ಸಹ ಹಾಗೆಯೇ ಇದ್ದರು, ವಿದ್ಯಾರಣ್ಯರಂತೆಯೇ ಶ್ರಮಿಸಿದ್ದರು. ಅದು 1327,  ದೆಹಲಿ ಸುಲ್ತಾನನ ಸೇನಾಪತಿಯಾಗಿದ್ದ ಮಲಿಕ್ ಕಾಫರ್ ಶ್ರೀರಂಗಂ ಮೇಲೆ ಆಕ್ರಮಣ ಮಾಡುತ್ತಾನೆ. ಶ್ರೀರಂಗಂ ನಲ್ಲಿದ್ದ ಶ್ರೀವೈಷ್ಣವರು ಸ್ವಭಾವತಃ ಸಾತ್ವಿಕರು. ಮುಸಲ್ಮಾನರ ದಾಳಿಯಿಂದಾಗಿ ದೇವಾಲಯ, ವಿಗ್ರಹಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಯಾವ ಸಾಧ್ಯತೆಗಳೂ ಇರಲಿಲ್ಲ. ದಾಳಿಯಿಂದ ದೇವಾಲಯಕ್ಕೆ ಉಂಟಾಗುವ ಹಾನಿಯನ್ನು ತಡೆಯಲು ಸುದರ್ಶನ ಭಟ್ಟಾರ್ ನೇತೃತ್ವದಲ್ಲಿ ದೇವಾಲಯಗಳಲ್ಲಿದ್ದ ಉತ್ಸವ ಮೂರ್ತಿಗಳನ್ನು ಹೊತ್ತು ಸುರಕ್ಷಿತ ಪ್ರದೇಶಗಳಿಗೆ ಹೊರಡುವುದಕ್ಕೆ ಅಲ್ಲಿನ ಆಚಾರ್ಯರುಗಳು ನಿರ್ಧರಿಸುತ್ತಾರೆ ಅಂತೆಯೇ ಪಿಳ್ಳೈ ಲೋಕಾಚಾರ್ಯರರೆಂಬ ಹಿರಿಯರ ನೇತೃತ್ವದ ಗುಂಪೊಂದು ಉತ್ಸವ ಮೂರ್ತಿಯನ್ನು ಹೊತ್ತು ತಿರುಪತಿಗೆ ಹೊರಡುವುದಕ್ಕೆ ಸಿದ್ಧವಾಗುತ್ತದೆ. ಮತ್ತೊಂದಷ್ಟು ಜನರ ತಂಡ ದೇವಾಲಯದಲ್ಲಿರುವ ವಿಗ್ರಹ ಮುಘಲ ದೊರೆಗಳ ಕಣ್ಣಿಗೆ ಬೀಳದಂತೆ ಮಾಡಲು ದೇವಾಲಯದ ಮೂಲವರದ ಎದುರು ಕಲ್ಲಿನ ಗೋಡೆ ಕಟ್ಟಲು ಮುಂದಾಗುತ್ತದೆ. ಆ ಸಂದರ್ಭದಲ್ಲಿ ವೇದಾಂತ ದೇಶಿಕರೂ ಸಹ ಶ್ರೀರಂಗಂ ನಲ್ಲೇ ಇದ್ದರು. ದೇವಾಲಯದ ರಕ್ಷಣೆಗಾಗಿ ಜೀವವನ್ನೂ ಪಣಕ್ಕಿಟ್ಟು ಹೋರಾಡಿದ್ದರು. ಸುದರ್ಶನ ಭಟ್ಟಾರ್ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಸೂತ್ರ ಪ್ರಕಾಶಿಕ ಎಂಬ ಗ್ರಂಥದ ಹಸ್ತಪ್ರತಿಗಳನ್ನು ಹೊತ್ತು ಕರ್ನಾಟಕದ ಸತ್ಯಮಂಗಲಂ ನಿಂದ ತಿರುನಾರಾಯಣಪುರಂ ನತ್ತ ಪ್ರಯಾಣ ಬೆಳೆಸಲು ಸಿದ್ಧರಾಗುತ್ತಾರೆ. ಆದರೆ ಆ ವೇಳೆಗೆ ಆಗಲೇ ಮುಘಲರು ರಕ್ಕಸರಂತೆ ಮೇಲರಗುತ್ತಾರೆ. ವೇದಾಂತ ದೇಶಿಕರ ಜೊತೆಗಿದ್ದ ಹಲವರನ್ನು ಪ್ರಾಣಿಗಳಂತೆ ತರಿದುಹಾಕುತ್ತಾರೆ. ಪ್ರಾಣ ಹೋಗುವ ಅಪಾಯವನ್ನು ಎದುರಿಸುತ್ತಿದ್ದ ವೇದಾಂತ ದೇಶಿಕರು ತಮ್ಮವರ ಹೆಣಗಳ ಮಧ್ಯದಲ್ಲೇ ಅವಿತು ಮುಘಲರ ಮತಾಂಧ ಕಣ್ಣಿನಿಂದ ತಪ್ಪಿಸಿಕೊಂಡು ತಿರುನಾರಾಯಣಪುರಂ( ಇಂದಿನ ಮೇಲುಕೋಟೆ) ಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀರಂಗಂನ ಇತಿಹಾಸದ ವೈಭವದ ಆರಾಧನೆಯನ್ನು ಮರುಕಳಿಸುವಂತೆ ಪ್ರಾರ್ಥಿಸಿ ವೇದಾಂತ ದೇಶಿಕರು ಪ್ರಸಿದ್ಧ ಅಭೀತಿ ಸ್ತವ ಎಂಬ ಸ್ತೋತ್ರವನ್ನು ಬರೆದದ್ದು ಇದೇ ಸಂದರ್ಭದಲ್ಲೇ. ವೇದಾಂತ ದೇಶಿಕರು ಶ್ರೀರಂಗಂ ನಲ್ಲಿ ಪುನಃ ಹಳೆಯ ವೈಭವವನ್ನು ಮರುಕಳಿಸುವಂತೆ ಪ್ರಾರ್ಥಿಸಿ ಕೇವಲ ಅಭೀತಿ ಸ್ಥಾವಂ ಎಂಬ ಶ್ಲೋಕಗಳ ಗುಚ್ಛವನ್ನು ಬರೆದು ಅದು ನನಸಾಗುವುದಕ್ಕೆ ಸತತ 12 ವರ್ಷಗಳು ಕಾಯುತ್ತಾರೆ. ಇಂದಿನ ಮೇಲುಕೋಟೆಯಾಗಿರುವ ತಿರುನಾರಾಯಣಪುರಂನ ಸತ್ಯಕಾಲಂ ಎಂಬ ಗ್ರಾಮದಲ್ಲಿ ವೇದಾಂತ ದೇಶಿಕರು ಬದುಕಿದ್ದ 12 ವರ್ಷ ಅವರಿಗೆ ನೆರಳು ನೀಡಿದ್ದ ಅಶ್ವತ್ಥ ಮರವನ್ನೂ ಈಗಲೂ ನಾವು ನೋಡಬಹುದಾಗಿದೆ. ವೇದಾಂತ ದೇಶಿಕರು ಶ್ರೀರಂಗಂ ನ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾದು ಕುಳುತುಕೊಳ್ಳುತ್ತಿದ್ದ ಕಲ್ಲಿನ ಚಪ್ಪಡಿಯನ್ನು ಗ್ರಾಮದ ವಾದಿರಾಜ ದೇವಾಲಯದಲ್ಲಿ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ಅಷ್ಟೇ ಅಲ್ಲದೇ, ಶ್ರೀರಂಗಂ ನಲ್ಲಿ ದೇವರ ವಿಗ್ರಹ ಪುನಃ ಪ್ರತಿಷ್ಠಾಪನೆಯಾಗಿ ಮತ್ತೆ ಹಳೆಯ ಆಚರಣೆಗಳು ಪ್ರಾರಂಭವಾದವು ಎಂಬ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿರುವಂತೆ ಆಚಾರ್ಯರ ಚಿತ್ರವನ್ನು ಕಾಣಬಹುದಾಗಿದೆ.

