Friday 30 January 2015

ಶೃಂಗೇರಿ ಶಿವಗಂಗಾ ಪೀಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳವರ ಆರಾಧನಾ ಮಹೋತ್ಸವ




ಬೆಂಗಳೂರಿನಿಂದ ಸುಮಾರು 54 ಕಿಮಿ ದೂರದಲ್ಲಿ ಬೃಹದಾಕಾರದ ಬೆಟ್ಟದಿಂದ ಸುತ್ತುವರೆದ ಪ್ರದೇಶ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು ಶಿವನ ಸಾನ್ನಿಧ್ಯದಲ್ಲಿ ಅಗಸ್ತ್ಯರು ಸ್ಥಾಪಿಸಿದ ಗಂಗೆ ಇರುವ ಪವಿತ್ರ ಕ್ಷೇತ್ರ. ಯೋಗಿಗಳ ತಪಸ್ಸಿಗೆ ಹೇಳಿ ಮಾಡಿಸಿದ ಸ್ಥಳ, ವಾಹನ ಸಂಚಾರವೇ ಇರದ ಕಾಲಘಟ್ಟ, ಆಗಲೇ ನೆಲಮಂಗಲದ ಬಳಿ ಇರುವ ಶಿವಗಂಗೆಯಲ್ಲಿ ಪ್ರಾರಂಭವಾಗಿದ್ದು ಶೃಂಗೇರಿಯ ಶಾಖಾ ಮಠವಾದ ಶೃಂಗೇರಿ ಶಿವಗಂಗಾ ಮಠ.

ಶೃಂಗೇರಿ ಶಿವಗಂಗಾ ಮಠ ಸ್ಥಾಪನೆಯಾಗಿದ್ದು, 1599ರಿಂದ 1622ರವರೆಗೆ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನರಸಿಂಹ ಭಾರತೀ ಸ್ವಾಮಿಗಳವರ ಕಾಲದಲ್ಲಿ. ಜಗದ್ಗುರುಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಪರಿವಾರದಲ್ಲಿದ್ದ ಶ್ರೀ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು,ನಾಲ್ಕು ದಿಕ್ಕಿನಿಂದಲೂ ನಾಲ್ಕು ಆಕಾರಗಳಾಗಿ(ಗಣೇಶ, ಲಿಂಗ, ನಂದಿ, ಸರ್ಪ) ಕಾಣುವ ಬೆಟ್ಟ ಇರುವ ಶಿವಗಂಗಾ ಕ್ಷೇತ್ರದಲ್ಲಿ ಶಂಕರ ಭಾರತಿ ಸ್ವಾಮಿಗಳು 1656ರಲ್ಲಿ ವಿದ್ಯಾಶಂಕರ ಎಂಬ ಯೋಗಪಟ್ಟ ನೀಡಿ ತಮ್ಮ ಶಿಷ್ಯರೊಬ್ಬರನ್ನು ಈ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.ಅದಕ್ಕಾಗಿಯೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ನಡೆದ ಶೃಂಗೇರಿ ಮಹಾಸ್ವಾಮಿಗಳವರ ಶಿಷ್ಯ ಸ್ವೀಕಾರ ಸಮಾರಂಭವೂ ಸೇರಿದಂತೆ ಈ ಹಿಂದೆ ಅದೆಷ್ಟೋ ಸಂದರ್ಭದಲ್ಲಿ ಇದು ಪ್ರಕಟವೂ ಆಗಿದೆ. ಶೃಂಗೇರಿ ಶಾಖಾ ಮಠದ ಈ ಗುರುಪರಂಪರೆಯಲ್ಲಿ 18ನೇ ಪೀಠಾಧಿಪತಿಗಳಾಗಿ ರಾರಾಜಿಸಿದವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು.


ಸೀತಾರಾಮ ಶರ್ಮ ಎಂಬುದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು. 1953ರ ವೈಶಾಖ ಶುದ್ಧ ದ್ವಾದಶಿಯಂದು ವೇದ ಬ್ರಹ್ಮ ವೆಂಕಟಸುಬ್ಬಯ್ಯ, ಸುಬ್ಬಲಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಗಳು ಪೂರ್ವಾಶ್ರಮದಲ್ಲಿ ಬಿ.ಎಸ್ಸಿ, ಎಲ್.ಎಲ್.ಬಿ ಬಿ.ಐ.ಎಂ.ಎಸ್(ದೆಹಲಿ ವಿಶ್ವವಿದ್ಯಾನಿಲಯ) ಪದವೀಧರರು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ) ಎಂಬಂತೆ ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರಾದರೂ ಅವರ ಲಕ್ಷ್ಯ ಇದ್ದದ್ದು ಮಾತ್ರ ಬ್ರಹ್ಮಜ್ನಾನಕ್ಕೆ ರಾಜಮಾರ್ಗವಾದ ಆಧ್ಯಾತ್ಮ ಚಿಂತನೆಯಲ್ಲಿ. ಸನಾತನ ಧರ್ಮದ ಆಚರಣೆ ಬಗ್ಗೆ ಅತೀವ ಆಸಕ್ತಿ, ವೇದಗಳ ಬಗ್ಗೆ ಅಚಲ ನಂಬಿಕೆ, ಶ್ರದ್ಧೆ, ಭಕ್ತಿ ಶ್ರೀಗಳವರಿಗೆ ವಿದ್ಯಾರ್ಥಿ ಜೀವನದಿಂದಲೂ ಕೌಟುಂಬಿಕ ವಾತಾವರಣದಲ್ಲೇ ಲಭಿಸಿತ್ತು. ಬಿ.ಎಸ್ಸಿ, ಎಲ್.ಎಲ್.ಬಿ ಹಾಗೂ ದೆಹಲಿಯ ವಿಶ್ವವಿದ್ಯಾನಿಲಯದಿಂದ ಬಿ.ಐ.ಎಂ.ಎಸ್ ಪದವಿ ಪಡೆದ ನಂತರ ಕೆಲಕಾಲ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಕಂಪನಿಯಲ್ಲಿ ಕೆಲಕಾಲ ವೃತ್ತಿ ಜೀವನ ನಡೆಸಿದರು. ಈ ಸಂದರ್ಭದಲ್ಲೇ ಗುರುಗಳಿಗೆ ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಸಂಶ್ರಯ ಪ್ರಾಪ್ತವಾಗಿತ್ತು.ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಶ್ರೀಗಳ ಮನಸ್ಸು ವೇದಾಧ್ಯಯನಕ್ಕಾಗಿ ಶೃಂಗೇರಿಯ ಶಾರದಾಂಬೆಯ ಸಾನ್ನಿಧ್ಯದತ್ತ ಹೊರಳಿತ್ತು. ತಂದೆ ತಾಯಿಯರ ಅನುಮತಿ ಪಡೆದು, ಶೃಂಗೇರಿಯಲ್ಲಿ ವೇದಾಧ್ಯಯನ ಮುಂದುವರೆದಿತ್ತು. ಇತ್ತ ಶಿವಗಂಗಾ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಆರೋಗ್ಯ ಹದಗೆಟ್ಟಿತ್ತು, ಪೀಠಕ್ಕೆ ಉತ್ತರಾಧಿಕಾರಿ ನೇಮಕ ತುರ್ತಾಗಿ ನಡೆಯಬೇಕಿತ್ತು. ಶೃಂಗೇರಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ಸೀತಾರಾಮ ಶರ್ಮರೇ ತಮ್ಮ ಉತ್ತರಾಧಿಕಾರಿಗಳೆಂದು ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರು ನಿಶ್ಚಯಿಸಿದ್ದರು.ಹಿರಿಯ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಸೀತಾರಾಮ ಶರ್ಮರನ್ನು ಬೆಂಗಳೂರಿಗೆ ಕರೆಸಲಾಯಿತು. 7-08-1982, ಆಶ್ವಯುಜ ಶುದ್ಧ ಪಂಚಮಿಯಂದು ಆತುರದ ಸಂನ್ಯಾಸ ನೀಡಿ ಸಚ್ಚಿದಾನಂದ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನೂ ನೀಡಲಾಯಿತು. ಕ್ರಮ ಸನ್ಯಾಸ ಸ್ವೀಕಾರದ ನಂತರ 26-10-1982ರಲ್ಲಿ ಶ್ರೀಗಳು ಶೃಂಗೇರಿ ಶಾಖಾ ಮಠ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತಗೊಂಡರು. ನಂತರ  31 ವರ್ಷಗಳ ಕಾಲ ಶಿವಗಂಗಾ ಪೀಠವನ್ನಲಂಕರಿಸಿದ್ದರು.


