Friday 24 April 2015

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ....



(ಚಿತ್ರ ಕೃಪೆ:http://www.sringeri.net)

                                             ||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ                                                                                         ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||


ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ' ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. 'ವಿದ್ಯಾಶಂಕರ ಪಾದಪದ್ಮಾರಾಧಕ' ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ.

ವಿದ್ಯಾರಣ್ಯರು! ಶೃಂಗೇರಿಯ 12ನೇ ಪೀಠಾಧಿಪತಿಗಳೆಂದು ನೆನೆಸಿಕೊಳ್ಳುವುದಕ್ಕಿಂತಲೂ ಹೆಚ್ಚು ನಮ್ಮ ಮನಸ್ಸು, ಪ್ರಜ್ನಾವಂತ ಸಮಾಜ ಅವರನ್ನು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೇ ಗುರುತಿಸುತ್ತೆ. ಸನ್ಯಾಸಾಶ್ರಮವನ್ನು ಲೋಕವಿಮುಖ, ನಿವೃತ್ತಮಾರ್ಗ, ಪಾರಮಾರ್ಥಿಕಕ್ಕಷ್ಟೇ ಸೀಮಿತ ಎಂದು ಕಾಣಲಾಗುತ್ತದೆ. ಧರ್ಮ ರಕ್ಷಣೆಗಾಗಿ ಸಾತ್ವಿಕ ಮಾರ್ಗವನ್ನು ಹೊರತುಪಡಿಸಿ ಕ್ಷಾತ್ರಗುಣವನ್ನು ಪ್ರಚೋದಿಸುವ ಯತಿಗಳನ್ನು ಕಾಣುವುದು ಅಪರೂಪ. ಅಂತಹ ಅಪರೂಪದ ಸಾಲಿಗೆ ವಿದ್ಯಾರಣ್ಯರು ಸೇರುತ್ತಾರೆ. ಶೃಂಗೇರಿಯಲ್ಲಿ ಅವರು ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷ ಮಾತ್ರ. ಸನಾತನ ಧರ್ಮದ ಮೌಲ್ಯವುಳ್ಳ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಕೊಡುಗೆ ಅನನ್ಯವಾದದ್ದು.  ಹಾಗೆಂದು ಆ ಸಾಮ್ರಾಜ್ಯ ಸ್ಥಾಪನೆಯ ಹಾದಿಯೇನು ಸುಗಮವಾಗಿರಲಿಲ್ಲ. ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316) ಕ್ರೌರ್ಯ, ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೇ ಮೊದಲಾದ ಹೀನ ಕೃತ್ಯಗಳೊಂದಿಗೆ ಪರ್ಯವಸಾನ ಕಂಡಿತು. ಮುಂದೆ, ಖಿಲ್ಜಿ ವಂಶಸ್ಥರು ಅಳಿದು ಮಹಮ್ಮದ್-ಬಿನ್-ತುಘಲಕ್ ನ ಆಳ್ವಿಕೆ ಬಂತಾದರೂ (1325- 1351) ದುರಾಕ್ರಮಣ, ಅತ್ಯಾಚಾರ-ಅನಾಚಾರಗಳಿಗೆ, ಹಿಂದೂ ದೊರೆಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗಲಿಲ್ಲ. ಒಟ್ಟಾರೆ ಸನಾತನ ಧರ್ಮದ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು.