ಬಲವಂತವಾಗಿ ಮತಾಂತರಗೊಂಡವರನ್ನು ಪುನಃ ಸನಾತನ ಧರ್ಮಕ್ಕೆ ವಾಪಸ್ ಕರೆದುಕೊಂಡು ಬಂದು ಕ್ಷತ್ರಿಯರಲ್ಲದ ಯುವಕರಿಗೆ ವಿಜಯನಗರ ಸಾಮ್ರಾಜ್ಯದ ಪಟ್ಟಕಟ್ಟಿ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ವಿದ್ಯಾರಣ್ಯರು ಹೇಗೆ ಎತ್ತಿ ಹಿಡಿದಿದ್ದರೂ, ವೇದಾಂತ ದೇಶಿಕರೂ ಸಹ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ಆಚರಣೆಯಲ್ಲಿ ಜಾರಿಗೆ ತಂದವರು. ವೇದಾಂತ ದೇಶಿಕರು ತಿರುನಾರಾಯಣಪುರಂ (ಮೇಲುಕೋಟೆ)ಗೆ ತೆರಳಿದ 12 ವರ್ಷಗಳ ಬಳಿಕ ಶ್ರೀರಂಗಂ ನಲ್ಲಿ ಪರಿಸ್ಥಿತಿ ಸುಧಾರಿಸಿ ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆ, ಆಚರಣೆಗಳಲ್ಲೆವೂ ಹಿಂದಿನಂತೆಯೇ ನಡೆಯಲು ಪ್ರಾರಂಭವಾಗುತ್ತದೆ. ಈ ವೇಳೆ ದೇವಾಲಯದಲ್ಲಿ ಭಗವಂತನ ದಿವ್ಯ ಮಹಿಮೆ ವಿಶೇಷಗಳನ್ನು ಕೊಂಡಾಡುವ ದಿವ್ಯ ಪ್ರಬಂಧಂ ನ್ನು ಪಠಿಸುವುದಕ್ಕೆ ಮಡಿವಂತರಿಂದ ಅಡ್ಡಿ ಉಂಟಾಗುತ್ತದೆ. ಅದರಲ್ಲಿ ಬ್ರಾಹ್ಮಣೇತರ ಆಳ್ವಾರುಗಳಿಂದ ದ್ರಾವಿಡ ಭಾಷೆಯಲ್ಲಿ ರಚಿಸಲ್ಪಟ್ಟಿದ್ದನ್ನೂ ಸೇರಿಸಲಾಗಿದೆ ಹಾಗೂ ಅಲ್ಲಿನ ಮಡಿವಂತರಿಗೆ ನಿಷಿದ್ಧವಾಗಿದ್ದ ಕಾಮನೆಗಳೊಂದಿಗೆ ವ್ಯವಹರಿಸುತ್ತವೆ ಎಂಬುದು ಪ್ರಧಾನ ಕಾರಣವಾಗಿತ್ತು. ಆದರೆ ಧರ್ಮವೇ ದೇಹಧರಿಸಿದಂತಿದ್ದ ವೇದಾಂತ ದೇಶಿಕರು ಮಡಿವಂತರೊಂದಿಗೆ ವಾದಿಸಿ ದಿವ್ಯ ಪ್ರಬಂಧಂ ವೇದಗಳಿಗೆ ಸರಿಸಮನಾದದ್ದು ಎಂದು ಮನವರಿಕೆ ಮಾಡಿಕೊಡುತ್ತಾರೆ. ಅಂದಿನಿಂದ ಭಾಷೆಯನ್ನೇ ಪ್ರಧಾನವಾಗಿಸದೇ, ಬ್ರಾಹ್ಮಣೇತರರು ರಚಿಸಿದ್ದೆಂಬ ಬೇಧವಿಲ್ಲದೇ ದೇವರ ಸನ್ನಿಧಿಯಲ್ಲಿ ದಿವ್ಯ ಪ್ರಬಂಧದ ಪಠಣ ಸಾಗಿದೆ. ಅಷ್ಟೇ ಅಲ್ಲ, ಉತ್ಸವಾಚರಣೆಗಳಲ್ಲಿ ಆಳ್ವಾರ್ ರನ್ನು ಗೌರವಿಸುವ ಅಧ್ಯಯನ ಉತ್ಸವದ ಅಭ್ಯಾಸವನ್ನು ಮರು ಸ್ಥಾಪಿಸಿದ್ದೂ ಸಹ ಇದೇ ವೇದಾಂತ ದೇಶಿಕರೇ. ವೇದಾಂತ ದೇಶಿಕರ ತರ್ಕ ನಿರ್ಣಯದ ವಿದ್ವತ್ ಗೆ ವಿದ್ಯಾರಣ್ಯರು ಹಾಗೂ ದ್ವೈತಿಗಳಾಗಿದ್ದ ಅಕ್ಷೋಭ್ಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ವಿದ್ಯಾರಣ್ಯರು ಹಾಗೂ ಅಕ್ಷೋಭ್ಯರ ನಡುವೆ ನಡೆದ ತರ್ಕದ ನಿರ್ಣಯಕ್ಕೆ ವೇದಾಂತ ದೇಶಿಕರೇ ನಿಲ್ಲುತ್ತಾರೆ. ಇಬ್ಬರ ವಾದಗಳನ್ನು ಆಲಿಸಿದ ನಂತರ ವಿದ್ಯಾರಣ್ಯರು ತಮ್ಮ ಬಾಲ್ಯದ ಗೆಳೆಯನಾಗಿದ್ದರೂ ಪ್ರಮಾಣಗಳನ್ನು ಆಧರಿಸಿ ಅಕ್ಷೋಭ್ಯರದ್ದೇ ಸರಿಯಾದ ವಾದ ಎಂಬ ನಿರ್ಣಯಕ್ಕೆ ಬಂದು ವಿವಾದವನ್ನು ಬಗೆಹರಿಸುತ್ತಾರೆ ವೇದಾಂತ ದೇಶಿಕರು.

ಇತ್ತ ಶ್ರೀರಂಗಕ್ಕೆ ಮೊದಲಿನ ಕಳೆ ಬಂದು ಭಕ್ತ ಸಮೂಹ  ಮತ್ತೆ ಮೊದಲಿನಂತೆ ದೇವರ ಸೇವೆಯಲ್ಲಿ ತೊಡಗುವ ವೇಳೆಗೆ ವೇದಾಂತದೇಶಿಕರಿಗೆ ತೊಂಬತ್ತೈದು ವರ್ಷ ವಯಸ್ಸು. ಶ್ರೀರಂಗನಾಥನ ಸೇವೆಯಲ್ಲೇ ನಿರತರಾದ ವೇದಾಂತ ದೇಶಿಕರು ಇಳಿವಯಸ್ಸಿನಲ್ಲಿಯೂ ಹಿರಿಯ ಜ್ಞಾನಿಗಳ ಗ್ರಂಥಗಳನ್ನು, ಉಪದೇಶಗಳನ್ನು ಜನರಿಗೆ ವಿವರಿಸಿ ಹೇಳುತ್ತಿದ್ದರು. ದೇವಾಲಯದಲ್ಲಿ ಉತ್ಸವಗಳು ಸಾಂಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಆಗ ಆಚಾರ್ಯರು ಬರೆದ ಶ್ರೇಷ್ಠವಾದ ಕೃತಿ ‘ರಹಸ್ಯತ್ರಯಸಾರ. ಇಷ್ಟೆಲ್ಲಾ ಮಾಡಿದ ವೇದಾಂತ ದೇಶಿಕರು ತಮ್ಮದೇ ಸಿದ್ಧಾಂತದ ಅನುಯಾಯಿಗಳಿಂದ ಸಮಸ್ಯೆಗಳನ್ನೂ ಎದುರಿಸಬೇಕಾಗಿ ಬಂತು.  ವೇದಾಂತ ದೇಶಿಕರಿಗೆ ಬಹಳ ಪ್ರಿಯವಾದ ಶ್ರೀರಂಗದಲ್ಲಿ ಅವರನ್ನು ಆಚಾರ್ಯಪೀಠಕ್ಕೆ ನೇಮಿಸಲಾಯಿತು. ಡಿಂಡಿಮ ಹಾಗೂ ಕೃಷ್ಣಮಿಶ್ರ ಎಂಬ ಕವಿಗಳನ್ನು ವಾದದಲ್ಲಿ ಜಯಿಸಿದ ದೇಶಿಕರಿಗೆ ಶ್ರೀರಂಗನಾಥನ ಸಮ್ಮುಖದಲ್ಲಿ ‘ಸರ್ವತಂತ್ರ ಸ್ವತಂತ್ರ’, ‘ಕವಿತಾರ್ಕಿಕ ಕೇಸರೀ’ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಯಿತು. ಶಂಕರರನ್ನು ಕಂಡು ಅನೇಕರಿಗೆ ಅಸೂಯೆ ಉಂಟಾದಂತೆಯೇ ವೇದಾಂತ ದೇಶಿಕರ  ಇವರ ಪಾಂಡಿತ್ಯ, ವೈರಾಗ್ಯ ಮತ್ತು ವಿನಯಗಳನ್ನು ಕಂಡು ಅನೇಕರಿಗೆ ಇವರ ಮೇಲೆ ಅಸೂಯೆ ಉಂಟಾಯಿತು, ದೇಶಿಕರ ಸಹನೆ ಹೆಚ್ಚಿದಷ್ಟೂ ಅವರೊಂದಿಗೆ ಇದ್ದವರ ಅಸೂಯೆ ಹೆಚ್ಚಾಗತೊಡಗಿತ್ತು. ದೇಶಿಕರನ್ನು ವಾದದಲ್ಲಿ ಸೋಲಿಸಬೇಕೆಂದು ಪಟ್ಟುಹಿಡಿದ ಶ್ರೀವೈಷ್ಣವರೇ ಕೆಲವರು ಆಚಾರ್ಯರನ್ನು ವಾದಕ್ಕೆ ಕರೆದರು. ‘‘ನಮ್ಮನಮ್ಮಲ್ಲಿ ವಾದವೇಕೆ? ನಾನು ವಾದಕ್ಕೆ ಸಿದ್ಧನಿಲ್ಲ’’ ಎಂದುಬಿಟ್ಟರು ದೇಶಿಕರು. ದೇಶಿಕರಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ದೇಶಿಕರ ಮನೆಯ ಬಾಗಿಲಿಗೆ ಪಾದರಕ್ಷೆಗಳ ತೋರಣವನ್ನು ಅವರು ಕಟ್ಟಿದರು. ಆದರೆ ದೇಶಿಕರು ಸಹನಾಮೂರ್ತಿಗಳು, ಅವರು ಕೋಪಿಸಿಕೊಳ್ಳಲಿಲ್ಲ. ಬದಲಾಗಿ ನಾವು ಒಬ್ಬೊಬ್ಬರು ಒಂದೊಂದನ್ನು ಅನುಸರಿಸುತ್ತಾರೆ, ಕೆಲವರು ಕರ್ಮವನ್ನಾದರೆ ಮತ್ತೆ ಕೆಲವರು ಜ್ಞಾನವನ್ನು ಅನುಸರಿಸುತ್ತಾರೆ. ನಾವು ಹರಿದಾಸರ ಪಾದರಕ್ಷೆಗಳನ್ನು ಅನುಸರಿಸುತ್ತೇವೆ ಎಂದರು, ಕೊನೆಗೆ ಅಸೂಯೆಪಡುವ ಜನರ ಕಿರುಕುಳಕ್ಕೆ ಬೇಸತ್ತು ಶ್ರೀರಂಗದಿಂದ ಹೊರನಡೆದರು. ವೇದಾಂತ ದೇಶಿಕರು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲೇನು ಇರಲಿಲ್ಲ. ಬೋಧಿಸಿದಂತೆ ಜೀವಿಸಿದವರು ಸಂತ ಸದೃಷ್ಯರಾದವರಾದರೂ ಗೃಹಸ್ಥರಾಗಿದ್ದವರು. ಇತ್ತ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಬಾಲ್ಯದ ಸ್ನೇಹಿತ, ಸಹಪಾಠಿ ವೇದಾಂತ ದೇಶಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶಿಕರನ್ನು ಆಸ್ಥಾನಕ್ಕೆ ಕರೆಸಿಕೊಳ್ಳಲು ಯತ್ನಿಸಿದರು. ಆದರೆ ಪರಮ ವೈರಾಗಿಗಳಾಗಿದ್ದ ವೇದಾಂತ ದೇಶಿಕರು ವಿದ್ಯಾರಣ್ಯರಿಗೆ ’ವೈರಾಗ್ಯ ಪಂಚಕ’ವನ್ನೊಳಗೊಂಡ ಪತ್ರವನ್ನು ಬರೆದು ವಿನಮ್ರವಾಗಿಯೇ ವಿದ್ಯಾರಣ್ಯರ ಆಹ್ವಾವನ್ನು ನಿರಾಕರಿಸಿದರು.  