Friday 19 December 2014

ಗಾಂಧಿಯನ್ನು ಕೊಂದದ್ದು ಗೋಡ್ಸೆಯಾದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್!

ನರೇಂದ್ರ ಮೋದಿ ಅವರ ಆಡಳಿತ ಪ್ರಾರಂಭದ ದಿನದಿಂದಲೂ ಈವರೆಗೂ ಸರ್ಕಾರದ ವಿರುದ್ಧ ಪ್ರತಿಭಟಿಸಲು ವಿರೋಧಪಕ್ಷಗಳಿಗೆ ವಿಷಯವೇ ಸಿಕ್ಕಿಲ್ಲ. ಎರಡು ಅಂಕಿ ದಾಟದ ಕಾಂಗ್ರೆಸ್ಸಿಗರು ವಿಪಕ್ಷ ಸ್ಥಾನ ಪಡೆಯದೇ ಇದ್ದರೂ ಹೇಗಾದರೂ ಸರ್ಕಾರವನ್ನು ಹಣಿಯಲೇಬೇಕೆಂಬ ತೀರ್ಮಾನಕ್ಕೆ ಬಂದಿತ್ತು. ಒಂದಷ್ಟು ದಿನ ಕಪ್ಪು ಹಣದ ವಿಷಯ ಸಿಕ್ಕಿತಾದರೂ ಅದನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಲಿಲ್ಲ. ಆನಂತರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ನೀಡಿದ ವಿವಾದಾತ್ಮಕ ಹೇಳಿಕೆ ವಿಷಯದ ಬಗ್ಗೆ ಒಂದಷ್ಟು ದಿನ ಕಾಲಹರಣ ಮಾಡಿದರು. ಕೊನೆಗೆ ಸಾಕ್ಷಿ ಮಹಾರಾಜ್ ಗಾಂಧಿ ಬಗ್ಗೆ ಹೇಳಿಕೆ ನೀಡುವವರೆಗೂ ಕಾಂಗ್ರೆಸ್ ಗೆ ಸಂಸತ್ ನಲ್ಲಿ ಆಹಾರವಿಲ್ಲದಂತಾಗಿತ್ತು.

ವಿಪಕ್ಷದಲ್ಲಿದ್ದರೂ ಸರಿ, ಅಧಿಕಾರದಲ್ಲಿದ್ದರೂ ಸರಿ, ಅಸಲಿಯೋ ಅಥವಾ ನಕಲಿಯೋ ಒಟ್ಟಿನಲ್ಲಿ ಗಾಂಧಿ ಎಂಬ ಹೆಸರಿಲ್ಲದೇ ಕಾಂಗ್ರೆಸ್ಸಿಗರ ಅಸ್ಥಿತ್ವವೇ ಇಲ್ಲ. ತಮ್ಮ ಪಕ್ಷದವರನ್ನು ಹೊರತುಪಡಿಸಿ ಗಾಂಧಿ ಹೆಸರನ್ನು ಮತ್ತೊಬ್ಬರು ಹೇಳಿದರೂ ಸಹಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಅಂಥದ್ದರಲ್ಲಿ ಸಾಕ್ಷಿಮಹಾರಾಜರು, 'ಗಾಂಧಿಯನ್ನು ಕೊಂದಿದ್ದು ಗೋಡ್ಸೆ, ಆದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್ಸೇ' ಎಂದು ಸತತ ಒಂದು ವಾರ ಕಾಲ ಕಿರುಚುತ್ತಿದ್ದ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದರು!. ಗಮನಾರ್ಹ ವಿಷವೆಂದರೆ ಗಾಂಧಿ ಕೊಲೆಯ ಬಗ್ಗೆ ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡಿದರೂ ಸಹ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ವ್ಯಕ್ತವಾದ ಪ್ರತಿಭಟನೆ ಸಾಕ್ಷಿ ಮಹಾರಾಜರ ಹೇಳಿಕೆಗೆ ವಿರೋಧ ವ್ಯಕ್ತವಾಗಲಿಲ್ಲ. ಹಾಗಾದರೆ ಗಾಂಧಿ ತತ್ವಗಳನ್ನು ಕಾಂಗ್ರೆಸ್ಸಿಗರು ಕೊಲೆ ಮಾಡಲಿಲ್ಲವೇ? ಅದೇಕೆ ಮಾಡಲಿಲ್ಲ. ಸ್ವಾತಂತ್ರ್ಯ ನಂತರ ವಿಸರ್ಜನೆಯಾಗಬೇಕಿದ್ದ ಕಾಂಗ್ರೆಸ್, ರಾಜಕೀಯ ಪಕ್ಷವಾಗಿ ತಲೆ ಎತ್ತಿನಿಂತಿದ್ದೇ ಗಾಂಧಿ ತತ್ವದ ಸಮಾಧಿ ಮೇಲೆ! ಅರ್ಥಾತ್ ಹುಟ್ಟಿದ್ದೇ ಗಾಂಧಿ ತತ್ವದ ಕಗ್ಗೊಲೆಯ ಮೂಲಕ.

ದೇಶದ್ರೋಹದ ಕೆಲಸಗಳನ್ನು ಮಾಡಿ ಕೊನೆಗೆ ಸೋಗಲಾಡಿಗಳ ವೇಷದಲ್ಲಿ ಗಾಂಧಿ ತತ್ವಗಳನ್ನು ಮುಂದಿಟ್ಟು ಮತ ಬೇಡಿ ಅಧಿಕಾರಕ್ಕೆ ಬಂದರಲ್ಲ ಅದು ಗಾಂಧಿ ತತ್ವದ ಕೊಲೆಯಲ್ಲವೇ? 60ವರ್ಷ ನಿರಂತರವಾಗಿ ದೇಶದ ಜನರಿಗೆ ಮೋಸ ಮಾಡಿತ್ತಲ್ಲ ಅದು ಗಾಂಧಿ ತತ್ವಗಳ ಕೊಲೆಯಾದೀತು. ಗೋಹತ್ಯೆ, ಮತಾಂತರ ಎಂದಾಗ ಅರಚುತ್ತಾ ಅಲ್ಪಸಂಖ್ಯಾತರ ಪರ ವಹಿಸಿಕೊಂಡು ಮಾತನಾಡುತ್ತಾರಲ್ಲ ಅದು ಕೂಡ ಗಾಂಧಿ ತತ್ವದ ಕೊಲೆಯಾಗುತ್ತದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಬೇಕೆಂದ ಗಾಂಧಿ ಅವರ ಮಾತು ಮೀರಿ ನಡೆದರಲ್ಲಾ ಅದನ್ನು ಏನೆನ್ನಬೇಕು?
ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು ನೆನಪಾಗುತ್ತದೆ. I know you are here to kill me. Shoot, coward, you are only going to kill a man, ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಎಂದು ಹೇಳಿದ್ದ ಮಾತದು. ಇಲ್ಲಿ ಆ ಮಾತುಗಳು ನೆನಪಾಗುತ್ತವೆ. ಈ ನೆಲೆಗಟ್ಟಿನಿಂದ ನೋಡಿದರೆ ಗಾಂಧಿಯನ್ನು ಶಾಶ್ವತವಾಗಿ ಕೊಂದದ್ದು ದೇಹಕ್ಕೆ ಗುಂಡಿಟ್ಟುಕೊಂದ ನಾಥೂರಾಮ್ ಗೋಡ್ಸೆಯೋ ಅಥವಾ ವಿಚಾರಗಳಿಗೆ 60 ವರ್ಷಗಳಿಂದ slow poison ಉಣಿಸುತ್ತಾ ಬಂದ ಕಾಂಗ್ರೆಸ್ಸಿಗರೋ ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟಕ್ಕೂ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳು ಗಾಂಧಿಯನ್ನು ನಮ್ಮೊಂದಿಗಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಬಾಯ್ಬಿಟ್ಟರೆ ಗಾಂಧಿಗಿರಿಯನ್ನೇ ಉಸುರುವ ನಕಲಿ ಗಾಂಧಿಗಳು ದೇಶ ಲೂಟಿ ಮಾಡುವ ಮೂಲಕ ಗಾಂಧಿ ತತ್ವಗಳನ್ನು ಎಂದಿಗೋ ಕೊಲೆ ಮಾಡಿದರು!. ಆದರೆ ಎಲ್ಲವನ್ನೂ ಮಾಡಿದ ಕಾಂಗ್ರೆಸ್ಸಿಗರು ಮಾತ್ರ ಲೋಕಸಭೆಯಲ್ಲಿ ಕಿರುಚತೊಡಗಿದರು.

ಸಂಸತ್ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಿಷಯಗಳು ಚರ್ಚೆಯಾದ ಸಂದರ್ಭದಲ್ಲಿ ಗಾಂಧಿ ಹೆಸರನ್ನು ಗುತ್ತಿಗೆಗೆ ಪಡೆದಿರುವ ಕಾಂಗ್ರೆಸ್ಸಿಗರು ಅವರ ತತ್ವಗಳಿಗೇಕೆ ವಿರುದ್ಧವಾಗಿ ಮಾತನಾಡುತ್ತಾರೆ? ಸಾಧ್ವಿ ನಿರಂಜನ ಜ್ಯೋತಿ ಅವರು ಈ ದೇಶದಲ್ಲಿ ರಾಮನ ಮಕ್ಕಳು ಮಾತ್ರ ದೇಶದಲ್ಲಿರಬೇಕೆಂದು ಹೇಳಿದಾಗ ಗಾಂಧಿಯ ರಾಮರಾಜ್ಯದ ಕನಸಿನ ಆಯಾಮವನ್ನೂ ಮರೆತು ಸಂಸತ್ ನಲ್ಲಿ ಗದ್ದಲವೆಬ್ಬಿಸಿದರು. ರಾಜೀನಾಮೆ ಕೇಳಿದರು. ಕಾಂಗ್ರೆಸ್ಸಿಗರು ಗಾಂಧಿಜಿ ತತ್ವ ಹಾಗೂ ಆ ಹೆಸರನ್ನು ನಿತ್ಯನಿರಂತರವಾಗಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕಾ?

ಇನ್ನು ಮತಾಂತರದ ವಿಷಯದಲ್ಲಿಯೂ ಕಾಂಗ್ರೆಸ್ ಪಕ್ಷ ಎಂದಿಗೂ ನಡೆದುಕೊಂಡಿರುವುದು ಗಾಂಧಿ ತತ್ವಗಳಿಗೆ ವಿರುದ್ಧವಾಗಿಯೇ, ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯ ಧ್ವಂಸ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದ್ದರೂ ಇವರದ್ದೇ ಸರ್ಕಾರ ಇದ್ದಾಗ ಶಿಖಂಡಿಗಳಂತೆ ವರ್ತಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ 57 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿದನ್ನು ಮಾತ್ರ ಸಹಿಸಲಾಗಲಿಲ್ಲ. ಆಗ ಗಾಂಧಿ ತತ್ವಗಳ ಬಗ್ಗೆ ಕಾಂಗ್ರೆಸ್ಸಿಗರಿಗೆ ನೆನಪಾಗಲಿಲ್ಲ. ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಾದರೂ ಗಾಂಧಿ ತತ್ವಗಳನ್ನು ಕೊಂದಿದ್ದು ಮಾತ್ರ ತಾವೇ ಎಂದು ಮನಸ್ಸಾಕ್ಷಿ ಚುಚ್ಚಲಿಲ್ಲ. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆಗೆ ಪ್ರತಿಭಟಿಸುತ್ತಾರೆಂದರೆ ಕಾಂಗ್ರೆಸ್ಸಿಗರು ಅದೆಂಥಹ ನೈತಿಕ ಭ್ರಷ್ಟರಿರಬೇಕು?
ಇವೆಲ್ಲದ್ದಕ್ಕೂ ಮೀರಿದ ಗಾಂಧಿ ತತ್ವ ಅಂಹಿಸೆ, ಕಾಂಗ್ರೆಸ್ಸಿಗರು ಅದನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ? ಗಾಂಧಿಯನ್ನು ಹತ್ಯೆ ಮಾಡಿದವ ಬ್ರಾಹ್ಮಣ ಎಂಬ ಕಾರಣಕ್ಕೆ ಬಾಂಬೆಯಲ್ಲಿ ಅದೆಷ್ಟು ಬ್ರಾಹ್ಮಣರ ಮೇಲೆ ದಾಳಿ ನಡೆದಿಲ್ಲ? ಇಂದಿರಾ ಗಾಂಧಿಯನ್ನು ಕೊಂದವರ ಸಮುದಾಯದವರೆಂಬ ಕಾರಣಕ್ಕೆ ಅದೆಷ್ಟು ಸಿಖ್ಖರನ್ನು ಹತ್ಯೆ ಮಾಡಿಲ್ಲ? ಗಾಂಧಿ ತತ್ವಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ತಡೆಯಬಹುದಿತ್ತಲ್ಲ. ಇವೆಲ್ಲವನ್ನೂ ಬಿಡಿ, ದೇಶವನ್ನು ಕೇಕ್ ಕತ್ತರಿಸಿದ ರೀತಿಯಲ್ಲಿ ಕತ್ತರಿಸಿ ಹಂಚಿದಾಗ ಪಾಕಿಸ್ತಾನದಿಂದ ಭಾರತಕ್ಕೆ ಹೊರಟ ಹಿಂದೂ ಮಹಿಳೆಯರು ಮಾನ ಕಳೆದುಕೊಂಡು ಅಹಿಂಸಾವಾದಿಯಾದ ಗಾಂಧಿ ಎದುರೇ ಹೆಣಗಳಾಗಿ ಬಿದ್ದಾಗ ಕಾಂಗ್ರೆಸ್ಸಿಗರು ಅಹಿಂಸಾ ತತ್ವವನ್ನು ಮರೆತೇಬಿಟ್ಟಿದ್ದರು. ಹಾಗಾದರೆ ಇಷ್ಟೆಲ್ಲಾ ನಡೆದಾಗಲೂ ಸುಮ್ಮನಿದ್ದ ಕಾಂಗ್ರೆಸ್ಸಿನವರು ಗಾಂಧಿ ಬದುಕಿದ್ದಾಗಲೇ ಅವರ ಕೊಲೆ ಮಾಡಿದ್ದರು ಎಂಬುದು ಸಾಬೀತಾದಂತಾಯಿತು. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆ ನಿಜ ಅನ್ನಿಸಲಿಲ್ಲ. ಅಧಿಕಾರಕ್ಕಾಗಿ ಏನನ್ನೂ ಮಾಡಲು ತಯಾರಿರುವವರಿಗೆ ಗಾಂಧಿ ತತ್ವಗಳನ್ನು ಕೊಲ್ಲುವುದು ಕಷ್ಟದ ಕೆಲಸವಾಗದು. ಏಕೆಂದರೆ ಅವರಿಗೆ ತತ್ವ ಸಿದ್ಧಾಂತಗಳಿಗಿಂತ ಲೂಟಿ ಹೊಡೆಯುವುದೇ ಮುಖ್ಯ. ಲೂಟಿ ಹೊಡೆಯುವುದಕ್ಕೆ ಅಧಿಕಾರ ಮುಖ್ಯ, ಅಧಿಕಾರ ಹಿಡಿಯಲು ಮಾತ್ರ ಗಾಂಧಿ ತತ್ವಗಳು ಸೀಮಿತ. ಸಂಬಂಧವೇ ಇಲ್ಲದಿದ್ದರೂ ಹೆಸರಲ್ಲೇ ಗಾಂಧಿ ಎಂಬ ಪದ ಸೇರಿಸಿಕೊಂಡಿದ್ದಾರಲ್ಲಾ, ಇನ್ನು ತತ್ವಗಳನ್ನು ಕಟ್ಟಿಕೊಂಡು ಏನಾಗಬೇಕು? ಸಾಚಾಗಳಂತೆ ವರ್ತಿಸುವ ಕಾಂಗ್ರೆಸ್ಸಿಗರು ಗಾಂಧಿ ನೆನಪಿನಲ್ಲಿ ದೇಶಕ್ಕೆ ಉಪಯೋಗವಾಗುವ ಯೋಜನೆಗಳನ್ನು ನೀಡಿದ್ದಾರಾ? ಗಾಂಧಿಜಿ ಹೇಳುತ್ತಿದ್ದ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವುದಕ್ಕೂ 60 ವರ್ಷಗಳೇ ಬೇಕಾಯಿತು. ಅದೂ ಕಾಂಗ್ರೆಸ್ಸೇತರ ಪ್ರಧಾನಿಯಿಂದ. ರಾಜಕೀಯ ಕ್ಷೇತ್ರವನ್ನು ಕಲ್ಮಶಗೊಳಿಸಿದವರಿಂದ ಭಾರತವನ್ನು ಸ್ವಚ್ಛಗೊಳಿಸಲು ಹೇಗೆತಾನೇ ಸಾಧ್ಯ ಹೇಳಿ?
ತಾವಿದ್ದ ಕಾಂಗ್ರೆಸ್ ಪಕ್ಷ ದೇಶಕ್ಕೂ ತಮ್ಮ ತತ್ವ ಸಿದ್ಧಾಂತಗಳಿಗೂ ಮುಳುವಾಗುತ್ತದೆ ಎಂದು ಗಾಂಧಿಗೆ ಗೊತ್ತಿರಲಿಲ್ಲವೇ? ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳು ಗಾಂಧಿ ಬಳಿ ಅಳಲು ತೋಡಿಕೊಂಡಾಗ ನಿರಾಶ್ರಿತರ ಪರವಾಗಿ ಪ್ರಧಾನಿ ನೆಹರೂಗೆ ಅಪ್ಪಣೆ ಮಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಈ ವಿಷಯದಲ್ಲಿ ನೆಹರೂ ನಡೆದುಕೊಂಡ ರೀತಿಯಲ್ಲೇ ಗಾಂಧಿಗೆ ತಮ್ಮ ರಾಮರಾಜ್ಯದ ಕನಸನ್ನೂ ಸೇರಿಸಿ ಸಮಸ್ತ ತತ್ವಗಳಿಗೂ ಈ ಪಕ್ಷ ಕೊಳ್ಳಿ ಇಡಲಿದೆ ಎಂದು ಅರ್ಥವಾಗಬೇಕಿತ್ತು. ಒಂದು ವೇಳೆ ಅರ್ಥವಾಗಿದ್ದರೂ ಗಾಂಧಿ ಆ ವೇಳೆಗೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದರು. ಒಬ್ಬ ನಾಯಕನಿಂದ ಪ್ರಧಾನಿ ಹುದ್ದೆ ಗಿಟ್ಟಿಸಿಕೊಂಡ ಪಕ್ಷ ಆತ ಬದುಕಿದ್ದಾಗಲೇ ತನ್ನ ಗಾಡ್ ಫಾದರ್ ನ ತತ್ವಗಳಿಗೆ ತಿಲಾಂಜಲಿ ಅರ್ಪಿಸಿತ್ತು. ಆದರೂ ಶರೀರಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನೇ ಮುಂದಿಟ್ಟುಕೊಂಡು ಸಂಸತ್ ನಲ್ಲಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಹಾಗೂ ನೆಹರೂ ಕುಟುಂಬದ ಪ್ರತಿಯೊಂದು ನಡೆಯೂ ಗಾಂಧಿ ತತ್ವವನ್ನು ಕೊಲೆ ಮಾಡಿದೆ. ಭಾರತದ ಬಗ್ಗೆ ಭಾವನೆಗಳೇ ಇಲ್ಲದೇ ಹಿಂದೂವಾಗಿ ನನ್ನ ಹುಟ್ಟು ಆಕಸ್ಮಿಕ ಎಂದವರನ್ನು ವಿಪರೀತವಾಗಿ ತಲೆಮೇಲೆ ಕೂರಿಸಿಕೊಂಡಾಗ ತತ್ವಗಳನ್ನು ಬಲಿಕೊಡಬೇಕಾಗುತ್ತದೆ ಎಂಬುದಕ್ಕೆ ಗಾಂಧಿಗಿಂತಲೂ ಉತ್ತಮ ಉದಾಹರಣೆ ಬೇಕಿಲ್ಲ. ಗಾಂಧಿ ತತ್ವಗಳನ್ನು ಕಾಂಗ್ರೆಸ್ ಕೊಂದರೂ ಗೋಡ್ಸೆಯೇ ಗಾಂಧಿಯನ್ನು ಕೊಂದದ್ದು ಎಂದೆನಿಸುವುದು ಸಹಜ. ಕಾಂಗ್ರೆಸ್ ಗಾಂಧಿ ವಿಚಾರದಲ್ಲಿ ನಡೆದುಕೊಂಡಿದ್ದು ಅಧಿಕಾರಕ್ಕಾಗಿ, ಮತ ಗಳಿಸಲು ಬಳಸಿಕೊಂಡು ಎಸೆದದ್ದು ಎಲ್ಲದರ ಬಗ್ಗೆ ಅರಿವಿರುವವರು ಗೋಡ್ಸೆ ಮಾತ್ರ ಗಾಂಧಿಯನ್ನು ಕೊಂದ ಎನ್ನಲು ಸಾಧ್ಯವಿಲ್ಲ. ಗಾಂಧಿ ತತ್ವವನ್ನು ಕೊಂದಿದ್ದು ಕಾಂಗ್ರೆಸ್ ಎಂಬ ಸಾಕ್ಷಿಮಹಾರಾಜರ ಮಾತು ಸುಳ್ಳೆನ್ನಲು ಸಾಧ್ಯವಿಲ್ಲ.

Monday 1 December 2014

ಶರಿಯತ್ ಕೋರ್ಟ್ ಗಳಿಗೇ ಮಾನ್ಯತೆ ಇಲ್ಲ ಎಂದಾದ ಮೇಲೆ ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವ ದರ್ದೇಕೆ?

ಈ ದೇಶದಲ್ಲಿ ಸಂವಿಧಾನಕ್ಕೆ ಪರ್ಯಾಯವಾದ ಮತ್ತೊಂದು ಕಾನೂನು ಚಾಲ್ತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ ಭದ್ರತೆಗೇ ಅಪಾಯವೊಡ್ಡುವ ಸ್ಥಿತಿ ಎದುರಾದಾಗ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಇಲ್ಲದಿದ್ದರೆ ಪರ್ಯಾಯ ಕಾನೂನಿನ ಪ್ರಕಾರ ಏನು ನಡೆದರೂ ಪಿಳಿಪಿಳಿ ನೋಡುತ್ತಾ ಕುಳಿತುಬಿಡುತ್ತೇವೆ. ಈ ಮಾತನ್ನು ಈಗೇಕೆ ಹೇಳಬೇಕಾಗಿದೆ ಎಂದರೆ ಪ್ರತಿಯೊಂದರಲ್ಲೂ ಪ್ರತ್ಯೇಕತೆಯಲ್ಲೇ ಜೀವನ ನಡೆಸುತ್ತಿರುವ ಅಲ್ಪಸಂಖ್ಯಾತರಿಗೆ ಶರಿಯತ್ ಕಾನೂನಿನ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭವಾಗಿರುವುದರಿಂದ.

ಅವರಿಗಾಗಿಯೇ ಪ್ರತ್ಯೇಕ ವಿವಾಹ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಅಪರಾಧ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಬ್ಯಾಂಕ್, ಅವರಿಗಾಗಿಯೇ ಪ್ರತ್ಯೇಕ ಪಕ್ಷ ಹೀಗೆ ಎಣಿಸುತ್ತಿದ್ದರೆ ಪ್ರತ್ಯೇಕತೆಯ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದರಲ್ಲೂ ಪ್ರತ್ಯೇಕತೆ ಬಯಸುವವರು ಈಗ ಮ್ಯುಚುಯಲ್ ಫಂಡ್ ಗೆ ಬಂದಿದ್ದಾರೆ. ಅದೂ ಶರಿಯತ್ ಪ್ರಕಾರ ಮಾಡಬೇಕಂತೆ! ಅವರೇನು ಕೇಳಿಲ್ಲ ಬಾಂಧವರನ್ನು ಮೆಚ್ಚಿಸಲು ನಮ್ಮದೇ ಎಸ್.ಬಿ.ಐ ಹಮ್ಮಿಕೊಂಡಿರುವ ಹೊಸ ಯೋಜನೆ!

ಪ್ರತ್ಯೇಕ ದೇಶ ಬೇಕು ಎಂದರು ಕೊಟ್ಟದ್ದು ಆಯಿತು. ಪ್ರತ್ಯೇಕ ವಿವಾಹ ಕಾಯ್ದೆ ಎಂದರು ಅಲ್ಪಸಂಖ್ಯಾತರ ಮತ ಗಿಟ್ಟುತ್ತದೆ ಎಂದು ಏನೂ ಹೇಳದೇ ಮೌನವಾಗಿದ್ದಾಯಿತು. ಪ್ರತ್ಯೇಕ ರಾಜ್ಯದಲ್ಲೂ ತಮ್ಮದೇ ವಿಚಿತ್ರ ಕಾನೂನು-ಕಟ್ಟಲೆ ಬೇಕು ಎಂದರು ದೇಶದ ಪಂಡಿತ-ಮಹಾತ್ಮರು ಅದಕ್ಕೂ ಒಪ್ಪಿದರು. ಹೀಗೆಯೇ ಕೇಳುತ್ತಾ ಹೋದಂತೆಲ್ಲಾ ಇಲ್ಲ ಎನ್ನದೇ ಕೊಟ್ಟಾಯಿತು. ಕಾಲ ಬದಲಾದಂತೆ ಕೇಳದೆಯೂ ಓಲೈಸುವ ಪದ್ಧತಿ ಜಾರಿ ಬಂತು. ಕೊಡುತ್ತಾ ಹೋದಂತೆಲ್ಲಾ ಕಿರುಚುವುದು ಹೆಚ್ಚಾಯಿತೇ ಹೊರತು ಎಲ್ಲರಲ್ಲೂ ಒಂದಾಗುವ ಭಾವನೆ ಮೂಡಲಿಲ್ಲ. ತಾವೂ ಈದೇಶದ ಪ್ರಜೆಗಳು, ತಮಗೂ ಈ ದೇಶದ ಸಂವಿಧಾನಾತ್ಮಕ ಕಾನೂನುಗಳು ಅನ್ವಯವಾಗುತ್ತವೆ ಹೊರತು ಧರ್ಮದ ಚೌಕಟ್ಟಿನಲ್ಲಿರುವ ಕಾನೂನು ಅನ್ವಯಿಸುವುದಿಲ್ಲ ಎಂದು ಅವರಿಗೆ ಅನ್ನಿಸಲೇ ಇಲ್ಲ...!

ಈ ದೇಶದಲ್ಲಿ ಏನಾಗುತ್ತಿದೆ? ಇಂತಹದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಏಕೆಂದರೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಶರಿಯತ್ ಕೋರ್ಟ್ ಗಳ ಕುರಿತು ಮಹತ್ವದ ತೀರ್ಪನ್ನು ನೀಡಿತ್ತು. ಶರಿಯತ್ ’ಕೋರ್ಟ್’ ಗಳಿಗೆ ಕಾನೂನಿನ ಅಡಿಯಲ್ಲಿ ಮಾನ್ಯತೆಯೇ ಇಲ್ಲವೆಂಬುದು ಆ ತೀರ್ಪಿನ ಸಾರಾಂಶ. ಆದರೂ ಶರಿಯತ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭಿಸಲಾಗುತ್ತಿದೆ.

ಶರಿಯತ್ ಕೋರ್ಟ್ ಗಳು ಹೊರಡಿಸುವ ಸೋ ಕಾಲ್ಡ್ ತೀರ್ಪುಗಳಿಂದ ರೋಸಿ ಹೋಗಿದ್ದ ಅದೆಷ್ಟೋ ಜನರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ದೇಶದ ಸಂವಿಧಾನಾತ್ಮಕ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವ ಶರಿಯತ್ ಕೋರ್ಟ್ ಹಾಗೂ ಕೋರ್ಟ್ ಗಳು ವಿಧಿಸುವ ಫತ್ವಾಗಳಿಗೆ ಕಾನೂನು ಮಾನ್ಯತೆ ಇಲ್ಲವೆಂದು ಘಂಟಾಘೋಷವಾಗಿ ಸುಪ್ರೀಂ ತೀರ್ಪು ನೀಡಿದೆ. ಅದು ಫತ್ವಾಗೆ ಮಾತ್ರ ಸೀಮಿತವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಹೇಳಿರುವುದು ಶರಿಯತ್ ಕೋರ್ಟ್ ಗಳು ಹೊರಡಿಸುವ ಫತ್ವಾಗಳಿಗಲ್ಲ ಸಂಪೂರ್ಣ ಶರಿಯತ್ ಕೋರ್ಟ್ ಗಳಿಗೆ. ಶರಿಯತ್ ಕೋರ್ಟ್ ಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದಾದ ಮೇಲೂ ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದಾದರೆ ಸ್ಥಳೀಯ ಪಂಚಾಯತ್ ಗಳು ಹೊರಡಿಸುವ ಕಾನೂನ ಪ್ರಕಾರವೂ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವೋ? ಪರಿಸ್ಥಿತಿ ಹೀಗಿರಬೇಕಾದರೆ ಕಾನೂನು ಮಾನ್ಯತೆಯೇ ಇಲ್ಲದ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರ ದರ್ದೇನು?.

ಶರಿಯತ್ ಕೋರ್ಟ್ ಗಳ ಮೇಲಿದ್ದ ಗಂಭೀರ ಆರೋಪವೇ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯಂತೆ ವರ್ತಿಸುತ್ತಿದೆ ಎಂಬುದು. ಮ್ಯುಚುಯಲ್ ಫಂಡ್ ಎನ್ನುವುದು ಎಷ್ಟೇ ಖಾಸಗಿ ವಿಷಯವಾದರೂ ಅದು ದೇಶದ ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಅಂಥದ್ದರಲ್ಲಿ ಭಾರತದ ನ್ಯಾಯಾಂಗಕ್ಕೆ ಪರ್ಯಾಯ ನ್ಯಾಯಾಂಗದಂತೆ ವರ್ತಿಸುತ್ತಿರುವ ಶರಿಯತ್ ಕೋರ್ಟ್ ಗಳಿಂದ ರಚಿತವಾದ ಕಾನೂನಿಗೆ ಅನುಗುಣವಾಗಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರಲ್ಲಿ ಅರ್ಥವಿದೆಯೇ?



ಇಷ್ಟಕ್ಕೂ ಎಸ್.ಬಿ.ಐ ಪ್ರಾರಂಭಿಸಿರುವ ಶರಿಯತ್ ಮ್ಯುಚುಯಲ್ ಫಂಡ್ ಯೋಜನೆ ಹೆಸರೇ ಹೇಳುವಂತೆ ಶರಿಯತ್ ಸಲಹಾ ಮಂಡಳಿಯ ಅಧೀನಕ್ಕೆ ಒಳಪಟ್ಟಿರುತ್ತದೆ.. ಅದರ ನಿರ್ವಹಣೆ ಶರಿಯತ್ ಕೋರ್ಟ್ ಗಳಲ್ಲಿರುವವರ ಅಣತಿಯಂತೆಯೇ ನಡೆಯಲಿದೆ. ಶರಿಯತ್ ಕೋರ್ಟ್ ಗಳು ಅಥವಾ ಧಾರ್ಮಿಕ ಮುಖಂಡರು ಅನುಮತಿ ನೀಡುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಹೂಡಿಕೆ ಮಾಡಿದ ನಂತರವೂ ಅದನ್ನು ಬಳಸುವುದಕ್ಕೂ ನಿಬಂಧನೆಗಳೂ ಇಲ್ಲದೇ ಇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮ್ಯುಚುಯಲ್ ಫಂಡ್ ನ ಹಣ ಯಾವುದಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಅಲ್ಲವೇ? ಇಸ್ಲಾಂ ನಲ್ಲಿ ಬಡ್ಡಿ ತೆಗೆದುಕೊಳ್ಳುವುದು, ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಮೊದಲಾದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೆಲವೊಂದು ವಿಷಯಗಳು ಸಮಾಜಕ್ಕೆ ಒಳಿತೆಂದೇ ಕಂಡರೂ, ಸರ್ಕಾರಿ ಸ್ವಾಮ್ಯದ ಇಡಿಯ ಒಂದು ಯೋಜನೆಯನ್ನು ಶರಿಯತ್ ಕಾನೂನಿನ ಆಧಾರದಲ್ಲಿ ರೂಪಿಸುವುದು ಪಾನ್ ಇಸ್ಲಾಂ, ಇಸ್ಲಾಂ ಬ್ರದರ್ ಹುಡ್ ಹೆಸರಿನಲ್ಲಿ ನಡೆಯುವ ಅದೆಷ್ಟೋ ವಿಚಾರಗಳ ದೃಷ್ಠಿಯಿಂದ ಭಾರತದ ಸಂವಿಧಾನಕ್ಕೆ ವಿರೋಧಿಯಾಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು?
ಧಾರ್ಮಿಕ ಸಂಘರ್ಷದಲ್ಲಿ ಇಸ್ಲಾಂ ನ ತೀವ್ರತೆಯನ್ನು ನೆನಪಿಸುವ ಇರಾಕ್ ನ ಐ.ಎಸ್.ಐ.ಎಸ್ ಸಂಘಟನೆಯ ಕಣ್ಣಮುಂದೆಯೇ ಇದೆ. ಇರಾಕ್ ನಲ್ಲಿ ತಮ್ಮದೇ ಕರೆನ್ಸಿ ಜಾರಿಗೆ ತರುವ ಮಟ್ಟಿಗೆ ವ್ಯವಸ್ಥೆಗೆ ಸೆಡ್ಡು ಹೊಡೆದು ಸದ್ದಿಲ್ಲದೇ ಹೇಗೆ ಪರ್ಯಾಯ ವ್ಯವಸ್ಥೆ ರೂಪಿಸುತ್ತಾರೆ ಎಂಬುದೂ ನಮಗೆ ಚೆನ್ನಾಗಿ ತಿಳಿದಿದೆ. ಇವೆಲ್ಲದ್ದೂ ಪಾನ್ ಇಸ್ಲಾಂ, ಅಥವಾ ಇಸ್ಲಾಂ ಬ್ರದರ್ ಹುಡ್ ಪರಿಣಾಮ ಬೀರಿದೆ ಎಂಬುದೂ ಪ್ರಮುಖ ಪ್ರಶ್ನೆಯಾಗಲಿವೆ.

ಇಸ್ಲಾಮ್ ಬ್ರದರ್ ಹುಡ್ ನ್ನು ವ್ಯಾಖ್ಯಾನಿಸಲು ಇರಾಕ್ ನ ಐ.ಎಸ್.ಐ.ಎಸ್ ನಿಂದ ಭಾರತಕ್ಕೆ ವಾಪಸ್ಸಾದ ಮುಂಬೈ ನ ಯುವಕನ ಪ್ರಕರಣ, ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್ ಧ್ವಜ ಹಾರಿಸಿದ್ದು, ತಮಿಳುನಾಡಿನಲ್ಲಿ ಟೀ ಶರ್ಟ್ ಗಳ ಮೇಲೆ ಧ್ವಜ ಇಸೀಸ್ ಧ್ವಜ ಪ್ರಿಂಟ್ ಆದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಒಂದು ವೇಳೆ ಶರಿಯತ್ ಕೋರ್ಟ್ ನ ನಾನೂನು ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಒಂದು ಯೋಜನೆಯೇ ಜಾರಿಗೆ ಬರುತ್ತದೆ ಎಂದಾರೆ ಅದೇ ಶರಿಯತ್ ಕೋರ್ಟ್ ಧರ್ಮದ ನೆಲೆಗಟ್ಟಿನಲ್ಲಿ ಒಪ್ಪುವ ಜಿಹಾದ್, ಭಯೋತ್ಪಾದನೆ, ಒಂದಕ್ಕಿಂತ ಹೆಚ್ಚು ಮದುವೆಯಂತಹ ವಿಷಯಗಳನ್ನೂ ಕಾನೂನು ಬದ್ಧ ಮಾಡಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದರೆ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೇಗೆ ಸಾಧ್ಯ?
ನೆನಪಿರಲಿ, ಮುಂಬೈ ದಾಳಿಯ ರುವಾರಿ, ಹಫೀಜ್ ಸಯ್ಯದ್, ಇದೇ ದಾಳಿಯಲ್ಲಿ ಅಪರಾಧ ಸಾಬೀತಾಗಿ ಗಲ್ಲಿಗೇರಿದ್ದ ಅಜ್ಮಲ್ ಕಸಬ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದೂ ಇದೇ ಧಾರ್ಮಿಕ ಚೌಕಟ್ಟು. ಏಕೆಂದರೆ ಅವರು ಧರ್ಮಕ್ಕಾಗಿ ಹೋರಾಟ ನಡೆಸಿ ವೀರಮರಣವನ್ನಪ್ಪಿದ್ದಾರೆ. ತನ್ನ ಧರ್ಮವನ್ನು ಬೆಳೆಸುವುದಕ್ಕೆ ಹೋರಾಡುವುದು ಧಾರ್ಮಿಕ ಕಾನೂನಿನಲ್ಲಿ ಪ್ರತಿಷ್ಠೆಯ ಪ್ರಶ್ನೆ. ಭಯೋತ್ಪಾದನೆ, ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಭಾರತೀಯ ಮುಸ್ಲಿಮರು ಒಪ್ಪುವುದಿಲ್ಲ ಎಂದು ಸಮರ್ಥನೆ ನೀಡಬಹುದು ಆದರೆ ಭಾರತೀಯ ಮುಸ್ಲಿಮರು ಶರಿಯತ್ ನ್ನು ಒಪ್ಪುವುದಿಲ್ಲ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಶರಿಯತ್ ಕಾನೂನಿನಲ್ಲಿ ನಿಷೇಧಿಸುವ ಅಂಶಗಳನ್ನು ಹೊರತುಪಡಿಸಿ ಹಾಗೆಯೂ ಓರ್ವ ವ್ಯಕ್ತಿ ಹೂಡಿಕೆ ಮಾಡಬಹುದು. ಅದಕ್ಕೆ ಪ್ರತ್ಯೇಕ ಕಾನೂನು ಇರುವ ಮ್ಯೂಚುಯಲ್ ಫಂಡ್ ಅಗತ್ಯವೇನು?
ಒಂದು ಸರ್ವೇ ಪ್ರಕಾರ, ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳ ಆಸ್ತಿ ಒಟ್ಟು 1.8ಟ್ರಿಲಿಯನ್ ಡಾಲರ್ ನಷ್ಟಿದೆ. ಅಂದರೆ ಬರೊಬ್ಬರಿ 112 ಲಕ್ಷ ಕೋಟಿಯಷ್ಟಿದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶದ ಓರ್ವ ಮುಸ್ಲಿಮನಿಗೆ ತೊಂದರೆಯಾದರೆ ಅರಬ್ ರಾಷ್ಟ್ರದಲ್ಲಿರುವ ಮತ್ಯಾರೋ ವ್ಯಕ್ತಿ ಸಹಾಯಕ್ಕೆ ಧಾವಿಸುತ್ತಾರೆ. ಇದನ್ನು ತಪ್ಪು ಎಂದು ಹೇಳಲಾಗದು, ಆದರೆ ಒಂದು ವೇಳೆ ವಿದೇಶಿ ಮುಸ್ಲಿಮರು ಮ್ಯುಚುಯಲ್ ಫಂಡ್ ಗೆ ಹಣ ನೀಡಿ ಸದ್ದಿಲ್ಲದೇ ಆಡಳಿತ, ಆರ್ಥಿಕತೆಯ ಮೇಲೆ ಹಿಡಿದ ಸಾಧಿಸುವ ಹುನ್ನಾರವಿದ್ದರೆ ಈ ಶರಿಯತ್ ಕಾನೂನಿನ ಅಡಿ ಪ್ರಾರಂಭವಾಗುವ ಮ್ಯುಚುಯಲ್ ಫಂಡ್ ನಿಂದ ದೇಶದ ಭದ್ರತೆಗೇ ಅಪಾಯ ಎಂಬುದು ನಮಗೇಕೆ ಅರ್ಥವಾಗುತ್ತಿಲ್ಲ. ಇಷ್ಟೆಲ್ಲಾ ಇದ್ದರೂ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಿದರೆ ಮುಂದೊಮ್ಮೆ ಭಾರತದ ಸಮಸ್ತ ಆರ್ಥಿಕತೆಯನ್ನು ಷರಿಯತ್ ಆಳುವುದಿಲ್ಲ ಎಂದು ನಂಬುವುದಾದರೂ ಹೇಗೆ? ಸರಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತದೆ. ಒಂದು ವೇಳೆ ಶರಿಯತ್ ಕಾನೂನಿಗೆ ವಿರುದ್ಧವಾಗಿ ಹೂಡಿಕೆ ಮಾಡಿದಲ್ಲಿ ಆತನ ವಿರುದ್ಧ ಫತ್ವಾ ಹೊರಡಿಸಲಾಗುತ್ತದೆ ಎಂಬ ಅಂಶವೂ ಇದೆ. ಹಾಗಾದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಬೆಲೆ ಏನು?

ಇಷ್ಟಕ್ಕೂ ಶರಿಯತ್ ಕಾನೂನಿನಡಿಯಲ್ಲಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವಂತಹ ಘನ ಕಾರ್ಯ ಮಾಡಲು ಹೊರಟಿರುವ ಎಸ್.ಬಿ.ಐ ನೀಡುರುವ ಸ್ಪಷ್ಟನೆಯಾದರೂ ಏನು? " ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬಹುತೇಕರು ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ" ಏಕೆಂದರೆ ಇಸ್ಲಾಂ ನ ಕಾನೂನು ಬಡ್ಡಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಆದ್ದರಿಂದ ಶರಿಯತ್ ಕೋರ್ಟ್ ಕಾನೂನಿನ ಪ್ರಕಾರವೇ ಮ್ಯುಚುಯಲ್ ಫಂಡ್ ನ ನಿಯಮಗಳನ್ನೇ ಬದಲಿಸಿಬಿಟ್ಟರೆ ಬಾಂಧವರನ್ನು ಮೆಚ್ಚಿಸಬಹುದು. ಇಸ್ಲಾಂ ಧಾರ್ಮಿಕ ಕಾನೂನಿನ ಪ್ರಕಾರ ಕಾಫಿರರು ಬದುಕಿರಲೇಬಾರದೆಂಬ ಕಾನೂನಿದೆ ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮೇತರರನ್ನು ಕೊಂದುಬಿಡಬಹುದೇ?

ಮ್ಯುಚುಯಲ್ ಫಂಡ್ ಯೋಜನೆ ರೂಪಿಸಿದ ಮಹಾನುಭಾವರು ಯೋಚಿಸಲೇಬೇಕಾದ ಪ್ರಮುಖ ಅಂಶವಿದು. ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬ್ಯಾಂಕಿಂಗ್ ನಿಂದ ದೂರ ಉಳಿದವರನ್ನು ಬ್ಯಾಂಕ್ ವ್ಯವಸ್ಥೆಯೊಂದಿಗೆ ಜೋಡಿಸಲು ಇರುವುದು ಇದೊಂದೇ ಮಾರ್ಗವೇ? ಹಾಗಿದ್ದರೆ ಪ್ರಧಾನಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಜನ್ ಧನ್ ಯೋಜನೆ ಯಾವ ಪುರುಷಾರ್ಥಕ್ಕೆ? ಜನ್-ಧನ್ ಯೋಜನೆಗೂ ಕೂಡ ಮುಸ್ಲಿಂ ಸಮುದಾಯದವರನ್ನು ಬ್ಯಾಂಕ್ ನೊಂದಿಗೆ ಜೋಡಿಸಲು ಸಾಧ್ಯವಾಗಿಲ್ಲ ಎಂದರೆ ಮುಸ್ಲಿಮರು ಭಾರತ ಸರ್ಕಾರದ ಯೋಜನೆಗಳನ್ನು ಧಿಕ್ಕರಿಸುತ್ತಿರಬೇಕು. ಇಲ್ಲ ಆ ಯೋಜನೆಗಳಿಗೆ ಮುಸ್ಲಿಂ ಸಮುದಾಯದವರನ್ನು ತಲುಪಲು ಸಾಧ್ಯವಾಗದೇ ಇರಬೇಕು. ಇದರಲ್ಲಿ ಯಾವುದು ಸತ್ಯ?

