Sunday 8 March 2015

ಭೂಸ್ವಾಧೀನ ಕಾಯ್ದೆಯಲ್ಲಿರುವ ಎರಡು ಅಂಶಗಳನ್ನೇ ಪ್ರಧಾನವಾಗಿಟ್ಟುಕೊಂಡು ರೈತವಿರೋಧಿ ಎಂದು ಶರಾ ಬರೆಯಬಹುದು ಆದರೆ....

ಕಾಂಗ್ರೆಸ್ ಬಗ್ಗೆ ರೈತರಿಗಿರುವ ಅಸಹನೆಯನ್ನು ತೋರಿಸುವಂತೆ ಭೂಸ್ವಾಧೀನ: ಕಾಂಗ್ರೆಸ್ ತೋರಬೇಕಿರುವ ನಿಜ ಕಾಳಜಿ ಎಂಬ ಶೀರ್ಷಿಕೆಯಡಿ ಮಾ.4ರಂದು 'ಕನ್ನಡ ಪ್ರಭ' ಪತ್ರಿಕೆಯಲ್ಲಿ ಪತ್ರವೊಂದು ಪ್ರಕಟವಾಗಿತ್ತು. ಅದೂ ನೊಂದ ರೈತರಿಂದ. ಕೇಂದ್ರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ರೈತರಿಗಿಂತ ರಾಜಕೀಯ ಪಕ್ಷಗಳ ಮುಖಂಡರ ವಿರೋಧವೇ ಹೆಚ್ಚಾಗಿತ್ತು ಎಂಬುದು ಪ್ರಮುಖ ಆರೋಪ. ಈ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಬಗ್ಗೆಯೂ ಆ ಪತ್ರದಲ್ಲಿ ಅಸಮಾಧಾನ ಧಾರಾಳವಾಗಿ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷ, ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯದಲ್ಲಿ ಭೂಸ್ವಾಧೀನಕ್ಕೊಳಪಟ್ಟ ಜಮೀನುಗಳ ರೈತರ ಪರಿಸ್ಥಿತಿಯನ್ನು ಪಕ್ಷದ ಸಂಸದೀಯ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಿಯುವುದು ಒಳಿತು ಎಂದು ಬರೆಯಲಾಗಿತ್ತು. ಈ ಪತ್ರವನ್ನು ಓದಿದರೆ 'ಪರಿವಾರದ ವಿರೋಧವನ್ನು ಲೆಕ್ಕಿಸದೇ ಕಾಂಗ್ರೆಸ್ ದೂಷಣೆ ಏಕೆ' ಎಂಬ ಪ್ರಶ್ನೆಗೆ ಉತ್ತರ ದೊರೆತೀತು.

ಗುಜರಾತ್ ಭೂಸ್ವಾಧೀನ ಪರಿ, ಇದು ವಿಸ್ವಾಸ ಇಡಬಹುದಾದ ದಾರಿ ಲೇಖನಕ್ಕೆ ಭೂಸ್ವಾಧೀನ : ಪರಿವಾರದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ ಲೇಖನದ ಮೂಲಕ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ ತಿಪ್ಪಾರ ಅವರು ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಬಗ್ಗೆ ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸ್ಥಿತಿಯನ್ನು ಗಮನಿಸಲು ತಿಳಿಸಿದ್ದಾರೆ. ಅಲ್ಲದೇ ಸರ್ಕಾರ ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ ಆಸ್ಪತ್ರೆ ಕಟ್ಟಿಕೊಡುತ್ತೇವೆ ರಸ್ತೆ ಮಾಡುತ್ತೇವೆ ಎಂದು ಹೇಳಿದ್ದ ಭರವಸೆಗಳು ಈಡೇರಿಲ್ಲ ಎಂದೂ ಆರೋಪಿಸಿದ್ದಾರೆ. ನಿಜ ಆದರೆ ಈ ಸ್ಥಿತಿಗೆ ಕಾರಣ ಭೂಸ್ವಾಧೀನ ಕಾಯ್ದೆಯೋ ಅಥವಾ ಅದರಿಂದ ಉಂಟಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ನಮ್ಮನ್ನು ಆಳುವವರೋ ಹೇಳಿ? ಕಾಯ್ದೆಯಲ್ಲಿ ಪರಿಹಾರದ ರೂಪದಲ್ಲಿ ಸ್ವರ್ಗವನ್ನೇ ಧರೆಗಿಳಿಸಿ, ಜಮೀನುಗಳ ಪರಿಹಾರ ಮೊತ್ತವನ್ನೂ ನಿಗದಿ ಮಾಡದ ಅದೆಷ್ಟು ಪ್ರಕರಣಗಳು ನಮ್ಮ ಮುಂದಿಲ್ಲ?