ವಿದ್ಯಾರಣ್ಯರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಸಂದರ್ಭದ್ಲಲ್ಲಿ, ಹಿಂದೂರಾಜರು ಅಕ್ಷರಶಃ ನಾಮಾವಶೇಷವಾಗಿದ್ದರು.  ದಕ್ಷಿಣದ ರಾಜಮನೆತನಗಳೂ ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಕ್ಷಾತ್ರ ಗುಣ ಸಂಪೂರ್ಣವಾಗಿ ಕುಗ್ಗಿತ್ತು. ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದರೂ, ಆ ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೇಸುವ ಪ್ರಭುವೇ ಇರಲಿಲ್ಲ. ಅಂಥಹ ವ್ಯಕ್ತಿಯನ್ನು ತಯಾರು ಮಾಡಬೇಕಿತ್ತು. ಇವೆಲ್ಲವನ್ನೂ ಒಗ್ಗೂಡಿಸುವ ಹೊತ್ತಿಗೆ ಸಂಪತ್ತಿನ ಕೊರತೆಯೂ ಎಥೇಚ್ಛವಾಗಿತ್ತು. ಇಂತಹ ನಿರ್ಜೀವ ಸ್ಥಿತಿಯಲ್ಲಿದ್ದ ಪ್ರದೇಶದಲ್ಲಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಅಸಾಮಾನ್ಯ ಸಂಗತಿ. ಇನ್ನು ಸ್ಥಾಪಿತವಾಗಿ ಅಲ್ಪಕಾಲದಲ್ಲೇ ಪರಕೀಯರ ಆಕ್ರಮಣವನ್ನು ಮೆಟ್ಟಿ, ರಾಷ್ಟ್ರದ ಜನತೆಗೆ ಸುವರ್ಣ ಯುಗವನ್ನು ಪರಿಚಯಿಸಿ, ಸುಮಾರು 310 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ನಡೆಸಿತ್ತು ಎಂದರೆ ಅದಕ್ಕಾಗಿ ಮಾರ್ಗದರ್ಶನ ನೀಡಿದ ವಿದ್ಯಾರಣ್ಯರ ದೂರದೃಷ್ಠಿತ್ವದ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತದಲ್ಲಿ ಇಂದಿಗೂ ಶ್ರೇಷ್ಠ ಆಡಳಿತಕ್ಕೆ ಎರಡು ಉಪಮೇಯಗಳನ್ನು ಕೊಡುವ ರೂಢಿಯಿದೆ. ಒಂದು ಯುಗಯುಗಗಳಷ್ಟು ಹಳೆಯ ಕಾಲದ ರಾಮರಾಜ್ಯ, ಮತ್ತೊಂದು ನಮ್ಮದೇ ಯುಗದ ಸ್ವಲ್ಪ ಪುರಾತನ ಕಾಲಘಟ್ಟದ 'ಸುವರ್ಣಯುಗ'ದ ವಿಜಯನಗರ ಸಾಮ್ರಾಜ್ಯ. ರಾಮರಾಜ್ಯ ಎಂದರೆ ಹೀಗೇ ಇದ್ದಿರಬಹುದು ಎಂದು ಸುವರ್ಣಯುಗದ ಜನರು ಹೇಳಿಕೊಳ್ಳುತ್ತಿದ್ದರೇನೋ, ಅಷ್ಟರಮಟ್ಟಿಗೆ ವಿಜಯನಗರ ಸಾಮ್ರಾಜ್ಯ, ಸಂಪತ್ತು, ಸಂಸ್ಕೃತಿಯ ಶ್ರೀಮಂತಿಕೆಗೆ ಅನ್ವರ್ಥವಾಗಿರುವುದು ಇತಿಹಾಸ ಪ್ರಸಿದ್ಧ. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯವಳಿದರೂ, ಭೌತಿಕವಾಗಿ ವಿದ್ಯಾರಣ್ಯರು ಇಲ್ಲದೇ ಅದೆಷ್ಟೋ ದಶಕಗಳು ಕಳೆದರೂ ಶ್ರೇಷ್ಠ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರ ಯೋಗದಾನ ಇಂದಿಗೂ ಅವರನ್ನು ನೆನೆಸಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಧರ್ಮಕ್ಕೆ ಗ್ಲಾನಿ ಬಂದಾಗವಲ್ಲದೇ ಆ ಯಾವ ಯತಿಗಳು ತಾನೇ ವೇದ-ಶಾಸ್ತ್ರ, ಪಾರಮಾರ್ಥಿಕ ಜೀವನವನ್ನು ಬಿಟ್ಟು, ಸಾಮ್ರಾಜ್ಯ ಕಟ್ಟುವುದಕ್ಕೆ ಕುರುಬ ಯುವಕರಲ್ಲಿ ಕ್ಷಾತ್ರ ಗುಣವನ್ನು ತುಂಬಿ ಪ್ರಚೋದಿಸುತ್ತಾರೆ ಹೇಳಿ? ಧರ್ಮ ರಕ್ಷಣೆ ಎಂದಾಗಲೆಲ್ಲಾ ನಾವು ಸಾಮಾನ್ಯವಾಗಿ ಸನಾತನ ಧರ್ಮದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಉದ್ಧರಿಸಿದ ಆದಿ ಶಂಕರಾಚಾರ್ಯರನ್ನು ಮಾತ್ರ ಬಹುಬೇಗನೆ ನೆನೆಯುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಆದರೆ ಕಾಲ ಉರುಳಿದಂತೆ ಇಸ್ಲಾಮ್ ಬರ್ಬರತೆ ತುತ್ತಾಗಿದ್ದ ಸನಾತನ ಧರ್ಮದ ಉಳಿವಿಗೆ  ಸಾಮ್ರಾಜ್ಯ ಸ್ಥಾಪನೆಯ ತುರ್ತು ಅಗತ್ಯವನ್ನು ಮನಗಂಡು, ಪರಕೀಯರ ದಾಳಿಗೆ ಸಿಲುಕಿ ನಶಿಸುತ್ತಿದ್ದ ಧರ್ಮವನ್ನು ಉಳಿಸಿದ ಯತಿವರೇಣ್ಯ ವಿದ್ಯಾರಣ್ಯರು ಗೌಣವಾಗಿ ನಮ್ಮ ಮನಸಿನಲ್ಲಿದ್ದಾರೆಯೇ ಹೊರತು ಯಾರಾದರೂ ಅವರನ್ನು ಸ್ಮರಿಸಿಕೊಳ್ಳುವ ಸಾರ್ವಜನಿಕರು ಆಚರಿಸುವ ದಿನವಿದೆಯೇ? ವಿದ್ಯಾರಣ್ಯರನ್ನು ಸ್ಮರಿಸುವುದೂ ಕಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು.  ಧರ್ಮದ ಉಳಿವಿಗಾಗಿ ಬ್ರಹ್ಮ-ಕ್ಷತ್ರ ಸಾಮರಸ್ಯವನ್ನು ನಮ್ಮ ಸನಾತನ ಧರ್ಮ ಪದೇ ಪದೇ ಸಾರಿದೆ. ಪಾಂಡವರು ಜಯಗಳಿಸುವ ಮೂಲಕ ಧರ್ಮದ ಪುನರುತ್ಥಾನಕ್ಕೆ ಶ್ರೀಕೃಷ್ಣ ಪರಮಾತ್ಮ, ಮಗಧ ಸಾಮ್ರಾಜ್ಯದಲ್ಲಿ ಯವನರ ದಾಳಿ ಮೇರೆ ಮೀರಿ ವೈದಿಕ ಧರ್ಮಕ್ಕೆ ಚ್ಯುತಿಬಂದಾಗ ಚಂದ್ರಗುಪ್ತನ ಮೂಲಕ ಇತಿಹಾಸ ಪ್ರಸಿದ್ಧ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಾಣಕ್ಯ ಈ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಧರ್ಮದ ಉಳಿವಿಗಾಗಿ ಇತಿಹಾಸ ಎಂದಿಗೂ ಮರೆಯದ ಸಾಮ್ರಾಜ್ಯವೊಂದರ ಉಗಮಕ್ಕೆ ಗುರುವೊಬ್ಬರು ಕಾರಣೀಭೂತರಾದ ಉದಾಹರಣೆ ಸಿಗುವುದು ವಿದ್ಯಾರಣ್ಯರಲ್ಲಿ ಮಾತ್ರ. ವಿದ್ಯಾರಣ್ಯರು-ವಿಜಯನಗರ ಸಾಮ್ರಾಜ್ಯದ ಬಳಿಕ ಈವರೆಗೂ ಅವರಂತಹ ಮಹಾಪುರುಷರು ನಮ್ಮ ನಾಡಿನಲ್ಲಿ ಜನಿಸಿಲ್ಲವಾದ್ದರಿಂದ ಧರ್ಮ ರಕ್ಷಣೆಯ ದೃಷ್ಟಿಯಿಂದ ವಿದ್ಯಾರಣ್ಯರ ಸ್ಥಾನವು ಶಂಕರಾಚಾರ್ಯರಷ್ಟೇ ಮಹತ್ವ, ಶಂಕರಿಗಷ್ಟೇ ಎರಡನೆಯದಾಗಿದೆ. ಶಂಕರರು ಸನಾತನ ಧರ್ಮ ಸಂಕಟದಲ್ಲಿದ್ದಾಗ ಧರ್ಮವನ್ನು ಉದ್ಧರಿಸಲು ಅವತರಿಸಿದರು. ವಿದ್ಯಾರಣ್ಯರು ಹಿಂದೂ ಸಾಮ್ರಾಜ್ಯ ಸಂಕಟದಲ್ಲಿದ್ದಾಗ, ಸನಾತನ ಸಾಮ್ರಾಜ್ಯವನ್ನು ಉದ್ಧರಿಸಲು ಅವತರಿಸಿದರು. ಕಾಲಘಟ್ಟಗಳು ಬೇರಾದರೂ ಸಾಧಿಸಿದ ಕಾರ್ಯಗಳು ಒಂದೇ.

