Friday 22 May 2015

ಭಾರತಕ್ಕೆ ಅಪಮಾನ ಮಾಡಿದ್ದು ಮೋದಿಯೋ ಅಥವಾ ಕಾಂಗ್ರೆಸ್ಸೋ?

ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ ಗೊತ್ತುವಳಿಯೊಂದನ್ನು ಮಂಡಿಸಲು 1994ರಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಸಿದ್ಧತೆ ನಡೆಸಲಾಗಿತ್ತು. 51 ಸದಸ್ಯ ರಾಷ್ಟ್ರಗಳ ‘ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್ (ಒ.ಐ.ಸಿ) ಬಹಿರಂಗವಾಗಿ ಬೆಂಬಲಿಸಿದ್ದ ಕಾರಣ  ಭಾರತಕ್ಕೆ ಮುಖಭಂಗವಾಗುವ ಎಲ್ಲ ಸಾಧ್ಯತೆಗಳಿತ್ತು. ಭಾರತವನ್ನು ಮುಖಭಂಗದಿಂದ ಪಾರು ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಅಂದಿನ ಕಾಂಗ್ರೆಸ್ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಹೆಗಲೇರಿತ್ತು. ಆಗ ಪಿ.ವಿ ನರಸಿಂಹ ರಾವ್ ಅವರ ಕಣ್ಣಿಗೆ ಕಂಡದ್ದು ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು!  ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅಟಲ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ತೆರಳಿದ್ದ ಭಾರತದ ನಿಯೋಗ ಭಾರತವನ್ನು ಸಂಭವನೀಯ ಮುಖಭಂಗದಿಂದ ಪಾರುಮಾಡಿತ್ತು. ಪರಸ್ಪರ ಹೊಂದಾಣಿಕೆ ಅಥವಾ ದೇಶಕ್ಕಾಗಿ ಒಗ್ಗಟ್ಟಿನಿಂದ ಇರುವ ಮನಸ್ಥಿತಿ ಭಾರತವನ್ನು ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಪಾರು ಮಾಡಿತ್ತು.

ಮತ್ತೊಮ್ಮೆ ಪಿ.ವಿ ನರಸಿಂಹ ರಾವ್ ಅವರು ಇಂತಹದ್ದೇ ಹೊಂದಾಣಿಕೆಗೆ ಮಾದರಿಯಾಗಿದ್ದರು. 1995 ರಲ್ಲಿ ಪೋಖ್ರಾನ್ ನಲ್ಲಿ ಅಣು ಪರೀಕ್ಷೆಯ ತಯಾರಿ ನಡೆಸುತ್ತಿದ್ದದ್ದು ಅಮೆರಿಕದ ಉಪಗ್ರಹಗಳ ಕಣ್ಣಿಗೆ ಬಿದ್ದ ಕಾರಣ ಅಂತಾರಾಷ್ಟ್ರೀಯ ಒತ್ತಡಕ್ಕೆ ನರಸಿಂಹರಾವ್ ಮಣಿದ ಕಾರಣ ಪರೀಕ್ಷೆ ನಿಂತುಹೋಯಿತು.  1996ರಲ್ಲಿ ಅಟಲ್ ಬಿಹಾರಿಯವರ ಅಲ್ಪಾವಧಿ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ,  ನರಸಿಂಹರಾವ್ ಅಣುಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ, ಕೂಡಲೇ ಮಾಡಿ ಮುಗಿಸಿಬಿಡಿ ಎಂದು ಗೌಪ್ಯ ಚೀಟಿಯೊಂದನ್ನು ಕಳಿಸಿಕೊಟ್ಟಿದ್ದರು. ಆಡಳಿತಾಕ್ಮಕ ದೃಷ್ಟಿ ಹಾಗೂ ದೇಶದ ಸಮಗ್ರತೆ ವಿಷಯದಲ್ಲಿ cohesiveness ಎಂಬುದು ಬಹುಪಕ್ಷೀಯ ರಾಜಕಾರಣದಲ್ಲಿ ತೀರಾ ಅಗತ್ಯ ಅನ್ನಿಸುವ ಸಂಗತಿ. ದೇಶದ ಅಭಿವೃದ್ಧಿಗೆ ಅಧಿಕಾರದಲ್ಲಿರುವ ಪ್ರಧಾನಿ ಶ್ರಮಿಸಿದರೆ ಸಾಲದು, ವಿರೋಧ ಪಕ್ಷಗಳೂ ಅದಕ್ಕೆ ಬೆಂಬಲ ನೀಡಬೇಕೆಂಬುದು ಅದೆಷ್ಟೋ ಬಾರಿ ಸಾಬೀತಾಗಿದೆ. ಹಾಗಾದರೆ ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳಬೇಕಿತ್ತು? ಮೊದಲೇ ಅಧಿಕೃತ ವಿರೋಧ ಪಕ್ಷದ ಸ್ಥಾನವಿಲ್ಲ, ಇಂತಹ ಸ್ಥಿತಿಯಲ್ಲಿ ಸರ್ಕಾರದ ತಪ್ಪು ನಿರ್ಧಾರಗಳನ್ನು ಜನತೆಯ ಮುಂದಿಟ್ಟು ಜನರ ವಿಶ್ವಾಸ ಗಳಿಸುವ ಬದಲು ಕಾಂಗ್ರೆಸ್ ಹಿಡಿದಿರುವ ದಾರಿ ಎಂಥಹದ್ದು?