ಕಾಂಗ್ರೆಸ್ ನೇತೃತ್ವದ ಸರ್ಕಾರವಾಗಲೀ ಅಥವಾ ಇನ್ನಿತರ ಸರ್ಕಾರಗಳಾಗಲಿ(65 ವರ್ಷಗಳಲ್ಲಿ ದೇಶದಲ್ಲಿ ಬಹುತೇಕ ಕಾಂಗ್ರೆಸ್ ಆಡಳಿತವೇ ಇತ್ತು) ರೂಪಿಸಿರುವ ಕಾಯ್ದೆಯಂತೆಯೇ ನಡೆದುಕೊಂಡಿವೆಯೇ? ಒಂದು ವೇಳೆ ರೈತರಿಗೆ ಹೆಚ್ಚು ನೋವುಂಟಾಗದಂತೆ ಕಾಯ್ದೆಯೊಂದನ್ನು ಜಾರಿಗೆ ತಂದ ನಂತರ ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಅದು ರೈತರ ಪರವಾಗಿರುತ್ತದೆ. ಆದರೆ  ಯೋಜನೆಗಳೆಲ್ಲಾ ಹಳತಾದರೂ, ವಶಪಡಿಸಿಕೊಂಡ ಭೂಮಿಯಲ್ಲಿ ಸ್ಥಾಪಿತವಾದ ಕೈಗಾರಿಕೆಗಳು ಹಳತಾದರೂ ಸಂತ್ರಸ್ತರ ನೋವು ಮಾತ್ರ ಹಾಗೆಯೇ ಉಳಿದರೆ ಆ ಕಾಯ್ದೆಯಿಂದಾಗುವ ಪ್ರಯೋಜನ? ರೈತರಿಗೆ ಬೇಕಾಗಿರುವುದು ಏನು? ತಮ್ಮ ಭೂಮಿ ವಶಪಡಿಸಿಕೊಂಡರೆ ಅದಕ್ಕೆ ತಕ್ಕ ಪರಿಹಾರವೇ ಅಲ್ಲವೇ? ಈ ಹಿಂದಿನ ಭೂಸ್ವಾಧೀನ ಕಾಯ್ದೆಯಿಂದ ಯೋಜನೆಗಳು ವಿಳಂಬವಾಗುತ್ತಿತ್ತು.  ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ ನಂತರವೂ ಅದೆಷ್ಟೋ ವರ್ಷಗಳು ಜಮೀನುಗಳ ಪರಿಹಾರ ಮೊತ್ತವನ್ನೂ ನಿಗದಿಪಡಿಸಲು ಸಾಧ್ಯವಾಗುತ್ತಿರಲಿಲ್ಲ.   ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವುದರಿಂದ ಯೋಜನೆಗಳು ಶೀಘ್ರವೇ ಪ್ರಾರಂಭವಾಗುತ್ತವೆ.  ಭೂಮಿ ನೀಡುವ ರೈತರಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತ್ಯಂತ ಶೀಘ್ರದಲ್ಲೇ ಪರಿಹಾರ ನೀಡುವುದೂ ಸುಲಭವಾಗುತ್ತದೆ. ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಆದೆಷ್ಟೋ ವರ್ಷಗಳವರೆಗೆ ಪರಿಹಾರ ಮೊತ್ತ ನಿಗದಿ ಮಾಡದೇ ರೈತರನ್ನು ಸಂತ್ರಸ್ತರಾಗಿಯೇ ಉಳಿಸುವುದು ಸೂಕ್ತವೋ ಇಲ್ಲ ಶೀಘ್ರದಲ್ಲೇ ಪರಿಹಾರ ನೀಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸೂಕ್ತವೋ? ಈ ದೃಷ್ಟಿಯಿಂದಲೇ ರೈತರಿಗೆ ಪರಿಹಾರ ನೀಡುವ ವಿಷಯದಲ್ಲಿ ಗುಜರಾತ್ ನ್ನು ಮಾದರಿ ಎಂದು ಪರಿಗಣಿಸಬಹುದು. ಅಂದ ಹಾಗೆ ಭೂಮಿವಶಪಡಿಸಿಕೊಂಡ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡದೇ ಇರುವುದಕ್ಕಾಗಿಯೇ ಸುಪ್ರೀಂ ಕೋರ್ಟ್ ಗುಜರಾತ್ ನಿಂದ ಪರಿಹಾರ ನೀಡುವುದನ್ನು ಕಲಿಯಿರಿ ಎಂದು ಹೇಳಿರುವುದು. ಇನ್ನು ಭೂ ಸ್ವಾಧೀನ ಕಾಯ್ದೆಯನ್ನು ಕೃಷಿ ಕ್ಷೇತ್ರಕ್ಕೇ ಕಂಟಕ ಎಂದು ದಾರಿ ತಪ್ಪಿಸಲಾಗುತ್ತಿದೆ. ಆದರೆ ಆ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕಾರಿಯಾಗಿರುವ  ಚೆಕ್ ಡ್ಯಾಂ, ವಿದ್ಯುತ್ ಸೌಲಭ್ಯ ಹಾಗೂ ಇನ್ನಿತರ ಯೋಜನೆಗಳಿಗಾದರೂ ಭೂಮಿ ಬೇಡವೇ? ಇಂದಿಗೂ ಚೆಕ್ ಡ್ಯಾಂ, ವಿದ್ಯುತ್ ಇಲ್ಲದೇ ಅದೆಷ್ಟೋ ರೈತರೋ ಭೂಮಿ ಇದ್ದರೂ ಬೆಳೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ವಶಪಡಿಸಿಕೊಂಡಿರುವ ಭೂಮಿಯಲ್ಲಿ ಚೆಕ್ ಡ್ಯಾಂ, ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲು ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವುದರಿಂದ, ಅದೆಷ್ಟೋ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಉತ್ಪಾದಿಸಲು ಸಾಧ್ಯವಾಗುತ್ತದೆ ಅಲ್ಲವೇ? ಕೊನೆಗೆ ಕೃಷಿ ಉತ್ಪನ್ನಗಳ ಟ್ರ್ಯಾನ್ಸ್ ಪೋರ್ಟ್ ವ್ಯವಸ್ಥೆಗೆ ಗೂಡ್ಸ್ ರೈಲು ಬೇಕೆಂದರೂ ರೈಲು ಹಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವುದು ಅತ್ಯಗತ್ಯ ಹಾಗಾದರೆ ಭೂಸ್ವಾಧೀನ ಕಾಯ್ದೆ ಹೇಗೆ ರೈತವಿರೋಧಿಯಾಗುತ್ತದೆ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ವಿಷಯದಲ್ಲಿ ಗುಜರಾತ್ ಬಗ್ಗೆಯೂ ಪ್ರತಾಪಿಸಲಾಗಿತ್ತು. ಏಕೆಂದರೆ ಶೇ.9.6ರಷ್ಟು ಕೃಷಿ ಜಿಡಿಪಿ ಬಗ್ಗೆ ಎಲ್ಲರೂ ಬೆರಗಿನಿಂದ ನೋಡುತ್ತೇವೆ. ಕಚ್ ನಂತಹ ಪ್ರದೇಶದಲ್ಲೂ ಅತ್ಯಧಿಕ ಕೃಷಿ ಉತ್ಪಾದನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿಕೊಂಡಿದ್ದಿದೆ. ಅಲ್ಲಿನ ಕೃಷಿ ಅಷ್ಟು ಪ್ರಸಿದ್ಧಿಯಾಗುವುದಕ್ಕೆ ಕೀ ಫ್ಯಾಕ್ಟರ್ ಗಳೇನು ಗೊತ್ತೆ? ಕೃಷಿ ಕ್ಷೇತ್ರಕ್ಕೆ 8  ಗಂಟೆಗಳ ಕಾಲ ನಿರಂತರವಾದ ಅತ್ಯುನ್ನತ ಗುಣಮಟ್ಟದ  ವಿದ್ಯುತ್ ಪೂರೈಕೆ, ಕಡಿಮೆ ನೀರಿರುವ, ಗುಜರಾತ್ ನ ಪ್ರದೇಶಗಳಿಗೆ ಅತಿ ಹೆಚ್ಚು ನೀರಿರುವ ಪ್ರದೇಶಗಳಿಂದ ನೀರು ಪೂರೈಕೆ, ಚೆಕ್ ಡ್ಯಾಂ ನಿರ್ಮಾಣ ಹಾಗೂ ರೂರಲ್ ಇನ್ಫ್ರಾಸ್ಟ್ರಕ್ಚರ್ ನ್ನು ಅಭಿವೃದ್ಧಿಗೊಳಿಸುವುದು. ಇವೆಲ್ಲವೂ ರೈತರಿಂದ ಒಂದಿಚೂ ಭೂಮಿ ವಶಪಡಿಸಿಕೊಳ್ಳದೇ ಸಾಧ್ಯವಾಗುವುದಾದರೂ ಹೇಗೆ?, ಹಾಗೆಯೇ ರೈತರಿಂದ ಭೂಮಿ ವಶಪಡಿಸಿಕೊಂಡಾದ ನಂತರವೂ ರೈತರಿಗೆ ತೊಂದರೆಯಾಗದೇ ಕೃಷಿ ಕ್ಷೇತ್ರ ದೇಶದ ಇತರ ಭಾಗಗಳಿಗಿಂತಲೂ ಅಭಿವೃದ್ಧಿಯಾಗಿದೆಯಲ್ಲಾ ಇದಕ್ಕೆ ಏನು ಹೇಳುತ್ತೀರಿ?