ಇಂದು ಮಠಗಳು, ಸಂತರ ನಡುವೆ ನಡೆಯುತ್ತಿರುವ ಪೈಪೋಟಿ, ಧರ್ಮ ರಕ್ಷಣೆಯನ್ನು ನೆನಪಿಸಿಕೊಂಡಾಗ ಇಬ್ಬರು ಮಹಾನ್ ಯೋಗಿಗಳಾಗಿದ್ದ ವಿದ್ಯಾರಣ್ಯರ- ವೇದಾಂತ ದೇಶಿಕರ ಸ್ನೇಹ ಆದರ್ಶವಾಗಿ ನಮ್ಮೆದುರು ನಿಲ್ಲುತ್ತದೆ. ಸಾಮ್ರಾಜ್ಯವೊಂದರ ರಾಜಗುರುವಾಗಿದ್ದ ಸ್ನೇಹಿತ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುತ್ತೇನೆಂದು ಮುಂದೆ ಬಂದಾಗಲೂ ನಮ್ರತೆಯಿಂದ ನಿರಾಕರಿಸಿದ ವೇದಾಂತ ದೇಶಿಕರ ನಿಸ್ಪೃಹತೆ  ಸಂತರಿಗೆ ಸಾರ್ವಕಾಲಿಕ ಮೇಲ್ಪಂಕ್ತಿಯಾಗಿ ನಿಲ್ಲುತ್ತದೆ.  

1 comment:

  1. ಬಹಳ ಚೆನ್ನಾಗಿ ಬರೆದಿದ್ದೀರ.ಅದ್ವೈತ ವಿಶಿಷ್ಟಾದ್ವೈತದ ಸಹಿಷ್ಣತೆ ಬಗ್ಗೆ ಇದಕ್ಕಿಂತ ಒಳ್ಳೆಯ ಐತಿಹಾಸಿಕ ಉದಾಹರಣೆ ಬೇರೊಂದಿಲ್ಲ. ಆದರೆ ಇದರಲ್ಲಿ ಕೆಲವು ಘಟನೆಗಳು,ಪದಗಳು ಮತ್ತು ಪ್ರದೇಶಗಳ ತಪ್ಪು ಪ್ರಯೋಗ ಆಗಿದೆ.
    1.ದೇಶಿಕರು ಕಾಪಾಡಿದ ಶ್ರೀಭಾಷ್ಯಕ್ಕೆ ಇದ್ದ ಏಕ ಮಾತ್ರ ಭಾಷ್ಯ ಗ್ರಂಥದ ಹೆಸರು " ಶ್ರುತ ಪ್ರಕಾಶಿಕ "
    2. ದೇಶಿಕರು ಶ್ರೀರಂಗಮ್ ಇಂದ ನೇರವಾಗಿ ಸತ್ಯಗಾಲಕ್ಕೆ ಹೋಗ್ತಾರೆ ಅಲ್ಲಿ ಕೋಟೆ ವರದನ ದೇವಸ್ಥಾನದಲ್ಲಿ ಆಶ್ರಯ ಪಡಿತರೆ. ಮೇಲುಕೋಟೆಗೆ ನಂತರ ಬರ್ತಾರೆ. ಅವ್ರು ಪೂರ್ಣ 12 ವರ್ಷ ಸತ್ಯಗಾಲ ದಲ್ಲೇ ಕಳಿತರೆ.
    3.ತಮಿಳಿನ ದಿವ್ಯಪ್ರಬಂಧದ ಮೇಲೆ ಟೀಕಿಸಿದಾಗ ಮಡಿವಂತರಿಗೆ ಉತ್ತರಿಸಿದ್ದು ಮುಸ್ಲೀಮರ ಆಕ್ರಮಣ ಮುನ್ನಭಾಗದಲ್ಲಿ.
    ಬಹಳ ಅರ್ಥವತ್ತಾಗಿ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿನ ನಿಮ್ಮ blog ಪೋಸ್ಟ್ಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯೊದ್ರಲ್ಲಿ ಎರಡು ಮಾತಿಲ್ಲ.
    ನಿಮ್ಮ ಪ್ರಯತ್ನಕ್ಕೆ ಸದಾ ಜಯ ಸಿಗಲಿ.
    ಶ್ರೀ ಸದ್ಗುರೋ ಪಾಹಿ.

    ReplyDelete