ಒಬ್ಬ ಪ್ರಧಾನಿ ಯಶಸ್ವಿಯಾಗಿ ವಿದೇಶ ಪ್ರವಾಸ ಮುಕ್ತಾಯಗೊಳಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರಬೇಕಾದರೆ, ಕಾಂಗ್ರೆಸ್ ಮಾತ್ರ ಎಳಸು ರಾಜಕೀಯ ಮಾಡುತ್ತಾ, ಕನಿಷ್ಠ ಸಂಸ್ಕಾರವನ್ನೂ ತೋರದೇ ಪ್ರಧಾನಿಯನ್ನು ಟೀಕಿಸಲು ತೊಡಗಿದೆ. ಪ್ರಧಾನಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್, ಮೋದಿ ಧರಿಸುವ ಬಟ್ಟೆ, ಬೂಟಿನ ಬಗ್ಗೆ ಎಳೆ ಮಕ್ಕಳಂತೆ ಅವಹೇಳನ ಮಾಡುತ್ತಾ ಭಾರತದ ಮರ್ಯಾದೆ ಹರಾಜು ಹಾಕುತ್ತಿದೆ. ಇಷ್ಟಾದರೂ ಭಾರತದ ಮರ್ಯಾದೆ ತೆಗೆಯುತ್ತಿರುವವರು ಪ್ರಧಾನಿ ಮೋದಿ ಎಂಬ ಆರೋಪ!

ಭಾರತದಲ್ಲೇನೋ ಕಾಂಗ್ರೆಸ್ ನವರ ಯೋಗ್ಯತೆ, ದುರಾಡಳಿತದ ಬಗ್ಗೆ ಎಲ್ಲರಿಗೂ ತಿಳಿದಿದ್ದಾರೆ, ಆದರೆ ಇತಿಹಾಸದ ಪಠ್ಯ ಪುಸ್ತಕಗಳು ಬದಲಾಗುವವರೆಗೆ ಹಾಗೂ ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ಭಾರತದ ಬಗ್ಗೆ ಇರುವ ಪಾಶ್ಚಾತ್ಯ ದೃಷ್ಟಿಕೋನದ ಭಾವನೆ ಅಳಿದು, ವಾಸ್ತವದ ಭಾವನೆಯೊಂದು ಮೂಡುವವರೆಗಾದರೂ ಒಂದಷ್ಟು ಜನ 6 ದಶಕಗಳ ಕಾಲ ಆಳ್ವಿಕೆ ನಡೆಸಿರುವ, 120 ವರ್ಷಕ್ಕೂ ಮೀರಿದ ಇತಿಹಾಸ ಹೊಂದಿರುವ ಕಾಂಗ್ರೆಸ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆ ಎಷ್ಟು ಸಮಂಜಸವಾಗಿದೆ?

ಭಾರತದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದವರು ಯಾರು? ಇಂಥದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಇದೇ ಕಾಂಗ್ರೆಸ್ ನ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾಯರ ನೇತೃತ್ವದಲ್ಲಿ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಿದ ದೇಶ ಕಂಡ ಉತ್ತಮ ಅರ್ಥಶಾಸ್ತ್ರಜ್ನ ಡಾ.ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಮೇಡಂ ನ ಕೈಗೊಂಬೆಯಾಗಿಸಿದ್ದಾಗ ಭಾರತದ ಮರ್ಯಾದೆ ಹರಾಜಾಗಿರಲಿಲ್ಲವೇ? ಅಥವಾ ಅಂತಹ ಉತ್ತಮ ಅರ್ಥಶಾಸ್ತ್ರಜ್ನನಿಗೆ ಟೈಮ್ ಮ್ಯಾಗಜೀನ್ ನಲ್ಲಿ ಅಂಡರ್ ಅಚೀವರ್ ಎಂಬ ಪಟ್ಟ ಕೊಡಿಸಿದವರು, ಇಂದು ಅದೇ ಟೈಮ್ಸ್ ಮ್ಯಾಗಜೀನ್ ’ಮೋದಿ ಮೀನ್ಸ್ ಬಿಸಿನೆಸ್’ ಎಂದು ಹೊಗಳಿದ್ದ ವ್ಯಕ್ತಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರಲ್ಲಾ, ಇವರ ಮಾನಸ್ಥಿಕ ಸ್ಥಿಮಿತತೆ ಬಗ್ಗೆ ಯಾರಿಗಾದರೂ ಅನುಮಾನ ಬರುವುದಿಲ್ಲವೇ ಹೇಳಿ? ಅದಿರಲಿ, ಇಂದು ಯಾವ ವ್ಯಕ್ತಿ ಭಾರತವನ್ನು ವಿದೇಶಗಳಲ್ಲಿ ಹೀಗಳೆಯುತ್ತಿದ್ದಾರೆ ಎಂದು ಎದೆ ಬಡಿದುಕೊಂಡು ಕೂಗುತ್ತಿದ್ದಾರಲ್ಲಾ, ಭಾರತದ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಅಮೆರಿಕಾದೊಳಕ್ಕೆ ಪ್ರವೇಶ ನೀಡಬಾರದು ಎಂದು ಪತ್ರ ಬರೆದಿದ್ದ ಕಾಂಗ್ರೆಸ್ ಸಂಸದರು ಅಮೆರಿಕಾ ಅಧ್ಯಕ್ಷರ ಕಾಲು ಹಿಡಿದು ಮನವಿ ಮಾಡಿಕೊಂಡಿದ್ದಾಗ ಭಾರತದ ಗೌರವಕ್ಕೆ ಧಕ್ಕೆಯುಂಟಾಗಿರಲಿಲ್ಲವೇ? ಒಬ್ಬ ಪ್ರಧಾನಿ ಅಭ್ಯರ್ಥಿಗೆ ಕನಿಷ್ಠ ಗೌರವವನ್ನು ನೀಡದೇ ಇರುವಷ್ಟು ಸಂಸ್ಕಾರಹೀನರು ಈ ಕಾಂಗ್ರೆಸ್ಸಿನವರು!