ಶೇ.70ರಷ್ಟು ಒಪ್ಪುಗೆ ಹಾಗೂ ಸಾಮಾಜಿಕ ಪರಿಣಾಮದ ಅಂದಾಜು ತೆಗೆದುಹಾಕಿರುವ ಬಗ್ಗೆ ಮಾತನಾಡಿದ್ದೀರಿ, ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ , ರೈತರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಾದರೆ ರಿಯಲ್ ಎಸ್ಟೇಟ್ ಧಂಧೆಯಲ್ಲಿ ತೊಡಗಿರುವವರು ಹೇಗೆ ಲಾಭ ಮಾಡಿಕೊಂಡರು ನೆನಪಿಸಿಕೊಳ್ಳಿ? ರೈತರ ಭೂಮಿಯನ್ನು ಮೊದಲೇ ಖರೀದಿ ಮಾಡಿ 70 ಒಪ್ಪುಗೆ ಹಾಗೂ ಎಸ್.ಐ.ಎ ಹೆಸರಿನಲ್ಲಿ ವಿಳಂಬ ಮಾಡಿ, ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿಕೊಂಡರು. ಅಂದು ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಅದೆಷ್ಟೋ ರೈತರ ಮಕ್ಕಳು ಅತ್ತ ಪರಿಹಾರವೂ ಇಲ್ಲ, ಇತ್ತ ಭೂಮಿಯೂ ಇಲ್ಲ. ಇಂದು ರೈತವಿರೋಧಿ ಅಂಶಗಳ ಬಗ್ಗೆ ಮಾತನಾಡುವವರಿಗೆ ರೈತರಿಗೆ ಇದರಿಂದ ಉಂಟಾಗುವ ಅನ್ಯಾಯದ ಬಗ್ಗೆ ಅರಿವಾಗುವುದಿಲ್ಲವೇ?.