ಪ್ರತಿಯೊಂದೂ ಶರಿಯತ್ ನಂತೆಯೇ ನಡೆಯಬೇಕು ಎಂದಿದ್ದರೆ ಅದಕ್ಕಾಗಿಯೇ ಪಾಕಿಸ್ತಾನದಂತಹ ಪ್ರತ್ಯೇಕ ರಾಷ್ಟ್ರಗಳಿವೆ ಅಲ್ಲಿ ಮುಂದುವರೆಸಲಿ. ಆದರೆ ಭಾರತದ ಪ್ರಜಾಪ್ರಭುತ್ವವನ್ನು ಒಪ್ಪಿಯೂ, ಇಲ್ಲಿನ ಕಾನೂನನ್ನು ತಿರಸ್ಕರಿಸಿ ತಮ್ಮದೇ ಮತ್ತೊಂದು ಕಾನೂನು ಬೇಕೆಂದು ಪಟ್ಟುಹಿಡಿಯುವವರು ದೇಶಧ್ರೋಹಿಗಳಲ್ಲದೇ ಮತ್ತೇನು? ಎಲ್ಲರಿಗೂ ಒಂದೇ ಕಾನೂನು, ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದು ಇಡೀ ದೇಶವೇ ಒಂದಾಗಿರಲು ಬಯಸುತ್ತಿದ್ದರೆ ಅಧಿಕಾರಿ ವರ್ಗದಲ್ಲೇ ಶರಿಯತ್ ಕಾನೂನು, ಫತ್ವಾ ಗಳಿಗೆ ಅನುಗುಣವಾಗಿ ಯೋಜನೆ, ಕಾರ್ಯಕ್ರಮ, ಮ್ಯುಚುಯಲ್ ಫಂಡ್ ಇತ್ಯಾದಿಗಳನ್ನು ಪ್ರಾರಂಭಿಸುವ ಭಯಂಕರ ಆಲೋಚನೆ ಮೂಡಿದರೆ ಭಾರತ ಶ್ರೇಷ್ಠವಾಗಬಹುದೇನೋ ಗೊತ್ತಿಲ್ಲ. ಆದರೆ ಏಕ್ ಭಾರತ್ ಶ್ರೇಷ್ಠ್ ಭಾರತ್ ಆಗುವುದಕ್ಕಂತೂ ಸಾಧ್ಯವಿಲ್ಲ. ಹಾಗೂ ಭಾರತವನ್ನು ಏಕ್ ಎಂದು ಹೇಳುವ ಅವಕಾಶವೂ ಉಳಿಯುವುದಿಲ್ಲ! ಎಚ್ಚರ                  

Monday 24 November 2014

ಜಾಗತೀಕರಣದತ್ತ ಹೊರಳಿದ ಹಿಂದುತ್ವ: ಅಲುಗಾಡುತ್ತಿದೆ 'ಸೆಕ್ಯುಲರ್'ಗಳ ಅಸ್ಥಿತ್ವ!

ಅಷ್ಟಾಂಗ ಯೋಗ ಈಗಲೂ ಪ್ರಪಂಚದಲ್ಲಿ ಒಂದು ಪವಾಡ ಎಂಬಂತೆಯೇ ಅನಿಸುತ್ತದೆ. ಯೋಗವಿಲ್ಲದೇ ಯೋಗಿಗಳಿಲ್ಲ. ಯೋಗಿಗಳಿಲ್ಲದೇ ಭಾರತದ ವರ್ಣನೆ ಸಾಧ್ಯವಿಲ್ಲ. ಭಾರತದ ಆತ್ಮದಂತಿರುವ ಅನೇಕ ಸನ್ಯಾಸಿಗಳ ಬಿರುದಾವಳಿಗಳಲ್ಲಿ ಇಂದಿಗೂ ಅಷ್ಟಾಂಗ ಯೋಗದ ಉಲ್ಲೇಖವಿದೆ. ಯೋಗದ ಮೂಲಕವೇ ಆಧ್ಯಾತ್ಮ ಸಾಧನೆಯೂ ಸಾಧ್ಯ. ಯೋಗಕ್ಕೂ ಆಧ್ಯಾತ್ಮಕ್ಕೂ ಅಂಥದ್ದೊಂದು ನಂಟಿದೆ
.

ಪಾಶ್ಚಾತ್ಯ ಕನ್ನಡಕವನ್ನು ಧರಿಸಿ ಯೋಗ ಎಂಬುದನ್ನು ಕೇವಲ ಆರೋಗ್ಯ ಸುಧಾರಣೆಗೆ ಮಾತ್ರ ಸೀಮಿತಗೊಳಿಸದೇ, ಭಾರತೀಯತೆ ದೃಷ್ಟಿಯಿಂದ ನೋಡಿದರೆ, ಯೋಗದ ಗುರಿ ಇರುವುದು ಮೋಕ್ಷ ಸಾಧನೆಯತ್ತ. ಭಾರತೀಯ ತತ್ವಜ್ಞಾನದ ಪ್ರಕಾರ, ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ ಎಂಬ ಆರು ಸಾಂಪ್ರದಾಯಿಕ ಶಾಖೆ(ಷಡ್ದರ್ಶನ)ಗಳಲ್ಲಿ ಯೋಗವೂ ಒಂದು. ಹೀಗೆ ಯೋಗ, ವೇದಗಳ, ಆಧ್ಯಾತ್ಮದ ತಳಹದಿಯಲ್ಲೇ ನಿರ್ಮಾಣಗೊಂಡಿದೆ. ಯೋಗ  ಭಾರತಕ್ಕೆ ಅನೇಕ ಮಹಾತ್ಮರನ್ನು ನೀಡಿದೆ. ಆದರೆ  ವೇದಗಳೆಂದರೆ ಕಾರಣವೇ ಇಲ್ಲದೇ ಕಿರುಚುವ ಕೆಲ ವರ್ಗಗಳೂ ಸ್ವಾಭಾವಿಕವಾಗಿಯೇ ಯೋಗವನ್ನೂ ವಿರೋಧಿಸುತ್ತವೆ.

ಮದರಸಾಗಳಲ್ಲಿ ಬಾಂಬ್ ತಯಾರು ಮಾಡುವ ಶಿಕ್ಷಣವನ್ನು ಉತ್ತೇಜಿಸುವವರು. ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಬೀದಿಗೆ ಇಳಿಯುತ್ತಾರೆ. 2013ರಲ್ಲಿಯೂ ಹೀಗೆಯೇ ಆಗಿತ್ತು. ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ಅಲ್ಲಿನ ಸರ್ಕಾರ ಮಧ್ಯಪ್ರದೇಶದ ಶಾಲೆಗಳಲ್ಲಿ ಒಂದನೇ ತರಗತಿಯಿಂದ 5 ತರಗತಿ ವರೆಗೆ ಯೋಗ ಶಿಕ್ಷವಣವನ್ನು ಕಡ್ಡಾಯಗೊಳಿಸಲಾಗಿತ್ತು. ಇದಕ್ಕಾಗಿ ಯೋಗ ಪರಿಷತ್ ನ್ನೂ ಸ್ಥಾಪಿಸಲಾಗಿತ್ತು. ಯೋಗದ ಹೆಸರು ಕೇಳಿದರೆ ಆರೋಗ್ಯ ಹದಗೆಡಿಸಿಕೊಳ್ಳುವ ಸೆಕ್ಯುಲರ್ ಖ್ಯಾತಿಯ ಬಾಂಧವರು ಬೀದಿಗಿಳಿದರು. ಮತ್ತದೇ ಪ್ರತಿಭಟನೆ. ಕೇಸರೀಕರಣದ ಶಿಕ್ಷಣ ಪದ್ಧತಿಯನ್ನು ಹೇರಲಾಗುತ್ತಿದೆ ಎಂದು ಎದೆ ಬಡಿದುಕೊಂಡು ಅತ್ತರು. ಈ ಬಾಂಧವರಿಗೆ ಒಂದಷ್ಟು ಜಾತ್ಯಾತೀತ ಸಂಘಟನೆಗಳೂ ಬೆಂಬಲಿಸಿ ಪ್ರತಿಭಟನೆ ನಡೆಸಿದವು. ಇಷ್ಟಕ್ಕೇ ಸುಮ್ಮನಾಗಲಿಲ್ಲ. ಬದಲಾಗಿ ಯೋಗ ಶಿಕ್ಷಣದ ಹೆಸರಿನಲ್ಲಿ ಕೇಸರೀಕರಣ ಮಾಡುತ್ತಿರುವ ಸರ್ಕಾರದ ವಿರುದ್ಧ  ಸುಪ್ರೀಂ ಕೋರ್ಟ್ ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಆಸ್ತಿಯಾಗಿರುವ ಯೋಗ ಶಿಕ್ಷಣ ಸದ್ಯಕ್ಕೆ ಕೋಮುವಾದ ಹಣೆಪಟ್ಟಿಹೊತ್ತಿದೆ. ಕೋಮುವಾದ ಬಿತ್ತುವವರ ಆಸ್ತಿಯಾಗಿ ಮಾರ್ಪಾಡಾಗಿದೆ. ವಿಪರ್ಯಾಸವೆಂದರೆ, ಪ್ರಪಂಚದಲ್ಲಿರುವ 130 ದೇಶಗಳು ಕೋಮುವಾದಿಗಳ ಆಸ್ತಿಯನ್ನು ವೃದ್ಧಿಗೊಳಿಸಲು ಕೈಜೋಡಿಸಿವೆ!.... ಅರ್ಥಾತ್ 130( ಈ ಲೇಖನ ಪ್ರಕಟವಾಗುವ ವೇಳೆ ಮತ್ತಷ್ಟು ರಾಷ್ಟ್ರಗಳು ಸೇರಬಹುದು) ರಾಷ್ಟ್ರಗಳ ಜನರೂ ಕೋಮುವಾದಿಗಳಾಗಲು ತುದಿಗಾಲಲ್ಲಿ ನಿಂತಿದ್ದಾರೆ! ಆದರೆ ಸೆಕ್ಯುಲರ್ ಭಾರತದಲ್ಲಿ ಯೋಗವನ್ನು ವಿಪರೀತವಾಗಿ ಹೀಗಳೆಯುವುದು ಮುಂದುವರೆದಿದೆ.

ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸಂಬಂಧ ಇತ್ತೀಚಿನ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿತ್ತು. ಯೋಗ ಶಾಲೆಗಳಲ್ಲಿ ಹೇಳಿಕೊಡಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿರುವಾಗಲೇ ಮುಂದುವರಿದ ರಾಷ್ಟ್ರ ಅತ್ಯಂತ ವೈಜ್ನಾನಿಕವಾಗಿ ಮುನ್ನಡೆಯುತ್ತಿರುವ ಅಮೆರಿಕ ನಾಗರಿಕರು ಸಹ ಕೆಲಸದ ಒತ್ತಡ ತಡೆಯಲಾರದೇ ಯೋಗದ ಮೊರೆ ಹೋಗಲಾರಂಭಿಸಿದ್ದರು. ಅಮೇರಿಕಾ ಆದರೆ ಏನಂತೆ ಅಲ್ಲಿ ನಮ್ಮ ಬುದ್ದಿಜೀವಿಗಳ ಸ್ನೇಹಿತರು, ಸಂಬಂಧಿಗಳು ಇರಬಾರಬೆಂಬ ಕಾನೂನು ಇದೆಯೇ? ಅಮೆರಿಕಾದಂತಹ ಸಿಟಿಯಲ್ಲೇ ಭಾರತದ ಯೋಗ ಶಿಕ್ಷಣ ಸದ್ದು ಮಾಡಲು ಪ್ರಾರಂಭಿಸಿದಾಗ ಜಾಗತಿಕ ಮಟ್ಟದಲ್ಲಿ ಸೆಕ್ಯುಲರ್ ಪಡೆ ಜಾಗೃತವಾಯಿತು. ಅಲ್ಲಿನ ಕೋರ್ಟ್ ಬಾಗಿಲನ್ನೂ ಬಡಿದು ಯೋಗ ಶಿಕ್ಷಣ, ಸೂರ್ಯ ನಮಸ್ಕಾರದಂತಹ ಸಂಸ್ಕಾರಗಳು ನಮ್ಮನ್ನು ಕೋಮುವಾದಿಗಳನ್ನಾಗಿ ಮಾಡುತ್ತಿದೆ ಎಂದು ಆರೋಪಿಸಲಾಯಿತು. ಆದರೆ ಅಲ್ಲಿ ಇವರ ವಾದಕ್ಕೆ ಕವಡೆ ಕಾಸಿನ ಕಿಮ್ಮತ್ತು ದೊರೆಯಲಿಲ್ಲ. ಯೋಗ ಶಿಕ್ಷಣ ನಿರ್ದಿಷ್ಟ ಧರ್ಮದ ಬೋಧನೆಯಾಗುವುದಿಲ್ಲ ಎಂಬ ಆದೇಶ ಹೊರಬಿದ್ದ ನಂತರವೇ ಭಾರತದ ನ್ಯಾಯಾಲಯಗಳಿಗೆ ಜ್ನಾನೋದಯವಾಗಿ ಅಲ್ಲೂ ಅದೇ ಪ್ರಶ್ನೆ ಕಾಡತೊಡಗಿತ್ತು.

ಆದರೂ ಸುಪ್ರೀಂ ಕೋರ್ಟ್, ಸಂಪೂರ್ಣವಾಗಿ ಯೋಗ ಶಿಕ್ಷಣ ಅಗತ್ಯವಿದೆ ಎಂದು ಹೇಳಲಿಲ್ಲ!. ಸುಪ್ರೀಂ ಕೋರ್ಟ್ ನ ಹೇಳಿಕೆಯೊಂದು ಹೀಗಿದೆ. ಕೆಲ ಅಲ್ಪಸಂಖ್ಯಾತ ಶಾಲೆಗಳು ಯೋಗಕ್ಕೆ ವಿರುದ್ಧವಾಗಿರಬೇಕಾದರೆ ಎಲ್ಲಾ ಶಾಲೆಗಳಲ್ಲೂ ಅದನ್ನು ಹೇಗೆ ಕಡ್ಡಾಯಗೊಳಿಸಲು ಸಾಧ್ಯ? ನಮಗೆ ಯೋಗ ಶಿಕ್ಷಣ ಬೇಕಿಲ್ಲ ಎಂದು ಅಲ್ಪಸಂಖ್ಯಾತ ಶಾಲೆಗಳು ಹೇಳಿದರೆ ಹೇಗೆ ತಾನೆ ಕಡ್ಡಾಯಗೊಳಿಸಬಹುದು ಎಂದು ಪ್ರಶ್ನಿಸಿದೆ. ಇಷ್ಟಕ್ಕೇ ನಿಂತಿಲ್ಲ. ಮತ್ತೊಂದು ಹೇಳಿಕೆಯಲ್ಲಿ, ಯೋಗದ ಪ್ರಸ್ತುತತೆ ನಮಗೆ ಅರ್ಥವಾಗುತ್ತದೆ. ಆದರೆ ಅದನ್ನು ಕಡ್ದಾಯ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ನ ಈ ಅಭಿಪ್ರಾಯಕ್ಕಿಂತಲೂ ಅಮೆರಿಕ ಕೋರ್ಟ್ ಆದೇಶವೇ ಉತ್ತಮವಾಗಿತ್ತು ಎಂದನಿಸದಿರದು. ಅಥವಾ ಅದಕ್ಕಿಂತಲೂ ಭಿನ್ನವಲ್ಲ. ಏಕೆಂದರೆ ಅಮೆರಿಕಾ ದೇಶಕ್ಕೆ ಯೋಗ ಶಿಕ್ಷಣವೆಂಬುದು ಒಂದು ವಿದೇಶಿ ಕಲೆ, ಅದನ್ನು ಇಚ್ಛೆ ಇದ್ದವರು ಕಲಿಯುತ್ತಾರೆ. ಇಲ್ಲವಾದವರು ಬಿಡುತ್ತಾರೆ. ಇದೇ ಮನಸ್ಥಿತಿಯನ್ನು ಭಾರತದವರೂ ತೋರಿಸಿದರೆ? ತಮ್ಮ ನೆಲದಲ್ಲಿ ಜನ್ಮತಳೆದ ಪದ್ಧತಿಯನ್ನು ತಾವೇ ಕಡ್ಡಾಯವಾಗಿ ಬೆಳೆಸಲು ಸಾಧ್ಯವಿಲ್ಲವೆಂದ ಮೇಲೆ ಆ ಪದ್ಧತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಬೆಳೆಯುವುದಾದರೂ ಹೇಗೆ ಸಾಧ್ಯ? ಕೋರ್ಟ್ ನ ಅಭಿಪ್ರಾಯ ಈ ದೃಷ್ಟಿಯಿಂದ ಎಷ್ಟು ಸಮಂಜಸ? ಹೀಗಾದರೆ ಅಮೆರಿಕಾಕ್ಕೂ ಭಾರತಕ್ಕೂ ವ್ಯತ್ಯಾಸವೇನು ಉಳಿದಂತಾಯಿತು?

ಪತಂಜಲಿ ಮುನಿಯ ಕೊಡುಗೆಯಾದ ಯೋಗಕ್ಕೆ 5,000 ವರ್ಷಗಳ ಸುದೀರ್ಘ ಇತಿಹಾಸವಿದೆ. ಹೀಗಿದ್ದರೂ ಸೆಕ್ಯುಲರ್ ವಾದಿಗಳಿಗೆ ಅದು ವರ್ಜ್ಯ. ಆಧುನಿಕತೆಯ ಭ್ರಮೆಯಲ್ಲಿ ತೇಲುವವರಿಗೆ ಯೋಗದ ಮಹತ್ವವಾದರೂ ಹೇಗೆ ತಿಳಿಯಬೇಕು? ಭಾರತ ವಿಶ್ವಗುರುವಾಗುವುದರ ಬಗ್ಗೆ ಮಾತನಾಡುವ ನಾವು ಯೋಗವನ್ನು ಮರೆಯಲು ಸಾಧ್ಯವೇ? ಶಿಕ್ಷಕರು,ವಿಜ್ಞಾನಿಗಳನ್ನು ರಫ್ತು ಮಾಡಬೇಕೆಂದೆಲ್ಲಾ ಕನಸು ಕಾಣುವ ಭಾರತ ಯೋಗ ಶಿಕ್ಷಣವನ್ನು ರಫ್ತು ಮಾಡುವ ಬಗ್ಗೆ ಚಿಂತಿಸಲು 60 ವರ್ಷಗಳೇ ಬೇಕಾಯಿತು. ಜಾಗತೀಕರಣದಿಂದ ಪಡೆದುಕೊಳ್ಳುವುದರಲ್ಲೇ ನಿರತವಾಗಿದ್ದ ಭಾರತಕ್ಕೆ ಕೊಡುಗೆ ನೀಡಬೇಕೆಂದೂ ಅನಿಸಿರಲಿಲ್ಲವಲ್ಲ ಹಾಗಾದರೆ ನಮ್ಮ ದೇಶ ಅದೆಂಥಹ ಅವಸ್ಥೆಯಲ್ಲಿದ್ದಿರಬೇಕು? ಯೋಗ ನಿದ್ರೆಯ ಮೂಲಕ ಜಗತ್ತಿನ ಅಂತಃಸತ್ವವನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲವಲ್ಲ ಇನ್ನೆಂಥಾ ಜಡ ನಿದ್ದೆಯಲ್ಲಿದ್ದಿರಬೇಕು? ಒಂದು ವೇಳೆ ಯೋಗ ಶಿಕ್ಷಣವನ್ನು ಭಾರತ ಜಾಗತಿಕ ಮಟ್ಟದಲ್ಲಿ ಪ್ರವಹಿಸಿದ್ದೇ ಆದರೆ ಜಗತ್ತಿನಲ್ಲಿರುವ ಅನೇಕ ಜನರ ಸಮಸ್ಯೆಗಳಿಗೆ ಉತ್ತರ ಸಿಕ್ಕಿಯೇ ತೀರುತ್ತದೆ. ಹಾಗಿಲ್ಲದಿದ್ದರೆ, ಭಾರತದ ಪ್ರತಿಯೊಂದು ಆಚರಣೆಗಳನ್ನೂ ಮೂಢನಂಬಿಕೆ ಕನ್ನಡಕದಿಂದ ನೋಡುತ್ತಿದ್ದ ಪಾಶ್ಚಾತ್ಯರು ಯೋಗಕ್ಕೆ ಶರಣಾಗಲು ಸಾಧ್ಯವಾದೀತೇ? ಪರಿಸ್ಥಿತಿ ಗಮನಿಸಿದರೆ ಯೋಗ, ಆಯುರ್ವೇದ, ಇನ್ನೂ ಹಲವು ಭಾರತದ ಪುರಾತನ ವಿದ್ಯೆಗಳು ನಶಿಸಿದ್ದು, ಆಂಗ್ಲರ ಆಕ್ರಮಣದಿಂದಲ್ಲ, ವಿದೇಶಿ ಮೋಹಕ್ಕೆ ಮರುಳಾದ ನಮ್ಮದೇ ಯಡವಟ್ಟಿನಿಂದ ಎಂದು ಅನಿಸದೇ ಇರದು.