ಪರಾಶರಮಾಧವೀಯ, ವ್ಯವಹಾರ ಮಾಧವೀಯ ಬೃಹದಾರಣ್ಯಕ ಭಾಷ್ಯವಾರ್ತಿಕಸಾರದಂತಹ ಭಾಷ್ಯಗಳು, ವೇದಾಂತ ಪಂಚದಶೀ ಜೀವನ್ಮುಕ್ರಿವಿವೇಕದಂತಹ ಗ್ರಂಥಗಳೂ ಸೇರಿದಂತೆ ಅವರು ರಚಿಸಿದ ಅದೆಷ್ಟೋ ಗ್ರಂಥಗಳು, ಭಾಷ್ಯಗಳ ಬಗ್ಗೆ ತಿಳಿಸಿದರೆ ಅವರೊಬ್ಬ ಅದ್ಭುತ ಪಂಡಿತರು, ವಿದ್ವಾಂಸರೆಂಬುದು ತಿಳಿಯುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯೋದಯಕ್ಕೆ ಬೆಂಬಲವಿತ್ತ ಹೊಯ್ಸಳ ಸಾಮ್ರಾಜ್ಯದ ಮೂರನೆ ಬಲ್ಲಾಳ,ತುಳುನಾಡಿನ ಶ್ರೀವೀರಕೆಕ್ಕಾಯಿತಾಯಿ, ಕಂಪಿಲ ಸಾಮ್ರಾಜ್ಯದ ಅರಸರು ಮುಂತಾದ ಅನೇಕ ಪ್ರಮುಖರನ್ನು ಅವರವರ ಪ್ರಾಂತೀಯ ಅಭಿಮಾನಗಳಿಗೆ ಅತೀತರಾಗಿ ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ದುಡಿಯುವಂತೆ ಮಾಡಿದ ವಿದ್ಯಾರಣ್ಯರು, ರಕ್ತಪಾತವಿಲ್ಲದೇ ಸಾಮ್ರಾಜ್ಯವನ್ನು ಗೆಲ್ಲುವ ಚಾಣಕ್ಯನನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡುವುದಕ್ಕಿಂತ ಅತ್ಯಲ್ಪ ಕಾಲದಲ್ಲೇ ಅಳಿಯದಂತೆ ಎಚ್ಚರ ವಹಿಸುವುದೂ ಸವಾಲಿನ ವಿಷಯವೇ. ಅಧಿಕಾರ ಕೈಗೆ ಬಂದರೆ ಸಾಕು ಸೋದರ ಕಲಹ-ದಾಯಾದಿ ಮಾತ್ಸರ್ಯಗಳಲ್ಲಿ ಸಾಮ್ರಾಜ್ಯಗಳು ನಿರ್ನಾಣವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ವಿಜಯನಗರದ ಅರಸ ಹರಿಹರ ಮತ್ತವನ ನಾಲ್ಕು ಸಹೋದರರ ನಡುವೆ ಸಾಮರಸ್ಯ ತುಂಬಿ, ಅದೇ ನಾಲ್ಕು ಸಹೋದರರನ್ನು ಪೂರ್ವ, ಪಶ್ಚಿಮ ಉತ್ತರದ ಗಡಿಗಳಲ್ಲಿ ದೃಢರಕ್ಷಣೆಗಾಗಿ ವಿನಿಯೋಗಿಸಿದ ವಿದ್ಯಾರಣ್ಯರು ಓರ್ವ ಅಪೂರ್ವ ರಾಜಗುರುಗಳಾಗಿಯೂ ವಿಜೃಂಭಿಸಿದರು. ಸ್ವತಃ ಅದ್ವೈತಿಗಳಾಗಿ, ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ತಮ್ಮ ಮತವನ್ನು ಸಾಮ್ರಾಜ್ಯದ ಮೇಲೆ ಹೇರುವುದಾಗಲೀ, ಪರಮತ ಖಂಡನೆಯಾಗಲಿ ಮಾಡದೇ ಇದ್ದದ್ದು  ವಿದ್ಯಾರಣ್ಯರ ಉದಾರ ಧಾರ್ಮಿಕ ನೀತಿ ಹಾಗೂ ಹೃದಯ ವೈಶಾಲ್ಯಗಳನ್ನು ಸ್ಪಷ್ಟವಾಗಿಸುತ್ತವೆ.

ಬಹಮನಿ ಸಾಮ್ರಾಜ್ಯಸ್ಥಾಪಕ ಜಾಫರ್ ಖಾನ್ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ ಎಂಬ ಹೆಸರಿನಲ್ಲಿ ಗದ್ದುಗೆಯೇರಿದಾಗ ವಿದ್ಯಾರಣ್ಯರ ಸಲಹೆ ಮೇರೆಗೆ ಬುಕ್ಕ ರಾಯ ಸ್ನೇಹಾಭಿಮಾನ ಸೂಚಕವಾಗಿ ಅಮೂಲ್ಯಮಾಣಿಕ್ಯವನ್ನು ಕಳಿಸಿಕೊಟ್ಟಿದ್ದ. ಇದು ವಿದ್ಯಾರಣ್ಯ ಪ್ರಣೀತ ವಿಜಯನಗರ ಸಾಮ್ರಾಜ್ಯದ ಹೃದಯ ವೈಶಾಲ್ಯತೆಯೂ ಹೌದು. ಪರಮತ ಖಂಡಿಸದೇ ಇರುವುದರಿಂದ ಸನಾತನ ಧರ್ಮವನ್ನು ಮೇಲೆ ಅವಹೇಳನ ಮಾಡುವುದು, ಪ್ರಹಾರ ಮಾಡುವುದು ಅತಿ ಸುಲಭದ ಕೆಲಸವಾಗಿದೆ ಆದ್ದರಿಂದಲೇ ಇಂದಿಗೂ ಹಿಂದೂಗಳಲ್ಲಿ ಕಂಡುಬರುವ ದೌರ್ಬಲ್ಯವೂ ಹೌದೆಂದು ತೋರುತ್ತದೆ. ಆದರೆ ಎಂತಹ ಸ್ಥಿತಿಯಲ್ಲೂ ಪರಮತ ಖಂಡನೆಗೆ ಅವಕಾಶ ನೀಡದ ಯತಿಶ್ರೇಷ್ಠ ವಿದ್ಯಾರಣ್ಯರ ತತ್ವಗಳು ಲೋಕಮಾನಿತ, ಪ್ರಶ್ನಾತೀತ. ಇನ್ನು ಭಾರತದ ರಾಜಪ್ರಭುತ್ವ-ಧರ್ಮವೆಂದರೆ ಮೂಲಭೂತವಾದಿಗಳೆಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ರಾಜರನ್ನು ಶೋಷಣೆಯ ಪ್ರತೀಕವೆಂದೇ ಪುಕಾರು ಹಬ್ಬಿಸಲಾಗಿದೆ. ಅರಸನಾದವನು ಧರ್ಮಕ್ಕೆ ಅತೀತನಲ್ಲ, ಸಾಮ್ರಾಜ್ಯ ಬರಿಯ ಮರ್ತ್ಯರಾಜರದಲ್ಲವೆಂದು ಹೇಳಲು ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯನ್ನು ವಿರೂಪಾಕ್ಷನ ಹೆಸರಿನಲ್ಲೇ ರೂಪಿಸಿದರು. ಈ ಮೂಲಕ ರಾಜನೂ ಧರ್ಮದ ಚೌಕಟ್ಟಿನಲ್ಲೇ ಇರಬೇಕೆಂದು ಸಾರಿದರು. ಇನ್ನು ವಿಜಯನಗರ ಸಾಮ್ರಾಜ್ಯದ ವರಾಹಲಾಂಛನ ಮತ್ತು ವಿರೂಪಾಕ್ಷಾಂಕಿತಗಳು ಹರಿಹರ ಸಮನ್ವಯಕ್ಕೆ ಸುಂದರ ನಿದರ್ಶನ. ಸಾಮ್ರಾಜ್ಯದಲ್ಲಿ ಹರಿಹರರ ಸಮನ್ವಯವಿದ್ದ ಮೇಲೆ ಶೈವ ವೈಷ್ಣವ ಮತಗಳ ಕಲಹ ಎಲ್ಲಿಂದ ಬರಬೇಕು? ಶಾಸ್ತ್ರ, ವೇದ  ವಾಂಗ್ಮಯವೂ, ಸಾಮ್ರಾಜ್ಯ ಸ್ಥಾಪನೆ ಹೀಗೆ ಅದೆಷ್ಟು ಆಯಾಮಗಳಿಂದ ನೋಡಿದರು, ವಿದ್ಯಾರಣ್ಯರು ಯತಿಶ್ರೇಷ್ಟರಾಗಿ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಆದರ್ಶ ಪುರುಷರಾಗಿ ಕಾಣುತ್ತಾರೆ. ವಿಜಯನಗರ ಸಾಮ್ರಾಜ್ಯವನ್ನು ಕೇವಲ ಒಂದು ಸಾಮ್ರಾಜ್ಯವನ್ನಾಗಿ ನಿರ್ಮಿಸದೇ ಭಾರತೀಯರ ರಾಜಕೀಯ-ಆರ್ಥಿಕ ಪುನರುತ್ಥಾನದ ಸಾಮ್ರಾಜ್ಯವನ್ನಾಗಿಸಿದ ವಿದ್ಯಾರಣ್ಯರದ್ದು ವರ್ಣನೆಗೆ ನಿಲುಕದ ಆದರ್ಶ ವ್ಯಕ್ತಿತ್ವ.