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಕಾಂಗ್ರೆಸ್ ನವರು ಅವರ ವಿರುದ್ಧ ನಪುಂಕಸಕ, ನರಹಂತಕ, ಸಾವಿನ ವ್ಯಾಪಾರಿ ಇತ್ಯಾದಿಯಾಗಿ ಮಾಡಿದ್ದ ಅವಹೇಳನಗಳಿಗೆ ಲೆಕ್ಕವೇ ಇಲ್ಲ ಬಿಡಿ. ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ವ್ಯಕ್ತಿಯನ್ನು ತುಚ್ಛವಾಗಿ ಅವಹೇಳನ ಮಾಡಿದಾಗ ಆಗದ ಅವಮಾನ ಈಗ ತಮ್ಮನ್ನು ಹಾಗೂ ತಾವು ಮಾಡಿರುವ ಘನ ಕಾರ್ಯಗಳನ್ನು ಪರೋಕ್ಷವಾಗಿ ಟೀಕಿಸಿದರೆ ಮಾತ್ರ ಭಾರತಕ್ಕೆ ಅವಮಾನವಾಗಿಬಿಡುತ್ತದೆಯಂತೆ, ಇವರೇನು ಭಾರತವನ್ನು ಗುತ್ತಿಗೆ ಪಡೆದಿದ್ದಾರೋ ಅಥವಾ ತಾವೇ ಭಾರತ, ಭಾರತವೆಂದರೆ ತಾವು ಮಾತ್ರ ಎಂಬ ಅನ್ವರ್ಥವೆಂಬ ಭ್ರಮೆಯಲ್ಲಿದ್ದಾರೋ? ಭಾರತಕ್ಕೆ ಸ್ವಾತಂತ್ರ್ಯ ಬಂದು ಇನ್ನಷ್ಟ ಹೊಸ ಇತಿಹಾಸವನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಮೂಡಿಸಬೇಕಿದ್ದ ಕಾಲದಲ್ಲಿ, ಕಾಂಗ್ರೆಸ್ ನ ಹಿರೋ, ನಮ್ಮ ದೇಶದ ಮೊದಲ ಪ್ರಧಾನಿ ಚೀನಾದ ವಿರುದ್ಧ ಯುದ್ಧ ಮಾಡಿ ಸೋತು ರಣಹೇಡಿ ಎಂಬ ಪಟ್ಟ ಗಿಟ್ಟಿಕೊಂಡು ವಿಶ್ವಸಂಸ್ಥೆಗೆ ಓಡಿಹೋಗಿದ್ದರಾಲ್ಲಾ ಆಗ, ಭಾರತದ ಮರ್ಯಾದೆ ಹರಾಜಾಗಿತ್ತೋ, ಉಜ್ವಲವಾಗಿ ಹೊಳೆದಿತ್ತೋ ಎಂಬ ಬಗ್ಗೆ ಕಾಂಗ್ರೆಸ್ ನವರು ಉತ್ತರಿಸಬೇಕಾಗುತ್ತದೆ. ಪಿ.ವಿ ನರಸಿಂಹ ರಾವ್ ಅವರನ್ನು ಹೊರತುಪಡಿಸಿ, ನೆಹರು ಯಿಂದ ಹಿಡಿದು ಪ್ರಧಾನಿ ಪಟ್ಟಕ್ಕೇ ಕಳಂಕ ತಂದ ಮನಮೋಹನ್ ಸಿಂಗ್ ವರೆಗೂ ಎಲ್ಲಾ ಪ್ರಧಾನಿಗಳು ಮಾಡಿದ ಭ್ರಷ್ಟಾಚಾರ, ದುರಾಡಳಿತದ ಒಂದೊಂದು ಘಟನೆಗೂ ಈ ದೇಶದ ಜನತೆಗೆ ಕಾಂಗ್ರೆಸ್ ನವರು ಉತ್ತರದಾಯಿಗಳಾಗಿದ್ದಾರೆ. ಹಾಗೆಯೇ ಮೂರನೇ ದರ್ಜೆ, ಕಳಪೆ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿ ಕೊಟ್ಟು ಭಾರತದ ಕೀರ್ತಿಪಥಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿರುವುದಕ್ಕೂ ಕಾಂಗ್ರೆಸ್ ಕಾರಣವಾಗಿದೆ.