ಯೋಗದ ಕುರಿತು ಹುಡುಕಿ ಹೊರಟಾಗಲೆಲ್ಲಾ ಸ್ವಾರಸ್ಯಗಳು ತೆರೆದುಕೊಳ್ಳುತ್ತಲೇ ಹೋಗುತ್ತದೆ. ಯಾವುದನ್ನು ಹಿಂದೂ ಧರ್ಮವನ್ನು impose ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೊಬ್ಬೆಹೊಡೆಯಲಾಗುತ್ತಿದೆಯೋ ಅದನ್ನು ಕಲಿಯಲು ಹಿಂದೂ ಧರ್ಮದ ಮೇಲೆ ನಂಬಿಕೆಯೇ ಇರಬೇಕಿಲ್ಲ.! ಇನ್ನು ಅದರ ಮೂಲಕ ಧರ್ಮವನ್ನು ಮತ್ತೊಬ್ಬರ ಮೇಲೆ ಹೇರಲು ಹೇಗೆ ಸಾಧ್ಯ? ಅದೇನಾದರೂ ಅನಾರೋಗ್ಯಕ್ಕೊಳಗಾದವರಿಗೆ ಬೈಬಲನ್ನು ಕೈಗಿತ್ತು ಆರೋಗ್ಯ ಸುಧಾರಣೆಯಾಗುತ್ತದೆ ಆದರೆ ಜೀಸಸ್ ನ ನಂಬಬೇಕು ಎಂದು ಮತಾಂತರ ಮಾಡುವ ಪ್ರಕ್ರಿಯೆಯೇ?  ಹಿಂದೂ ಧರ್ಮವನ್ನೇ ನಂಬದ ಪರಮ ನಾಸ್ತಿಕನೂ ಯೋಗ ಸಾಧನೆ ಮಾಡಬಹುದು. ಯೋಗದಲ್ಲಿ ಸಾಧನೆ ಮಾಡಿದವರು ಜಗತ್ತನ್ನು ಅದ್ಭುತವಾಗಿ ಅರ್ಥೈಸಿಕೊಳ್ಳುತ್ತಾರೆ. ಆಧ್ಯಾತ್ಮದ ಮೂರ್ತ ರೂಪವಾಗುತ್ತಾರೆ. ನಿರಾಕಾರ ಪರಬ್ರಹ್ಮನನ್ನು ಕಾಣುತ್ತಾರೆ. ಓರ್ವ ನಾಸ್ತಿಕನಿಗೂ ಚಿತ್ತ-ವೃತ್ತಿ-ನಿರೋಧದ ಮೂಲಕ ಭಗವತ್ಗೀತೆಯಲ್ಲೂ ವ್ಯಾಖ್ಯಾನಿಸಿರುವ ಅಂಶಗಳನ್ನು ತಿಳಿಸುತ್ತದೆ. ಇದು ಯೋಗದ ಶ್ರೇಷ್ಠತೆ.

ಯೋಗ ಶಿಕ್ಷಣದ ಇಷ್ಟೆಲ್ಲಾ ಶ್ರೀಮಂತಿಕೆ ಕಣ್ಮುಂದೆ ಇಟ್ಟುಕೊಂಡೂ ಅದನ್ನು ಮುಂದಿನ ಪೀಳಿಗೆಗೆ ಕಡ್ಡಾಯವಾಗಿ ತಲುಪಿಸುವಲ್ಲಿ ನಾವೇಕೆ ಎಡವುತ್ತಿದ್ದೇವೆ? ಆಧ್ಯಾತ್ಮದಿಂದ ಬೇರ್ಪಟ್ಟು ಆಧುನಿಕತೆಗೆ ಜಿಗಿದಿರುವ ತಂದೆತಾಯಿಗಳಿಗಂತೂ ತಿಳಿಯುತ್ತಿಲ್ಲ. ನ್ಯಾಯ ಹೇಳುವ ನ್ಯಾಲಾಯಗಳಿಗಾದರೂ ತಿಳಿಯಬಾರದೇ? ಇಂತಹ ವಿಷಯಗಳಲ್ಲಿ  ಅಧಿಕಾರ ನಡೆಸುವವರು ಗಮನ ಹರಿಸುವುದೇ ಕಡಿಮೆ. ಒಂದು ವೇಳೆ ಅಂತಹ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡರೂ ಪಿ.ಐ.ಎಲ್ ದಾಖಲಿಸಿದರೆ, ವಿಚಾರಣೆ ನಡೆಸುವ  ಕೋರ್ಟ್ ಗಳು ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಅಲ್ಪಸಂಖ್ಯಾತರು ಏನು ಮಾಡಬೇಕೆಂಬ ಪ್ರಶ್ನೆ ಮುಂದಿಟ್ಟು ಸರ್ಕಾರದ ಇಚ್ಛಾಶಕ್ತಿಯೇ ಕುಸಿಯುವಂತಹ ಆದೇಶ ನೀಡುತ್ತವೆ. ಹಾಗಾದರೆ ಭಾರತದಲ್ಲಿ ಭಾರತೀಯರ ಕೊಡುಗೆಗೆ ಇರುವ ಸ್ಥಾನ ಏನು? ಪರ ದೇಶಗಳು ಭಾರತದ ಕೊಡುಗೆಯನ್ನು ಕಣ್ಮುಂದೆಯೇ ಯಥೇಚ್ಚವಾಗಿ ಬಳಸಿಕೊಂಡು ಉದ್ಧಾರವಾಗುತ್ತಿದ್ದರೂ ಸುಮ್ಮನಿರಬೇಕು!  ಅಲ್ಪಸಂಖ್ಯಾತರಿಗೆ, ಸೆಕ್ಯುಲರ್ ಗಳಿಗೆ ಬೇಡವಾದರೆ ತಿರಸ್ಕರಿಸಲಿ, ಗೋಗರೆದು ಅವರ ಅನುಮತಿ ಪಡೆದ ನಂತರವೇ ಎಲ್ಲವೂ ಜಾರಿಗೆ ಬರಬೇಕೆಂಬ ನಿಯಮ ಏಕೆ? ಇಷ್ಟಕ್ಕೂ ಅವರಿಗೆ ಕ್ರೌರ್ಯ, ಮತಾಂತರವನ್ನು ಹೊರತು ಪಡಿಸಿ ಯಾವ ವಿಷಯಗಳು ಅವರಿಗೆ ಪಥ್ಯವಾಗಿದೆ ಹೇಳಿ?

ಯೋಗ ಶಿಕ್ಷಣ ಜಾರಿಗೂ ಅವರ ಅನುಮತಿಯೇ ಬೇಕು, ಶಾಲೆಗಳಲ್ಲಿ ರಾಷ್ಟ್ರೀಯತೆ ಬಗ್ಗೆ ಕಲಿಸುವುದಕ್ಕೂ ಅವರ ಹುಕುಂ ಇಲ್ಲದೇ ನಡೆಯುವಂತಿಲ್ಲ! ಅಲ್ಪಸಂಖ್ಯಾತರಿಂದ  ನಮ್ಮ ದೇಶದ ಹೆಮ್ಮೆಯ ಸಂಗತಿಗಳು ಕಡ್ಡಾಯವಾಗಿ ಜಾರಿಗೊಂಡು ಪುನರುತ್ಥಾನದ ಹಾದಿ ಹಿಡಿಯಲು ಸಾಧ್ಯವಿಲ್ಲ. ನಮ್ಮ ದೇಶದ ವೈಭವ ಪುನರುತ್ಥಾನಗೊಳ್ಳದೇ ಅಲ್ಪಸಂಖ್ಯಾತರ ಸದ್ದು ಅಡಗಲು ಸಾಧ್ಯವಿಲ್ಲ.

60 ವರ್ಷಗಳ ನಂತರವಾದರೂ ಆಶಾಕಿರಣವೊಂದು ಹೊರಹೊಮ್ಮಿದೆ. ಭಾರತವನ್ನು ಜಗದ್ಗುರುವನ್ನಾಗಿಸಲು ಅವಶ್ಯವಾಗಿರುವ ಸಂಸ್ಕೃತಿಯ ಬಗ್ಗೆ ವಿಶ್ವದ ಮಟ್ಟದಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ.  ಇತ್ತೀಚೆಗಷ್ಟೇ ಆಯುರ್ವೇದವನ್ನು ಹೆಚ್ಚು ಬಳಕೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್ ಗೆ ಚಾಲನೆ ನೀಡಲು ನಿರ್ಧರಿಸಿತ್ತು. ಇದಕ್ಕೂ ಮುನ್ನವೇ ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಪ್ರಧಾನಿ ಮೋದಿ ಅಮೆರಿಕಾದಲ್ಲಿ ನಿಂತು ಕರೆ ಕೊಟ್ಟಿದ್ದಕ್ಕೆ ಈ ವರೆಗೂ 130 ರಾಷ್ಟ್ರಗಳು ಓಗೊಟ್ಟಿವೆ. ಭಾರತದ ಯೋಗಿಗಳ ಕ್ರಿಯೆ ಇನ್ನು ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ. ವಿಶ್ವವನ್ನು ಬೆಳಗಲಿದೆ. ಇಡಿ ಜಗತ್ತು ಸನಾತನ ಸಂಸ್ಕೃತಿಯತ್ತ ನಿಧಾನವಾಗಿ ವಾಲುತ್ತಿದೆ. ಆದರೆ ನಿರಂತರವಾಗಿ ಯೋಗವನ್ನು ಹಿಂದುತ್ವದ ಭಾಗವಾಗಿಯೇ ನೋಡುತ್ತಿದ್ದ, ಹೀಗಳೆಯುತ್ತಿದ್ದ ಸೆಕ್ಯುಲರ್ ವಾದಿಗಳ ಅಸ್ಥಿತ್ವ ಜಾಗತಿಕ ಮಟ್ಟದಲ್ಲಿ ಏನಾಯಿತು ಎಂಬುದು ಸದ್ಯದ ಪ್ರಶ್ನೆ? ಇಂದು ಯೋಗ, ಆಯುರ್ವೇದಕ್ಕೆ ಮುಗಿಬೀಳುವಂತೆಯೇ ಮುಂದೊಂದು ದಿನ ವೇದ, ಸಂಸ್ಕೃತಕ್ಕೂ ಇಡಿ ಜಗತ್ತು ಶರಣಾದರೂ ಅಚ್ಚರಿಯಿಲ್ಲ. ಆಗ ಇಡಿ ಜಗತ್ತು ಭಾರತದೊಂದಿಗಿದ್ದರೆ. 'ಕೋಮುವಾದಿ'ಗಳ ವಿರುದ್ಧ  ಪ್ಲೇಕಾರ್ಡ್ಸ್ ಹಿಡಿದು ಮತ್ತೊಂದು ಬದಿಯಲ್ಲಿ ನಿಲ್ಲುವ ಸೆಕ್ಯುಲರ್ ಗಳನ್ನು ನೋಡಲು ಬಹಳ ಮಜವಾಗಿರುತ್ತದೆ

Thursday 13 November 2014

ಯಾವ ಸಾಧನೆ ಮಾಡಿದ್ದಾರೆಂದು ನಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು?

*ದೇಶದ ಒಳಿತಿಗಾಗಿ ಯುವ ಶಕ್ತಿಯನ್ನು ಜಾಗೃತಗೊಳಿಸಿದ ಸ್ವಾಮೀ ವಿವೇಕಾನಂದರ ನೆನಪಿಗಾಗಿ ಇಡೀ ರಾಷ್ಟ್ರ ಅವರ ಜನ್ಮದಿನವನ್ನು ಯುವದಿನೋತ್ಸವ ಎಂದು ಆಚರಿಸುತ್ತದೆ. 

*ಧರ್ಮ ರಕ್ಷಣೆಗಾಗಿ ಅವತರಿಸಿ, ಜ್ಞಾನವನ್ನು ದಯಪಾಲಿಸಿದ ಯತಿಶ್ರೇಷ್ಠ ಶ್ರೀ ಆದಿ ಶಂಕರಾಚಾರ್ಯರ ಜನ್ಮ ದಿನದ ಅಂಗವಾಗಿ ತತ್ವಜ್ಞಾನಿಗಳ ದಿನಾಚರಣೆ ನಡೆಯುತ್ತದೆ. 

*ಬಲಿಷ್ಠ ಭಾರತದ ನಿರ್ಮಾಣಕ್ಕೆ ಕಾರಣಕರ್ತರಾಗಬೇಕಿರುವ ಇಂಜಿನಿಯರ್ ಗಳ ಸ್ಪೂರ್ತಿಯ ಚಿಲುಮೆಯಾಗಿರುವ ಸರ್. ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸುತ್ತೇವೆ... 

ಈ ಸಾಲಿಗೆ, ದೇಶಕ್ಕಾಗಿ ರಾಷ್ಟ್ರದ ಏಕತೆಗಾಗಿ ದುಡಿದ ಅನೇಕ ಮಹಾನ್ ವ್ಯಕ್ತಿಗಳ ಜನ್ಮ ಸ್ಮರಣಾರ್ಥವಾಗಿ ಒಂದಲ್ಲಾ ಒಂದು ರೀತಿಯ ದಿನಾಚರಣೆಗಳಿರುತ್ತವೆ. ಅಲ್ಲಿ ಅವರ ಸಾಧನೆಗಳನ್ನು ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ಸಾಹ ತುಂಬಲಾಗುತ್ತದೆ. ಸ್ಪಷ್ಟ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಇಂತಹ ಮಾದರಿ ವ್ಯಕ್ತಿಗಳ ಜನ್ಮ ದಿನಾಚರಣೆಗಳು ಪೂರಕವಾಗಿರುತ್ತದೆ. ಅಂತವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಭವ್ಯ ಭಾರತಕ್ಕಾಗಿ ಭದ್ರ ಬುನಾದಿ ಹಾಕಿಕೊಟ್ಟವರೆ.... 

ವಿವೇಕಾನಂದರು ದೇಶದ ಯುವ ಶಕ್ತಿಯನ್ನು ಬಳಸಿಕೊಂಡು ದೇಶ ನಿರ್ಮಾಣ ಸಾಧ್ಯ ಎಂಬುದನ್ನು ತಿಳಿಸಿ ಯುವಕರನ್ನು ಬಡಿದೆಬ್ಬಿಸಿದರು. ಯಾವುದೇ ದೇಶ ದೀರ್ಘಕಾಲ ಉಳಿಯಬೇಕಾದರೆ ಸತ್ವಯುತವಾದ ಧರ್ಮ ಕಾರಣ ಎಂಬ ಮಾತಿದೆ. ಅಂತಹ ಧರ್ಮವನ್ನು ಉಳಿಸಲು ಶಂಕರರು ಅವತರಿಸಿದರು. ಧರ್ಮ ರಕ್ಷಣೆಗೆ ಮಾರ್ಗದರ್ಶನ ನೀಡಿದರು, ವಿಶ್ವೇಶ್ವರಯ್ಯನವರು ಇಂಜಿನಿಯರ್ ಗಳಿಗಷ್ಟೇ ಅಲ್ಲದೇ ರೈತರ ಪಾಲಿಗೂ ದೇವರಾಗಿದ್ದಾರೆ...... ಇವರೆಲ್ಲರೂ ದೇಶದ ಯಾವುದೇ ಉನ್ನತವಾದ ಪದವಿ ಅಲಂಕರಿಸಿದವರಲ್ಲ, ಆದರೂ ದೇಶ ಇವರನ್ನೇ ಉನ್ನತಿಯ ಪ್ರತಿರೂಪದಂತೆ ಕಾಣುತ್ತದೆ. 

ಆದರೆ ಈ ಮೇಲಿನ ಎಲ್ಲದಕ್ಕೂ ಅಪವಾದದಂತಿರುವ ಯಾರದ್ದೋ ದಯೆಯಿಂದ ದೇಶದ ಉನ್ನತ ಸ್ಥಾನ ಅಲಂಕರಿಸಿದ, ’ಮೈ’ ಮೇಲೆ ಪ್ರಜ್ನೆಯೇ ಇಲ್ಲದ,ಯುವಶಕ್ತಿ, ಧರ್ಮ,ರೈತರ(ಗಾಂಧೀಜಿ ಗ್ರಾಮ ರಾಜ್ಯದ ಕನಸನ್ನು ಭಗ್ನ ಮಾಡಿರುವುದು) ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಓರ್ವ ವ್ಯಕ್ತಿಯ ಜನ್ಮದಿನವನ್ನು ಕೇವಲ ಪ್ರಥಮ ಪ್ರಧಾನಿಯೆಂಬ ಮಾತ್ರಕ್ಕೆ ದೇಶದ ಭವಿಷ್ಯ ಎಂದೇ ಗುರುತಿಸಲಾಗುವ ಮಕ್ಕಳ ದಿನಾಚರಣೆಯೆಂದು ಆಚರಿಸುವುದು ಎಷ್ಟು ಸರಿ.....? 

ಹೌದು! ನೆಹರೂ ಹಾಗೂ ಅವರ ಜನ್ಮ ದಿನದ ಅಂಗವಾಗಿ ನಡೆಸುವ ಮಕ್ಕಳ ದಿನಾಚರಣೆ ಎಂದಿಗೂ ಸೋಜಿಗವಾಗೇ ಕಾಡುತ್ತದೆ.... ಕಾರಣ ಸ್ಪಷ್ಟ, ನೆಹರೂ ಜನ್ಮದಿನಕ್ಕೂ ದೇಶದ ಭವಿಷ್ಯವೆಂದೇ ಹೇಳುವ ಮಕ್ಕಳಿಗೂ ಊಹೆಗೂ ಮೀರಿದ ಅಂತರವಿದೆ!.... ನೆಹರೂ ದೇಶದ ಬಗ್ಗೆಯೇ ಗಂಭೀರವಾಗಿ ಚಿಂತಿಸಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲರಾದರು. ಇನ್ನು ದೇಶವನ್ನು ಮುನ್ನಡೆಸಿಕೊಂಡು ಹೋಗುವ ಮುಂದಿನ ಪೀಳಿಗೆ ಅರ್ಥಾತ್ ಮಕ್ಕಳ ಬಗ್ಗೆ ಯಾವ ರೀತಿಯ ಭಾವನೆ ಹೊಂದಿರಲು ಸಾಧ್ಯ? ದೇಶಕ್ಕೆ ಮಾದರಿಯಾಗದೇ ಇದ್ದವರು ಮಕ್ಕಳಿಗೆ ಮಾದರಿಯಾದಾರೇ? 

ಗಾಂಧಿಗಿರಿಯ ನೆರವಿನಿಂದ ಪಂಡಿತ್ ಜವಹರಲಾಲ್ ನೆಹರೂ ಪ್ರಧಾನಿಯಾದರೆಂಬುದನ್ನು ಬಿಟ್ಟರೆ ಅವರನ್ನು ಯಾವ ಕಾರಣಕ್ಕಾಗಿ ಗೌರವಿಸಬೇಕು ಎಂಬ ಪ್ರಶ್ನೆಗೆ ಸಾಲು ಸಾಲು ವೈಫಲ್ಯಗಳು ಉತ್ತರವಾಗಿ ನಿಲ್ಲುತ್ತವೆ. ಅಲ್ಲದೇ, ಯುವಪೀಳಿಗೆಗೆ ಮಾದರಿಯಾಗಬೇಕಿದ್ದ ವ್ಯಕ್ತಿಯ ದೌರ್ಬಲ್ಯಗಳು ದಾರಾಳವಾಗಿ ಸಿಗುತ್ತವೆ..... ಭಾರತ ನಿಂತಿರುವುದೇ ಯುವಶಕ್ತಿ ಹಾಗೂ ಧರ್ಮದ ಆಧಾರದ ಮೇಲೆ... ಆದರೆ ನೆಹರೂ ಅವರನ್ನು ನೋಡಿದರೆ ಈ ಎರಡೂ ವಿಷಯಗಳಲ್ಲಿ ಜವಾಬ್ದಾರಿಯಿಲ್ಲದ ಶೋಕಿಗೆ ಇರುವ ಪರ್ಯಾಯ ಪದದಂತೆ ನಮ್ಮೆದುರು ನಿಲ್ಲುತ್ತಾರೆ. ರಷ್ಯಾದಲ್ಲಿ ಓದಿದ ಪರಿಣಾಮ ಧರ್ಮದ ಬಗ್ಗೆ ತಿರಸ್ಕಾರ......ಬೇಜವಾಬ್ದಾರಿತನವಿದ್ದರೂ ಸೂಟು ಬೂಟು ಧರಿಸಿ, ಸಿಗರೇಟು ಹೊಗೆ ಬಿಡುವ ಗತ್ತು, ಶೋಕಿ..... ಅವರನ್ನು ಭಾರತದ ಪ್ರಥಮ ಪ್ರಧಾನಿ ಎಂದು ಒಪ್ಪಿಕೊಳ್ಳುವುದಕ್ಕೇ ಸ್ವಲ್ಪ ಕಷ್ಟವಾದೀತು.... ಗುರಿಯೇ ಇಲ್ಲದೇ ’ಪಿತ್ರಾರ್ಜಿತ’ದಲ್ಲೇ ತನ್ನ ಅಸ್ಥಿತ್ವವನ್ನು ಉದ್ಧಾರಗೊಳಿಸುವ ಓರ್ವ ಕಪಟಿಯಂತೆ ಭಾಸವಾಗುತ್ತದೆ...... ತನ್ನ ದೌರ್ಬಲ್ಯಕ್ಕಾಗಿ ದೇಶವನ್ನೇ ವಿಭಜಿಸಿದ ಧೂರ್ತರಂತೆಯೇ ನೆಹರೂ ಕಾಣುತ್ತಾರೆ....