ವಿಪರ್ಯಾಸವೆಂದರೆ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಇದೇ ವಿದ್ಯಾರಣ್ಯರ ಎಂಬ ಪ್ರಶ್ನೆಗಳೂ ಈಗಾಗಲೇ ಉದ್ಭವಿಸಿಯಾಗಿದೆ. ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಂಡವರು ಮಾತ್ರ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಮುಂದಿಡಲು ಸಾಧ್ಯ. ಸುವರ್ಣಯುಗವನ್ನು ಕಂಡ ಭವ್ಯ ಸಾಮ್ರಾಜ್ಯ ಅಧಃಪತನಗೊಳ್ಳಲು, ಸುಂದರ ಶಿಲ್ಪಕಲಾಕೃತಿಗಳು ನಾಶವಾಗಲು ಇದೇ ಶೈವ-ವೈಷ್ಣವರ ಕಲಹ ಕಾರಣ ಎಂದು ಕೆಲವರು ಷರಾ ಎಳೆದು ಸುಳ್ಳು ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇಂತಹ ಆಧುನಿಕ ಇತಿಹಾಸಕಾರರು ವಿದ್ಯಾರಣ್ಯರನ್ನು ಮರೆಸುವ ಜೊತೆಗೇ ಏನೆಲ್ಲಾ ಮಾಡಿದರು. ನಮ್ಮ ಸೂಪ್ತಪ್ರಜ್ನೆಯಿಂದ ವಿದ್ಯಾರಣ್ಯರನ್ನು ನಿಧಾನವಾಗಿ ಜಾರಿಸಿದರೆ, ವಿಜಯನಗರ ಸ್ಥಾಪನೆ ಮಾಡಿದ ವಿದ್ಯಾರಣ್ಯರು ಇವರೇನಾ? ಎಂದು ಪ್ರಶ್ನೆ ಮಾಡುತ್ತಿರುವವರು,  ನಾಳೆ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ  ವಿದ್ಯಾರಣ್ಯರೂ ಕಾಲ್ಪನಿಕ, ನಿಜವಾಗಿ ಅಂತಹ ವ್ಯಕ್ತಿಗಳೇ ಇರಲಿಲ್ಲ ಎಂದೂ ಷರಾ ಎಳೆಯುತ್ತಾರೆ ಎಚ್ಚರ. ಅಂದಹಾಗೆ ಇಂದು ವೈಶಾಖ ಶುದ್ಧ ಸಪ್ತಮಿ ವಿದ್ಯಾರಣ್ಯರ ಜಯಂತಿ. ಮೊನ್ನೆಯಷ್ಟೇ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಿ ಶಂಕರರನ್ನು ಸ್ತುತಿಸಿದ್ದೇವೆ, ಇಂದು ವಿದ್ಯಾರಣ್ಯರನ್ನೂ ಸ್ಮರಿಸೋಣ.



Thursday 23 April 2015

ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ





ಅವರು ಹರಿದು ಹಂಚಿಹೋಗುತ್ತಿದ್ದ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು, ವಾಹನಗಳ ಸೌಲಭ್ಯದ ಕಲ್ಪನೆಯೂ ಇಲ್ಲದ ಸಂದರ್ಭದಲ್ಲಿ ದೇಶದ ಉದ್ದಗಲ ಕಾಲ್ನಡಿಯಲ್ಲಿ ಸಂಚರಿಸಿ ವಿಘಟಿಸಿ ಹೋಗಿದ್ದ ಭೂಪಟಕ್ಕೆ ದೇಶವೆಂಬ ಕಾನ್ಸೆಪ್ಟ್ ನೀಡಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನಾತನ ಧರ್ಮವನ್ನು ರಕ್ಷಿಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಜಗದ್ಗುರು ಶಂಕರಾಚಾರ್ಯರನ್ನು ಜನರು ತತ್ವಜ್ನಾನಿ ಎಂದು ಗೌರವಿಸಿ, ಶಂಕರನ ಅವತಾರವೆಂದೆ ಪೂಜಿಸಿದರು.

ವೈದಿಕ ಮತ ಪ್ರತಿಪಾದಕರಾದ ಶಂಕರಾಚಾರ್ಯರು, ಸನಾತನ ಧರ್ಮದಲ್ಲಿನ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು. ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ ಕೇಂದ್ರಗಳಾಗಿ ಜಗತ್ತಿಗೇ ಮಾರ್ಗದರ್ಶನ ಮಾಡುವುದರ ಜತೆ ಜತೆಯಲ್ಲಿ ಅಪಾರವಾದ ಜ್ನಾನ ಸಂಪತ್ತನ್ನು, ವಿದ್ಯಾ ಸಂಪತ್ತನ್ನು, ತತ್ತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ. ಶಂಕರರ ಹೆಸರು ತತ್ವಜ್ನಾನಕ್ಕೆ ಅನ್ವರ್ಥವಾಗಿ ಉಳಿದುಕೊಂಡಿದೆ.
ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚೆಲ್ಲಿದ ದೇವತಾ ಸ್ವರೂಪಿಯಾದ ಶಂಕಾರಾಚಾರ್ಯರು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ ಕಾರಣಕ್ಕಾಗಿ. ಮಹಾನ್ ದೈವಭಕ್ತರಾಗಿದ್ದ ಅವರು ಎಲ್ಲ ದೇವರುಗಳೂ ಒಂದೇ ಮಾನವಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನತೆಗೆ ಸಾರಿ ಹೇಳಿದ್ದರು. ಯಾವ ಪಂಥವನ್ನೂ ಹುಟ್ಟುಹಾಕದೆ ಎಲ್ಲ ಜಾತಿ ವರ್ಗಗಳನ್ನು ಸಮನಾಗಿ ಕಾಣಿರಿ. ಭಗವಂತನ ನಾಮಸ್ಮರಣೆಯಲ್ಲಿ ಜಾತಿ, ಭೇದಗಳು ಕೂಡದು. ಎಲ್ಲರಿಗೂ ಭಗವಂತನ ಪ್ರಾರ್ಥಿಸುವ ಪ್ರೀತಿಸುವ ಹಕ್ಕಿದೆ ಎಂಬ ಮಂತ್ರವನ್ನು ಜಗತ್ತಿಗೆ ಸಾರಿದ್ದಾರೆ.