ಸಂನ್ಯಾಸ ಧರ್ಮಕ್ಕೆ ಅನ್ವರ್ಥ ನಾಮದಂತಿದ್ದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರಿಂದ ಪ್ರಭಾವಿತರಾಗಿದ್ದರು. ಶ್ರೀರಾಮ ಅವರ ಆರಾಧ್ಯ ದೈವ. ಗುರುಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳವರು ಉಪದೇಶ ನೀಡಿದ್ದರು ಎಂಬುದು ವಿಶೇಷ. ಅದರ ಫಲವೆಂಬಂತೆ ಸಂನ್ಯಾಸಾಶ್ರಮ ಸ್ವೀಕರಿಸಿದ ನಂತರ ಸಚ್ಚಿದಾನಂದ ಭಾರತೀ ಸ್ವಾಮಿಗಳವರು, ತಪಸ್ಸು ವೈರಾಗ್ಯ, ಧರ್ಮಾಚರಣೆ, ಗುರುಭಕ್ತಿ, ಭಕ್ತಜನರನ್ನು ಆಶೀರ್ವದಿಸುವ ವಿಷಯದಲ್ಲಿ, ಅಷ್ಟೇ ಏಕೆ ಸಂನ್ಯಾಸಾಶ್ರಮ ಸ್ವೀಕಾರದಿಂದ ವಿದೇಹ ಮುಕ್ತಿವರೆಗೂ ಚಂದ್ರಶೇಖರ ಭಾರತೀ ಸ್ವಾಮಿಗಳ ಪ್ರತಿರೂಪದಂತಿದ್ದರು. ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನ ಚರಿತ್ರೆಯನ್ನು ಓದಿ, ಶಿವಗಂಗಾ ಗುರುಗಳ ದರ್ಶನ ಪಡೆದ ಅದೆಷ್ಟೋ ಭಕ್ತರಿಗೆ ಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಚಂದ್ರಶೇಖರ ಭಾರತೀ ಸ್ವಾಮಿಗಳೇ ಆವಿರ್ಭವಿತರಾಗಿದ್ದದ್ದು ನಿಸ್ಸಂದೇಹವಾಗಿ ಗೋಚರಿಸುತ್ತಿತ್ತು. ಚಂದ್ರಶೇಖರ ಭಾರತೀ ಸ್ವಾಮಿಗಳು ಹೀಗೆ ಇದ್ದಿರಬೇಕು ಎಂದೆನಿಸುತ್ತಿತ್ತು. ತಪಸ್ಸಿನಲ್ಲಂತೂ ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತೊಂದು ಅವತಾರದಂತೆಯೇ ಇದ್ದರು. ಶ್ರೀಗಳವರ ಅನುಷ್ಠಾನ ಎಷ್ಟೋ ದಿನಸಗಳ ಕಾಲ ಆಹಾರಗಳಿಲ್ಲದೇ ಸಾಗುತ್ತಿತ್ತು. ಈ ಎಲ್ಲಾ ಗುಣಗಳಿಂದಾಗಿಯೇ ತಮ್ಮ ವಿಜಯಯ ಯಾತ್ರೆಯ ಸಂದರ್ಭದಲ್ಲಿ ಶಿಷ್ಯ ಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಅನುಷ್ಠಾನ(ತಪಸ್ಸು) ಚಕ್ರವರ್ತಿಗಳೆಂಬ ಬಿರುದು ನೀಡಿದ್ದರು. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಅಲೌಕಿಕ ಸಾಧನೆ ಅಂತಹ ಶ್ರೇಷ್ಠವಾದದ್ದು. ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳ ಬಗ್ಗೆ ಅದೆಷ್ಟು ಗೌರವವಿತ್ತೋ ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಬಗ್ಗೆಯೂ ಅಷ್ಟೇ ಗೌರವಾದರಗಳಿದೆ. ಚಂದ್ರಶೇಖರ ಭಾರತೀ ಸ್ವಾಮಿಗಳವರು ಶೃಂಗೇರಿ ಪೀಠದ ಮಾಣಿಕ್ಯವಾದರೆ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಆ ಶೃಂಗೇರಿ ಶಾಖೆಯ ಶಿವಗಂಗಾ ಪೀಠದ ಮಾಣಿಕ್ಯ ಎಂಬುದು ನಿತ್ಯ ಸತ್ಯ ಹಾಗೆಯೇ ಸರ್ವವಿದಿತವಾದದ್ದು.ಇಂತಹ ಯತಿ ಶ್ರೇಷ್ಠರು ವಿದೇಹ ಮುಕ್ತಿ ಪಡೆದು ಈ ಮಾಘ ಶುದ್ಧ ತ್ರಯೋದಶಿ ಅಂದರೆ ಈ ಫೆ.1ಕ್ಕೆ 2ವರ್ಷವಾಗಲಿದೆ. ಜ.31 ಹಾಗೂ ಫೆ.1ರಂದು ಶೃಂಗೇರಿ ಶಿವಗಂಗಾ ಮಠದಲ್ಲಿ ಗುರುಗಳ ಆರಾಧನೆ ನಡೆಯಲಿದೆ. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಉತ್ತರಾಧಿಕಾರಿಗಳಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರು ಗುರುಗಳ ಆರಾಧನೆ ನಡೆಸಲಿದ್ದಾರೆ. ಆರಾಧನೆ ಹಿನ್ನೆಲಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾಖಾಪೀಠದಲ್ಲಿ ರಾರಾಜಿಸಿದ್ದ ಯತಿಶ್ರೇಷ್ಠರನ್ನು ಸ್ಮರಿಸೋಣ.

Wednesday 28 January 2015

ಉದುರುತ್ತಿದೆ ಸ್ಟ್ರಿಂಗ್ ಆಫ್ ಪರ್ಲ್ ನ ಒಂದೊಂದೇ ಮುತ್ತು: ಇಳಿಯುತ್ತಿದೆ ಚೀನಾದ ಗತ್ತು!





 ಸ್ಟ್ರಿಂಗ್ ಆಫ್ ಪರ್ಲ್ಸ್!

ದಕ್ಷಿಣ ಏಷ್ಯಾದಲ್ಲಿ ಏಕಚಕ್ರಾಧಿಪತ್ಯ ಮೆರೆಯಲು ಸಹಾಯಕಾರಿಯಾಗುವುದಕ್ಕೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ಅಸ್ತಿತ್ವವನ್ನು ಸ್ಥಾಪಿವುದಕ್ಕೆ ಚೀನಾ ರೂಪಿಸಿದ್ದ ಕಾನ್ಸೆಪ್ಟ್..

ಹಿಂದೂ ಮಹಾಸಾಗರದ ಜಲಪ್ರದೇಶದಲ್ಲಿ ಬೃಹತ್ ಪ್ರಮಾಣದ ನೌಕಾ ನೆಲೆಯನ್ನು ಸ್ಥಾಪಿಸಿ, ದಕ್ಷಿಣ ಏಷ್ಯಾದ ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ, ಬಾಂಗ್ಲಾದೇಶ, ಪಾಕಿಸ್ತಾನ ಮಾಲ್ಡೀವ್ಸ್, ಮಾಯನ್ಮಾರ್, ವಿಯೆಟ್ನಾಮ್, ತೈವಾನ್ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಂಡು ಭಾರತವನ್ನು ನಿಯಂತ್ರಿಸುವುದು ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತುಗಳ ಮಾಲೆ) ನ ಉದ್ದೇಶ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿ ಹಿಂದೂ ಮಹಾಸಾಗರಕ್ಕೆ ತನ್ನದೇ ಮಹತ್ವವಿದ್ದು ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಹಿಂದೂ ಮಹಾಸಾಗರವನ್ನು ದಾಟಿಯೇ ಮುಂದೆ ಸಾಗುತ್ತದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ 35 ದೇಶಗಳು, 6 ದ್ವೀಪಗಳಿದ್ದು ಭಾರತವೇ ಇವುಗಳ ಪೈಕಿ ದೊಡ್ಡ ದೇಶ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿದ್ದ ರಾಜಕೀಯ ಸ್ಥಿತಿಗಳಿಂದ ಭಾರತ ಈ ಜಲಪ್ರದೇಶದ ಮೇಲಿದ್ದ ಹಿಡಿತ ಕಳೆದುಕೊಳ್ಳಬೇಕಾಗಿ ಬಂತು!

ಭಾರತದ ಗೊಂದಲಮಯ ಮತ್ತು ಕ್ಷೀಣ ವಿದೇಶಾಂಗ ನೀತಿಯ ಲಾಭ ಪಡೆದ ಚೀನಾ, ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳ ಮೇಲೆ ಒಂದೊಂದಾಗಿಯೇ ತನ್ನ ಹಿಡಿತ ಸಾಧಿಸಿತ್ತು. ಶ್ರೀಲಂಕಾ, ಪಾಕಿಸ್ತಾನ, ಮಾಯನ್ಮಾರ್, ಬಾಂಗ್ಲಾ, ಕಾಂಬೋಡಿಯಾದ ಸಹಾಯದಿಂದ ಚೀನಾ ನೌಕಾ ನೆಲೆಗಳನ್ನು ಸ್ಥಾಪಿಸಿದ್ದೇ ಆದರೆ ತೈಲ ವಹಿವಾಟು, ವ್ಯಾಪಾರ-ವಹಿವಾಟು ತನ್ನಿಚ್ಚಿಗೆ ತಕ್ಕಂತೆ ನಡೆಯುತ್ತದೆ. ಭಾರತ ತಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದೇ ಇದ್ದಲ್ಲಿ ತೈಲೋತ್ಪನ್ನಗಳು ಮತ್ತು ಇತರ ವಾಣಿಜ್ಯ ಸಾಮಾಗ್ರಿಗಳು ಹಿಂದೂ ಮಹಾಸಾಗರದಿಂದ ಭಾರತ ತಲುಪದಂತೆ ನೋಡಿಕೊಂಡರಾಯಿತು. ಹೇಗಿದ್ದರೂ ಹಿಂದೂ ಮಹಾಸಾಗರದಲ್ಲಿ ತನ್ನದೇ ಆಧಿಪತ್ಯವಿರಲಿದೆ, ಭಾರತದ ನೆರೆ ರಾಷ್ಟ್ರಗಳು ತಾನು ಹೇಳಿದಂತೆಯೇ ಕೇಳುತ್ತದೆ ಎಂಬುದು ಚೀನಾ ನಿಲುವಾಗಿತ್ತು. ಭಾರತ ಸರ್ಕಾರದ ಬೇಜವಾಬ್ದಾರಿತನವೂ ಚೀನಾದ ನಿಲುವಿಗೆ ಪೂರಕವಾಗಿತ್ತು. ಆದರೆ ಈಗ ಭಾರತದ ನಾಯಕತ್ವ ಹಾಗೂ ರಾಜಕೀಯ ಸ್ಥಿತಿ ಎರಡೂ ಬದಲಾಗಿದೆ. ಚೀನಾ ಎಂತಹ ಕೃತ್ರಿಮ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅವಕಾಶವಾದಿ ಅಮೆರಿಕಾಗೆ ಚೀನಾವನ್ನು ಬಗ್ಗುಬಡಿಯುವ ಅನಿವಾರ್ಯತೆ ಇದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರೇ ಬಂದು ಭಾರತದ ಪ್ರಧಾನಿಯೊಂದಿಗೆ ಚೀನಾ ನೌಕಾ ನೆಲೆ ಸ್ಥಾಪಿಸುತ್ತಿರುವ ಬಗ್ಗೆ ಚರ್ಚೆ ನಡೆಸುತ್ತಾರೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಭಾರತದೊಂದಿಗೆ ಅಮೆರಿಕಾ ಮಾತನಾಡಿದ ನಂತರವಂತೂ ಸ್ಟ್ರಿಂಗ್ ಆಫ್ ಪರ್ಲ್ಸ್ ಬಿಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೂ ಅಡ್ಡಿ ಉಂಟಾಗಿದೆ.

ಭಾರತದ ನೆರೆ ರಾಷ್ಟ್ರಗಳಲ್ಲಿ ನೌಕಾ ನೆಲೆ ಸ್ಥಾಪಿಸಿ ಏಷ್ಯಾ ಭಾಗದ ಭದ್ರತೆಗೇ ಕುತ್ತು ತರುವ ಚೀನಾದ ಕುತಂತ್ರ ಗೊತ್ತಿದ್ದರಿಂದಲೇ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ವಿದೇಶ ಪ್ರವಾಸ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಭೂತಾನ್, ನೇಪಾಳ, ಫಿಜಿ, ಜಪಾನ್, ಮಾಯನ್ಮಾರ್ ನೊಂದಿಗೆ. ಓರ್ವ ಭಾರತದ ಪ್ರಧಾನಿ ಈ ಎಲ್ಲಾ ರಾಷ್ಟ್ರಗಳಿಗೂ ಭೇಟಿ ನೀಡಿ ಹಲವು ದಶಕಗಳೇ ಕಳೆದುಹೋಗಿದ್ದರೂ ಈ ಎಲ್ಲಾ ದೇಶಗಳಲ್ಲೂ ಅತ್ಯಾದರ ಸ್ವಾಗತ, ಯಶಸ್ಸು ಸಿಕ್ಕಿತು. . ಭಾರತ ಹಾಗೂ ಈ ನೆರೆ ರಾಷ್ಟ್ರಗಳ ಸಂಬಂಧ ಹೀಗಿರಬೇಕಾದರೆ ಮಧ್ಯದಲ್ಲಿ ಚೀನಾವೂ ತಲೆ ಹಾಕುತ್ತದೆ. ಅವಕಾಶ ಸಿಕ್ಕರೆ ಅದರ 'ಪರಮಮಿತ್ರ' ಪಾಕಿಸ್ತಾನವೂ ಈ ನೆರೆ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತದೆ.

ಹಾಗೆ ನೋಡಿದರೆ ದ್ವಿಪಕ್ಷೀಯ ಮಾತುಕತೆಗಿಂತ ಮೋದಿ ಚೀನಾಕ್ಕೆ ನೀಡಿದ ಮೊದಲ ಬಹುದೊಡ್ಡ ಹೊಡೆತವೆಂದರೆ ನೇಪಾಳ ಹಾಗೂ ಜಪಾನ್ ಗೆ ತೆರಳಿ ಯಶಸ್ವಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು. ನೇಪಾಳ ಮೋದಿ ಭೇಟಿಗೂ ಮುನ್ನವೇ ಚೀನಾದ ಪರವಾಗಿ ವಾಲುತ್ತಿದ್ದ ದೇಶ. ನೇಪಾಳದಲ್ಲಿ ತನ್ನ ಅಧಿಪತ್ಯ ಸಾಧಿಸಲು ಚೀನಾ ಆ ದೇಶಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಾ ಬಂದಿದೆ ಹಾಗೂ ಮಾವೋವಾದಿಗಳನ್ನು ತನ್ನತ್ತ ಸೆಳೆದು ಮಾವೋ ಸರಕಾರ ಸ್ಥಾಪಿಸುವ ಹುನ್ನಾರವೂ ನಡೆಸಿತ್ತು. ಮೋದಿ ಭೇಟಿ ಬಳಿಕ ನೇಪಾಳ ಚೀನಾಕ್ಕಿಂತಲೂ ಭಾರತಕ್ಕೆ ಹತ್ತಿರವಾಗತೊಡಗಿದೆ. ಮೋದಿಯವರ ಜಪಾನ್ ಭೇಟಿ ಸಂದರ್ಭದಲ್ಲಂತೂ ಚೀನಾಕ್ಕೆ ದಿಕ್ಕೇ ತೋಚಿದಂತಾಗಿತ್ತು. ಮಯಾನ್ಮಾರ್, ಭೂತಾನ್, ಭೇಟಿಗಳಿಂದಲೂ ಚೀನಾಕ್ಕೆ ಆತಂತವಾಗಿತ್ತು. ನಿಮಗೆಲ್ಲಾ ನೆನಪಿರಬಹುದು, ಮೋದಿ ನೆರೆ ರಾಷ್ಟ್ರಗಳೊಂದಿಗೆ ಬೆಸೆಯುತ್ತಿದ್ದ ಸಂಬಂಧಗಳಿಂದ ತನ್ನ ಬಗ್ಗೆ ಆತಂತಗೊಂಡಿದ್ದ ಚೀನಾ ಡಿ.21ರಂದು ನಡೆದ ಜಿಎಂಎಸ್ ಸಮಿತ್ ಶೃಂಗಸಭೆಯಲ್ಲಿ ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್, ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡುವುದಾಗಿ ಆಮಿಷವೊಡ್ಡಿತ್ತು.