ಯುವ ದಿನೋತ್ಸವ ಬಂತೆಂದರೆ ಸ್ವಾಮೀ ವಿವೇಕಾನಂದರ ಬಗ್ಗೆ ಉತ್ಸಾಹದಿಂದ ಮಾತನಾಡುತ್ತೇವೆ, ಇದೇ ಶಾಲಾ ಮಕ್ಕಳಿಗೆ ಅವರ ಸಾಧನೆಗಳ ಬಗ್ಗೆ ಸಾಕಷ್ಟು ವಿಚಾರ ತಿಳಿಸುತ್ತೇವೆ....ಗಾಂಧೀ ಜಯಂತಿ ಬಂತೆದರೂ ಸಹ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನ ಬಗ್ಗೆ ಕಲವಾದರೂ ಒಳ್ಳೆಯ ವಿಷಯಗಳನ್ನು ಪ್ರಸ್ತಾಪಿಸಬೇಕೆನಿಸುತ್ತದೆ. ಆದರೆ ಮಕ್ಕಳ ದಿನಾಚರಣೆ ಬಂತೆಂದರೆ ಸಾಕು.... ಒಳ್ಳೆಯದ್ದು ಮಾತನಾಡಬೇಕು ಎಂದು ದುರ್ಬೀನು ಹಾಕಿ ತಡಕಿದರೂ ಒಂದೂ ಒಳ್ಳೆಯ ವಿಷಯ ಸಿಗುವುದಿಲ್ಲ. ಬದಲಾಗಿ ಹೇಗೋ ಒಂದೆರಡು ಮಾತನಾಡಿ ಕಲೆ ಹೊತ್ತುಕೊಂಡಿರುವ ನೆಹರೂ ಇತಿಹಾಸಕ್ಕೆ ಕತ್ತರಿ ಹಾಕುತ್ತೇವೆ.... ಮಕ್ಕಳು ತಾನೇ....ಯಾಮಾರಿಸುವುದು ಸುಲಭ, ಅವುಗಳಿಗೆ ನೆಹರೂ ಪೂರ್ವಾಪರ ಗೊತ್ತಿರುವುದಿಲ್ಲ ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರುತ್ತವೆ..... ಇತಿಹಾಸ ಗೊತ್ತಿರುವುದಿಲ್ಲ. ಕೆದಕುವ ಗೋಜಿಗೂ ಹೋಗುವುದಿಲ್ಲ. ಅಥವಾ ಅದರ ಅವಶ್ಯಕತೆಯೂ ಆ ವಯೋಮಿತಿಯಲ್ಲಿರುವುದಿಲ್ಲ..... ತಮ್ಮ ಮುಂದಿನ ಪೀಳಿಗೆಗೆ ಮತ್ತೆ ಇದೇ ನಾಟಕ ಅವರೂ ಮುಂದುವರೆಸುತ್ತಾರೆ... ಉಳಿದಂತೆ ಹಾಗಾಗುವುದಿಲ್ಲ ಶಂಕರರ ಬಗ್ಗೆಯೋ, ವಿವೇಕಾನಂದರ ಬಗ್ಗೆಯೋ ಇರುವ ಸತ್ಯ ಸಂಗತಿಗಳನ್ನು ಮಾತನಾಡಿದರೆ ಅದನ್ನು ತಮಗೆ ಬೇಕಾದ ಬಗೆಯಲ್ಲಿ ತಿರುಗಿಸಿಕೊಂಡು ಇತಿಹಾಸವನ್ನು ಕೆದಕಿ ತಿರುಚುವವರೇ ಹೆಚ್ಚು...... ಆದರೆ ನೆಹರೂ ಅವರಿಗೆ ಈ ತೊಂದರೆಯೂ ಇಲ್ಲ... ಬಹುಶಃ ಈ ವಿಷಯ ನೆಹರೂ ಅವರಿಗೂ ಗೊತ್ತಿದ್ದೇ ಬೇರೆ ಯಾವುದೇ ದಿನಾಚರಣೆಗೆ ತಮ್ಮ ಜನ್ಮದಿನವನ್ನು ಶಿಫಾರಸ್ಸು ಮಾಡುವ ಬದಲು ಏನೂ ಅರಿಯದ ಮುಗ್ಧ ಮಕ್ಕಳ ದಿನಾಚರಣೆಯಾಗಲಿ ಎಂದು ಆಶಿಸಿದ್ದು...
ಇಷ್ಟಕ್ಕೂ ಮಕ್ಕಳ ದಿನಾಚರಣೆ ಎಂದರೆ ನೆಹರೂ ಬಗ್ಗೆ ಮಕ್ಕಳಿಗೆ ಏನು ಹೇಳಬೇಕು...... ನಮ್ಮ ದೇಶ ವಿಭಜನೆಗೆ ಕಾರಣವಾದ ’ಸ್ತ್ರೀ’ ಹುಚ್ಚನ್ನು ತೋರಿಸಬೇಕೋ ಅಥವಾ ಅದೇ ಸ್ತ್ರೀಯರ ಮುಂದೆ ಪೌರುಷ ತೋರಿಸುತ್ತಿದ್ದ ನೆಹರೂ ಇತ್ತ ಚೀನಾಗೆ ಹೆದರಿ ಭಾರತದ ಭೂಭಾಗವನ್ನು ಪರಕೀಯರಿಗೆ ಬಲಿಕೊಟ್ಟ ಪ್ರಧಾನಿ ಎಂದು ವಿವರಿಸಬೇಕೋ.....? ಯಾವುದೂ ಅಲ್ಲ, ರಷ್ಯಾದಲ್ಲಿ ಮೋಜು ಮಸ್ತಿ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿ ಭಾರತದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವ್ಯಕ್ತಿ ಭಾರತದ ಮೊತ್ತ ಮೊದಲ ಪ್ರಧಾನಿಯಾದರೆಂಬ ಸಂತೋಷಕ್ಕೆ ಮಕ್ಕಳ ದಿನಾಚರಣೆ ಎಂದು ಹೇಳಬೇಕೋ...? ಅಥವಾ ಇದ್ಯಾವುದೂ ನಮ್ಮಿಂದ ಹೇಳಲು ಸಾಧ್ಯವಿಲ್ಲ ಎಂದು ಮಕ್ಕಳ ಕೈಗೆ ನೆಹರೂ ಅವರ ಜೀವನ ಚರಿತ್ರೆ ಪುಸ್ತಕವನ್ನು ನೀಡಬೇಕೋ?ಏನೆಂದು ನಮ್ಮ ಮಾಜಿ ಪ್ರಧಾನಿಯನ್ನು ಮಕ್ಕಳಿಗೆ ಪರಿಚಯಿಸಬೇಕು....? ದೇಶದ ಪ್ರಥಮ ಪ್ರಧಾನಿ ಎಂಬುದನ್ನು ಬಿಟ್ಟರೆ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತಹ ಯಾವ ಅರ್ಹ ಕೆಲಸವನ್ನು ನೆಹರೂ ಮಾಡಿದ್ದಾರೆ? ಒಂದೇ ಒಂದು ಉದಾಹರಣೆ ಕೊಡಿ....

ಇಷ್ಟಕ್ಕೂ ಮಕ್ಕಳು ಎಂದರೆ ತಕ್ಷಣಕ್ಕೆ ಅರಿವಾಗುವುದು ಶಿಕ್ಷಣ, ಇಂಥಹ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದ ಮೌಲಾನ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನೇ ಮಕ್ಕಳ ದಿನಾಚರಣೆ ಎಂದು ಆಚರಿಸದೇ ಇದ್ದ ಮೇಲೆ ಯಾವ ಮಾನದಂಡದ ಮೇಲೆ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಬೇಕು....? ಭಾರತದ ಮೊದಲ ಪ್ರಧಾನಿ ಎಂಬುದೇ ಎಲ್ಲಕ್ಕಿಂತ ದೊಡ್ಡ ಮಾನದಂಡವೇ....? ಗಾಂಧಿ ಇಲ್ಲದ ನೆಹರೂ ರನ್ನು ಒಮ್ಮೆ ನೆನಪಿಸಿಕೊಳ್ಳಿ ಕೃಷ್ಣನಿಲ್ಲದ ಅರ್ಜುನನಿದ್ದಂತೆ.... ನಮ್ಮ ದೇಶಕ್ಕೆ ಅಂತದ್ದೊಂದು ಹೆಸರೂ ಪರಿಚಯವಾಗಿರುತ್ತಿರಲಿಲ್ಲ ಎಂದೆನಿಸುತ್ತದೆ.... ಹಾ... ಅರ್ಜುನನಿಗೆ ಕ್ಷಾತ್ರ ಗುಣಗಳಾದರೂ ಇತ್ತು.... ಆದರೆ ಚೀನಾದ ಮೇಲೆ ಯುದ್ಧ ಸೋತು, ಮಾತೆತ್ತಿದರೆ ವಿಶ್ವಸಂಸ್ಥೆ ಮುಂದೆ ಕಣ್ಣೀರಿಡುತ್ತಿದ್ದ ನೆಹರೂ ಅವರಲ್ಲಿ....?
’ದಿನಾಚರಣೆ’ಗೂ ವ್ಯಕ್ತಿಯ ಜನ್ಮದಿನಕ್ಕೂ ಒಂದಕ್ಕೊಂದು ಪೂರಕವಾಗದೇ ಪ್ರಧಾನಿಯೆಂಬ ಒಂದೇ ಒಂದು ಮಾನದಂಡದ ಮೇಲೆ ಆಚರಣೆ ನಡೆಯಬಹುದು ಎಂದಾರೆ ನಹರೂ ಅವರ ಸಂವೇದನೆಯೇ ಇಲ್ಲದ ಪರಂಪರೆಯನ್ನು ಮತ್ತೊಂದು ರೀತಿಯಲ್ಲಿ ನಡೆಸಿಕೊಂಡು ಬಂದಿರುವ ಅವರ ನಂತರ ದೀರ್ಘಕಾಲದ ಆಡಳಿತ ನಡೆಸಿದ ಕಾಂಗ್ರೆಸ್ ಪ್ರಧಾನಿ ಮನಮೋಹನ ಸಿಂಗ್ ಅವರ ಜನ್ಮ ದಿನಕ್ಕೂ ದಿನಾಚರಣೆ ಗೊತ್ತುಪಡಿಸಬಹುದು.....

ನೆಹರೂ ರಂತೆ ’ಆಧುನಿಕ ಗಾಂಧಿ’ಗಿರಿಯ ನೆರವಿನಿಂದ ಅತಿ ದೀರ್ಘಕಾಲ ಆಡಳಿತ ನಡೆಸಿದರೆಂಬ ಒಂದೇ ಒಂದು ಮಾನದಂಡದ ಮೇಲೆ ಮನಮೋಹನರ ಜನ್ಮ ದಿನವನ್ನು ’ಉತ್ತಮ ವಾಗ್ಮಿಗಳ ದಿನಾಚರಣೆ’ ಎಂದರೆ ಎಷ್ಟು ಅನರ್ಥವಾಗುತ್ತದೋ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ನಡೆಸುವುದು ಅಷ್ಟೇ ಅನರ್ಥ.... ಮನಮೋಹನರ ಜನ್ಮ ದಿನದ ಅಂಗವಾಗಿ ಶೌರ್ಯ ಪ್ರಶಸ್ತಿ ಹಾಗೂ ಶ್ರೇಷ್ಠ ವಾಗ್ಮಿಗಳಿಗೆ ಪ್ರಶಸ್ತಿ ನೀಡಿದಂತೆಯೇ ನೆಹರೂ ಅವರ ಜನ್ಮ ದಿನಾಚರಣೆಯನ್ನೂ ಆಚರಿಸಬಹುದು ಕೂಡ.....ಮನಮೋಹನ್ ಸಿಂಗ್, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಸಚಿವ ಸಂಪುಟದಲ್ಲಿ ಕಾರ್ಯ ನಿರ್ವಹಿಸಿ ದೇಶಕ್ಕೆ ಎದುರಾಗಿದ್ದ ಸಂಕಷ್ಟದಿಂದ ಪಾರುಮಾಡಿ ಅತ್ಯುತ್ತಮ ಆರ್ಥಿಕ ತಜ್ನರೆಂದು ಖ್ಯಾತಿಗಳಿಸಿದರು. ಆದರೆ ನಂತರದ ದಶಕಗಳಲ್ಲಿ ನಿರ್ಣಾಯಕ ಹಂತದಲ್ಲಿ ತಮ್ಮ ಆಡಳಿತದಲ್ಲೇ ದೇಶವನ್ನು ಅತ್ಯಂತ ಕೆಳ ಮಟ್ಟಕ್ಕೆ ತಲುಪಿಸಿದ ಕುಖ್ಯಾತಿಯೂ ಸಹ ಅದೇ ಮನಮೋಹನರಿಗೆ ಸಲ್ಲುತ್ತದೆ.
ಯಾವ ಸಾಧನೆಗಾಗಿ ಅಂತಹ ಜನ್ಮದಿನವನ್ನು ನಿರ್ದಿಷ್ಟವಾದ ಹೆಸರಿನಲ್ಲಿ ಆಚರಿಸಬೇಕು...? ನೆಹರೂ ಜನ್ಮ ದಿನಕ್ಕೂ ಮಕ್ಕಳಿಗೂ ಒಂದಕ್ಕೊಂದು ಸಂಬಂಧವಿಲ್ಲ, ಮಕ್ಕಳೆಂಬ ದೇಶದ ಭವಿಷ್ಯವನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಶೂನ್ಯ ...... 
ನಾವು ಅಂದು ಗಾಂಧಿ ಗಿರಿಗೆ ಪ್ರಶ್ನಾತೀತ ಸ್ಥಾನ ನೀಡಿರುವುದರ ಫಲ ಇಂದಿಗೂ ನೆಹರೂ ಜನ್ಮದಿನ ಮಕ್ಕಳ ದಿನಾಚರಣೆಯಾದಂತೆ ಸಂಬಂಧವೇ ಇಲ್ಲದಿರುವ ವಿಷಯಕ್ಕೆ ತಳುಕು ಹಾಕಿಕೊಂಡಿರುವ ಇನ್ನೂ ಅನೇಕ ಆಚರಣೆಗಳನ್ನು ನಾವು ನೋಡುತ್ತಿದ್ದೇವೆ....!

Thursday 6 November 2014

ವಿಧಾನಸೌಧದಲ್ಲಿ ತೋಳು ತಟ್ಟಿದ್ದ ಸಿದ್ದರಾಮಯ್ಯನವರ ಪೌರುಷ ಈಗೆಲ್ಲಿ ಹೋಯಿತು?



He Shirks, He ’Sleeps’, He Ducks, and he does it again! ಈ ಮೂರ್ನಾಲ್ಕು ಪದ ಪುಂಜಗಳನ್ನಿಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಡವಾಳ ಬಯಲು ಮಾಡಿದ್ದವು. ಕಳೆದ ಕೆಲವು ತಿಗಳಿನಿಂದ ರಾಜ್ಯದಲ್ಲಿ ಮಹಿಳೆಯ ಮಾನಭಂಗವಾಗುತ್ತಿರುವುದು ಎಂಥವರಿಗೂ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ರಾಜ್ಯದ ಜನತೆಗೆ ಉತ್ತರದಾಯಿಯಾಗಿರುವ ಸರ್ಕಾರವನ್ನು ಹೊರತುಪಡಿಸಿ ಎನ್ನುವುದು ಅತ್ಯಾಚಾರಕ್ಕಿಂತಲೂ ಘೋರ!

ಇತ್ತೀಚಿನ ದಿನಗಳಲ್ಲಿ ಕಣ್ಣಿಗೆ ರಾಚುವಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ನಿಜ. ಆದರೆ ಕರ್ನಾಟಕದಲ್ಲಂತೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳು ಮಟ್ಟಿಗೆ ಹಸುಳೆಗಳಿಂದ ವೃದ್ಧರವರೆಗೂ ಅತ್ಯಾಚಾರ ನಡೆಯುತ್ತಿದೆ. ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆ? ಭ್ರಷ್ಟಾಚಾರದೊಂದಿಗೆ ಕೊಲೆ ಸುಲಿಗೆ, ದರೋಡೆ, ಒಂದೇ ವಾರದಲ್ಲಿ 4 ಅತ್ಯಾಚಾರ ಪ್ರಕರಣಳು ರಾರಾಜಿಸುತ್ತಿದ್ದರೂ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಹಸಿ ಸುಳ್ಳು ಬೊಗಳುತ್ತಿರುವ ಹೊಣೆಗೇಡಿ ಸರ್ಕಾರದ ಯಾರನ್ನು ಪೆದ್ದರನ್ನಾಗಿ ಮಾಡಲು ಹೊರಟಿದೆ?

ಬಹುಶಃ 14 ವರ್ಷದ ಬಾಲಕಿ ಮೇಲಿನ ಪ್ರಕರಣ ನಡೆಯದೇ ಹೋಗಿದ್ದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮಾನಭಂಗದ ಪ್ರಕರಣಗಳು ಇಷ್ಟು ತೀವ್ರ ಸ್ವರೂಪ ಪಡೆಯುತ್ತಿರಲಿಲ್ಲವೇನೋ. 9ನೇ ತರಗತಿಯಲ್ಲಿ ಓದುತ್ತಿದ್ದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣ ಎಂದು ಮುಚ್ಚಿಹಾಕಲು ಹೊರಟಿರುವುದೂ ಅಲ್ಲದೇ ಮೃಗಗಳಂತೆ ಅತ್ಯಾಚಾರ ನಡೆಸಿದವರನ್ನು ಈವರೆಗೂ ಬಂಧಿಸದೇ ಪರೋಕ್ಷವಾಗಿ ರಕ್ಷಿಸಲು ಮುಂದಾಗಿದೆಯಲ್ಲಾ ಇದೆಂಥಾ ಲಜ್ಜೆಗೇಡಿ ಸರ್ಕಾರ?

ಅತ್ಯಾಚಾರ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದೆ. ಬಾಯಿಬಿಟ್ಟರೆ ಗಾಂಧಿ ತತ್ವ, ಕೋಮುವಾದಿ, ಸಾಮಾಜಿಕ ನ್ಯಾಯ ಅಂತೆಲ್ಲಾ ಹಲುಬುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಾಚಾರ ಪ್ರಕರಣಗಳಂತಹ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದೇಕೆ? ವಿರೋಧಪಕ್ಷವನ್ನು ಬಿಡಿ, ರಾಜಕೀಯ ವಿರೋಧಿಗಳನ್ನೂ ಬದಿಗೆಸೆಯಿರಿ, ಯಾರೇನೇ ಹೇಳಲಿ ತಮ್ಮ ರಾಜ್ಯದಲ್ಲಿ ಇಂಥದೊಂದು  ಅಮಾನವೀಯ ಘಟನೆ ನಡೆಯಬಾರದು, ನಡೆದರೂ ಅದು ಮರುಕಳಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕೆಂಬ ಕನಿಷ್ಠ ಸ್ವಾಭಿಮಾನವೂ ಇಲ್ಲ. "ನಾವಿನ್ನೆಷ್ಟು ದಿನ ಇರುತ್ತೇವೋ ಗೊತ್ತಿಲ್ಲ ಹೈಕಮಾಂಡ್ ಕೃಪಾ ಕಟಾಕ್ಷ ಇರುವವರೆಗೂ ಅಷ್ಟೇ ಇರುವುದು ಎಂದು ಬಹಿರಂಗವಾಗಿ ಹೇಳಿಕೆ ನೀಡುವವರಿಗೆ ರಾಜ್ಯದ ಬಗ್ಗೆ  ಹೇಗೆ ತಾನೇ ಕಾಳಜಿ ಇದ್ದೀತು? ಅವರ ಕಾಳಜಿ ಏನಿದ್ದರೂ ಇರುವಷ್ಟು ದಿನ  ಹೈಕಮಾಂಡ್ ನ್ನು ವಿಶ್ವಾದಲ್ಲಿಟ್ಟುಕೊಂಡು  ಸಿ.ಎಂ ಪದವಿಯಲ್ಲಿ ಉಳಿದುಕೊಳ್ಳುವುದಕ್ಕೆ ಮಾತ್ರ ಸೀಮಿತ.

ಇಷ್ಟಕ್ಕೂ ತೀರ್ಥಹಳ್ಳಿಯ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನ ಹುಟ್ಟಿಸುತ್ತಿಲ್ಲವೇ?  ಅಕ್ಟೋಬರ್ 29ರಂದು ತೀರ್ಥಹಳ್ಳಿಯಲ್ಲಿ ನಡೆದಿರುವ ಅತ್ಯಾಚಾರ ಘಟನೆಯ ಬಗ್ಗೆ ಪೊಲೀಸರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನ.3ರ ವರೆಗೂ ಸಿಗದೇ ಇದ್ದ ಬಾಲಕಿ ನಂದಿತಾ ಡೆತ್ ನೋಟ್ ನ.4ರಂದು ಧಿಡೀರ್ ಪ್ರತ್ಯಕ್ಷವಾಗಿದ್ದು ಹೇಗೆ? ಅಡೂ ಟೈಪಿಸಿದ ಪ್ರತಿಯೊಂದು ದೊರೆಯುತ್ತದೆ!!! ಇದಕ್ಕೂ ಮುನ್ನ ಅಂದರೆ ಬಾಲಕಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಅಲ್ಲಿನ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ, ನಿರ್ದಿಷ್ಟ ಪ್ರದೇಶಗಳಿಗೆ ಭದ್ರತೆ ಕೋರಿ ಪೊಲೀಸ್ ಠಾಣೆಗೆ ಪತ್ರವೊಂದು ರವಾನೆಯಾಗುತ್ತದೆ. ಅಲ್ಲಾ ಎಲ್ಲೋ ಅತ್ಯಾಚಾರ ನಡೆದು, ಬಾಲಕಿ ಮೃತಪಟ್ಟರೆ ಅದನ್ನು ಖಂಡಿಸುವುದನ್ನು ಬಿಟ್ಟು ಭದ್ರತೆಗಾಗಿ ಪೊಲೀಸರಿಗೆ ಪತ್ರ ಬರೆಯುತ್ತಾರೆ ಎಂದರೆ ಇದರ ಅರ್ಥವೇನು? ಈ ಅತ್ಯಾಚಾರ ಪ್ರಕರಣಕ್ಕೆ Communal colour ಕೊಟ್ಟವರು ಯಾರು?