ಅದಿರಲಿ, ಪ್ರಧಾನಿ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಭೂಸ್ವಾಧೀನ ಕಾಯ್ದೆ ಮಸೂದೆಯ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ಗೆ ಹಲವು ದಶಕಗಳಷ್ಟು ಹಳೆಯದಾದ ಕಾಯ್ದೆಯನ್ನು ಬದಲಾಯಿಸಲು 2013ರಲ್ಲಿ ಜ್ನಾನೋದಯವಾಯಿತಾ ಎಂದು ಪ್ರಶ್ನಿಸಿದ್ದರು. 6 ದಶಕಗಳಲ್ಲಿ ಬಹುತೇಕ ಅವಧಿಯಲ್ಲಿ ಕಾಂಗ್ರೆಸ್ಸೇ ಆಡಳಿತ ನಡೆಸಿದ್ದರೂ ರೈತರಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಅದಕ್ಕೆ ಜ್ನಾನೋದಯವಾಗಿದ್ದು 2013ರಲ್ಲೇ ಏಕೆ?  2012ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದ ವಿ. ಹನುಮಂತ ರಾವ್ ಕಾಂಗ್ರೆಸ್ ನ ಸ್ಪೆಷಲ್ ಎಕೆನಾಮಿಕ್ ಜೋನ್ ದುರುಪಯೋಗವಾಗಿರುವ ಬಗ್ಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಆಂಧ್ರಪ್ರದೇಶದಲ್ಲಿ 110 ಸ್ಪೆಷಲ್ ಎಕೆನಾಮಿಕ್ ಜೋನ್ ಗಳ ಪೈಕಿ ಕಾರ್ಯನಿರ್ವಹಿಸುತ್ತಿದ್ದದ್ದು ಕೇವಲ 36 ಎಸ್.ಇ.ಝೆಡ್ ಗಳು ಮಾತ್ರ. 2006-11ರಲ್ಲಿ ಕಾಂಗ್ರೆಸ್ ಸರ್ಕಾರ, ರೈತರಿಂದ ವಶಪಡಿಸಿಕೊಂಡ 88492 ಎಕರೆ ಕೃಷಿ ಭೂಮಿಯನ್ನು ಖಾಸಗೀ ಕಂಪನಿಗಳಿಗೆ ನೀಡಿತ್ತು. ಸಿ.ಎ.ಜಿ ವರದಿ ಪ್ರಕಾರ ಅಲ್ಲಿನ ಶೇ.80ರಷ್ಟು ಭೂಮಿ ಯಾವುದೇ ಚಟುವಟಿಕೆಗೂ  ಉಪಯೋಗವಾಗಿರಲಿಲ್ಲ. ಹಾಗಾದರೆ ಅದಷ್ಟೂ ಭೂಮಿಯ ಕಥೆ ಏನಾಯಿತು? ಇದರಿಂದಾಗಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಅಭಿವೃದ್ಧಿಯೂ ಸಾಧ್ಯವಾಗಲಿಲ್ಲ, ರೈತರೂ ಭೂಮಿಯನ್ನು ಕಳೆದುಕೊಂಡರು, ಮಧ್ಯದಲ್ಲಿ ಯಾರೋ ರಿಯಲ್ ಎಸ್ಟೇಟ್ ನವರು ಉದ್ಧಾರವಾಗಿದ್ದಾರೆ ಎಂದು ಆರೋಪಿಸಿದ್ದರು. ಈಗ ಹೇಳಿ, ಶೇ.70ರಷ್ಟು ರೈತರಿಂದಲೇ ಒಪ್ಪಿಗೆ ಪಡೆದು, ಸಾಮಾಜಿಕ ಪರಿಣಾಮ ಅಂದಾಜು ಮಾಡಿಯೂ  ಈ ದುಸ್ಥಿತಿ ಎದುರಾಗುವುದಾದರೆ ಅದಕ್ಕೆ ಕಾರಣ ಕಾಯ್ದೆಯದ್ದೋ ಅಥವಾ ಆಡಳಿತ ನಡೆಸುತ್ತಿದವರ ಬದ್ಧತೆಯದ್ದೋ? ಪ್ರಧಾನಿ ನರೇಂದ್ರ ಮೋದಿ ಟ್ರ್ಯಾಕ್ ರೆಕಾರ್ಡ್ ಗಮನಿಸಿ, ಅವರು ಕೈಗಾರಿಕೋದ್ಯಮಿಗಳಿಗೆ ಕೃಷಿ ಭೂಮಿ ನೀಡಿದ್ದಾರೆ ನಿಜ, ಆದರೆ ಸಾವಿರಗಟ್ಟಲೆ ಭೂಮಿಯನ್ನು ನೀಡಿದ ನಂತರವೂ ಅಲ್ಲಿ ಭೂಮಿ ನೀಡಿದ್ದರ ಉದ್ದೇಶ ಸಫಲವಾಗಿದೆಯೋ ಇಲ್ಲವೋ ಎಂಬುದನ್ನೂ ಪರಿಶೀಲಿಸದೇ, ರೈತರಿಗೆ ಮೋಸ ಮಾಡಿ ರಿಯಲ್ ಎಸ್ಟೇಟ್ ನಲ್ಲಿರುವವರು ಉದ್ಧಾರವಾಗುವುದಕ್ಕೆ ಅವಕಾಶ ನೀಡಿರುವ ಉದಾಹರಣೆಗಳಿಲ್ಲ. ರೈತರಿಂದ ಎಗ್ಗಿಲ್ಲದೇ ಭೂಮಿ ಪಡೆದು ಕೊನೆಗೆ ಅದನ್ನು ಯಾವುದಕ್ಕೂ ಉಪಯೋಗಿಸದೇ ವ್ಯರ್ಥ ಮಾಡಿರುವ ಆರೋಪಗಳೂ ಕಾಂಗ್ರೆಸ್ ಗೆ ಹೋಲಿಸಿದರೆ ಕಡಿಮೆ. ಆದರೂ ರೈತರ ನರಹಂಕನಂತೇನಾದರೂ ಕಾಣುತ್ತಾರೋ ಏನೋ?