ಇವೆಲ್ಲವನ್ನೂ ಬಿಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ್ದ ಸುಭಾಷರನ್ನು ಅಮಾನವೀಯವಾಗಿ ನಡೆಸಿಕೊಂಡು, ನಿಗೂಢ ಕಣ್ಮರೆಯ ನಂತರವೂ ಅವರ ಕುಟುಂಬದವರ ಮೇಲೆ ನಿರಂತರ ಗೂಢಚಾರಿಕೆ ನಡೆಸಿದ್ದರು ಕಾಂಗ್ರೆಸ್ ನ ಪ್ರಧಾನಿ ನೆಹರು. ಆಗ ವಿದೇಶಿ ಮಾಧ್ಯಮಗಳು, ಸ್ವಾತಂತ್ರ್ಯ ಸೇನಾನಿಯ ನಿಗೂಢ ಸಾವಿನ ನಂತರವೂ ಗೂಢಾಚಾರಿಕೆ ನಡೆಸಿದ್ದ ಭಾರತದ ಪ್ರಧಾನಿ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿದಾಗ ತುಟಿ ಬಿಚ್ಚದ ನೈತಿಕತೆಯಿಲ್ಲದವರಿಂದ ಯಾವುದು ಭಾರತಕ್ಕೆ ಅವಮಾನ ಯಾವುದು ಭಾರತಕ್ಕೆ ಅವಮಾನವಲ್ಲ ಎಂಬುದನ್ನು ಕಲಿಯುವ ಹೀನಾಯ ಸ್ಥಿತಿ ಬಂದಿಲ್ಲ.

ತಾವು ನಡೆಸಿದ್ದ ಕೋಟಿ ಕೋಟಿ ರೂ ಮೌಲ್ಯದ ಹಗರಣಗಳಿಂದ ದೇಶದ ಬೊಕ್ಕಸಕ್ಕೆ ನಷ್ಟವಾದರೂ ಚಿಂತೆಯಿಲ್ಲ, ಅದರ ಬಗ್ಗೆ ಎಲ್ಲೂ ಮಾತನಾಡದೇ ಬಾಯಿ ಮುಚ್ಚಿಕೊಂಡಿದ್ದಿದ್ದರೆ ಪ್ರಧಾನಿ ಒಳ್ಳೆಯವರಾಗುತ್ತಿದ್ದರು, ಆದರೆ ಇವರು ನಡೆಸಿದ್ದ ಹಗರಣಗಳ ಬಗ್ಗೆ ಹೇಳುತ್ತಿರುವುದು ದೊಡ್ಡ ಅಪರಾಧವಾಗಿಬಿಟ್ಟಿದೆ. ನೈತಿಕ ಅಧಪಥನಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೆ? ಕಾಂಗ್ರೆಸ್ ನ ದುರಾಡಳಿತ, ಸರ್ವಾಧಿಕಾರವನ್ನು ಮಟ್ಟಾ ಹಾಕುವ ಆವೇಗದಲ್ಲಿ, ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಸರ್ಕಾರ ಇಂದಿರಾಗಾಂಧಿಯನ್ನು ಜೈಲಿಗೆ ಕಳಿಸಿದಂತೆ, 10 ವರ್ಷಗಳ ಕಾಲ ಲೂಟಿ ಮಾಡುವವರಿಗಿಂತಲೂ ಕಡೆಯಾಗಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದಿರುವ ಆಧುನಿಕ ಮಹಮದ್ ಘೋರಿ, ಘಜ್ನಿ ಮಹಮೂದ್ ಗಳನ್ನು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕತ್ತು ಹಿಡಿದು ಜೈಲಿಗೆ ತಳ್ಳಿಲ್ಲವಲ್ಲ ಅದಕ್ಕೆ ಸಂತೋಷಪಡಬೇಕು. ದೇಶ ಕೊಳ್ಳೆಹೊಡೆದವರನ್ನು ಶಿಕ್ಷಿಸುವ ವಿಷಯದಲ್ಲೂ ರಾಜಕೀಯ ದ್ವೇಷ ತೋರದೇ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಅವಮಾನ ಮಾಡಲು ಸಾಧ್ಯವೇ?  ಗಡಿ ಭಾಗದಲ್ಲಿ ಸೈನಿಕರ ತಲೆ ಕಡಿದರೂ, ಜಾತ್ಯಾತೀತತೆಯ ಹೆಸರಿನಲ್ಲಿ ಭಯೋತ್ಪಾದಕರ ಪರವೇ ವಕಾಲತ್ತು ವಹಿಸಿ ದೇಶದ ಜನರಿಗೆ ಅವಮಾನ ಮಾಡುತ್ತಿದ್ದ ಇಂತಹವರ ಆಡಳಿತದಲ್ಲಿ ಬದುಕುತ್ತಿದ್ದ  ಜನತೆ ಭಾರತದಲ್ಲಿ ಹುಟ್ಟಿರುವುದು ದೌರ್ಭಾಗ್ಯ ಎಂದುಕೊಳ್ಳದೇ ಮತ್ತೇನು ಸೌಭಾಗ್ಯ ಎಂದುಕೊಳ್ಳಲು ಸಾಧ್ಯವೇ? ಕಳ್ಳರ ಆಳ್ವಿಕೆಗೆ ಒಳಪಟ್ಟ ಭೂಮಿಯ ಮೇಲೆ ಅಭಿಮಾನ ಮೂಡುವುದಾದರೂ ಹೇಗೆ?