ಏಳನೇ ಶತಮಾನದಲ್ಲಿ ಜಾತಿ ಹಾಗೂ ದೇವರುಗಳ ಹೆಸರಿನಲ್ಲಿ ನಡೆಯುತ್ತಿದ್ದ ಕಲಹ, ಘರ್ಷಣೆ ಹಾಗೂ ನರಬಲಿಗಳನ್ನು ತಡೆಯುವ ನಿಟ್ಟಿನಲ್ಲಿ ಜನರಿಗೆ ತಿಳಿ ಹೇಳಿದ ಶಂಕರರು ಈ ಮೂಲಕ ಸಮಾಜೋದ್ಧಾರಕರಾಗಿಯೂ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಳ್ಳುತ್ತಾರೆ. ನರಬಲಿ ನೀಡುತ್ತಿದ್ದ ಕಾಪಾಲಿಗಳನ್ನೂ ತಮ್ಮ ಜ್ನಾನದಿಂದ ಬದಲಿಸಿದ ಶಂಕರಾಚಾರ್ಯರು, ಅವರಿಗೆ ಅರಿವು ಮೂಡಿಸಿದ್ದಲ್ಲದೆ ಕಾಪಾಲಿಗಳಿಗೂ ಗುರುಗಳಾಗಿ ಜಗವನ್ನು ಬೆಳಗಿದರು. ಇಡೀ ವಿಶ್ವಕ್ಕೇ ಬೆಳಕನ್ನು ನೀಡಿ ಜಗದ್ಗುರುಗಳೆನಿಸಿಕೊಂಡ ಶಂಕರಾಚಾರ್ಯರು ಇಂದು ಏಕೆ ಯಾವುದೋ ಒಂದು ವರ್ಗಕ್ಕೆ, ಅಥವಾ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ಸೀಮಿತಗೊಂಡಿಲ್ಲ, ಸೀಮಿತಗೊಳಿಸಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಶಂಕರರನ್ನು ಅವಹೇಳನ ಮಾಡುವ ಮೂಲಕ ಅವರನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇಂದಿಗೂ ಲೆಕ್ಕವಿಲ್ಲದಷ್ಟು ವಿದೇಶಿಗರು ತತ್ವಜ್ನಾನದ ಸಾರವನ್ನು ತಿಳಿಯಲು ಇದೇ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಆಮ್ನಾಯ ಪೀಠಗಳಿಗೆ ಭೇಟಿ ನೀಡುತ್ತಾರೆ. ತತ್ವಜ್ನಾನದ ಬಗ್ಗೆ ಶಂಕರರ ನಾಲ್ಕು ಆಮ್ನಾಯಪೀಠಗಳ ಪೀಠಾಧಿಪತಿಗಳನ್ನು ಸಂದರ್ಶಿಸಿ ಜ್ನಾನವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಶಂಕರರಿಗೆ ಶರಣಾಗುತ್ತಿದ್ದಾರೆ. ಆದರೆ ಭಾರತದಲ್ಲೇ ಇರುವ ಮೂಢರಿಗೆ ಇನ್ನೂ ಜ್ನಾನೋದಯವಾಗಿಲ್ಲ. ಶಂಕರಾಚಾರ್ಯರ ಹೆಸರು ಕೇಳಿದರೇನೆ ಹೌಹಾರುತ್ತಾರೆ. ವಿನಾಕಾರಣ ಅವರ ವಿರುದ್ಧ ಮಾತನಾಡುತ್ತಾರೆ. ಬೌದ್ಧ ಧರ್ಮ ನಾಶವಾಗುವುದರಿಂದ ಹಿಡಿದು ಇಂದಿನ ಸಮಸ್ಯೆಗಳವರೆಗೆ ಪ್ರತಿಯೊಂದಕ್ಕೂ ಅವರೇ ಕಾರಣ ಎಂದು ದೂರಲಾಗುತ್ತದೆ. Don't answer the foolish arguments of fools, or you will become as foolish as they are ಎಂಬ ಮಾತಿನಂತೆ ಜಗತ್ತೇ ಪೂಜಿಸುವ ಶಂಕರಾಚಾರ್ಯರನ್ನು ನಿಂದಿಸುವವರ ಬಗ್ಗೆ ಪ್ರತಿಕ್ರಿಯೆ ನೀಡದೇ, ನಿರ್ಲಕ್ಷಿಸಿ, ಆಚಾರ್ಯರು ತೋರಿದ ಮಾರ್ಗದಲ್ಲೇ ಮುನ್ನಡೆದರೆ ಅದೇ ನಾವು ಶಂಕರಾಚಾರ್ಯರಿಗೆ ತೋರುವ ಗುರುಭಕ್ತಿಯಾಗಿದೆ.

ಇಷ್ಟಕ್ಕೂ ನಿಂದಿಸಿದರೆ ಅವರ ವಿದ್ವತ್ಪೂರ್ಣ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಕುಂದುಂಟಾಗುವುದಕ್ಕೆ ಶಂಕರಾಚಾರ್ಯರೇನು ಸಾಮಾನ್ಯರೇ? ಅವರ ಕೀರ್ತಿ, ದೇಶೋವಿಶಾಲವಾದದ್ದು, ದೇಶೋವಿಶಾಲವೇ ವಿಶ್ವಕ್ಕೇ ತಿಳಿದಿರುವಂಥಹದ್ದು, ಆದರೂ ಏಕೆ ಆಚಾರ್ಯರು ಭಾರತಕ್ಕೆ ಸೀಮಿತಗೊಂಡಿದ್ದಾರೆ. ಈ ಹಿಂದಿನ ಸರ್ಕಾರವೇನೋ ಶೃಂಗೇರಿ ಗುರುಗಳ ಆಜ್ನೆಯಂತೆ ಕರ್ನಾಟಕದಲ್ಲಿ ಶಂಕರಾಚಾರ್ಯರ ಜನ್ಮದಿನವನ್ನು ತತ್ವಜ್ನಾನಿಗಳ ದಿನಾಚರಣೆ ಎಂದು ಆಚರಿಸಲು ಆದೇಶ ಹೊರಡಿಸಿ, ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದನ್ನು ವಿಶ್ವದ ಮಟ್ಟಲ್ಲೇಕೆ ಆಚರಿಸಬಾರದು? ಆ ಮೂಲಕ ಜಗತ್ತಿಗೇ ತತ್ವಜ್ನಾನದ ಬೆಳಕನ್ನು ನೀಡಿದ ಪ್ರಖರ ವ್ಯಕ್ತಿತ್ವವನ್ನು ಮತ್ತಷ್ಟು ಏಕೆ ಮೆರೆಸಬಾರದು? ಹೌದು, ಕಳೆದ ಬಾರಿಗಿಂತಲೂ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಶೇಷ ದಿನಗಳ ಆಚರಣೆಗಳಲ್ಲಿ ಹುರುಪು ಮೂಡಿದೆ.
ಅಂತಹ ನಾಯಕತ್ವ ದೇಶಕ್ಕೆ ದೊರೆತಿದೆ. ಈ ಬಾರಿಯಿಂದ ಪ್ರತಿ ಆಚರಣೆಯಲ್ಲೂ ಹೊಸ ಆಶಾಕಿರಣಗಳು ಮೂಡುತ್ತಿವೆ. ಭಾರತವೂ ಜಗದ್ಗುರುವಾಗಲು ತುದಿಗಾಲಲ್ಲಿ ನಿಂತಿದೆ. ಇತಿಹಾಸ ಮರುಕಳಿಸುವ ಸೂಚನೆ ದೊರೆತಿದೆ. ಭಾರತದ ಕೊಡುಗೆಯಾದ ಯೋಗವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದು, ವಿಶ್ವ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿದ್ದಾಯಿತು. ಶಾಲೆಗಳಲ್ಲಿ ವೈದಿಕ ಗಣಿತ ಕಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜರ್ಮನ್ ಭಾಷೆಗಿಂತಲೂ ಈ ವರ್ಷದಿಂದ ಸಂಸ್ಕೃತಕ್ಕೆ ಅದೇನೋ ಹೊಸ ಹೊಳಪು ಬಂದಂತೆ ಕಾಣುತ್ತಿದೆ. ದೇಶದ ನಾಯಕತ್ವ ಹೊತ್ತವರೂ ಹೋದಲ್ಲೆಲ್ಲಾ, ಭಾರತದ ಸನಾತನ ಸಂಶೋಧನೆಗಳು ಅತಿ ಪುರಾತನವಾದದ್ದು ಎಂದು ಮೌಲ್ಯಗಳನ್ನು ಕೊಂಡಾಡುತ್ತಿದ್ದಾರೆ. ರಾಜಕಾರಣಿಗಳಿಗೆ, ಎಡಪಂಥೀಯರಿಗೆ ವರ್ಜ್ಯವಾಗಿದ್ದ ಸಂತರನ್ನು ನೆನೆಸಿಕೊಳ್ಳುತ್ತಿದ್ದಾರೆ. ಸಂಸತ್ ನಲ್ಲೇ ನಿಂತು ದೇಶ ಕಟ್ಟಿರುವವರು ರಾಜಕಾರಣಿಗಳಲ್ಲಿ ಭಾರತದ ಋಷಿ ಮುನಿಗಳು, ಸಾಧು-ಸಂತರು ಎಂದು ನಿರ್ಬಿಢೆಯಿಂದ ಹೇಳುತ್ತಿದ್ದಾರೆ. ಅಲ್ಲದೇ ಏಕಂ ಸತ್ ವಿಪ್ರಾಃ ಬಹುದಾವದಂತಿಃ ಎಂಬಂತಹ ಸಂಸ್ಕೃತದ ಉದ್ಘಾರಗಳನ್ನು ಉದಾಹರಿಸುತ್ತಿದ್ದಾರೆ. ಕಾನ್ವೊಕೇಷನ್ ಗಳಿಗೆ ಹೋದರೆ, ಈ ಪದ್ಧತಿ ನಮ್ಮಲ್ಲಿ, ಅನ್ಯರಾಷ್ಟ್ರಗಳ ನಾಗರಿಕತೆ ಕಣ್ಣುಬಿಡುವುದಕ್ಕಿಂತಲೂ ಮೊದಲೇ ಇತ್ತು, ಬೇಕಾದರೆ ತೈತ್ತರೀಯ ಉಪನಿಷದ್ ಓದಿ ಎಂದು ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ತುಂಬುತ್ತಿದ್ದಾರೆ. ಎಷ್ಟೆಲ್ಲಾ ಸಕಾರಾತ್ಮಕ ಬೆಳವಣಿಗೆಗಳು! ಇದರಲ್ಲಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನವನ್ನಾಗಿ ಆಚರಿಸಲು ಘೋಷಣೆ ಮಾಡುವುದರತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ, ಯೋಗವಾಯಿತು, ಶಂಕರಾಚಾರ್ಯರ ಜಯಂತಿಯನ್ನೂ ತತ್ವಜ್ನಾನಿಗಳ ದಿನವನ್ನಾಗಿ ಯು.ಎನ್ ಘೋಷಣೆ ಮಾಡಲಿ. ಹೇಗಿದ್ದರೂ ಭಾರತ ಜಗದ್ಗುರುವಾಗಬೇಕೆಂದು ಹೊರಟಿದೆ. ಜಗದ್ಗುರಿವಿನ ಜನ್ಮದಿನಾಚರಣೆಯ ಮೂಲಕವೇ ಇದು ಸಾಕಾರಗೊಳ್ಳಲಿ!