ಅಂದಹಾಗೆ ಎನ್.ಡಿ.ಎ ಸರ್ಕಾರದ ಕಾಯ್ದೆಗೆ ಬಿಜೆಪಿಯ ಮಾತೃ ಸಂಸ್ಥೆ ಆರ್.ಎಸ್.ಎಸ್ ನ ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿತ್ತು ಎಂದು ಬರೆದಿದ್ದಾರೆ. ಆದರೆ ಯುಪಿಎ ಸರ್ಕಾರದ ರೈತಪರ ಕಾಯ್ದೆ ಸರಿಯಿಲ್ಲ. ಇದಕ್ಕೆ ತಿದ್ದುಪಡಿ ಮಾಡಲೇಬೇಕೆಂದು ಯುಪಿಎ ಸಚಿವರೇ ಆದ ಆನಂದ್ ಶರ್ಮಾ, ಜೈರಾಮ್ ರಮೇಶ್, ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಯಾಗಿದ್ದ  ಪೃಥ್ವಿ ರಾಜ್ ಚೌವ್ಹಾಣ್, ಹರ್ಯಾಣದ ಅಂದಿನ ಸಿ.ಎಂ ಭೂಪೇಂದರ್ ಸಿಂಗ್ ಹೂಡಾ ಹಾಗೂ ನಮ್ಮ ಕರ್ನಾಟಕ ಸರ್ಕಾರವೂ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಅದೇಕೆ ಉಲ್ಲೇಖಿಸಿಲ್ಲ? ಕಾಯ್ದೆಯಲ್ಲಿರುವ ಕೂಡಾ ಈ ಸೋ ಕಾಲ್ಡ್ ಶೇ.70ರಷ್ಟು ಹಾಗೂ ಸಾಮಾಜಿಕ ಪರಿಣಾಮದ ಅಂದಾಜು ತೆಗೆದುಹಾಕಲು ಇವರೆಲ್ಲರ ಸಮ್ಮತಿ ಇತ್ತಲ್ಲಾ ಅದಕ್ಕೇನು ಹೇಳುತ್ತೀರಾ? ತಾವೇ ರೂಪಿಸಿದ್ದ ಕಾಯ್ದೆಯಲ್ಲಿರುವ ಅಂಶಗಳನ್ನು ತಮ್ಮ ಪಕ್ಷದಲ್ಲಿದ್ದವರೇ ವಿರೋಧಿಸಿದ್ದರು. ಮುಂದಿನ ಸರ್ಕಾರ ಬಂದಾಗ ತಮ್ಮ ಪಕ್ಷದವರೇ ತೆಗೆಯಿರಿ ಎಂದಿದ್ದ ಅಂಶಗಳನ್ನು ತೆಗೆದರೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೇಲ್ಲಾ ಆದರೂ ಕಾಂಗ್ರೆಸ್ ನ್ನು ದೂಷಣೆ ಮಾಡದೇ ಮತ್ತೇನು ಮಾಡಬೇಕು?

ಭೂಸ್ವಾಧೀನ ಕಾಯ್ದೆಯಲ್ಲಿ ರೈತರ ಒಪ್ಪಿಗೆ  ಸಾಮಾಜಿಕ ಪರಿಣಾಮ ಅಂದಾಜು ಕೈಬಿಡಲಾಗಿದ್ದು  ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸುವವರು, ಆಳುತ್ತಿರುವ ನಾಯಕರ ಹಿಂದಿನ ಟ್ರ್ಯಾಕ್ ರೆಕಾರ್ಡ್, ಅಥವಾ ರೈತರ ಬಗೆಗಿನ ಬದ್ಧತೆಯನ್ನೇಕೆ ಪರಿಗಣಿಸುತ್ತಿಲ್ಲ. ಕಾಯ್ದೆಯಲ್ಲಿರುವ ಷೆಡ್ಯೂಲ್ ಗಳು ರೈತರ ಅನುಮತಿ ಬೇಕಿಲ್ಲ ಎಂದ ಮಾತ್ರಕ್ಕೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಶರಾ ಬರೆದು ಸಂಪೂರ್ಣ ಕಾಯ್ದೆಯನ್ನೇ ರೈತವಿರೋಧಿ ಎಂದು ಹೇಳುವುದು ಎಷ್ಟು ಸರಿ? ಇಷ್ಟೆಲ್ಲಾ ಆದರೂ ಒಂದು ವೇಳೆ ಕಾಯ್ದೆಯಲ್ಲಿ ರೈತವಿರೋಧಿ ಅಂಶಗಳಿದ್ದರೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದರೆ, ಅದರ ವಿರುದ್ಧ ಸಿಡಿದೇಳುವುದು ಖಂಡಿತವಾಗಿಯೂ ತಪ್ಪಲ್ಲ, ಆದರೆ ವಾಸ್ತವ ಹಾಗಿಲ್ಲದಿದ್ದರೂ ಸಿಡಿದೇಳುವುದು ಎಷ್ಟು ಸರಿ?  