ಇವೆಲ್ಲವೂ ಸಾಮಾನ್ಯ ಸಂಗತಿ. ವಾಸ್ತವವಾಗಿ ಚೀನಾಗೆ ತಡೆಯಲಾರದ ಪೆಟ್ಟು ಬಿದ್ದದ್ದು ತನ್ನ ಪರಮಾಪ್ತನಾಗಿದ್ದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಸೋಲಿನಿಂದ. ರಾಜಪಕ್ಸೆ ಅಧಿಕಾರದಲ್ಲಿದ್ದಾಗಿನಿಂದ, ಸೋಲುವವರೆಗೂ ಚೀನಾದ ಹಿತಾಸಕ್ತಿಗೆ ತಕ್ಕಂತೆಯೇ ನಡೆಯುತ್ತಾ, ಪಾಕಿಸ್ತಾನವನ್ನೂ ಮಿತ್ರನಾಗಿಸಿಕೊಂಡು ಭಾರತಕ್ಕೆ ಈ ಎರಡೂ ರಾಷ್ಟ್ರಗಳಿಂದಾಗಬೇಕಿದ್ದ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೀಗೇ ಬಿಟ್ಟರೆ ಭಾರತದ ಹಿತಾಸಕ್ತಿಗೇ ಧಕ್ಕೆಯುಂಟಾಗುತ್ತದೆ ಎಂಬುದನ್ನು ತಿಳಿದಿದ್ದ ಮೋದಿ ಸರ್ಕಾರ, ತನ್ನನ್ನು ಹಾಗೂ ಶ್ರೀಲಂಕಾವನ್ನು ಚೀನಾದ ಕೃತ್ರಿಮತೆಯಿಂದ ರಕ್ಷಿಸಿಕೊಳ್ಳಲು ರಾಜಪಕ್ಷೆಯನ್ನು ಸೋಲಿಸಲು ಅಗತ್ಯವಿದ್ದ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿತ್ತು. ಸಧ್ಯಕ್ಕೆ ಶ್ರೀಲಂಕಾ ಚೀನಾದ ವಸಾಹತುಶಾಹಿಗೆ ವಿರುದ್ಧವಾಗಿರುವ ದೇಶವಾಗಿ ತಿರುಗಿಬಿದ್ದಿದೆ. ಬಾಂಗ್ಲಾದೇಶ ಭಾರತದ ದ್ವೇಷ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ. ನೇಪಾಳ ಹಾಗೂ ಶ್ರೀಲಂಕಾ ಭಾರತದ ಪರ ತಿರುಗಿರುವುದೇ ಈಗ ಚೀನಾಕ್ಕೆ ಎದುರಾಗಿರುವ ಬಹುದೊಡ್ಡ ಸವಾಲಾಗಿದೆ.

ಹೀಗೆ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಸರಿನಲ್ಲಿ ಒಂದೊಂದೇ ದೇಶಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಭಾರತವನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಚೀನಾದ ಕನಸು ಕಮರುತ್ತಿದೆ. ಸ್ಟ್ರಿಂಗ್ ಆಫ್ ಪರ್ಲ್ಸ್ ಗೆ ಪೋಣಿಸಿದ್ದ ಒಂದೊಂದೆ ಮುತ್ತುಗಳು ಈಗ ಚೀನಾದ ಹಿಡಿತದಿಂದ ಉದುರುತ್ತಿವೆ. ಸಧ್ಯಕ್ಕೆ ಚೀನಾಗೆ ಹೇಳಿಕೊಳ್ಳಬಹುದಾದ ಆಪ್ತ ರಾಷ್ಟ್ರವೆಂದು ಉಳಿದಿರುವುದು ಕೇವಲ ಪಾಕಿಸ್ತಾನ ಮಾತ್ರ. ಅಂದಹಾಗೆ ನೆರೆ ರಾಷ್ಟ್ರಗಳನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎನ್ನುವುದಕ್ಕೆ ಚೀನಾದ ಆರ್ಥಿಕತೆಯೂ ಕುಸಿಯುತ್ತಿದೆ. ಆಂತರಿಕ ಭಯೋತ್ಪಾದನೆ ಹತ್ತಿಕ್ಕುವ ಕಾರಣ ಮುಂದಿಟ್ಟುಕೊಂಡು ಪಾಕಿಸ್ತಾನ ಕೇಳಿದಾಗಲೆಲ್ಲಾ ದುಡ್ದು ಸುರಿಯುವಷ್ಟು ಮೂರ್ಖತನ ಚೀನಾ ತೋರಲಾರದು. ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಐಎಂಎಫ್ ವರದಿ ಪ್ರಕಾರ 2016ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಚೀನಾದ ಆರ್ಥಿಕತೆಯನ್ನು ಮೀರಿ ಬೆಳೆಯುತ್ತದೆ ಎಂದು ಹೇಳಿದೆ. ಇನ್ನು ಪಾಕಿಸ್ತಾನ ಹೊರತುಪಡಿಸಿ ಉಳಿದ ನೆರೆರಾಷ್ಟ್ರಗಳೇಕೆ ಆರ್ಥಿಕ ಸಹಾಯಕ್ಕಾಗಿ ಚೀನಾದತ್ತ ಮುಖಮಾಡುವ ಸ್ಥಿತಿ ಎದುರಾಗುತ್ತದೆ? ಇಷ್ಟೆಲ್ಲಾ ಒಂದೆಡೆ ಅಮೆರಿಕಾ ಭಾರತ ತನಗೆ ಬೆಸ್ಟ್ ಫ್ರೆಂಡ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದರೆ, ಚೀನಾದ ಸ್ಥಿತಿ ಚೋರ ಗುರುವಿಗೆ ಚಂಡಾಲ ಶಿಷ್ಯ ಎಂಬಂತಾಗಿದೆ. ಅದಕ್ಕಾಗಿಯೇ ಚೀನಾ ಪಾಕಿಸ್ತಾನವನ್ನು ತನ್ನ ಸಾರ್ವಕಾಲಿಕ ಆಪ್ತಮಿತ್ರ ಎಂದು ಬಣ್ಣಿಸುತ್ತಿದೆ.

Tuesday 20 January 2015

ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಯಾವುದಾದರೂ ಕಾರ್ಯಕ್ರಮವೊಂದಕ್ಕೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಅವರನ್ನು ಪರಿಚಯಿಸಬೇಕಾದರೆ ಇವರಿಗೆ ಇಂತಿಷ್ಟು ರೋಗಗಳಿವೆ, ರೋಗಿಷ್ಠರು, ದಡ್ಡರು ಆದರೂ ಅವರು ಅಷ್ಟೊಂದು ಸಾಧನೆ ಮಾಡಿದ್ದಾರೆ ಎಂಬ ವ್ಯಕ್ತಿ  ಪರಿಚಯಕ್ಕೆ ಪ್ರತಿಕ್ರಿಯೆ ಹೇಗಿರಬಹುದು?  ದೇಶದ ಯುವಕರ ಆರಾಧ್ಯ ದೈವ ವಿವೇಕಾನಂದರನ್ನು ರೋಗಿಷ್ಠ, ಪೆದ್ದ ಎಂಬ ಪದಪುಂಜಗಳನ್ನು ಪ್ರಯೋಗಿಸಿದ್ದ ಮಾಜಿ ಪತ್ರಕರ್ತ, ಹಾಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಕೇಳಬೇಕಿದೆ

3 ವರ್ಷಗಳ ಹಿಂದಿನ ಲೇಖನಕ್ಕೆ ಇಂದಿಗೂ ಆಕ್ಷೇಪಗಳ ಪ್ರತಿಕ್ರಿಯೆಗಳು ಬರುತ್ತಿದೆಯೆಂದರೆ, ಲೇಖನದಲ್ಲಿ ಸ್ವಾಮಿ ವಿವೇಕಾನಂದರನ್ನು ಎಷ್ಟರ ಮಟ್ಟಿಗೆ ಕೆಟ್ಟದಾಗಿ ಚಿತ್ರಿಸಿದ್ದರೆಂಬುದನ್ನು ಊಹಿಸಿಕೊಳ್ಳಿ. ಸಾಮಾನ್ಯ ನಾಗರಿಕನಿಗೇ ರೋಗಿಷ್ಠ, ಪೆದ್ದ, ದಡ್ಡ ಎಂದು ಸಂಬೋಧಿಸಿದರೆ ತಡೆಯಲಾರದ ಸಿಟ್ಟು ಬರುತ್ತದೆ. ಅಂಥದ್ದರಲ್ಲಿ ಇಡೀ ದೇಶದ ಯುವಚೈತನ್ಯದ ಮೂರ್ತರೂಪವನ್ನು ಅಂತಹ ಕನಿಷ್ಠ ಪದಗಳಿಂದ ಪರಿಚಯಿಸಿದರೆ ಪ್ರತಿಕ್ರಿಯೆಯೂ ಅಷ್ಟೇ ಕನಿಷ್ಠವಾಗಿರುವುದು ಸಹಜ. ಕನಿಷ್ಠ ಪದಗಳಿಂದ ಟೀಕಿಸುವವರು ಅದೇ ಮಟ್ಟದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮಾನಸಿಕವಾಗಿಯೂ ಸಿದ್ಧರಿರಬೇಕಲ್ಲವೇ? 

ನಿಮಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ದಿನಗಳು ನೆನಪಿರಬೇಕಲ್ಲವೇ? ಸರ್ಕಾರದ ಸಾಲು ಸಾಲು ಹಗರಣಗಳಿಂದ ರೋಸಿ ಹೋಗಿದ್ದ ಜನರು ಸರ್ಕಾರವನ್ನು ನೇರಾ ನೇರ ಟೀಕಿಸಲು ಮುಂದಾದರು, ಬರಹಗಾರರು, ವಿಶ್ಲೇಷಕರ ಆಕ್ರೋಶಗಳಿಗೆಲ್ಲಾ ವೇದಿಕೆಯಾಗಿದ್ದು ಪ್ರಿಂಟ್ ಅಥವಾ ದೃಷ್ಯ ಮಾಧ್ಯಮಗಳು, ಸಾಮಾನ್ಯ ಜನರಿಗೆ ಸರ್ಕಾರದ ವಿರುದ್ಧವಿದ್ದ ತಮ್ಮ ಆಕ್ರೋಶವನ್ನು ಹೊರಹಾಕಲು ಇದ್ದದ್ದು ಒಂದೇ ವೇದಿಕೆ ಅದೇ, ಈ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಟ್ವಿಟರ್, ಕಾಂಗ್ರೆಸ್ ನ ಹಗರಣಗಳು ಒಂದೆಡೆಯಾದರೆ ಅದನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೂ ವಾದ ಮಂಡಿಸುತ್ತಿದ್ದ ಕಾಂಗ್ರೆಸ್ ನ ಮುಖಂಡರಾದ ದಿಗ್ವಿಜಯ್ ಸಿಂಗ್, ಸಂಜಯ್ ಝಾ ಮುಂದಾದವರ ಆಧಾರ ರಹಿತ ತರ್ಕಗಳಿಂದ ಜನರು ಹೈರಾಣಾಗಿದ್ದರು. ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಕಂಡುಬಂದಿತ್ತು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್  ವ್ಯಂಗ್ಯ ಚಿತ್ರಗಳಿಗಂತೂ ಲೆಕ್ಕವೇ ಇರಲಿಲ್ಲ.

ತನ್ನ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳು ಟೀಕಿಸಿದ್ದೇ ತಡ, ಇದು ಸ್ವೀಕಾರಾರ್ಹವಲ್ಲ ಎಂದು ಯುಪಿಎ ಸರ್ಕಾರ ಗುಡುಗಿತ್ತು. ಫೇಸ್ ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಅಂದಿನ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಕಪಿಲ್ ಸಿಬಲ್ ನೀಡಿದ್ದ ಎಚ್ಚರಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕದಲ್ಲಿ ಯುಪಿಎ ಸರ್ಕಾರದ ತದ್ರೂಪು ಕ್ರಮ ನಡೆಯುತ್ತಿದೆ! ಅಂದು ಸಚಿವರು ಲಾರ್ಜ್ ಸ್ಕೇಲ್ ನಲ್ಲಿ ಇಡೀ ಫೇಸ್ ಬುಕ್ ಗೇ ಎಚ್ಚರಿಕೆ ನೀಡಿದ್ದರು, ಇಂದು ಮುಖ್ಯಮಂತ್ರಿ ಸಲಹೆಗಾರರು ಸ್ಮಾಲ್ ಸ್ಕೇಲ್ ನಲ್ಲಿ ಫೇಸ್ ಬುಕ್ ನ ಗುಂಪು ಅಥವಾ ಅದರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಯುಪಿಎ ಸರ್ಕಾರ ರಾಷ್ಟ್ರಮಟ್ಟದಲ್ಲಿ ಮಾಡಿದ್ದನ್ನು ಮುಖ್ಯಮಂತ್ರಿ ಸಲಹೆಗಾರರು ರಾಜ್ಯಮಟ್ಟದಲ್ಲಿ ಮಾಡಿದ್ದಾರೆಂಬುದನ್ನು ಬಿಟ್ಟರೆ ಹೆಚ್ಚಿನ ವ್ಯತ್ಯಾಸವಿಲ್ಲ. 

ಸಾಮಾನ್ಯ ಜನರು ಅಪ್ ಲೋಡ್ ಮಾಡಿದ ಚಿತ್ರಗಳಿಗೆ ಫೇಸ್ ಬುಕ್ ಮೇಲೆ ಕ್ರಮ ಕೈಗೊಳ್ಳುವುದು ಸಾಧುವೇ ಎಂಬುದು ಅಂದಿನ ಪ್ರಶ್ನೆಯಾಗಿತ್ತು? ಇಂತಹ ಚಿತ್ರಗಳನ್ನು ಫೇಸ್ ಬುಕ್, ಗೂಗಲ್ ಪ್ಲಸ್ ಅಥವಾ ಬ್ಲಾಗ್ ಗಳಲ್ಲಿ ಹಾಕಿದ್ದು ಸರಿಯೋ ತಪ್ಪೋ ಎಂಬ ಚರ್ಚೆಗಿಂತ ಅಂದು ಜನರಲ್ಲಿದ್ದ ಹತಾಷ ಭಾವನೆಯೇ ಪ್ರಮುಖ ವಿಷಯವಾಗಿತ್ತು. ಮುಖ್ಯಮಂತ್ರಿ ಸಲಹೆಗಾರರ ಸೋಷಿಯಲ್ ಮೀಡಿಯಾ ನಿಯಂತ್ರಣ ಪ್ರಯತ್ನವನ್ನು ನೋಡಿದರೆ ಇಅವತ್ತು ಇಂತಹದ್ದೇ ಪ್ರಶ್ನೆ ಉದ್ಭವಿಸುತ್ತಿದೆ.

ಪಾಲಿಮೆಂಟ್ ನ್ನು ಕಮೋಡ್ ರೀತಿ ಚಿತ್ರಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದವರು, ಇಂದು ವಿವೇಕಾನಂದರ ಲೇಖನದ ಬಗ್ಗೆ ಬಂದ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದ ಪದಗಳನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಸುಮ್ಮನಿದ್ದುಬಿಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ?

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಜರಿದದ್ದು ಬೆದರಿಕೆ, ಸಂಚು, ಶಾಂತಿ ಕಡದುವ ಪ್ರಯತ್ನ ಹೇಗಾಗುತ್ತದೆ? ವಿವೇಕಾನಂದರನ್ನು ರೋಗಿಷ್ಠ, ದಡ್ಡ ಎಂದೆಲ್ಲಾ ಜರಿದು ಯುವಜನತೆಯ ಶಾಂತಿಯನ್ನು ಕದಡಿದ್ದು ಯಾರು? ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಬೊಬ್ಬೆ ಹೊಡೆದು ತಮ್ಮನ್ನು ಟೀಕಿಸಿದವರ ಮೇಲೆ ಕೇಸ್ ಹಾಕಿ ಅವರದ್ದು ನಾಯಿಪಾಪಾಡಾಗುವಂತೆ ಮಾಡುತ್ತೇನೆ ಎನ್ನುವುದೂ ಬೆದರಿಕೆಯ ಮತ್ತೊಂದು ರೂಪವಲ್ಲವೇ? ತಾವು ವಿವೇಕಾನಂದರನ್ನು ರೋಗಿಷ್ಠ ಎಂದು ಕರೆದರೆ ತಮ್ಮನ್ನು ಮತ್ತೊಬ್ಬರೂ ಅದೇ ರೀತಿಯ ಪದಗಳಿಂದ ಸಂಬೋಧಿಸಬಾರದು ಎನ್ನುವುದು ಯಾವ ರೀತಿಯ ನ್ಯಾಯ? ಯಾರೋ ಓರ್ವ ತನ್ನ ಕಾಮೆಂಟಿನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಆರೋಪಿಸುವವರು  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕರಾವಳಿಯ ಮಧ್ಯಮ ವರ್ಗದ ಜನತೆಯನ್ನು ಷಂಡರೆಂದು ಕರೆಯುವುದರ ಮೂಲಕ, ಪ್ರಧಾನಿಯ ಬಗ್ಗೆ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಪುಂಜಗಳನ್ನು ಪ್ರಯೋಗಿಸುವುದರ ಮೂಲಕ ಯುವ ಜನತೆಗೆ ಯಾವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದೀರಿ?