ನಂದಿತಾ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿರುವವರು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ಎಂಬುದು ಜಗಜ್ಜಾಹೀರಾಗಿದೆ. ಅಂತದ್ದರಲ್ಲಿ ಭದ್ರತೆಗಾಗಿ ಪತ್ರ ಬರೆದ ಸಂಘಟನೆಯವರನ್ನೇ ವಿಚಾರಣೆಗಾಗಿ ಬಂಧಿಸುವ ಬದಲು   ಭದ್ರತೆಗಾಗಿ ಬೇಡಿಕೆಯಿಟ್ಟಿರುವ ಮೀನು ಮಾರ್ಕೆಟ್, ಮಸೀದಿ, ಅಲ್ಪಸಂಖ್ಯಾತ(?)ರು ಇರುವ ಪ್ರದೇಶಗಳಿಗೆ ಭದ್ರತೆ ನೀಡಿದ್ದಾರೆ ಎಂದರೆ ಇಡಿ ವ್ಯವಸ್ಥೆ ಯಾರ ಪರ ಕೆಲಸ ಮಾಡುತ್ತಿದೆ? ಅದನ್ನೂ ಬಿಡಿ ಪತ್ರ ಬರೆದ ನಂತರ ಭದ್ರತೆ ನೀಡಿ ಪೊಲೀಸರು ಮಾಡಿದ್ದೇನು? ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುವ ಬದಲು ಸಂತ್ರಸ್ತ ಬಾಲಕಿಯ ಬ್ಯಾಗ್ ನಲ್ಲಿ ಡೆತ್ ನೋಟ್ ಹುಡುಕುವ ಸಾಹಸ! ಇವೆಲ್ಲವೂ ಆಳುವವರ ಬಗ್ಗೆ ಅನುಮಾನ ಮೂಡಿಸದೇ ಏನು ಮಾಡೀತು? ಇತರ ಪ್ರಕರಣಗಳಲ್ಲಿ 90 ಬಾರಿ ಅತ್ಯಾಚಾರವಾದರೂ ಒಂದೇ ಒಂದು ದೂರಿಗೆ ಆರೋಪಿಯನ್ನು ಕೂಡಲೇ ಬಂಧಿಸಲು ತುದಿಗಾಲಲ್ಲಿ ನಿಲ್ಲುತ್ತಾರಲ್ಲ  ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವವರನ್ನು ಬಂಧಿಸುವಲ್ಲಿ ಅಷ್ಟೇ ತೀವ್ರತೆ ಏಕಿಲ್ಲ? ಆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಸರ್ಕಾರಕ್ಕೇನು ಇವರಿಗೇನು ಧಾಡಿ? ಹಾಗೆ ಮಾಡಿದ್ದರೆ ಪ್ರಕರಣಕ್ಕೆ ಕೋಮಿನ ಬಣ್ಣ ಹಚ್ಚಲಾಗುತ್ತಿದೆ ಎಂದು ಮಾಧ್ಯಮಗಳೆದುರು ಅರಚುವ ಸ್ಥಿತಿ ಬರುತ್ತಿರಲಿಲ್ಲ. ಈಗ ಹೇಳಿ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸದೇ ಅದಕ್ಕೆ ಕೋಮಿನ ಬಣ್ಣ ನೀಡುತ್ತಿರುವವರು ಯಾರು?

ಜು.22ರಂದು ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಶ್ನಿಸಹೋದರೆ ನಿಮಗಿರುವುದು ಅದೊಂದೇ ನ್ಯೂಸಾ? ಬೇರೆ ಸುದ್ದಿ ಇಲ್ಲವಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಾರೆ. ಇದೇ ಮುಂದುವರೆಯುತ್ತಿದ್ದು ಮತ್ತೊಮ್ಮೆ ಸರ್ಕಾರವನ್ನು ಪ್ರಶ್ನಿಸಿದರೆ ನಿಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಇಂತಹ ಪ್ರಕರಣಗಳನ್ನು ವೈಭವೀಕರಿಸುತ್ತಿದ್ದೀರ ಎಂದು ಗೃಹ ಸಚಿವರು ಉದ್ಗಾರ ತೆಗೆಯುತ್ತಾರೆ. ಅಂದರೆ ಇವರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಒಪ್ಪುತ್ತಾರೆ. ಅದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂಬುದನ್ನೂ ಪರೋಕ್ಷವಾಗಿ ಒಪ್ಪುತ್ತಾರೆ. ಆದರೆ ಅದನ್ನು ಎಲ್ಲಿಯೂ ಹೇಳಬಾರದು. ಇದೇ ಕಾಂಗ್ರೆಸ್ ನ ಮನಸ್ಥಿತಿ!
ಅಲ್ಲಿಗೆ ಇವರು ಹೇಳುತ್ತಿರುವುದಾದರೂ ಏನು? ಮಾಧ್ಯಮಗಳು ಎಲ್ಲೇ ಅತ್ಯಾಚಾರ ಪ್ರಕರಣಗಳು ನಡೆದರೂ ಅದನ್ನು ಬಿತ್ತರಿಸದೇ ರಾಜ್ಯದಲ್ಲಿ ಸಮಸ್ತವೂ ಕ್ಷೇಮವಾಗಿದೆ ಎಂದು ಜನತೆಗೆ ಸುಳ್ ಸುದ್ದಿ ನೀಡುತ್ತಾ ಕಾಂಗ್ರೆಸ್ ಕೃಪಾಪೋಷಿತ ನಾಲಾಯಕರನ್ನು ಹೊಗಳಬೇಕು ಎಂದಲ್ಲವೇ? ನಾಚಿಕೆಯಾಗುವುದಿಲ್ಲವೇ ಮಾಧ್ಯಮಗಳೆದುರಿಗೇ ಇಂತಹ ಹೇಕೆ ನೀಡಲು? ಸ್ವಾಮಿ ಗೃಹ ಸಚಿವರೆ, ಬೇರೆ ಕೆಲಸವಿಲ್ಲವೆಂದಾಗಲೀ ಟಿ.ಆರ್.ಪಿ ಗೋಸ್ಕರ ಅತ್ಯಾಚಾರ ಪ್ರಕರಣಗಳನ್ನು ವೈಭವೀಕರಿಸುವಷ್ಟು ಮಾಧ್ಯಮಗಳಿನ್ನೂ ನೈತಿಕವಾಗಿ ಭ್ರಷ್ಟವಾಗಿಲ್ಲ.

ಸಿದ್ದರಾಮಯ್ಯ ಸರ್ಕಾರದ ನಡೆ ದೇಶದ ಯಾವ ಸಾಮನ್ಯ ಪ್ರಜೆಗಾದರೂ ರೇಜಿಗೆ ಹುಟ್ಟಿಸುತ್ತದೆ. ಅನ್ಯಾಯವನ್ನು ವಿರೋಧಿಸಿ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಧಾನಸೌಧದಲ್ಲೇ ತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುಶಃ ಜನ ಇನ್ನೂ ಮರೆತಿಲ್ಲ. ಅವರದ್ದೇ ಸರ್ಕಾರವಿದೆ. ಮಹಿಳೆಯರು, ತಾಯಂದಿರ ನೋವು ಮುಗಿಲು ಮುಟ್ಟಿದೆ. ಯಾವ ಕ್ಷಣದಲ್ಲಿ ಎಲ್ಲಿ ರೇಪ್ ನಡೆದಿದೆ ಎಂದು ಬ್ರೇಕಿಂಗ್ ನ್ಯೂಸ್ ಬರುತ್ತದೋ ಯಾರಿಗೂ ಗೊತ್ತಿಲ್ಲ. ಅತ್ಯಾಚಾರಕ್ಕಾಗಿ ಕೆಟ್ಟ ಹೆಸರು ಪಡೆಯುತ್ತಿರುವುದನ್ನು ನೋಡಿಕೊಂಡೂ, ಅಂದುತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರ  ಪೌರುಷ ಈಗೆಲ್ಲಿ ಹೋಯಿತು ಎಂಬುದೂ ಗೊತ್ತಾಗುತ್ತಿಲ್ಲ! ಸಂವೇದನೆ ಇರುವ ಯಾವ ಮುಖ್ಯಮಂತ್ರಿಯೂ ಅತ್ಯಾಚಾರದಂತಹ ಹೀನ ಕೃತ್ಯಗಳಿಗೆ ತೋಳು ತಟ್ಟಿ ಸವಾಲೆಸೆಯುತ್ತಾನೇಯೇ ಹೊರತು ವಿಧಾನಸೌಧವೆಂಬ ದೇಗುಲದಲ್ಲಿ ರಾಜಕೀಯ ಕಾರಣಗಳಿಂದಾಗಿ ರೌಡಿಯಂತೆ ತೋಳು ತಟ್ಟುವುದಿಲ್ಲ. alas!

Monday 22 September 2014

ಅಲೋಪಥಿಗೆ ಜಗತ್ತು ಹುಡುಕುತ್ತಿದೆ ಪರ್ಯಾಯ ಚಿಕಿತ್ಸಾ ವಿಧಾನ: ಸನಾತನ ಮೌಲ್ಯದ ಆಯುರ್ವೇದವೇ ಪ್ರಧಾನ