Monday 2 March 2015

ಗುಜರಾತ್ ಭೂ ಸ್ವಾಧೀನದ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ

ಯುಪಿಎ ಸರ್ಕಾರದ 10 ವರ್ಷಗಳ ಅನಿರ್ಬಂಧಿತ ಆಡಳಿತದಲ್ಲಿ ದೇಶದ ಕೃಷಿ ಬೆಳವಣಿಗೆ( agricultural GDP) ಇದ್ದದ್ದು ಶೇ.3.6%ರಷ್ಟು. ಅತಿ ಹೆಚ್ಚು ಉತ್ಪಾದಿಸುತ್ತಿದ್ದ ರಾಜ್ಯಗಳಿದ್ದದ್ದು ಬಿಜೆಪಿ ಆಡಳಿತದಲ್ಲಿದ್ದರೆ, ಅತಿ ಕಡಿಮೆ ಜಿಡಿಪಿ ದಾಖಲಾಗಿದ್ದು ಮಾತ್ರ ಈಗ ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಬೊಬ್ಬೆ ಹೊಡೆದು, ರೈತ ಪರರೆಂಬ ಪೋಸು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಒಳಪಟ್ಟಿದ್ದ ರಾಜ್ಯಗಳಲ್ಲಿ.

ಸ್ವಘೋಷಿತ ರೈತಪರರ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಕೃಷಿಯ ಅಭಿವೃದ್ಧಿ ಮೇಲೋತ್ಪಾಟನೆಯಾಗುತ್ತಿದ್ದರೆ, ಇಂದು ರೈತ ವಿರೋಧಿ ಭೂಸ್ವಾಧೀನ ಮಸೂದೆ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್, ಕಳೆದ ಒಂದು ದಶಕದಿಂದ ಶೇ.9ರಷ್ಟು ಕೃಷಿ ಉತ್ಪಾದನಾ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಕಚ್ ನಂತಹ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಅತ್ಯಧಿಕ ಉತ್ಪಾದನೆಯಾಗುತ್ತಿದೆ. ಮೋದಿ ರೈತ ವಿರೋಧಿಯಾಗಿದ್ದರೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚುವುದರ ಬದಲು ಕಾಂಗ್ರೆಸ್ ರಾಜ್ಯಗಳಂತೆಯೇ ಮೇಲೋತ್ಪಾಟನೆಯಾಗಬೇಕಿತ್ತು. ಹಾಗಾಗಲಿಲ್ಲ ಅಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ವಸ್ತುನಿಷ್ಠವಾದ ಪರಿಹಾರ ನೀಡಲಾಗುತ್ತಿತ್ತು. ಕೃಷಿಗೆ ಹಾನಿಯಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಏಕೆಂದರೆ ಸರ್ಕಾರ ರೈತರ ಪರವಾಗಿದೆ, ಅನಿಲ್ ಅಂಬಾನಿ, ಅದಾನಿ ವಿರುದ್ಧವಾಗಿದೆ ಎಂದು ತೋರಿಸಿಕೊಳ್ಳಲು ವೈಜ್ನಾನಿಕವಾಗಿ ಪರಿಹಾರ ನೀಡದೇ, ಎಲ್ಲವನ್ನೂ ಈಡೇರಿಸಲಾಗದ ವಾಗ್ದಾನದ ಮೂಲಕವೇ ಕೊಳ್ಳೆ ಹೊಡೆಯುವ ಮನಸ್ಥಿತಿ ಮೋದಿಗೆ ಇಲ್ಲ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ರೈತ ವಿರೋಧಿ ಅಂಶಗಳಿವೆ, ಕೃಷಿ ಕ್ಷೇತ್ರಕ್ಕೆ ಹಾನಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿಗರು, ಕೈಗೆ ಸಿಕ್ಕ ಭೂಮಿಗಳನೆಲ್ಲಾ ಸ್ಪೆಷಲ್ ಎಕೆನಾಮಿಕ್ ಜೋನ್ ಗಳಿಗಾಗಿ ನೀಡಿ ಕೃಷಿಭೂಮಿಗಳನ್ನು ನಿರ್ನಾಮ ಮಾಡಿದ್ದನ್ನು ಬಿಟ್ಟರೆ, ಕೃಷಿ ಜಿಡಿಪಿಯನ್ನು ಏರಿಕೆ ಮಾಡುವ ಒಂದಾದರೂ ಕ್ರಮ ಕೈಗೊಂಡಿದ್ದಾರಾ? ಅದಿರಲಿ 'Land Act a fraud, learn from Gujarat' (http://archive.indianexpress.com/news/land-act-a-fraud-learn-from-gujarat-says-sc/827449/) ಈ ಮಾತನ್ನು ಕೇಳಿದ್ದೀರಾ? ಇದು ಯಾರೋ ಬಿಜೆಪಿ ಸಂಸದನೋ, ಶಾಸಕನೋ, ಸಚಿವನೋ ಹೇಳಿದ ಮಾತಲ್ಲ. ಯುಪಿಎ ಸರ್ಕಾರವಿದ್ದಾಗ ಉತ್ತರ ಪ್ರದೇಶದಲ್ಲಿ ಲೆದರ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಗಾಗಿ 82 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದ ದಾಖಲಾರ್ಹ ಅಂಶ.