ಮಾತೃಭೂಮಿ, ನನ್ನ ದೇಶ ಎಂಬ ಹೆಮ್ಮೆ ಪುಟಿದೇಳುವುದು, ಆ ಭೂಮಿಯನ್ನು ಶ್ರೀರಾಮ, ಕೃಷ್ಣ ದೇವರಾಯ, ರಾಣಾ ಪ್ರತಾಪ್ ಸಿಂಹ, ಶಿವಾಜಿಯಂತವರು ಆಳಿದರೆ ಮಾತ್ರ. ಅದನ್ನು ಬಿಟ್ಟು ದೇಶವನ್ನೇ ಕೊಳ್ಳೆ ಹೊಡೆಯುವ  ಮಹಮದ್ ಘೋರಿ, ಘಜ್ನಿ ಮಹಮೂದ್, ಬಾಬರ್, ಅಕ್ಬರ್ ನಂತಹ ದಾಳಿಕೋರರೆಲ್ಲಾ ದೇಶವನ್ನು ಆಳಿದಾಗ ತನ್ನ ಜನ್ಮಭೂಮಿಯ ಬಗ್ಗೆ ಯಾವ ಸತ್ಪ್ರಜೆ ತಾನೆ ಅಭಿಮಾನವಿಟ್ಟುಕೊಳ್ಳಬಲ್ಲ? ಇಂತಹವರ ಆಳ್ವಿಕೆಗೆ ಒಳಪಟ್ಟ ದೇಶದಲ್ಲಿ ಹುಟ್ಟಿರುವುದು ನಮ್ಮ ದೌರ್ಭಾಗ್ಯ ಎಂದುಕೊಳ್ಳದೇ ಹೇಗೆ ತಾನೆ ಇರಬಲ್ಲ? ಅದನ್ನೇ ಮೋದಿಯೂ ಹೇಳಿರುವುದು.

ಕೊನೆಯದಾಗಿ,  ಒಂದು ವರ್ಷದ ಹಿಂದೆಯೇ ಈ ದೇಶದ ಜನತೆ ಕಾಂಗ್ರೆಸ್ ಗೆ ತಮ್ಮ ಸ್ಥಾನವನ್ನು ತೋರಿಸಿ ನಿಮ್ಮ ಯೋಗ್ಯತೆ ಇಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಾಸ್ತವದ ನೆಲೆಗಟ್ಟಿನಲ್ಲಿ ರಾಷ್ಟ್ರದ ಅಭ್ಯುದಯಕ್ಕೆ ಕಾರಣವಾಗುವಂತೆ ತರ್ಕಬದ್ಧವಾಗಿ ಮೋದಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮಾತನಾಡುವುದು ಒಳಿತು ಇಲ್ಲವಾದರೆ, ಭಾರತ ಅತಿ ಶೀಘ್ರವಾಗಿ ಕಾಂಗ್ರೆಸ್ ಮುಕ್ತವಾಗುವುದಕ್ಕೆ ಕಾಂಗ್ರೆಸ್ಸೇ ಪ್ರಮುಖ ಕೊಡುಗೆ ನೀಡಿದಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಿರುವುದೂ ಅದೇ.