Monday 13 April 2015

ಶೃಂಗೇರಿ ಶಿವಗಂಗಾ ಶಾರದಾ ಪೀಠದ 'ಪುರುಷೋತ್ತಮ' ಭಾರತೀ ಸ್ವಾಮಿಗಳು




ಟಾರು ಕಾಣದ ರಸ್ತೆಗಳು, ವಾಹನಗಳ ಸೌಕರ್ಯ ಇರದಿದ್ದ 16ನೇ ಶತಮಾನದ ಕಾಲ.  ಬೆಂಗಳೂರು, ಮೈಸೂರು, ತುಮಕೂರು ಪ್ರದೇಶಗಳಲ್ಲಿದ್ದ ಕೆಲವರನ್ನು ಹೊರತುಪಡಿಸಿ ಎಲ್ಲಾ ಆಸ್ತಿಕ ಜನರಿಗೆ ಅದ್ವೈತ ಪ್ರತಿಪಾದನೆಯ ನೆಲೆಬೀಡಾಗಿರುವ ಶೃಂಗೇರಿಯ ಗುರುಗಳನ್ನು ದರ್ಶಿಸುವುದೆಂದರೆ ಕೊಂಚ ಪ್ರಯಾಸದ ಮಾತೇ ಆಗಿತ್ತು. ಶೃಂಗೇರಿ ಗುರುಗಳು ಅಲ್ಲಿಗೆ ಬಂದರಷ್ಟೇ ದರ್ಶನ ಭಾಗ್ಯ, ಇಲ್ಲದೇ ಇದ್ದರೆ ತಾವಾಗಿಯೇ ದೂರದ ಶೃಂಗೇರಿಗೆ ಹೋಗುವುದು ದಿನಗಟ್ಟಲೆಯ ಮಾತಾಗಿತ್ತು.

ಶೃಂಗೇರಿ ಜಗದ್ಗುರುಗಳು ತಮ್ಮ ಹತ್ತಿರದಲ್ಲೇ ಇದ್ದ ಶಿಷ್ಯ ಸಮೂಹವನ್ನು ಆಶೀರ್ವದಿಸುವಂತೆಯೇ, ತಮ್ಮ ಜಿಗ್ನಾಸೆಗಳನ್ನು ಬಗೆಹರಿಸಿ, ಧರ್ಮಮಾರ್ಗದಲ್ಲಿ ಮುನ್ನಡೆಸಿ ಆಶೀರ್ವದಿಸುವ ಯತಿಗಳಿಗಾಗಿ ಶೃಂಗೇರಿಗೆ ದೂರವಿದ್ದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿರುವವರು ಕಾದಿದ್ದರು.  ಶೃಂಗೇರಿಯ 24ನೇ ಜಗದ್ಗುರುಗಳಾಗಿದ್ದ ಅಭಿನವ ನೃಸಿಂಹ ಭಾರತೀ ಸ್ವಾಮಿಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಶಿಷ್ಯ ಪರಿವಾರದಲ್ಲಿದ್ದ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿ ಶಾಖಾಮಠವನ್ನು ಅನುಗ್ರಹಿಸಿದರು.

ಅಭಿನವ ನೃಸಿಂಹ ಭಾರತೀ ಸ್ವಾಮಿಗಳವರ ಅಪ್ಪಣೆಯಂತೆ ಶಂಕರ ಭಾರತೀ ಸ್ವಾಮಿಗಳು ಶೃಂಗೇರಿ ಶಿವಗಂಗಾ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದರು. ಬೆಂಗಳೂರಿನ ನೆಲೆಮಂಗಲದ ಬಳಿಯ ಶಿವಗಂಗೆಯಲ್ಲಿ ಶೃಂಗೇರಿಯ ಶಾಖಾ ಮಠದ ಸ್ಥಾಪನೆಯಾಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೂ ಶೃಂಗೇರಿ ಶಿವಗಂಗಾ ಮಠದ ಗುರುಪರಂಪರೆ ನಡೆದುಕೊಂಡುಬಂದಿದೆ. ಆದ್ದರಿಂದಲೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. 1799ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಶೃಂಗೇರಿ ಮಠಕ್ಕೆ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಪೂರ್ಣಯ್ಯನವರು, ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ, ಶುಭ-ಸಮಾರಂಭಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶೃಂಗೇರಿ ಶಿವಗಂಗೆ ಮಠಕ್ಕೂ ಕೊಡುವಂತೆ ಆಜ್ಞಾಪಿಸಿದ್ದರ ಬಗ್ಗೆ,  ಉಲ್ಲೇಖಗಳಿವೆ. ಶೃಂಗೇರಿಯ ಶಾಖಾಮಠಗಳಲ್ಲಿ  ಶಿವಗಂಗೆಪೀಠ ಹೆಚ್ಚು ಮಹತ್ವಪಡೆದಿದೆ ಎಂಬುದಕ್ಕೆ ಇಂತಹ ಅನೇಕ ಉದಾಹರಣೆಗಳಿವೆ. 

ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಒಡಲಲ್ಲಿಟ್ಟುಕೊಂಡತಹ ಶಿವಗಂಗೆ ಕ್ಷೇತ್ರ ಶೃಂಗೇರಿಯ ಶಾಖಾ ಮಠ ಸ್ಥಾಪನೆಯಾಗುವುಕ್ಕೂ ಮುನ್ನವೇ ದಕ್ಷಿಣ ಕಾಶಿ ಎಂದು ಸುಪ್ರಸಿದ್ಧ. ಅಗಸ್ತ್ಯರು ತಪಸ್ಸು ಮಾಡಿದ, ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಳಿರುವ ಈ ಕ್ಷೇತ್ರದ ಪ್ರತಿಯೊಂದು ಚರಾಚರಗಳಲ್ಲೂ ಅದ್ವೈತವೇ ಗೋಚರಿಸುತ್ತದೆ.  ಪೂರ್ವಕ್ಕೆ ವೃಷಭಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿ, ದಕ್ಷಿಣಕ್ಕೆ ಲಿಂಗಾಕೃತಿ ಕಾಣುವುದು ಶಿವಗಂಗೆಯ ಬೆಟ್ಟದ ವೈಶಿಷ್ಟ್ಯ. ಗೆರೆ ಎಳೆದಂತೆ ಬೆಟ್ಟದ ಎದುರು ನಿಂತರೆ ಕಾಣುವುದೇ ಶೃಂಗೇರಿ ಶಿವಗಂಗಾ ಶಾರದಾಪೀಠ.  ಶೃಂಗೇರಿ ಪರಂಪರೆಯ ಯತಿಗಳನ್ನು ಭಗವಾನ್ ಶಂಕರನ ಸ್ವರೂಪವೆಂದೇ ತಿಳಿಯಲಾಗುತ್ತದೆ. ಶಿವಗಂಗಾ ಮಠದಲ್ಲಿ ನಿಂತು ಬೆಟ್ಟವನ್ನು ನೋಡಿದರೆ ಬೃಹದಾಕಾರದ ಬೆಟ್ಟ ನಂದಿಯ ಆಕಾರದಲ್ಲಿ ಕಾಣುತ್ತದೆ. ಹಾಗೆ ಕಂಡಾಗಲೆಲ್ಲಾ ಶಂಕರರ ಸ್ವರೂಪದಲ್ಲಿರುವ ಯತಿಗಳ ಮುಂದೆ ಶ್ರದ್ಧೆಯಿಂದ ಕುಳಿತ ನಂದಿ ಏನನ್ನೋ ಆಲಿಸುತ್ತಿದೆ ಎಂದೆನಿಸದೇ ಇರದು. ಆಧ್ಯಾತ್ಮ ಸಾಧನೆಗೆ ಪ್ರಶಸ್ತವೆಂಬಂತಿರುವ ಶೃಂಗೇರಿ ಶಿವಗಂಗಾ ಪೀಠ, ಶಂಕರ ಭಾರತೀ ಸ್ವಾಮಿಗಳಿಂದ, ಈಗಿನ ಪೀಠಾಧಿಪತಿಗಳಾದ ಪುರುಷೋತ್ತಮ ಭಾರತೀ ಸ್ವಾಮಿಗಳವರೆಗೆ ಸವಿಶೇಷ ಗುರು ಪರಂಪರೆಯನ್ನು ಹೊಂದಿದೆ.  ಲೋಕೋತ್ತರ ಪ್ರತಿಭಾ ಸಂಪನ್ನರನ್ನು, ತಪಶ್ಚಕ್ರವರ್ತಿಗಳನ್ನೂ ಕಂಡಿದೆ. ಈ ಪೀಠವನ್ನು ಅಲಂಕರಿಸಿದ್ದ ಈ  ಹಿಂದಿನ ಪೀಠಾಧಿಪತಿಗಳು, ಪುರುಶೋತ್ತಮ ಭಾರತೀ ಸ್ವಾಮಿಗಳ ಗುರುಗಳು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಂತೂ ಸನ್ಯಾಸ ಧರ್ಮಕ್ಕೆ ಅನ್ವರ್ಥವೆಂಬಂತಿದ್ದರು.  ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳಿಂದ ತಪಶ್ಚಕ್ರವರ್ತಿ ಎಂಬ ಬಿರುದನ್ನು ಪಡೆದರು.  ಮಹಾಪ್ರಾಜ್ಞರೂ, ಔದಾರ್ಯಾದಿ ಗುಣಾನ್ವಿತರೂ ಆಗಿದ್ದ ಗುರುಗಳು, ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ ಎಂಬ ಮಾತಿನಂತೆ ಲೌಕಿಕ ವಿದ್ಯೆಯಲ್ಲೂ, ಅಲೌಕಿಕದಲ್ಲೂ ಅನನ್ಯ ಸಾಧನೆ ಮಾಡಿದ್ದರು.  

ಶೃಂಗೇರಿ ಶಿವಗಂಗಾ ಪೀಠಾಧಿಪತಿ ಪುರುಷೋತ್ತಮ ಭಾರತೀ ಸ್ವಾಮಿಗಳು:

ಇಂತಹ ಯತಿಪುಂಗವರಿದ್ದ ಗುರುಪರಂಪರೆಯಲ್ಲಿ 19ನೇ ಪೀಠಾಧಿಪತಿಗಳಾಗಿರುವವರು ಶ್ರೇಷ್ಠ ವಿದ್ವಾಂಸರಾದ ಪುರುಶೋತ್ತಮ ಭಾರತೀ ಸ್ವಾಮಿಗಳು. ಪೂರ್ವಾಶ್ರಮದಲ್ಲಿ  ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜೀಕೊಂಡೂರು ಮಂಡಲಂನ ವೆಲ್ಲಟೂರು ಗ್ರಾಮದಲ್ಲಿ ಕಮ್ಮಂಬಾಟಿ ಸೇತುಮಾಧವ ಅವಧಾನಿ ಮತ್ತು ಜಗನ್ಮಂಗಳ ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ 9ನೇ ಸೆಪ್ಟೆಂಬರ್ 1953 ಜನಿಸಿದರು.  ವಿಜಯವಾಡಗಳಲ್ಲಿ ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ವಿಜಯವಾಡದ ಶೃಂಗೇರಿ ಮಠದಲ್ಲಿ ತಮ್ಮ ತಂದೆಯವರಿಂದಲೇ ವೇದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಕೃಷ್ಣ ಯಜುರ್ವೇದ, ಕ್ರಮಂತಗಳನ್ನು ಪೂರ್ಣಗೊಳಿಸಿ ರಾಜಮಹೇಂದ್ರಿ, ಶೃಂಗೇರಿ ಮುಂತಾದ ಕಡೆಗಳಲ್ಲಿ ನಡೆದ ಹಲವಾರು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಿದ್ವಾನ್ ಮಂಕಾಬೂಡಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಹಾಗೂ ವೇಮೂರಿ ವೆಂಕಟೇಶ್ವರ ಸಿದ್ಧಾಂತಿ ಅವರ ಮಾರ್ಗದರ್ಶನದಲ್ಲಿ ಪಂಚ ಕಾವ್ಯ, ಜೋತಿಷ್ಯ ಶಾಸ್ತ್ರವನ್ನು ಕರತಲಾಮಲಕಗೊಳಿಸಿಕೊಂಡರು.