ಇಷ್ಟಕ್ಕೂ ಗುಜರಾತ್ ನಿಂದಲೇ ಏಕೆ ಕಲಿಯಬೇಕು ಎಂದರೆ, ಕೇಂದ್ರದಲ್ಲಿ 1894ರ ಭೂಸ್ವಾಧೀನ ಕಾಯ್ದೆ ಜಾರಿಯಲ್ಲಿರುವಾಗಲೇ ಗುಜರಾತ್ ನಲ್ಲಿ 2011ರ ವೇಳೆಗೆ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ತರಲಾಗಿತ್ತು. ಆಗ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದದ್ದು, ಇಂದಿನ ಪ್ರಧಾನಿ ನರೇಂದ್ರ ಮೋದಿ. ಇಷ್ಟೇ ಅಲ್ಲ ಅರ್ಜೆನ್ಸಿ ಪರ್ಪಸ್ (ತ್ವರಿತ ಉದ್ದೇಶಕ್ಕಾಗಿ) ಶೇ.70 ರೈತರ ಅನುಮತಿ ಇಲ್ಲದೇ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರವನ್ನು ನೀಡುವ ಗುಜರಾತ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ನ ನ್ಯಾ.ಹೆಚ್.ಎಲ್ ದತ್ತು ಅವರಿದ್ದ ಪೀಠ, "forcible acquisition" using an emergency clause under the Act had almost become a norm to Gujarat. "But there is one state from where we do not receive any such complaints. Look at Ahmedabad which is developing but there are no complaints from that place. ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರಿಗೆ ಪರಿಹಾರ ನೀಡುವ ಸಂಬಂಧ ಗುಜರಾತ್ ನಿಂದ ದೇಶದ ಇತರ ಭಾಗದ ಅಧಿಕಾರಿಗಳು ತರಬೇತಿ ಪಡೆಯುವುದು ಸೂಕ್ತ ಎಂದೂ ಸಲಹೆ ನೀಡಿತ್ತು.
ಇಂದಿನ ಕೇಂದ್ರ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಒಪ್ಪಿಗೆ ಇಲ್ಲದೇ ಅರ್ಜೆನ್ಸಿ ಪರ್ಪಸ್ ಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬಹುದೆಂದು ವಿಧಿಸಿರುವ ಷರತ್ತನ್ನು 2011ರಲ್ಲೇ ಗುಜರಾತ್ ಸರ್ಕಾರ ಮಾಡಿ ತೋರಿಸಿತ್ತು. ಹಾಗಾದರೂ ಅಲ್ಲಿ ಯಾವುದೇ ರೈತರು ದಂಗೆ ಏಳಲಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ಒಬ್ಬನೇ ಒಬ್ಬ ರೈತ ಕೂಟ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೆಟ್ಟಿಲು ಹತ್ತಲಿಲ್ಲ. ಯಾವ ಕೋರ್ಟೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸರ್ಕಾರಕ್ಕೆ, ರಾಜ್ಯದ ಅಭಿವೃದ್ಧಿಗೆ ಭೂಮಿ ನೀಡಿದ್ದ ರೈತರಿಗೆ ಅನ್ಯಾಯವಾಗಲು ಮೋದಿ ಬಿಡಲಿಲ್ಲ. ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಆ ಕ್ಷೇತ್ರಕ್ಕೆ ಕೈಗಾರಿಕೆಗಳಷ್ಟೇ ಆದ್ಯತೆ ನೀಡುವುದನ್ನೂ ಮರೆಯಲಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ರೈತರಿಗೆ ಅನ್ಯಾಯವಾಗುವುದಕ್ಕೆ ಅವಕಾಶ ನೀಡದ ಮೋದಿ, ಇನ್ನು ಒಬ್ಬ ಪ್ರಧಾನಿಯಾಗಿದ್ದುಕೊಂಡು ಸಮಸ್ತ ದೇಶದ ರೈತರ ಹಿತಾಸಕ್ತಿಯನ್ನು ಬಲಿ ಕೊಡುವ ಸಾಧ್ಯತೆಗಳಿವೆಯೇ ಎಂಬುದು ಯೋಚಿಸಬೇಕಾದ ಸಂಗತಿ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ಯುಪಿಎ ಸರ್ಕಾರದ ಭೂಸ್ವಾಧೀನ ಕಾಯ್ದೆಯಲ್ಲಿ ಶೇ.70ರಷ್ಟು ರೈತರ ಒಪ್ಪುಗೆ, ಹಾಗೂ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್ ನ್ನೇ ಕೈಬಿಟ್ಟಿರುವುದು ಭ್ರಷ್ಟಾಚಾರವನ್ನು. ರಿಯಲ್ ಎಸ್ಟೇಟ್ ಧಂಧೆಯಲ್ಲಿ ತೊಡಗಿರುವವರಿಗೆ ಹಣ ಮಾಡಲು ಅವಕಾಶವೇ ಇರುವುದಿಲ್ಲ ಎಂಬುದು ಅರಿವಾಗಿದ್ದರೂ, ಕಾಯ್ದೆಯನ್ನು ವಿರೋಧಿಸಲು ಭ್ರಷ್ಟಾಚಾರ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಹಿ ಸತ್ಯ, ವ್ಯಥೆ ಕಾಂಗ್ರೆಸ್ ನ್ನು ಕಾಡುತ್ತಿರಬಹುದು. ಅಥವಾ ಎಲ್ಲವೂ ನೇರಾನೇರವಾಗಿದ್ದರೆ ದೇಶದ ಜನತೆಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ ತಾನು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ ಎಂಬ ಕೊರತೆ ಕಾಡುತ್ತಿರಬಹುದು. ಎಷ್ಟೇ ಆದರೂ ಸುಳ್ಳು ಹೇಳಿ ಜನರನ್ನು ನಂಬಿಸುವುದು, ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿ ಮಂಗನನ್ನಾಗಿ ಮಾಡುವುದೇ ಕಾಂಗ್ರೆಸ್ ನ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಿದ್ಧಾಂತ ಅಲ್ಲವೇ?