India is one of the three top medical tourism destinations in Asia, ಇತ್ತೀಚೆಗೆ ಹೀಗೊಂದು ಸಂಶೋಧನೆ ಹೊರಬಿದ್ದಿದೆ. ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ, ನ್ಯೂರೋ ಸರ್ಜರಿ, ಮೂಳೆ ಚಿಕಿತ್ಸೆ, ನೆಫ್ರಾಲಜಿ ಮತ್ತು ಹೃದ್ರೋಗ ಚಿಕಿತ್ಸೆಗಳಲ್ಲಿ  ಭಾರತ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಪ್ರತಿಫಲ ಒಂದು ಕಾರಣವಾದರೆ, ಆಯುರ್ವೇದ ಮತ್ತು ಯೋಗದಂತಹ ಇತರ ಚಿಕಿತ್ಸೆಯ ಲಭ್ಯತೆ ಮತ್ತೊಂದು ಕಾರಣ.
ಅನಾರೋಗ್ಯವನ್ನು ಅತಿ ವೇಗವಾಗಿ ಪರಿಹರಿಸುವುದರೊಂದಿಗೆ, ಅಷ್ಟೇ ಪರಿಣಾಮಕಾರಿಯಾಗಿ ಅಡ್ಡಪರಿಣಾಮಗಳನ್ನು ಹೊತ್ತು ತರುವ ಅಲೋಪಥಿಕ್ ಚಿಕಿತ್ಸಾ ವಿಧಾನಕ್ಕೆ ಇಡೀ ಜಗತ್ತು ಪರ್ಯಾಯವಾದ ಚಿಕಿತ್ಸಾಪದ್ಧತಿಯನ್ನು ಅರಸಿ ಹೊರಟಿದೆ. ಭಾರತ ಮಾತ್ರ ಅಂತಹ ಪರ್ಯಾಯ ಚಿಕಿತ್ಸಾ ಪದ್ಧತಿಯನ್ನು ತನ್ನ ಒಡಲಲ್ಲೇ ಹೊತ್ತು ಪೋಷಿಸುತ್ತಿದೆ. ಅತಿ ವೇಗದ ಜಗತ್ತಿನಲ್ಲಿ ವೇಗವಾಗಿಯೇ ಎಲ್ಲವೂ ನಡೆಯಬೇಕು, instent food ಯಿಂದ ಹಿಡಿದು ಆರೋಗ್ಯದವರೆಗೂ ಎಲ್ಲವೂ instant. instant cure ಎಂಬ ಒಂದೇ ಒಂದು ಕಾರಣದಿಂದ ಅಲೋಪಥಿಕ್ ಚಿಕಿತ್ಸಾ ಪದ್ಧತಿಯಿಂದ ಅದೆಷ್ಟೋ ಅಡ್ಡ ಪರಿಣಾಮಗಳು instent ಆಗಿಯೇ ಮನುಷ್ಯನನ್ನು ಆವರಿಸಿಕೊಳ್ಳುತ್ತಿದೆ. ರಾಸಾಯನಿಕಗಳೇ ಕೃಷಿ ಪದ್ಧತಿಯಿಂದ ಹಿಡಿದು ಚಿಕಿತ್ಸಾ ಪದ್ಧತಿಯ ವರೆಗೂ ಹಾಸುಹೊಕ್ಕಾಗಿದ್ದು ಮನುಷ್ಯನ ದೇಹ ಕೆಮಿಕಲ್ ಫ್ಯಾಕ್ಟರಿಯಾಗಿ ಮಾರ್ಪಾಡಾಗುತ್ತಿದೆ. ಮುಂದಾಗುವ ಅಪಾಯವನ್ನು ತಡೆಗಟ್ಟಲು ಜಗತ್ತಿನ ಅದೆಷ್ಟೋ ರಾಷ್ಟ್ರಗಳು ಪರ್ಯಾಯ ಚಿಕಿತ್ಸಾ ಪದ್ಧತಿ ಮೊರೆ ಹೋಗುತ್ತಿವೆ.
ಒಂದು ಸಮೀಕ್ಷೆಯ ಪ್ರಕಾರ, ಅಲೋಪಥಿಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿ ಅಥವಾ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಖನ್ನು ಮೂಲದಿಂದಲೇ ಗುರುತಿಸಿ ಅದಕ್ಕೆ ಪರಿಹಾರ ಹುಡುಕಬೇಕೆಂಬ ಉಮೇದಿನಲ್ಲಿ ಇಸ್ರೇಲ್ ನಲ್ಲಿ 15ದಿನಗಳಲ್ಲಿ 75 ಸಾವಿರ ಅಲೋಪತಿ ವೈದ್ಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ  ಅಲೋಪಥಿಕ್ ಚಿಕಿತ್ಸಾ ಪದ್ಧತಿ ಕೆಲಸಕ್ಕೆ ಬಾರದ್ದು ಎಂಬ ನಿರ್ಧಾರ ತಳೆದವರಂತೆ ಜಮೀನಿನಲ್ಲಿ ಶುದ್ಧ ಆಹಾರ, ಗಿಡ ಮೂಲಿಕೆ ಬೆಳೆಯೋ ಪ್ರಯತ್ನ ಶುರುಮಾಡಿದ್ದಾರೆ. ಈ ಮೂಲಕ ಪರ್ಯಾಯ ಚಿಕಿತ್ಸಾ ಪದ್ಧತಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಪರಿಣಾಮ, ಅತ್ಯಂತ ಆರೋಗ್ಯಕರವಾದ ದೇಶವಾಗಿ ಇಸ್ರೇಲ್ ಮಾರ್ಪಾಡಾಗುತ್ತಿದೆ. ಗಿಡ ಮೂಲಿಕೆ, ಶುದ್ಧ ಆಹಾರ  ಬೆಳೆಸುವುದರೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಉತ್ಕೃಷ್ಟ ಕೊಡುಗೆ ನೀಡಿದ ಹೆಗ್ಗಳಿಕೆ ಆಯುರ್ವೇದದ್ದು. ದುರದೃಷ್ಟವೆಂದರೆ ಇವೆಲ್ಲವನ್ನೂ ಜಗತ್ತಿಗೆ ಪರಿಚಯಿಸಿದ ನಮ್ಮ ನಾಡಿನಲ್ಲಿ ಆಯುರ್ವೇದದ ಬಗ್ಗೆ ಗಮನಾರ್ಹ ಪ್ರಯೋಗಗಳು ನಡೆಯುತ್ತಿಲ್ಲ.
ಭಾರತದ ಮಟ್ಟಿಗೆ ಆಯುರ್ವೇದ ಹಾಗೂ ಅದರ ಶೇ.45ರಷ್ಟು ಉತ್ಪನ್ನಗಳು ಹಣ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ(ಹೇರ್ ಆಯಿಲ್, ತೈಲ, ಚೂರ್ಣ ಇಂತಹ ಉತ್ಪನ್ನಗಳು)  ಚರಕ, ಸುಶೃತರು ನೀಡಿದ ಆಯುರ್ವೇದ ಚಿಕಿತ್ಸೆಯ ನಿಜವಾದ ಸತ್ವ ಅಥವಾ ಅದರಿಂದ ಆಗುತ್ತಿರುವ ಪ್ರಯೋಗಗಳು ಶೂನ್ಯ ಎಂಬುದು ಸರ್ವವಿದಿತ. ಇನ್ನು ಆಯುರ್ವೇದದ ಉತ್ಪನ್ನಗಳಿಗೆ ಎಂ.ಆರ್.ಪಿ ನಿಯಂತ್ರಣವೇ ಇಲ್ಲ ಎಂದರೆ ನಂಬುತ್ತೀರಾ? ಅದೊಂದು ರೀತಿಯಲ್ಲಿ ಪ್ರಚಾರದ ಉತ್ಪನ್ನಗಳಾಗಿ ಮಾರ್ಪಾಡುಗುತ್ತಿವೆ ಉದಾಹರಣೆಗೆ ಆಯುರ್ವೇದದ ವೈದ್ಯರಿಂದ ತಮ್ಮ ಉತ್ಪನ್ನಗಳನ್ನು ಪ್ರಮೋಟ್ ಮಾಡಿಸುವುದು. ಪ್ರಮೋಟ್ ಮಾಡುವ ವೈದ್ಯರಿಗೆ ಹಣ ನೀಡಬೇಕಲ್ಲಾ ಆದಕ್ಕೆ ಉತ್ಪನ್ನಗಳಿಗೆ ಒಂದಕ್ಕೆ ಎರಡರಷ್ಟು ಬೆಲೆ ನಿಗದಿಪಡಿಸುತ್ತಾರೆ. ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಬೆಲೆ. ಹೀಗಿರುವಾಗ ಆಯುರ್ವೇದದ ಉದ್ಧಾರವಾದರೂ ಹೇಗೆ ಸಾಧ್ಯ? ಆಯುರ್ವೇದದ ಪರಿಸ್ಥಿತಿ ಹಣ ಮಾಡುವ ಉದ್ದೇಶದಿಂದ ಕೂಡಿದರೆ ಅಲೋಪಥಿಕ್ ವೈದ್ಯರಿಗೂ ಆಯುರ್ವೇದದ ವೈದ್ಯರಿಗೂ ವ್ಯತ್ಯಾಸವೇನು ಬಂತು?
ಹೇರ್ ಆಯಿಲ್, ತೈಲ ಇತ್ಯಾದಿಗಳ ಮಟ್ಟದಲ್ಲೇ ಆಯುರ್ವೇದ ಸೀಮಿತಗೊಂಡರೆ ಅದು ಹೇಗೆ ತಾನೇ ಪರ್ಯಾಯ ಚಿಕಿತ್ಸಾ ಪದ್ಧತಿಗೆ ಲಾಯಕ್ಕಾದೀತು? ನಮ್ಮ ಪುರಾತನ ಚಿಕಿತ್ಸಾ ಪದ್ಧತಿಯಲ್ಲಿ ಖಂಡಿತವಾಗಿಯೂ ಪರ್ಯಾಯ ಚಿಕಿತ್ಸಾಪದ್ಧತಿಗೆ ಅರ್ಹವಾದ ಅಂಶಗಳಿದೆ. ಹಾಗೆಯೇ ಅದನ್ನು ಪ್ರಯೋಗಾತ್ಮವಾಗಿ ಬಳಸಿಕೊಳ್ಳುವುದಕ್ಕೆ ತಾತ್ವಾರವೂ ಇದೆ. ಇತರ ಕ್ಷೇತ್ರಗಳಂತೆಯೇ ಆಯುರ್ವೇದದಲ್ಲೂ ತುಂಬಿರುವ ಆಲಸ್ಯವನ್ನು ತೊಲಗಿಸಿ, ಸಂಶೋಧನೆಯಲ್ಲಿ ತೊಡಗಿಸಿದರೆ ಅದರಿಂದ ಆಗುವ ಪರಿಣಾಮಗಳೇ ಪರ್ಯಾಯ ಚಿಕಿತ್ಸಾ ಪದ್ಧತಿಗೆ ನಾಂದಿಯಾಗಲಿದೆ.
ಕಣ್ಣಿಗೆ ರಾಚುವಂತೆ ಇಷ್ಟೇಲ್ಲಾ ನ್ಯೂನತೆಗಳಿದ್ದರೂ ಭಾರತದ ಪುರಾತನ ಚಿಕಿತ್ಸಾ ಪದ್ಧತಿ ವಿದೇಶಿಗರನ್ನು ಆಕರ್ಷಿಸುತ್ತಿದೆ. ಡೆಂಗ್ಯೂ( ಅಲೋಪಥಿಯಲ್ಲಿ ಈ ವರೆಗೂ ಪರಿಣಾಮಕಾರಿ ಔಷಧಿ ಇಲ್ಲ), ಕ್ಯಾನ್ಸರ್, ಹೃದ್ರೋಗ, ಸೇರಿದಂತೆ ಮಾರಣಾಂತಿಕ ರೋಗಗಳಿಗೆ ಆಯುರ್ವೇದದ ಚಿಕಿತ್ಸೆ ಮೂಲಕ ದೊರೆಯುವ ಪರಿಹಾರದ ಮುಂದೆ ಇಂಗ್ಲೀಶ್ ಪದ್ಧತಿ ಚಿಕಿತ್ಸೆ ನಿರುತ್ತರವಾಗುತ್ತದೆ. ಇಂದಿಗೂ ಅದೆಷ್ಟೋ ಮಂದಿ ಕ್ಯಾನ್ಸರ್ ಪೀಡಿತರು ಆಯುರ್ವೇದ, ಯೋಗ ಚಿಕಿತ್ಸಾ ಪದ್ಧತಿಯಿಂದ ಜೀವಂತವಾಗುಳಿದಿದ್ದು, ಸೋ ಕಾಲ್ಡ್ ಅಲೋಪಥಿಗೆ ದೊಡ್ಡ ಮಿಸ್ಟ್ರಿಯಾಗಿ ಕಾಡುತ್ತಿದ್ದಾರೆ. ಭಾರತೀಯ ಪುರಾತನ ಚಿಕಿತ್ಸಾ ಪದ್ಧತಿಯ ಹೀಗಿದೆ.
ಇನ್ನು ಕಾರ್ಯವ್ಯಸನಿಗಳಾಗಿರುವ ಅಮೆರಿಕಾದಂತಹ ರಾಷ್ಟ್ರಗಳಲ್ಲಂತೂ ಮನಸ್ಸಿಗೆ ಶಾಂತಿ ದೊರೆಯದೇ ಯೋಗ ಚಿಕಿತ್ಸೆಗಾಗಿ ಹಾತೊರೆಯುತ್ತಿದ್ದಾರೆ. ಜಗತ್ತಿನ ಪರಿಸ್ಥಿತಿ ಹೀಗಿರುವಾಗ  ಭಾರತ ಮತ್ತೊಮ್ಮೆ ವಿಶ್ವದ ಕೇಂದ್ರ ಬಿಂದುವಾಗಿದೆ. ಏಕೆಂದರೆ ಅಲೋಪಥಿಕ್ ಗೆ ಪರ್ಯಾಯ ಚಿಕಿತ್ಸಾ ಪದ್ಧತಿ ಜೀವಂತವಾಗಿರುವುದು ಭಾರತದಲ್ಲಿಯೇ. ಹೃದಯ ಕಸಿ ಸೇರಿದಂತೆ ಅಂಗಾಂಗ ಕಸಿ ಮಾಡಿ ಜೀವದಾನ ಮಾಡುವುದರಲ್ಲಿ ಅಲೋಪಥಿಯನ್ನು ಬಿಟ್ಟರೆ ಮತ್ತೊಂದು ಪರ್ಯಾಯ ಚಿಕಿತ್ಸೆ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಅಲೋಪಥಿ ಪದ್ಧತಿ ಪರಿಚಯಾಗುವುದಕ್ಕೂ ಮುನ್ನ 2ನೇ ಶತಮಾನದಲ್ಲೇ (ಕ್ರಿ.ಪೂ.600ರಲ್ಲೇ)  ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತರು ಶಸ್ತ್ರ ಚಿಕಿತ್ಸೆ, ಅಂಗಾಂಗಗಳ ಕಸಿ ಮಾಡಿದ್ದರು. ಹೀಗಿದ್ದ ಭಾರತ 20ನೇ ಶತಮಾನದ ಹೊತ್ತಿಗೆ ಅತಿಯಾದ ಅಲೋಪಥಿ ವ್ಯಾಪ್ತಿಗೊಳಪಟ್ಟು, ಪ್ರಾಚೀನಾ ಆಯುರ್ವೇದವನ್ನು ಅಳಲೆಕಾಯಿ ಪಂಡಿತ ನೀಡುವ ಔಷಧ ಪದ್ಧತಿಯೆಂದು ಹಂಗಿಸುವ ಸ್ಥಿತಿಗೆ ತಲುಪಿದೆ. ಇನ್ನು ಯಾರನ್ನಾದರೂ ಅಲೋಪಥಿಯ ಅಡ್ಡ ಪರಿಣಾಮದ ಬಗ್ಗೆ ಪ್ರಶ್ನಿಸಿ ಆಯುರ್ವೇದ ಚಿಕಿತ್ಸೆಗೆ ಸಲಹೆ ನೀಡಿದರೆ, ಆಯುರ್ವೇದದಲ್ಲಿ ಪರಿಣಾಮವೇ ಇರುವುದಿಲ್ಲ ಇನ್ನು ಅಡ್ಡಪರಿಣಾಮ ಎಲ್ಲಿಂದ ಬರಬೇಕೆಂಬ ಲೇವಡಿಯ ಮಾತು ಢಳವಾಗಿರುತ್ತವೆ.
ಇತ್ತೀಚೆಗಷ್ಟೇ ಹೆಸರಾಂತ ಪತ್ರಿಕೆ ದಿ ಗಾರ್ಡಿಯನ್ ಪ್ರಕಟಿಸಿದ್ದ ವರದಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಆಕ್ಯುಪಂಕ್ಚರ್ ಹಾಗೂ ಭಾರತದ ಪ್ರಾಚೀನ ಆಯುರ್ವೇದವನ್ನು ಶಾಸನ ಬದ್ಧಗೊಳಿಸಿದೆ ಎಂದು ಹೇಳಿದೆ(http://www.theguardian.com/global-development-professionals-network/2014/sep/17/acupuncture-ayurveda-medicine-health-india). ಇದನ್ನೇ ಆಧಾರವಾಗಿಟ್ಟುಕೊಂಡು ಗಾರ್ಡಿಯನ್ ಪತ್ರಿಕೆ ಆಯುರ್ವೇದದ ಬಳಕೆಯ ಪ್ರಮಾಣದ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು ಶೇ.65ರಷ್ಟು ಗ್ರಾಮೀಣ ಭಾಗದ ಜನತೆ ಆರೋಗ್ಯ ರಕ್ಷಣೆಗೆ ಆಯುರ್ವೇದ ಹಾಗೂ ಔಷಧೀಯ ಸಸ್ಯಗಳನ್ನು ಬಳಸುತ್ತಾರೆ ಎಂದು ಹೇಳಿದೆ. ಇಷ್ಟೇ ಅಲ್ಲ ಪ್ರತಿ ದೇಶದಲ್ಲೂ ಇಂತಹ ಸಮೀಕ್ಷೆ ನಡೆಸಿರುವ ಪತ್ರಿಕೆ, ಆಫ್ರಿಕಾದಲ್ಲಿ ಶೇ.80ರಷ್ಟು ಜನರು, ಚೀನಾದಲ್ಲಿ ಶೇ.40ರಷ್ಟು ಜನರು ಸಾಂಪ್ರದಾಯಿಕ ಔಷಧವನ್ನೇ ಬಳಸುತ್ತಾರೆ ಎಂದು ವರದಿ ಮಾಡಿದೆ. ಗಾರ್ಡಿಯನ್ ನೀಡಿರುವ ವರದಿ  ಭಾರತದ ಮಟ್ಟಿಗೆ ಆಯುರ್ವೇದ ಪದ್ಧತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಜಾಗತಿಕ ದೃಷ್ಠಿಯಿಂದ ನೋಡಿದರೆ ಅಲೋಪಥಿತಿಯಿಂದ ಪರ್ಯಾಯ ಚಿಕಿತ್ಸಾ ಪದ್ಧತಿಯೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿರುವುದು ಸ್ಪಷ್ಟವಾಗುತ್ತದೆ. ಗಿಡ ಮೂಲಿಕೆಗಳ, ಪ್ರಕೃತಿದತ್ತವಾಗಿ ದೊರೆಯುವ ಜೀವ ಸೆಲೆಯಂತಿರುವ ಆಯುರ್ವೇದ, ಸಾಂಸ್ಕೃತಿಕ ಚಿಕಿತ್ಸಾ ಪದ್ಧತಿಯ ಮುಂದೆ  ಕೆಮಿಕಲ್ ಗಳಿಂದ ತಯಾರಾಗುವ ಇಂಗ್ಲೀಶ್ ಔಷಧ ಎಷ್ಟು ದಿನ ತಾನೆ ಅಸ್ಥಿತ್ವ ಉಳಿಸಿಕೊಳ್ಳಬಹುದು? ಆರ್ಥ್ರಿಟಿಸ್, ಸ್ಪಾಂಡಿಲೈಟಿಸ್, ಸ್ಲಿಪ್ ಡಿಸ್ಕ್, ಒತ್ತಡ, ಖಿನ್ನತೆ ವ್ಯಾಧಿಗಳಿಗೆ ಮುಂತಾದ ವ್ಯಾಧಿಗಳಿಗೆ ಅಡ್ಡ ಪರಿಣಾಮ ವಿಲ್ಲದೇ ಇರುವ ಔಷಧಗಳೇ ಇಲ್ಲ ಎಂಬುದು ಹಲವು ಆರೋಗ್ಯ ತಜ್ನರ ಅಭಿಪ್ರಾಯ. ಈ ಆಯಾಮದಿಂದ ನೋಡುವುದಾದರೆ ಅಲೋಪಥಿಯಂತೆ ಆಯುರ್ವೇದ ರೋಗ ವಕ್ಕರಿಸಿದಾಗ ಹೋಗಿ ವ್ಯಾಧಿಯನ್ನು ನಿವಾರಿಸಲೆಂದು ಬಳಸುವ ಚಿಕಿತ್ಸಾ ವಿಧಾನ ಅಲ್ಲ ಎಂದು ಹೇಳಬಹುದು. ಆಯುರ್ವೇದ ಎಂಬುದು ಸನಾತನ ಧರ್ಮದ ಜೊತೆ ಜೊತೆಗೇ ಬಂದಿರುವ ಜೀವನ ಶೈಲಿ. ಮತ್ತೊಂದು ರೀತಿಯಲ್ಲಿ ನಮ್ಮ ಪೂರ್ವಜರು ತಮ್ಮ ದಿನಚರಿಯಲ್ಲೇ ಆರೋಗ್ಯವನ್ನು ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿ ಚಿಕಿತ್ಸಾ ವಿಧಾನಗಳನ್ನು ಪಾಲಿಸುತ್ತಿದ್ದರು ತನ್ಮೂಲಕ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದರ ಬದಲು ರೋಗ ಬರದಂತೆಯೇ ಎಚ್ಚರ ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಯುರ್ವೇದ ಒಂದು ವಿಧವಾದ ಚಿಕಿತ್ಸಾ ಪದ್ಧತಿಯಾಗಿದ್ದರೂ ಸಹ ಅದು ಅಲೋಪಥಿಯಂತೆ ಇಂತಹ ಖಾಯಿಲೆಗೆ ಇಂಥಹದ್ದೇ ಚುಚ್ಚುಮದ್ದು ನೀಡಬೇಕೆಂಬ ನಿಯಮ ಹೊಂದಿಲ್ಲ. ಬದಲಾಗಿ ಪರಿಪೂರ್ಣ ಆರೋಗ್ಯ ಹೊಂದಲು ಅನುಕೂಲವಾಗಿದೆ.
ಆಧುನಿಕ ಚಿಕಿತ್ಸಾ ವಿಧಾನ ದೇಹದ ಮೇಲೇ ಕೇಂದ್ರೀಕೃತವಾಗಿರುವುದರಿಂದ ರೋಗಿಯ ಮನಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲೋಪಥಿಕ್ ಮಟ್ಟಿಗೆ ಈ ಅಂಶದ ಅಗತ್ಯವೂ ಬಹಳ ದೂರವಾಗಿಯೇ ಉಳಿದಿದೆ. ಆದರೆ ಆಯುರ್ವೇದದ ಮನಸ್ಸು, ಇಂದ್ರಿಯಗಳಿಗೆ ಚಿಕಿತ್ಸೆ ನೀಡುವುದೂ ಅತ್ಯಂತ ಪ್ರಮುಖ ವಿಷಯವಾದದ್ದು. ಇಂದಿನ ಆಧುನಿಕ ಯುಗದಲ್ಲೂ ಸಹ ಅಯುರ್ವೇದ ತನ್ನದೇ ಅಸ್ಥಿತ್ವವನ್ನು ಉಳಿಸಿಕೊಂಡು ಪರ್ಯಾಯ ಚಿಕಿತ್ಸಾ ಪದ್ಧನಿಯನ್ನು ಶೋಧಿಸುತ್ತಿರುವ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಕೇರಳದ ಆಯುರ್ವೇದ ಚಿಕಿತ್ಸೆ ಯುರೋಪ್ ನಿಂದ 600,000 ಜನ ಪ್ರವಾಸಿಗರನ್ನು ಆಕರ್ಶಿಸಿಸುವುದೇ ಇದಕ್ಕೆ ಉತ್ತಮ ನಿದರ್ಶನ. ಇಂತದ್ದೇ ಹಲವು ನಿದರ್ಶನಗಳು ಅಮೆರಿಕಾ, ಬ್ರೆಜಿಲ್ ನಲ್ಲಿಯೂ ಕಾಣಸಿಗುತ್ತದೆ. ಹೇಗೆ ಯೋಗಕ್ಕೆ ಅಮೆರಿಕಾ ಶರಣಾಗಿದೆಯೋ ಹಾಗೆಯೇ ಆಯುರ್ವೇದ ಪದ್ಧತಿಗೂ ಮಾರು ಹೋಗಿದೆ. ಇನ್ನು ಹಿಂದೊಮ್ಮೆ ಭಾರತದ ತುಂಡಾಗಿದ್ದ, ಬಗಲಲ್ಲೇ ಇರುವ ಬಾಂಗ್ಲಾ ಸಹ ಆಯುರ್ವೇದ ಕಾಲೇಜು ಆರಂಭಿಸಲು ತೀರ್ಮಾನಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಜಪಾನ್ ಈಗಾಗಲೇ 30 ವರ್ಷದಿಂದ ಆಯುರ್ವೇದ, ಯೋಗ ಚಿಕಿತ್ಸೆಯನ್ನು ಮುಂದುವರೆಸುತ್ತಿದೆ.  ಶ್ರೀಲಂಕಾ, ಬರ್ಮಾ ದೇಶಗಳಂತೂ ಆಯುರ್ವೇದದ ಶಕ್ತಿಗೆ ಅಚ್ಚರಿ ವ್ಯಕ್ತಪಡಿಸಿ ಅದರ ಹಿಂದೆ ಬಿದ್ದಿದ್ದಾರೆ. alternative medicines ಗಾಗಿ ಅಲೆದಾಡುತ್ತಿರುವ ಇಂತಹ ಸಂದರ್ಭದಲ್ಲಿ  ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಪುರಾತನ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ ಎಂದರೆ ಹೆಮ್ಮೆಯ ವಿಷಯವಲ್ಲವೇ?
ಇನ್ನು ಆಯುರ್ವೇದ ಎಂದಾಕ್ಷಣ ಹಿಗ್ಗಿ, ಎಲ್ಲವೂ ಸರಿ ಇದೆ ಎಂಬ ಭ್ರಾಂತು ಬೇಡ, ಸನಾತನ ಧರ್ಮದ ಕೊಡುಗೆಯನ್ನು ಅಪಪ್ರಚಾರ ಮಾಡಿ ಮೂಲ ತತ್ವಕ್ಕೇ ಮಸಿ ಬಳಿಯುವಂತಹ ಕೆಲಸ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿರುತ್ತದೆ. ಹಾಗೆಯೇ ಕೈಗೆ ಸಿಕ್ಕ ನಾರು-ಬೇರುಗಳನ್ನೆಲ್ಲಾ ತಂದು ಫುಟ್ ಪಾಥ್ ಮೇಲೆ ಕುಳಿತು ಆಯುರ್ವೇದದ ಬಣ್ಣ ಬಳಿದು ಅರಚುತ್ತಾ ಜನರ ದಿಕ್ಕು ತಪ್ಪಿಸುವವರೂ ಇದ್ದಾರೆ. ಇಂತಹವರಿಂದಲೇ ಆಯುರ್ವೇದ ಎಂದರೆ ಕನಿಷ್ಠ ಮಟ್ಟದ ಭಾವನೆ ಮೂಡುತ್ತದೆ. ಹಿಮಾಲಯದಲ್ಲಿ ಅಪೂರ್ವ ಗಿಡ ಮೂಲಿಕೆಗಳಿರುವುದೂ ನಿಜ, ಅದನ್ನು ಔಷಧಗಳಿಗೆ ತಯಾರು ಮಾಡಲೂ ಸಾಧ್ಯವಿದೆ. ಅಂದ ಮಾತ್ರಕ್ಕೆ ಸಿಕ್ಕ ಸಿಕ್ಕವರೆಲ್ಲ ಅದನ್ನು ತಯಾರು ಮಾಡು ಶುರು ಮಾಡಿಬಿಟ್ಟಿದ್ದಾರೆ ಮುಂದೊಂದು ದಿನ ಇದೇ ನಮಗೆ ಮುಳುವಾಗುವ ಸಾಧ್ಯತೆಗಳಿವೆ. ಹಾಗೆಂದ ಮಾತ್ರಕ್ಕೆ ರಾತ್ರೋ ರಾತ್ರಿ ಎಲ್ಲವನ್ನೂ ಆಯುರ್ವೇದ ಮಯಮಾಡಿಬಿಡಬೇಕೆಂದಲ್ಲ. ಏಕೆಂದರೆ ನಾವು ಪಾಶ್ಚಾತ್ಯ  ಜೀವನ ಶೈಲಿಗೆ ಬಹು ವರ್ಷಗಳಿಂದ ಒಗ್ಗಿ ಹೋಗಿದ್ದೇವೆ. ತಕ್ಷಣವೇ ಪ್ರಾಣ ಹೋಗುವ ಸ್ಥಿತಿ ಎಂದರೆ ಆಯುರ್ವೇದ ಬರಲಿ ಅಲೋಪಥಿ ಬೇಡ ಎನ್ನಲು ಸಾಧ್ಯವಿಲ್ಲ. ಇಂದಿನ ಜೀವನ ಶೈಲಿಗೆ ಪುರಾತನ ಚಿಕಿತ್ಸಾ ಪದ್ಧತಿಯಿಂದ ಅತಿ ವೇಗದಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬಂದುಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಬದಲಾಗಿ ಹಂತ ಹಂತವಾಗಿ ಜಾರಿಗೆ ತರುವ ಅಗತ್ಯವಿದೆ. ಈ ದೃಷ್ಥಿಯಿಂದಲೇ ಮೊನ್ನೆ ಸೆ.15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್(ಆಯುರ್ವೇದ, ಯೋಗ, ನ್ಯಾಚರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ) ಗೆ ಚಾಲನೆ ನೀಡುವ ನಿರ್ಧಾರ ಕೈಗೊಂಡಿದ್ದು ಅಲೋಪತಿ ಪದ್ಧತಿಯ ಚಿಕಿತ್ಸೆಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಈ ಯೋಜನೆ ಮೂಲಕ ಪ್ರಮುಖವಾಗಿ ದುರ್ಬಲ ಮತ್ತು ದೂರದ ಗುಡ್ಡಗಾಡಿನ ಪ್ರದೇಶಗಳಲ್ಲಿ ಈ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಆಯುಷ್ ಹೆಲ್ತ್ ಮಿಷನ್ ಮೂಲಕ, ಆಯುಷ್ ಆಸ್ಪತ್ರೆಗಳ ಹಾಗೂ ಔಷಧಾಲಯಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಲಿದೆ. ಸಾವಯವ ಕೃಷಿಯಿಂದ ಆಯುಷ್ ಚಿಕಿತ್ಸಾ ವಿಧಾನಕ್ಕೆ ಔಷಧ ತಯಾರಿಕೆಯಾಗಲಿದ್ದು  ಇದಕ್ಕೂ ಉತ್ತೇಜನ ದೊರೆಯಲಿದೆ. ಭಾರತದ ಪುರಾತನ ಚಿಕಿತ್ಸಾ ವಿಧಾನಗಳು ಜಗತ್ತು ಹುಡುಕುತ್ತಿರುವ ಅಲೋಪತಿಗೆ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿ ನಿಲ್ಲಲಿವೆ.

Monday 1 September 2014

ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?


ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣವನ್ನು ಹಣ ಪಡೆದು ಕೆಲವು ಸುದ್ದಿ ವಾಹಿನಿಗಳು ದಿನವಿಡೀ ಬಿತ್ತರಿಸುತ್ತವೆ!ಆ.10ರಂದು ನಡೆದ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಚಾರ ಸಂಕಿರಣದಲ್ಲಿ ಮಾಜಿ ಪತ್ರಕರ್ತ, ರಾಜ್ಯ ಸರ್ಕಾರದ ಮಾಧ್ಯಮ ಹಾಲಿ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಇಂತಹ ಹೇಳಿಕೆ ನೀಡಿಬಿಟ್ಟರು! ಮೋದಿ ಅವರದ್ದು ಅಸ್ವಾಭಾವಿಕ(ಕೃತಕ) ಜನಪ್ರಿಯತೆ ಎಂಬುದು ಸಿ.ಎಂ ಸಲಹೆಗಾರರ ವಿಚಾರವಾಗಿತ್ತು. ಅದನ್ನು ಹೇಳುವ ರೀತಿಯಲ್ಲಿ ಹೇಳಿದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲವೇನೊ.... ಸುದ್ದಿಯಲ್ಲಿರಲು ಹಪಹಪಿಸಿ ಲೋಕಸಭಾ ಚುನಾವಣೆಗೂ ಮುನ್ನ ಹಲವು ಸಾಹಿತಿಗಳು ಇಂತಹದ್ದೇ ಹೇಳಿಕೆ ನೀಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಪತ್ರಿಕೋದ್ಯಮದಲ್ಲಿ ಸುದೀರ್ಘ ಅವಧಿಯ ಅನುಭವ ಹೊಂದಿರುವ ಹಿರಿಯ ಪತ್ರಕರ್ತರೇ ಯಾವುದೋ ಪಕ್ಷವನ್ನು ಟೀಕಿಸುವ ಭರದಲ್ಲಿ ವೃತ್ತಿಧರ್ಮಕ್ಕೇ ಅಪಚಾರವೆಸಗುವುದೇ?

ಪ್ರಧಾನಿಯ ಜನಪ್ರಿಯತೆಯನ್ನು ಟಿಕಿಸುವ ಭರದಲ್ಲಿ ಪತ್ರಕರ್ತರೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಘನತೆಯನ್ನು ಹರಾಜುಹಾಕಿರುವುದು ಬಹುಶಃ ಇತಿಹಾಸದಲ್ಲೇ ಮೊದಲು! ಗಾಂಧಿ ಕುಟುಂಬಕ್ಕೆ ಇಂದಿಗೂ ನಿಷ್ಠರಾಗಿಯೇ ಉಳಿದುಕೊಂಡಿರುವ ಪತ್ರಕರ್ತ ಕುಮಾರ್ ಕೇಥ್ ಕರ್ ಸಹ ಈ ಮಟ್ಟಕ್ಕೆ ಇಳಿದಿರಲಿಲ್ಲ ಎಂದೆನುಸುತ್ತದೆ, ಅಮಿನ್ ಮಟ್ಟು ಅವರದ್ದು ಅವರನ್ನೂ ನಾಚಿಸುವಂತಹ ಹೇಳಿಕೆ.