ಇಷ್ಟಕ್ಕೂ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಇಂಥದ್ದೊಂದು ಪ್ರಶ್ನೆ ಖಂಡಿತಾ ಕೇಳಬೇಕಿದೆ. ನಿಮಗೆ ಪ್ರಭಾ ಬೆಳವಂಗಲಾ ಪ್ರಕರಣ ಖಂಡಿತಾ ನೆನಪಿರುತ್ತದೆ. ಅಂದೂ ಸಹ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಕೇಸ್ ದಾಖಲಿಸಲು ಸಹಾಯ ಮಾಡಿದ್ದರು. ಇರಲಿ, ಅದಾದ ನಂತರ ಮುಖ್ಯಮಂತ್ರಿ ಸಲಹೆಗಾರರಿಗೆ ಅವಾಚ್ಯ ಶಬ್ದಗಳು ಕೇಳಿಸಿದ್ದು ತಮ್ಮನ್ನು ಟೀಕಿಸಿದ ನಂತರವೇ. ಹಾಗಾದರೆ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಸಲಹೆಗಾರರಿಗೆ ಹಾಗೂ ಅವರಿಗೆ ಬೇಕಾದರವ ವಿರುದ್ಧ ಅವಹೇಳನ ನಡೆದರೆ ಮಾತ್ರ ಅದು ಚಾರಿತ್ರ್ಯ ವಧೆಯಾಗುತ್ತದೆಯೋ? ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪದಗಳಲ್ಲಿ ಲೇಖನ ಬರೆದಿದ್ದು ಅವರ ಚಾರಿತ್ರ್ಯವಧೆಯಾಗುವುದಿಲ್ಲವೇ? ಅದು ಶಾಂತಿ ಕದಡುವ, ಅಪರಾಧವಾಗುವುದಿಲ್ಲವೇ? ಕೇಸ್ ಯಾರ ಮೇಲೆ ದಾಖಲಿಸಬೇಕು ಹೇಳಿ? 

ತಮ್ಮನ್ನು ಕೆಟ್ಟ ಪದಗಳಿಂದ ಟೀಕಿಸಿರುವುದರ ಬಗ್ಗೆ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವುದರಿಂದ ಸ್ವಲ್ಪ ಇತರರ ವಿರುದ್ಧ ಬಳಕೆಯಾಗುತ್ತಿರುವ ಅವಾಚ್ಯ ಶಬ್ದಗಳ ಬಗ್ಗೆಯೂ ಗಮನ ಹರಿಸಲಿ, ಅಬರ ಪ್ರಭಾವಳಿಯಲ್ಲಿರುವವರೇ ಅನೇಕರು ಅಂತಹ ಶಬ್ದಗಳನ್ನು ಫೇಸ್ ಬುಕ್ ನಲ್ಲಿ ಮೆಸೇಜ್ ಮೂಲಕ ಬಳಸಿರಬಹುದು. ತಮ್ಮ ವಿರುದ್ಧ ಬಳಸಿದರೆ ಮಾತ್ರ ಅದು ಅವಾಚ್ಯ ಶಬ್ದ ಉಳಿದವರ ವಿರುದ್ಧ ಬಳಸಿದರೆ ಅದು ವಾಚ್ಯ ಎನ್ನಲು ಹೇಗೆ ಸಾಧ್ಯ? ಅವಾಚ್ಯ ಶಬ್ದಗಳ ಬಗ್ಗೆ ಅತೀವ ಕಾಳಜಿ ಇರುವವರು ತಮ್ಮ ನಿಂದನೆಗೆ ಸೇಡು ತೀರಿಸಿಕೊಳ್ಳುವುದಕ್ಕೆ ಮಾತ್ರ ಮುಂದಾಗದೇ ಯಾವುದೇ ಇಸಂ ಗಳಿಗೂ ಒಳಗಾಗದೇ ಯಾರೇ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಸ್ಥಿತಿ ನಿರ್ಮಿಸಲು ಅವರಿಗೆ ಸಾಧ್ಯವೇ? ಅಂತಹ ಸ್ಥಿತಿಯನ್ನು ನಿರ್ಮಿಸಿ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಗಳನ್ನು ಫೇಸ್ ಬುಕ್ ನಲ್ಲಿ ಅಲ್ಲ ಮಾಧ್ಯಮಗಳಲ್ಲೂ ಬಳಕೆಯಾಗದಂತೆ ನೋಡಿಕೊಳ್ಳಲಿ, 'ವಿವೇಕ'ವುಳ್ಳವರನ್ನು ಯಾರೂ ಟೀಕಿಸಿದಂತೆ ನೋಡಿಕೊಳ್ಳಲಿ, ಧರ್ಮಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುವವರನ್ನು ನಿಯಂತ್ರಿಸಲಿ  ಹಾಗಾಗುವುದಿಲ್ಲ ಎಂದಾದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಎಂದು ಕೇಳಬೇಕಾಗುತ್ತದೆ.

Tuesday 6 January 2015

ಶ್ರೀ ಭಾರತೀ ತೀರ್ಥ ಗುರು ಕರಕಮಲ ಸಂಜಾತ....






ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠ ತನ್ನ ಅನೂಚಾನ ಗುರುಪರಂಪರೆಯ ಆಚರಣೆಗಳನ್ನು ಮುಂದಿನ ತಲೆಮಾರಿಗೆ ವಹಿಸುವ ಪ್ರಕ್ರಿಯೆ ಕಾಲ ಸನ್ನಿಹಿತವಾಗಿದೆ. ಆ ಗುರುಪರಂಪರೆಗೆ ನೂತನ ಗುರುಗಳ ಸೇರ್ಪಡೆಯಾಗಲಿದೆ. ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿ ಆಗಿದೆ. ಇನ್ನೇನಿದ್ದರೂ ತುರಿಯಾಶ್ರಮ ಸ್ವೀಕಾರವೊಂದೇ ಬಾಕಿ.

ತಿರುಪತಿ-ತಿರುಮಲ ದೇವಸ್ಥಾನ(ಟಿಟಿಡಿ) ವೇದಪಾಠಶಾಲೆಯ ಪ್ರಾಂಶುಪಾಲ ಹಾಗೂ ಧರ್ಮಪ್ರಚಾರ ಪರಿಷತ್ ನ ಯೋಜನಾ ಅಧಿಕಾರಿಯಾಗಿರುವ  ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿ-ಸೀತಾ ನಾಗಲಕ್ಷ್ಮಿ ದಂಪತಿಗಳ ದ್ವಿತೀಯ ಪುತ್ರರಾದ ಕುಪ್ಪಾ ವೆಂಕಟೇಶ್ವರ ಪ್ರಸಾದ್ ಶರ್ಮಾ(21) ಜ.22, 23ರಂದು ಶೃಂಗೇರಿಯಲ್ಲಿ ಯೋಗಪಟ್ಟ ಪಡೆಯಲಿದ್ದು ಶೃಂಗೇರಿ ಗುರುಗಳ ಉತ್ತರಾಧಿಕಾರಿಯಾಗಲಿದ್ದಾರೆ. ಕುಪ್ಪಾ ಕೌಂಡಿನ್ಯ ಶರ್ಮರು ವೆಂಕಟೇಶ್ವರ ಪ್ರಸಾದ ಶರ್ಮರ ಅಣ್ಣ, ಕೃಷ್ಣಪ್ರಿಯ ಅವರ ಅಕ್ಕ.

ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಶೃಂಗೇರಿ ಉತ್ತರಾಧಿಕಾರಿಗಳಾಗಲು ಅಗತ್ಯವಿರುವ ವೇದಾಭ್ಯಾಸ, ಕುಟುಂಬದ ವಾತಾವರಣದಲ್ಲೇ ಧಾರಾಳವಾಗಿ ದೊರೆತಿತ್ತು. ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವ ಕುಟುಂಬ. ತಿಳುವಳಿಕೆ ಬಂದಾಗಿನಿಂದಲೂ ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಸನ್ಯಾಸದಲ್ಲಿ ಅತೀವ ಆಸಕ್ತಿ. ಅಜ್ಜ ರಾಮಗೋಪಾಲ ಸೋಮಯಾಜಿಗಳ ಅಣ್ಣ ಕುಪ್ಪಾ ವೆಂಕಟಾಚಲಪತಿ ಸೋಮಯಾಜಿ ಅವರು ಶೃಂಗೇರಿ ಜಗದ್ಗುರುಗಳಾ ದ ಶ್ರೀ ಭಾರತೀ ತೀರ್ಥ ಸ್ವಾಮಿಗಳವರಿಂದ ಆಶೀರ್ವಾದ, ಅಪ್ಪಣೆ ಪಡೆದು ಸನ್ಯಾಸ ಸ್ವೀಕರಿಸಿ ಬ್ರಹ್ಮಾನಂದ ತೀರ್ಥರೆಂಬ ಯೋಗಪಟ್ಟ ಪಡೆದು ವಿಜಯವಾಡದಲ್ಲಿದ್ದರು ಎಂಬುದು ವಿಶೇಷ.

1993ರಲ್ಲಿ ತಿರುಪತಿಯಲ್ಲಿ ಜನಿಸಿದ ಕುಪ್ಪಾ ವೆಂಕಟೇಶ್ವರ ಶರ್ಮಾ ಅವರಿಗೆ 5ನೇ ವಯಸ್ಸಿನಲ್ಲೇ ಬ್ರಹ್ಮೋಪದೇಶ(ಉಪನಯನ)ವಾಗಿತ್ತು. ಸಂಸ್ಕೃತ ಪಂಡಿತರಾಗಿದ್ದ ಅಜ್ಜ ರಾಮಗೋಪಾಲ ವಾಜಪೇಯಯಾಜಿಗಳೇ ವೆಂಕಟೇಶ್ವರ ಶರ್ಮರಿಗೆ ವೇದಾಧ್ಯಯನದಲ್ಲಿ ಪ್ರಥಮ ಗುರುಗಳು. ಸಂಧ್ಯಾವಂದನೆ, ಪ್ರಾಥಮಿಕ ಪಾಠಗಳನ್ನು ಕಲಿತಿದ್ದು ಅಜ್ಜನಿಂದ  ತಂದೆ ಶಿವಸುಬ್ರಹ್ಮಣ್ಯ ಅವಧಾನಿಗಳ ಬಳಿ ವೇದಾಧ್ಯಯನವನ್ನು ಸಂಪೂರ್ಣವಾಗಿ ಮುಂದುವರೆಸಿದರು. ಶಿವಸುಬ್ರಹ್ಮಣ್ಯ ಅವಧಾನಿಗಳು ತಿರುಪತಿಯಲ್ಲೇ ನೆಲೆಸಿದ್ದು ಶಿಷ್ಯ ಸಮೂಹವನ್ನು ಹೊಂದಿದ್ದಾರೆ.

ವಿದ್ವತ್ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವೆಂಕಟೇಶ್ವರ ಪ್ರಸಾದ್ ಶರ್ಮಾ ಅವರದ್ದು, ಶೃಂಗೇರಿ ಪೀಠಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಎನ್ನಬಹುದು. ವೇದವಿದ್ಯೆಯಲ್ಲಿ ಪ್ರಕಾಂಡ ಪಾಂಡಿತ್ಯ. ಮಿತ ಭಾಷಿ, ಸದಾ ಅಧ್ಯಯನ ನಿರತ, ಲೌಕಿಕ ವ್ಯವಹಾರಗಳಲ್ಲಿ ಹೆಚ್ಚು ಗಮನ ಕೊಡದೇ ಇರುವ ಇಂತಹ ಅಂಶಗಳೇ ಅವರನ್ನು ಶೃಂಗೇರಿ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನದವರೆಗೂ ಕರೆತಂದಿದೆ. ಶಾಸ್ತ್ರಗಳಲ್ಲಿ ವೇದಾಂತವೇ ವೆಂಕಟೇಶ್ವರ ಪ್ರಸಾದ ಶರ್ಮ ಅವರ ನೆಚ್ಚಿನ ವಿಷಯ.  ವೆಂಕಟೇಶ್ವರ ಶರ್ಮರಿಗೆ ಭಾಗವತ ಸಪ್ತಾಹದಲ್ಲಿಯೂ ಆಸಕ್ತಿ ಇತ್ತು. ಆಂಧ್ರದಲ್ಲಿ ಕೃಷ್ಣಾನದಿ -ಬಂಗಾಳ ಕೊಲ್ಲಿ ಸಂಗಮವಾಗುವ ಹಂಸಲದೇವಿ ಎಂಬ ಪ್ರದೇಶದಲ್ಲಿ ರಾಮಗೋಪಾಲ ಸೋಮಯಾಜಿಗಳು ನಡೆಸುತ್ತಿದ್ದ ಭಾಗವತ ಸಪ್ತಾಹ ವೆಂಕಟೇಶ್ವರ ಶರ್ಮರು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಶೃಂಗೇರಿಗೆ ಆಗಮಿಸಿದ ಬಳಿಕ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳವರು ದಿನ ನಿತ್ಯ ನಡೆಸುವ ಚಂದ್ರಮೌಳೇಶ್ವರ ಪೂಜೆಯ ಸಂದರ್ಭದಲ್ಲಿ ಕೃಷ್ಣ ಯಜುರ್ವೇದವನ್ನು ಪಾರಾಯಣ ಮಾಡಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.

ಶೃಂಗೇರಿ ಪೀಠದ ನಮ್ಮ ಮುಂದಿನ ಪೀಠಾಧಿಪತಿಗಳು ಶಾಸ್ತ್ರಾಭ್ಯಾಸ ಮಾಡಲು ಇಲ್ಲಿಗೆ ಆಗಮಿಸಿದ್ದು2009ರಲ್ಲಿ.  2006 ರಿಂದ 2009 ಸಮಯದಲ್ಲಿ  ಶಿವಸುಬ್ರಹ್ಮಣ್ಯ ಅವಧಾನಿಗಳು ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಶೃಂಗೇರಿ ಮಠಕ್ಕೆ ಆಗಮಿಸುತ್ತಿದ್ದರು. ತಿರುಪತಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ  ವೆಂಕಟೇಶ್ವರ ಪ್ರಸಾದರು ತಂದೆಯ ಜೊತೆಯಲ್ಲಿ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳಾಗಿದ್ದ ಭಾರತೀ ತೀರ್ಥ ಸ್ವಾಮಿಗಳವರಿಂದ ಗಾಢ ಪ್ರಭಾವಕ್ಕೊಳಗಾದರು. ಒಂದಿನಿತೂ ತಡ ಮಾಡದೇ ಜಗದ್ಗುರುಗಳ ಸಾನಿಧ್ಯದಲ್ಲೇ ಶಾಸ್ತ್ರಗಳನ್ನು ಅಭ್ಯಸಿಸುವ ಇಂಗಿತ ವ್ಯಕ್ತಪಡಿಸಿದರು. ವಿದ್ಯಾರ್ಥಿಯ ಇಂಗಿತಕ್ಕೆ ಜಗದ್ಗುರುಗಳ ಅಂಕಿತವೂ ದೊರೆಯಿತು.  2009ರ ಜೂನ್ ನಿಂದ ಇತರ ವಿದ್ಯಾರ್ಥಿಗಳೊಂದಿಗೆ ಸಂಸ್ಕೃತ ಭಾಷೆ, ಶಾಸ್ತ್ರಾಧ್ಯಯನವೂ ಪ್ರಾರಂಭವಾಯಿತು. ಶೃಂಗೇರಿಯ ವಿದ್ವಾಂಸರಾದ ತಂಗಿರಾಲ ಶಿವಕುಮಾರ ಶರ್ಮ ಬಳಿ ಸಂಸ್ಕೃತ ಸಾಹಿತ್ಯ ಅಧ್ಯಯನ. ಸಂಸ್ಕೃತ ಪಾಂಡಿತ್ಯ ಪಡೆದ ಬಳಿಕ ಸ್ವತಃ ಜಗದ್ಗುರುಗಳೇ  ತರ್ಕಶಾಸ್ತ್ರವನ್ನು ಕಲಿಸಿದರು.