ಕಾಂಗ್ರೆಸ್ ಗೆ ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಲು ಮತ್ತೂ ಒಂದು ಕಾರಣವಿದೆ. ಏನೆಂದರೆ, ನರೇಂದ್ರ ಮೋದಿ ಮಾದರಿಯಲ್ಲಿ, ಕೃಷಿ ಹಾಗೂ ಕೈಗಾರಿಕೆ ಎರಡಕ್ಕೂ ಸಮಾನ ಆದ್ಯತೆ ನೀಡಿ, ಎರಡೂ ಕ್ಷೇತ್ರಗಳ ಅಭಿವೃದ್ಧಿ ಮೂಲಕ balancing ಮಾಡುವ ದೂರದೃಷ್ಟಿ ಇಲ್ಲ ಅನಿಸುತ್ತದೆ. ಇದ್ದಿದ್ದರೆ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಖಂಡಿತ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಕಾಂಗ್ರೆಸ್ ಗೆ ಬೇಕಿರುವುದು ದೇಶದ ಅಭಿವೃದ್ಧಿಯಲ್ಲ, ಬದಲಾಗಿ ಅದಕ್ಕೆ ಬೇಕಿರುವುದು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುವುದು, ರೈತರ ಹೆಸರಿನಲ್ಲಿ ಕಣ್ಣೀರು ಹಾಕಿ ಒಳ್ಳೆಯ ಕೆಲಸಗಳಿಗೆ ವಿರೋಧವೊಡ್ಡುವುದು, ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಅಭಿವೃದ್ಧಿ ಪಥದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಅದೆಷ್ಟೇ ನಿದರ್ಶನಗಳಿದ್ದರೂ ಅದನ್ನು ನಿರಾಕರಿಸಿ, ತರ್ಕಬದ್ಧವಾಗಿ ವಾದಿಸದೇ, ತಲೆಗೆ ತೋಚಿದನ್ನೇ ಹರಟುತ್ತಾ ದೇಶದ ಜನರನ್ನು ದಾರಿ ತಪ್ಪಿಸಿ ಮೂರ್ಖರನ್ನಾಗಿಸುವುದು ಮಾತ್ರ. ಮೋದಿ ಸರ್ಕಾರದ ವಿಚಾರವಾಗಿ ಯಾವುದೇ ಕೋರ್ಟುಗಳು ಏನನ್ನೇ ಹೇಳಲಿ, ಎಸ್.ಐ.ಟಿ ಏನೇ ತೀರ್ಪು ನೀಡಲಿ, ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿಗಾಗಿ ಯಾರು ಏನೇ ಹೇಳಲಿ ಕಾಂಗ್ರೆಸ್ ನದ್ದು ಇರುವುದು ಒಂದೇ ನಿರಾಕರಣೆ.

ಕಾಂಗ್ರೆಸ್ ಗೆ ವಾದಿಸಲು ಉಳಿದಿರುವುದು ಎರಡೇ ವಿಷಯ, ಗುಜರಾತ್ ನಲ್ಲಿ ಈಗಾಗಲೇ ಅನುಸರಿಸುತ್ತಿರುವ ಮೋದಿಯ ಕಾಯ್ದೆಯ ಪರಿಣಾಮ ರೈತರೂ ಇಲ್ಲ, ಕೃಷಿ ಚಟುವಟಿಕೆಯೂ ನಡೆಯುತ್ತಿಲ್ಲ. ಇಲ್ಲವೇ ಅಲ್ಲಿನ ಸರ್ಕಾರ ಯುಪಿಎ ಸರ್ಕಾರದ 2013ರ ಕಾಯ್ದೆಗಿಂತಲೂ ಮುಂಚೆ ಅನುಸರಿಸುತ್ತಿದ್ದ ಭೂಸ್ವಾಧೀನಾ ಕಾಯ್ದೆ ಸರಿಯಾಗಿದ್ದು ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂಬುದು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಅನುಸರಿಸುತಿದ್ದ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಈಗ್ಗೆ 4 ವರ್ಷಗಳ ಹಿಂದೆ (2011ರಲ್ಲೇ) ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಗೆ ಮೆಚ್ಚುಗೆಯಾಗಿರುವ ಸಂಗತಿ ದೇಶದ್ಯಂತ ಜಾರಿಗೆ ಬಂದರೆ ತಪ್ಪೇನು, ಸರ್ವೋಚ್ಛ ನ್ಯಾಯಾಲಯಕ್ಕೂ ಸಮ್ಮತವಾಗಿರುವುದು ಕಾಂಗ್ರೆಸ್ ಗೆ ಸಮ್ಮತವಾಗುವುದಿಲ್ಲ ಎಂದರೆ ಸಮಸ್ಯೆ ಇರುವುದು ಕಾಂಗ್ರೆಸ್ಸಿನಲ್ಲೋ ಅಥವಾ ಕಾಯ್ದೆ ಮಾಡಿರುವ ಮೋದಿ ಸರ್ಕಾರದಲ್ಲೋ?