ಭಾರತ ಕಂಡ ಪ್ರಸಿದ್ಧ ಪತ್ರಕರ್ತ ಅರುಣ್ ಶೌರಿ, ರಾಮನಾಥ್ ಗೋಯೆಂಕಾ, ಆಮ್ ಆದ್ಮಿಯ ಅಶುತೋಶ್ ಸೇರಿದಂತೆ ಪತ್ರಕರ್ತರೂ ಸಹ ನಿರ್ದಿಷ್ಟಪಕ್ಷಗಳ ಪರವಾಗಿ ಮಾತನಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಅವರ್ಯಾರೂ ಪತ್ರಿಕಾರಂಗದ ಮಾನವನ್ನೆಂದಿಗೂ ಹರಾಜು ಹಾಕಿರಲಿಲ್ಲ. ಇಷ್ಟಕ್ಕೂ ಪೇಯ್ಡ್ ಮೀಡಿಯಾ ಅಥವಾ ಏಕಪಕ್ಷೀಯವಾಗಿ ಸುದ್ದಿ ಬಿತ್ತರಿಸುವ ಬಗ್ಗೆ ಹೇಳಿಕೆಗಳನ್ನು ನೀಡಲು ಅಮಿನ್ ಮಟ್ಟು ಅವರಿಗೆ ಅರ್ಹತೆ ಏನಿದೆ? ಏಕೆಂದರೆ 2012ರ ನವೆಂಬರ್ 5ರಂದು(11/05/2012) ಪ್ರಜಾವಾಣಿ ಪತ್ರಿಕೆಯಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ
'ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ'ಶೀರ್ಷಿಕೆಯ ಲೇಖನ ಅವರಿಗೆ ಗಾಂಧಿ ಕುಡಿಯ ಬಗ್ಗೆ ಇರುವ ಅತೀವ ಕಳಕಳಿಯನ್ನು 'ಅನಾವರಣ'ಗೊಳಿಸಿತ್ತು. (http://www.prajavani.net/columns/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%AD%E0%B2%B5%E0%B2%BF%E0%B2%B7%E0%B3%8D%E0%B2%AF-%E0%B2%85%E0%B2%B5%E0%B2%B0-%E0%B2%95%E0%B3%88%E0%B2%AF%E0%B2%B2%E0%B3%8D%E0%B2%B2%E0%B2%BF%E0%B2%AF%E0%B3%87-%E0%B2%87%E0%B2%A6%E0%B3%86)

2012ರ ವೇಳೆಗೆ ಯುಪಿಎ ಸರ್ಕಾರದ ಬಂಡವಾಳ ದೇಶದ ಜನತೆಗೆ ಗೊತ್ತಾಗಿಹೋಗಿತ್ತು. ಪ್ರಥಮ ಅವಧಿಯಲ್ಲೇ ಹಗರಣಗಳ ಪಟ್ಟಿಯನ್ನೇ ಹೊತ್ತುಕೊಂಡಿತ್ತು ಕಾಂಗ್ರೆಸ್ ಸರ್ಕಾರ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದ ಜನತೆ ಸುಮಾರು 60 ವರ್ಷಗಳಿಂದ ನಡೆದುಕೊಂಡು ಬಂದಿದ್ದ ವಂಶಪಾರಂಪರ್ಯ ರಾಜಕಾರಣದಿಂದ ರೋಸಿಹೋಗಿದ್ದರು. ಆದರೂ ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆಂದು ಹೇಳುವ ಮೂಲಕ ಈ ಅಂಕಣದಲ್ಲಿ ಮಾಧ್ಯಮಗಳಿಂದ ಯುವರಾಜನೆಂದೇ ಕರೆಸಿಕೊಳ್ಳುತ್ತಿದ್ದ, ದೇಶದ ಜನತೆ ಪಾಲಿಗೆ ಬೇಡವಾಗಿದ್ದ ರಾಹುಲ್ ಗಾಂಧಿಯನ್ನು, ಅತಿ ಪ್ರಮೋಟ್ ಮಾಡಲು ಸೂಕ್ಷ್ಮವಾಗಿ ಯತ್ನಿಸಿದ್ದರು ಅಮಿನ್ ಮಟ್ಟು ಸಾಹೇಬರು, ಅಮಿನ್ ಮಟ್ಟು ಅವರೂ ಹಣ ಪಡೆದು ಬರೆದಿದ್ದೀರಾ ಎಂದು ಆರೋಪ ಮಾಡುವುದು ಅನ್ಯರಿಗೆ ಸುಲಭದ ಕೆಲಸ. ಮೋದಿ ರಾಷ್ಟ್ರರಾಜಕಾರಣಕ್ಕೆ ಬರುವುದಕ್ಕೂ ಮುನ್ನ( ಅಂದರೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ) ರಾಹುಲ್ ಗಾಂಧಿ ಕುಳಿತರೆ ನಿಂತರೆ, ಮಾಧ್ಯಮಗಳು ಯುವರಾಜನೆಂದೇ ಸಂಬೋಧಿಸಿ ಸಕಲ ರಾಜಮರ್ಯಾದೆಗಳನ್ನಿತ್ತು ಗೌರವಿಸಿದಾಗ ಮುಖ್ಯಮಂತ್ರಿಗಳ ಸಲಹೆಗಾರರಾದ ಅಮಿನ್ ಮಟ್ಟು ಅವರಿಗೆ ಮಾಧ್ಯಮಗಳ ಬಗ್ಗೆ ಹಣ ಪಡೆದು ಸುದ್ದಿ ಬಿತ್ತರಿಸುತ್ತಿದ್ದ ಅನುಮಾನ ಬರಲೇ ಇಲ್ಲ.

ಇರಲಿ, ಪ್ರಜಾಪ್ರಭುತ್ವದ ಅತೀವ ಕಾಳಜಿ ಹೊಂದಿದವರು ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ? ಒಂದು ವೇಳೆ ವಂಶಪರಂಪರೆಯಿಂದ ರಾಜಕಾರಣವನ್ನು ಒಪ್ಪಿಕೊಂಡಿರುವ ಜನತೆಯ ನಿರ್ಧಾರವನ್ನು ಅಮಿತ್ ಮಟ್ಟು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದೇ ಆದರೆ, ಅದೇ ಜನತೆ 2014ನೇ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಒಪ್ಪಿದ್ದಾರಲ್ಲಾ ಅದನ್ನು ಸಾರಾಸಗಟಾಗಿ ನಿರಾಕರಿಸಿ ಮಾಧ್ಯಮಗಳ ಮೇಲೇಕೆ ವೃಥಾ ಅಪವಾದ ಮಾಡುತ್ತಾರೆ? ಅಥವಾ  ವಂಶಾಡಳಿತವನ್ನು ಒಪ್ಪಿಕೊಳ್ಳುವಂತೆ ಮಾಡಿದ್ದ ಮಾಧ್ಯಮಗಳು ನಿಷ್ಠೆ ಬದಲಿಸಿ ವಂಶಾಡಳಿತದ ವಿರುದ್ಧ ಇರುವ ಮೋದಿ ಅವರ ಭಾಷಣಗಳನ್ನು ಪ್ರಸಾರ ಮಾಡುತ್ತಿದೆ ಎಂಬುದು ದಿನೇಶ್ ಅಮಿನ್ ಮಟ್ಟು ಅವರ ವಾದವೇ? ರಾಜಕೀಯ ಟೀಕೆಗಳಿಗೆ ಮಾಧ್ಯಮಗಳ ಘನತೆಯನ್ನೇಕೆ ಕುಗ್ಗಿಸುತ್ತೀರಿ? ಬಹುತೇಕ ಮಾಧ್ಯಮಗಳು, ಟಿ.ಆರ್.ಪಿ ಸರ್ಕ್ಯುಲೇಶನ್ ಗೋಸ್ಕರ ಹೇಳಿಕೆಗಳಿಗಾಗಿ ರಾಜಕೀಯ ವ್ಯಕ್ತಿಗಳನ್ನು ಪೀಡಿಸುತ್ತವೆ ಎಂಬುದು ತಿಳಿದಿದೆ. ಇನ್ನೂ ಕೆಲವೊಂದು ಮಾಧ್ಯಮಗಳು  ಸ್ಪಷ್ಟವಾಗಿ ಹೇಳಬೇಕೆಂದರೆ ದೇಶಕ್ಕೆ ಮಾರಕವಾಗಿರುವ ನಕ್ಸಲರ ಬಗ್ಗೆ ಮಾನವೀಯ ಕಾಳಜಿ ಪ್ರದರ್ಶಿಸಿದ್ದ, ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಹಣ ಮಾಡುತ್ತಿದ್ದ, ಆನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ  ತೆಹಲ್ಕಾ ದಂತಹ ಕೆಲವು ಮಾಧ್ಯಮಗಳು ಹುಟ್ಟಿಕೊಂಡಿರುವುದೇ ಹಣ ಮಾಡಲು ಎಂಬ ಆರೋಪವೂ ಇದೆ(yellow journalism) ನೀವು ಆರೋಪಿಸುವುದಾದರೆ, ಅದ್ಯಾವ ಮಾಧ್ಯಮ ಹಣ ಪಡೆದಿಯೋ ನಿರ್ದಿಷ್ಟವಾಗಿ ಉಲ್ಲೇಖಿಸಿದರೆ ಬೇರೆ ಮಾಧ್ಯಮಗಳ ಮರ್ಯಾದೆ ಉಳಿಯುತ್ತದೆ. ಇಲ್ಲದೇ ಇದ್ದರೆ ಮಾಧ್ಯಮಗಳೇ ಹೀಗೆ ಎಂಬ ಸಾರ್ವತ್ರಿಕ ಅಭಿಪ್ರಾಯ ಮೂಡುವುದಿಲ್ಲವೇ?

ಒಂದು ವೇಳೆ ನೀವು ಹೇಳುವ ಪ್ರಕಾರ ಮಾಧ್ಯಮಗಳು ಹಣ ಪಡೆದು ಸುದ್ದಿ ಬಿತ್ತರಿಸುವುದೇ ಆಗಿದ್ದರೆ, ಮೋದಿ ಹಣ ಕೊಟ್ಟ ಮರುಕ್ಷಣದಿಂದ ಮಾಧ್ಯಮಗಳೇ ಬದಲಾಗಿ ಹೋಗಬೇಕಿತ್ತು. ಹಾಗಾಯಿತೇ? ಊ ಹ್ಹು ಇಲ್ಲ. ಮೋದಿ ಪ್ರಧಾನಿಯಾಗುವವರೆಗೂ ಅವರನ್ನು ಹಣಿಯಲು ಮಾಧ್ಯಮಗಳು ಶಕ್ತಿ ಮೀರಿ ಪ್ರಯತ್ನಿಸಿದ್ದು ಜಗತ್ತಿಗೇ ಗೊತ್ತಿದೆ. ಸೋನಿಯಾ ಗಾಂಧಿ ಪ್ರಧಾನಿಯಾಗುವ ಊಹಾಪೋಹವೆದ್ದ ಸಂದರ್ಭದಲ್ಲಾಗಲೀ, ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಾಗಲಿ ಸಿಖ್ ನರಮೇಧ ನಡೆಸಿರುವುದರ ಬಗ್ಗೆ ಯಾವುದೇ ಮಾಧ್ಯಮಗಳೂ ಉಸಿರೆತ್ತಲಿಲ್ಲ. ಆದರೆ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗಿನಿಂದ ಹಿಡಿದು ಲೋಕಸಭಾ ಚುನಾವಣೆ ಫಲಿತಾಂಶ ಬರುವವರೆಗೂ ಚಾಲ್ತಿಯಲ್ಲಿದ್ದದ್ದು ಒಂದೇ ವಿಷಯ ಗುಜರಾತ್ ನರಮೇಧ. ಇಷ್ಟಾದರೂ ಮೋದಿಯಿಂದ ಹಣ ಪಡೆದು ಮಾಧ್ಯಮಗಳು ಪ್ರಚಾರ ನೀಡುತ್ತಿವೆ ಎನ್ನಲು ಹೇಗೆ ಸಾಧ್ಯ? ಒಂದು ವೇಳೆ ಸಿ.ಎಂ ಮೀಡಿಯಾ ಕಾರ್ಯದರ್ಶಿ ಹೇಳುವಂತೆ ಹಣ ನೀಡಿದ ಪಳಿಕವೂ ಮಾಧ್ಯಮ ಮೋದಿ ವಿರುದ್ಧವೇ ಮಾತನಾಡಲು ಸಾಧ್ಯವೇ? ಯೋಚಿಸಿ...

<b>ಇಷ್ಟಕ್ಕೂ ಮೋದಿ ಯಾರು</b>? ಅಮಿನ್ ಮಟ್ಟು ಅವರು ಆರೋಪ ಮಾಡಿರುವುದರಿಂದ ಇಂತಹ ಪ್ರಶ್ನೆ ಕೇಳಲೇಬೇಕಾಗಿದೆ.  ನರೇಂದ್ರ ಮೋದಿ ಯಾರು? ಮಾಧ್ಯಮಗಳು, ಭಾಷಣವನ್ನು ದಿನವಿಡೀ ಪ್ರಸಾರ ಮಾಡುವುದರಲ್ಲಿ ಅನುಮಾನ ಪಡಲು ಅಮಿನ್ ಮಟ್ಟು ಅವರು ಉಲ್ಲೇಖಿಸಿರುವ ಹೆಸರು ಯಾರೋ ಉಗ್ರ ಸಂಘಟನೆಯವರದ್ದೋ, ಅಥವಾ ಇನ್ನಾರೋ ಸಾಮಾನ್ಯನದ್ದೋ ಅಲ್ಲವಲ್ಲ. ದಿನವಿಡಿ ಪ್ರಸಾರವಾದದ್ದು  ಪ್ರಧಾನಿಯೊಬ್ಬರ ಭಾಷಣ ಅಷ್ಟೇ.

ಜನತೆ ನೀಡಿದ ಬಹುಮತದೊಂದಿಗೆ ಈ ದೇಶದ ಪ್ರಧಾನಿಯಾಗಿ  ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಧ್ವಜರೋಹಣ ನೆರವೇರಿಸಿ ಮಾತನಾಡಿದ್ದರು. ಹಲವಾರು ಕಾರಣಗಳಿಗೆ ಇದೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ಹಲವು ಮಾಧ್ಯಮಗಳು ಹಲವು ರೀತಿಯಲ್ಲಿ ಹಲವು ಸ್ವರೂಪಗಳಲ್ಲಿ ಅದನ್ನು ವರದಿ ಮಾಡಿದ್ದವು ಇದರಲ್ಲಿ ಪೇಯ್ಡ್ ನ್ಯೂಸ್ ಎಂದು ಆರೋಪಿಸಲು ಯಾವ ಅಂಶವಿದೆ? ಅಥವಾ ಪ್ರಧಾನಿ ಭಾಷಣವನ್ನು ಇಂತಿಷ್ಟೇ ಸಮಯ ಬಿತ್ತರಿಸಬೇಕೆಂಬ ನಿಯಮವೇನಾದರೂ ಇದೆಯೇ?

ಯಾವ ಕ್ಷೇತ್ರದಲ್ಲಾದರೂ ಹೊಸತೇನಾದರು ಕಂಡರೆ ಅದನ್ನು ತುಸು ಹೆಚ್ಚಾಗಿಯೇ ಬಿತ್ತರಿಸುವುದು ಮಾಧ್ಯಮಗಳ ಗುಣಧರ್ಮ, ಬೆಕ್ಕು-ನಾಯಿ ಸ್ನೇಹದಿಂದಿದ್ದರೆ ಅದನ್ನು ವಿದ್ಯುನ್ಮಾನ ಮಾಧ್ಯಮಗಳು ದಿನವಿಡೀ ಬಿತ್ತರಿಸಿ ಪ್ಯಾನಲ್ ಡಿಸ್ಕಷನ್ ನಡೆಸುವ ಕಾಲವಿದು. ಇನ್ನು ಸ್ವಾತಂತ್ರ್ಯ ದಿನಾಚರಣೆಯಂತಹ ವಿಶೇಷ ಸಂದರ್ಭದಗಳಲ್ಲಿ  ರಾಷ್ಟ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪದೇ ಪದೇ ತೋರಿಸುವುದು ಸಹಜ, ಪ್ರಧಾನಿ ಯಾರೇ ಆಗಿರಲಿ ಅವರ ಭಾಷಣದ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆ ನಡೆಸುವುದು ಟಿ.ವಿ ಮಾಧ್ಯಮಗಳ ಪದ್ಧತಿಯಾಗಿಬಿಟ್ಟಿದೆ. ನರೇಂದ್ರ ಮೋದಿ 2014 ಲೋಕಸಭಾ ಚುನಾವಣೆ ಫಲಿತಾಂಶದಲ್ಲೇ ದೇಶದ ಕೇಂದ್ರಬಿಂದುವಾಗಿದ್ದರು, ಇಂದಿರಾ ಗಾಂಧಿ ಅಂತಹ ವಂಶಪರಂಪರೆಯ ನಾಯಕಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಹುಮತದೊಂದಿಗೆ ಪ್ರಧಾನಿ ಹುದ್ದೆಗೆ  ಸಾಮಾನ್ಯನೊಬ್ಬ ಕೆಂಪು ಕೋಟೆ ಮೇಲಿಂದ ನಡೆಸುವ ಭಾಷಣ ಯಾರಿಗೇ ಆದರೂ ಕುತೂಹಲ ಮೂಡಿಸುವುದಿಲ್ಲವೇ ಹೇಳಿ ಮಾಧ್ಯಮ ಸಲಹೆಗಾರರೇ....? ಅದರಲ್ಲಿಯೂ ಪ್ರಧಾನಿ ಮೋದಿ ಅವರ ಭಾಷಣ ಪ್ರತಿಬಾರಿಗಿಂತಲೂ ವಿಭಿನ್ನವಾಗಿತ್ತು. ಗುಂಡು ನಿರೋಧಕ ಕವಚ ಬಳಸದೇ, ಬರೆದು ತಂದದ್ದನ್ನು ಓದದೇ ಭಾಷಣ ಮಾಡಿದ್ದೇ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೈಲೈಟ್ ಆಗಿತ್ತು. ಇದನ್ನೇ ಮಾಧ್ಯಮಗಳು ದಿನವಿಡಿ ಬಿತ್ತರಿಸಿ ಚರ್ಚೆ ನಡೆಸಿದ್ದವು. ತಪ್ಪೇನಿದೆ? ಕಳೆದ ಬಾರಿಯಂತೂ ಮಾಧ್ಯಮಗಳು ಮೋದಿ, ಮನಮೋಹನರ ಭಾಷಣಗಳನ್ನು ಹೋಲಿಸಿ ದಿನಗಟ್ಟಲೆ ಚರ್ಚೆ ನಡೆಸಿದ್ದವು. ಆಗ ನಿಮಗೆ ಮಾಧ್ಯಮಗಳ ಮೇಲೆ ಅನುಮಾನ ಬರಲಿಲ್ಲವೇ?

ಮಾಧ್ಯಮಗಳ ಮೇಲೆ ಗಂಭೀರ ಆರೋಪ ಮಾಡಿ ಜನರು ಪ್ರಜಾಪ್ರಭುತ್ವದ ನಾಲ್ಕನೇ ಅಂಗದಲ್ಲೂ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆ ನೀಡಿರುವ ದಿನೇಶ್ ಅಮಿನ್ ಮಟ್ಟು ಅವರು ರಾಜ್ಯ ಸರ್ಕಾರದ ಮಾಧ್ಯಮ ಸಲಹಾಗಾರನಾಗಿ ಕಾರ್ಯನಿರ್ವಹಿಸುವುದಕ್ಕೂ ಮುನ್ನ ಓರ್ವ ಪತ್ರಕರ್ತರಾಗಿದ್ದರು. ಈ ಹೇಳಿಕೆಯಿಂದ ದಿನೇಶ್ ಅಮಿನ್ ಮಟ್ಟು ಅವರ ಪ್ರಾಮಾಣಿಕತೆ ಬಗ್ಗೆಯೇ ಅನುಮಾನ ಮೂಡುವಂತಾಗಿದೆ. ಅವರೇ ನೀಡಿರುವ ಪೇಯ್ಡ್ ನ್ಯೂಸ್ ಹೇಳಿಕೆ ಪತ್ರಕರ್ತರ ಪ್ರಾಮಾಣಿಕತೆಯನ್ನೇ ಅಣಕಿಸುವಂತಿದೆ. ಮುಖ್ಯಮಂತ್ರಿಗಳ ಪತ್ರಿಕಾ ಸಲಹಗಾರರಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂತಹ ಹೇಳಿಕೆ ನೀಡಲು ಸರ್ಕಾರದಿಂದಲೋ ಅಥವಾ ಮುಖ್ಯಮಂತ್ರಿಗಳಿಂದಲೋ ನೀವು ಎಷ್ಟು ಹಣ ಪಡೆದಿದ್ದೀರಿ ಎಂದೂ ನಿಮ್ಮನ್ನು ಜನತೆ ಪ್ರಶ್ನಿಸಿದಬಹುದು. ಕಾಂಗ್ರೆಸ್ ಅಥವಾ ಇನ್ಯಾವುದೇ ನಿರ್ಧಿಷ್ಟ ಪಕ್ಷವನ್ನು ಸಮರ್ಥಿಸಿಕೊಳ್ಳಲೇಬೇಕೆಂಬ ಅನಿವಾರ್ಯತೆ ಇದ್ದರೆ, ಅಧಿಕೃತವಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಿಯೇ ಇಂತಹ ಆರೋಪ ಮಾಡಬಹುದು ಹಾಗಾದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಮೋದಿ ಟೀಕಿಸುವ ಭರದಲ್ಲಿ ಪತ್ರಕರ್ತರಾಗಿದ್ದುಕೊಂಡೇ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?