ಸತತ 5 ವರ್ಷಗಳು ನಡೆದ ಶಾಸ್ತ್ರ ಅಧ್ಯಯನದ ನಂತರ ಗುರುಭಕ್ತಿ, ವೇದಪಾಂಡಿತ್ಯ, ವೈರಾಗ್ಯವೇ ಮೊದಲಾದ  ಜಗದ್ಗುರುಗಳ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ ವೆಂಕಟೇಶ್ವರ ಪ್ರಸಾದರು ಶೃಂಗೇರಿ ಪೀಠಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ.  ಶೃಂಗೇರಿ ಜಗದ್ಗುರುಗಳು ಆಸಕ್ತಿ ವಹಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ಪೀಠಾಧಿಪತಿಗಳು ಸ್ವತಃ ಪಾಠ ಮಾಡುವ ವಿದ್ಯಾರ್ಥಿಗಳ ತಂಡದಲ್ಲೇ ಒಬ್ಬರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತಾರೆ. ಅಭಿನವ ವಿದ್ಯಾತೀರ್ಥರಿಂದ ಕಲಿತ ಸೀತಾರಾಮಾಂಜನೇಯಲು ಮುಂದೆ ಭಾರತೀ ತೀರ್ಥರಾಗಿ ಶೃಂಗೇರಿಯ ಉತ್ತರಾಧಿಕಾರಿಯಾದರು. ಈಗ ಭಾರತೀ ತೀರ್ಥರಿಂದಲೇ ಶಾಸ್ತ್ರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರು ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.  ಭಾರತೀ ತೀರ್ಥರಿಗೆ ಅವರ ಗುರುಗಳಾದ ಅಭಿನವ ವಿದ್ಯಾತೀರ್ಥರು ಸನ್ಯಾಸ ನೀಡುವ ಮೂಲಕ ಶೃಂಗೇರಿಯಲ್ಲಿ ಶಿಷ್ಯ ಪರಿಗ್ರಹ ಸಮಾರಂಭ ಬರೊಬ್ಬರಿ 40ವರ್ಷಗಳ ಹಿಂದೆ ನಡೆದಿತ್ತು. ಈಗ ಅಂಥದ್ದೇ ಒಂದು ಐತಿಹಾಸಿಕ ಘಟನೆಗೆ ಶೃಂಗೇರಿ ಭಕ್ತವೃಂದ ಸಾಕ್ಷಿಯಾಗಲಿದೆ.

ಪೀಠಾಧಿಪತಿಗಳಾಗುವವರಿಗೆ ನ್ಯಾಯ, ವಿಶೇಷ, ಸಾಂಖ್ಯ, ಯೋಗ, ಮೀಮಾಂಸ, ವೇದಾಂತವೇ ಮೊದಲಾದ ಭಾರತೀಯ ತತ್ತ್ವಶಾಸ್ತ್ರದ  6 ಬಗೆಯ ದರ್ಶನಗಳ ಸಂಪೂರ್ಣ ಅಧ್ಯಯನ ಕಡ್ಡಾಯ. ಶೃಂಗೇರಿಗೆ ಬಂದ ಆರಂಭದಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿರುವ ವೆಂಕಟೇಶ್ವರ ಪ್ರಸಾದರು, ಪ್ರಸ್ತುತ ಮೀಮಾಂಸೆ ವೇದಾಂತ ಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದಾರೆ. 22,23ರಂದು ನಡೆಯಲಿರುವ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಸ್ವತಃ ಭಾರತೀ ತೀರ್ಥ ಸ್ವಾಮಿಗಳು ಪ್ರಣವ ಮಹಾವಾಕ್ಯೋಪದೇಶ ನೀಡುವ ಮೂಲಕ ಶಿಷ್ಯ ಪರಿಗ್ರಹ ನಡೆಯುತ್ತದೆ. ಶೃಂಗೇರಿ ಗುರುಗಳ ಬಿರುದಾವಳಿಯಲ್ಲಿ ಹೇಳುವ ವ್ಯಾಖ್ಯಾನ ಸಿಂಹಾಸನಾಧೀಶ್ವರ ಎಂಬಂತೆ ಪ್ರಣವ ಮಹಾವಾಕ್ಯೋಪದೇಶದ ನಂತರ ವ್ಯಾಖ್ಯಾನ ಸಿಂಹಾಸನದ ಮೇಲೆ ಉತ್ತರಾಧಿಕಾರಿಗಳನ್ನು ಕೂರಿಸಿ ಸ್ವತಃ ಭಾರತೀ ತೀರ್ಥ ಮಹಾಸ್ವಾಮಿಗಳವರು ಅಭಿಷೇಕ ಮಾಡುತ್ತಾರೆ. ಈ ರೀತಿ ವ್ಯಾಖ್ಯಾನ ಸಿಂಹಾಸನದ ಮೇಲೆ ಯತಿಗಳನ್ನು ಕುಳ್ಳಿರಿಸಿ ಅಭಿಷೇಕ ಮಾಡುವುದು ಎರಡೇ ಬಾರಿ ಒಂದು ಹಿರಿಯ ಗುರುಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿದ ಸಂದರ್ಭದಲ್ಲಿ, ಮತ್ತೊಂದು ಅದೇ ಉತ್ತರಾಧಿಕಾರಿ ಮುಂದೆ ಪೀಠಾರೋಹಣ(ಪಟ್ಟಾಭಿಷೇಕ) ಮಾಡಿದ ಸಂದರ್ಭದಲ್ಲಿ. ಹಿರಿಯ ಶ್ರೀಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿ ವ್ಯಾಖ್ಯಾನ ಸಿಂಹಾಸನ ಕೂರಿಸಿದ ವೇಳೆ ಉತ್ತರಾಧಿಕಾರಿಗೆ ಯೋಗಪಟ್ಟ(ಸನ್ಯಾಸ ಆಶ್ರಮದ ಹೆಸರು)ವೂ ದೊರೆಯಲಿದೆ. ಆ ಕ್ಷಣದಲ್ಲಿ ಹಿರಿಯ ಜಗದ್ಗುರುಗಳಿಗೆ ಪ್ರೇರಣೆಯಾಗುವ  ಭಾರತೀ, ಸರಸ್ವತೀ, ಆಶ್ರಮ, ಗಿರಿ, ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ವನ ಎಂಬ ದಶನಾಮಗಳಲ್ಲಿ ಒಂದು ಯೋಗಪಟ್ಟವನ್ನು  ನೀಡುತ್ತಾರೆ. ಸನ್ಯಾಸದ ನಂತರವೂ ವೆಂಕಟೇಶ್ವರ ಪ್ರಸಾದರ ಶಿಕ್ಷಣ ಮುಂದುವರೆಯಲಿದ್ದು ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿಷಯಗಳೊಂದಿಗೆ ಸನ್ಯಾಸ ಧರ್ಮ, ಗುಪರಂಪರೆ ಬಗ್ಗೆಯೂ ಅಧ್ಯಯನ ನಡೆಯಲಿದೆ. ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಗೊಂಡಿರುವ ವೆಂಕಟೇಶ್ವರ ಪ್ರಸಾದ ಶರ್ಮರ ಸನ್ಯಾಸ ದೀಕ್ಷೆಯ ಕಾರ್ಯಕ್ರಮವನ್ನು ಸಮಸ್ತ ಭಕ್ತವೃಂದ ಎದುರು ನೋಡುತ್ತಿದ್ದು, ಜಗದ್ಗುರುಗಳಾದ ಭಾರತೀ ತೀರ್ಥರ ಕರಕಮಲ ಸಂಜಾತರು(ಉತ್ತರಾಧಿಕಾರಿ) ಶೃಂಗೇರಿ ಪೀಠದ 37ನೇ ಪೀಠಾಧಿಪತಿಗಳಿಗೆ ಸಿಗುವ ಯೋಗಪಟ್ಟದ ಬಗ್ಗೆ ಭಕ್ತಾದಿಗಳಲ್ಲಿ ಕುತೂಹಲ ಮೂಡಿದೆ.

||ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಂ ಅಸ್ಮದಾಚಾರ್ಯ ಪರ್ಯಂತಾಮ್  ವಂದೇ ಗುರು ಪರಂಪರಾಮ್||