ಇಂದು ಸನಾತನದ ಧರ್ಮದ ಗಣಿತ ಶಾಸ್ತ್ರದ (ವೇದಿಕ್ ಮ್ಯಾಥ್ಸ್) ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವವರಾಗಲಿ, ಅದರ ಮೇಲೆ ಪ್ರಭುತ್ವ ಸಾಧಿಸಿದವರನ್ನು ಕಾಣುವುದು ಅತಿ ವಿರಳ.   ಲೀಲಾವತಿ ಗಣಿತ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಮತ್ತೊಂದು ವೈಶಿಷ್ಟ್ಯ.  ಇನ್ನು ಶೃಂಗೇರಿ ಪೀಠದ ಶಾಖೆಗೆ ಪೀಠಾಧಿಪತಿಗಳಾಗುವವರಿಗೆ ತರ್ಕ ಶಾಸ್ತ್ರ, ವೇದಾಂತವೇ ಮೊದಲಾದ ವಿಷಯಗಳ ಬಗ್ಗೆ ಪಾಂಡಿತ್ಯವಿರಬೇಕು.  ಮಹಾಮಹೋಪಾಧ್ಯಾಯ ಮುದ್ದುಲಪಲ್ಲಿ ಮಾಣಿಕ್ಯಶಾಸ್ತ್ರಿಗಳ ಬಳಿ ತರ್ಕ ಪ್ರಕರಣ, ವೇದಾಂತ ಶಾಸ್ತ್ರ ಗ್ರಂಥ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಸೂತ್ರ ಭಾಷ್ಯ, ಪ್ರಸ್ಥಾನ ತ್ರಯ ಮುಂತಾದವುಗಳಲ್ಲಿ ಅದ್ಭುತ ಜ್ನಾನ ಸಂಪಾದಿಸಿಕೊಂಡಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಹಿರಿಮೆ. ಜ್ಞಾನ ಸಂಪನ್ನರಾದ ಶ್ರೀಗಳು ಶ್ರೀ ಶೃಂಗೇರಿ ಶಂಕರ ಮಠದ ವೇದ ಪಾಠಶಾಲೆಯಲ್ಲಿ ವೇದ ವಿದ್ಯೆಯನ್ನು ಅನೇಕಾನೇಕ ವಿದ್ಯಾರ್ಥಿಗಳಿಗೆ ಕಲಿಸಿದರು. ಅಷ್ಟೇ ಅಲ್ಲದೇ ತಮ್ಮ ಪುತ್ರರಾದ ಕಮ್ಮಂಬಾಟಿ ಆಂಜನೇಯಶರ್ಮ ಘನಪಾಠಿ ಮತ್ತು ಕಮ್ಮಂಬಾಟಿ ಸೇತುಮಾಧವಶರ್ಮ ಅವಧಾನಿ ಅವರಿಗೂ ಸಹ ವೇದ, ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೀಣರಾಗುವಂತೆ ತರಬೇತಿ ನೀಡಿ ಸ್ಮಾರ್ತ ಪರೀಕ್ಷಾಧಿಕಾರಿಯಾಗಿ ಸಲ್ಲಿಸಿದ್ದಾರೆ. 

ಮೈಸೂರಿನೊಂದಿಗೆ ಉತ್ತಮ ಒಡನಾಟ:

ಪುರುಶೋತ್ತಮ ಭಾರತೀ ಸ್ವಾಮಿಗಳು ವಿಜಯವಾಡದವರಾಗಿದ್ದರೂ ಪೂರ್ವಾಶ್ರಮದಲ್ಲಿ ಶ್ರೀಗಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನಲ್ಲಿರುವ ಅವಧೂತ ದತ್ತಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿಗಳಾಗಿರುವ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು ಅಲ್ಲಿನ ವೇದ ಪಾಠಶಾಲೆಯಲ್ಲಿ ಬೋಧನಾ ಕಾರ್ಯವನ್ನು ಸಫಲವಾಗಿ ಕೈಗೊಂಡಿದ್ದರು.  ಸನಾತನದ ಧರ್ಮಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿ ವಿಷಯ ಸುಖಗಳಲ್ಲಿ ವಿರಕ್ತಿ ಹೊಂದಿ, ತುರೀಯಾಶ್ರಮವನ್ನು ಸ್ವೀಕರಿಸುವುದರ ಬಗೆಗೆ ಶೃಂಗೇರಿ ಜಗದ್ಗುರುಗಳಲ್ಲಿ ನಿವೇದಿಸಿಕೊಂಡರು. ಇತ್ತ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆರೋಗ್ಯವೂ ಹದಗೆಟ್ಟೆತ್ತು. ಶ್ರೀಗಳು 2013ರ ಫೆ.23ರಂದು ಬ್ರಹ್ಮೈಕ್ಯರಾದರು. ಶೃಂಗೇರಿ ಜಗದ್ಗುರುಗಳಾದ ಭಾರತಿ ತೀರ್ಥ ಸ್ವಾಮಿಗಳು ವಿಶಾಖ ಪಟ್ಟಣದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮೂಲಕ 2014ರ ಮಾ.3ರಂದು ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳಿಗೆ ತುರಿಯಾಶ್ರಮವನ್ನು ಅನುಗ್ರಹಿಸಿ, ಶ್ರೀ ಪುರುಶೋತ್ತಮ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನು ನೀಡಿದರು. ಪುರುಷೋತ್ತಮ ಭಾರತೀ ಸ್ವಾಮಿಗಳು ತಮ್ಮ ಪರಂಪರೆಯ ಗುರುಗಳಾದ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ವಿಧಿವತ್ತಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಲು ಸಾಧ್ಯವಾಗದೇ ಇದ್ದರೂ, ತಮ್ಮ ಗುರುಗಳ ಅಭಿದಾನವನ್ನೇ ಪಡೆದಿದ್ದ ಯತಿಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿದ್ದೂ ವಿಶೇಷ ಸಂಗತಿ. 2014ರ ಏಪ್ರಿಲ್ 24ರಂದು(ವಿಜಯ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆ ) ಪುರುಶೋತ್ತಮ ಭಾರತೀ ಸ್ವಾಮಿಗಳಿಗೆ ಶೃಂಗೇರಿ ಶಿವಗಂಗಾಪೀಠದ 19ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷೇಕ ನೆರವೇರಿತು. ನವಯತೀಶ್ವರರನ್ನು ಎದುರು ನೋಡುತ್ತಿದ್ದ ಶೃಂಗೇರಿ ಶಿವಗಂಗೆಯ ಶಾರದಾಪೀಠಕ್ಕೆ 'ಪುರುಷೋತ್ತಮ'ರಾದ ಪುರುಷೋತ್ತಮ ಭಾರತೀ ಸ್ವಾಮಿಗಳು ಪೀಠಾಧಿಪತಿಗಳಾದರು. ಅಂದು ಪುರುಶೋತ್ತಮ ಭಾರತೀ ಸ್ವಾಮಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದಿತ್ತು. 2015ರ ಏ.14ಕ್ಕೆ ಈ ಅವಿಸ್ಮರಣೀಯ ಘಟನೆಗೆ ಒಂದು ವರ್ಷ. ವಾರ್ಷಿಕೋತ್ಸವದ ಅಂಗವಾಗಿ ಈ ವರ್ಷ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತವೃಂದ ಎದುರು ನೋಡುತ್ತಿದೆ.