Monday 22 September 2014

ಅಲೋಪಥಿಗೆ ಜಗತ್ತು ಹುಡುಕುತ್ತಿದೆ ಪರ್ಯಾಯ ಚಿಕಿತ್ಸಾ ವಿಧಾನ: ಸನಾತನ ಮೌಲ್ಯದ ಆಯುರ್ವೇದವೇ ಪ್ರಧಾನ

India is one of the three top medical tourism destinations in Asia, ಇತ್ತೀಚೆಗೆ ಹೀಗೊಂದು ಸಂಶೋಧನೆ ಹೊರಬಿದ್ದಿದೆ. ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ, ನ್ಯೂರೋ ಸರ್ಜರಿ, ಮೂಳೆ ಚಿಕಿತ್ಸೆ, ನೆಫ್ರಾಲಜಿ ಮತ್ತು ಹೃದ್ರೋಗ ಚಿಕಿತ್ಸೆಗಳಲ್ಲಿ  ಭಾರತ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಪ್ರತಿಫಲ ಒಂದು ಕಾರಣವಾದರೆ, ಆಯುರ್ವೇದ ಮತ್ತು ಯೋಗದಂತಹ ಇತರ ಚಿಕಿತ್ಸೆಯ ಲಭ್ಯತೆ ಮತ್ತೊಂದು ಕಾರಣ.
ಅನಾರೋಗ್ಯವನ್ನು ಅತಿ ವೇಗವಾಗಿ ಪರಿಹರಿಸುವುದರೊಂದಿಗೆ, ಅಷ್ಟೇ ಪರಿಣಾಮಕಾರಿಯಾಗಿ ಅಡ್ಡಪರಿಣಾಮಗಳನ್ನು ಹೊತ್ತು ತರುವ ಅಲೋಪಥಿಕ್ ಚಿಕಿತ್ಸಾ ವಿಧಾನಕ್ಕೆ ಇಡೀ ಜಗತ್ತು ಪರ್ಯಾಯವಾದ ಚಿಕಿತ್ಸಾಪದ್ಧತಿಯನ್ನು ಅರಸಿ ಹೊರಟಿದೆ. ಭಾರತ ಮಾತ್ರ ಅಂತಹ ಪರ್ಯಾಯ ಚಿಕಿತ್ಸಾ ಪದ್ಧತಿಯನ್ನು ತನ್ನ ಒಡಲಲ್ಲೇ ಹೊತ್ತು ಪೋಷಿಸುತ್ತಿದೆ. ಅತಿ ವೇಗದ ಜಗತ್ತಿನಲ್ಲಿ ವೇಗವಾಗಿಯೇ ಎಲ್ಲವೂ ನಡೆಯಬೇಕು, instent food ಯಿಂದ ಹಿಡಿದು ಆರೋಗ್ಯದವರೆಗೂ ಎಲ್ಲವೂ instant. instant cure ಎಂಬ ಒಂದೇ ಒಂದು ಕಾರಣದಿಂದ ಅಲೋಪಥಿಕ್ ಚಿಕಿತ್ಸಾ ಪದ್ಧತಿಯಿಂದ ಅದೆಷ್ಟೋ ಅಡ್ಡ ಪರಿಣಾಮಗಳು instent ಆಗಿಯೇ ಮನುಷ್ಯನನ್ನು ಆವರಿಸಿಕೊಳ್ಳುತ್ತಿದೆ. ರಾಸಾಯನಿಕಗಳೇ ಕೃಷಿ ಪದ್ಧತಿಯಿಂದ ಹಿಡಿದು ಚಿಕಿತ್ಸಾ ಪದ್ಧತಿಯ ವರೆಗೂ ಹಾಸುಹೊಕ್ಕಾಗಿದ್ದು ಮನುಷ್ಯನ ದೇಹ ಕೆಮಿಕಲ್ ಫ್ಯಾಕ್ಟರಿಯಾಗಿ ಮಾರ್ಪಾಡಾಗುತ್ತಿದೆ. ಮುಂದಾಗುವ ಅಪಾಯವನ್ನು ತಡೆಗಟ್ಟಲು ಜಗತ್ತಿನ ಅದೆಷ್ಟೋ ರಾಷ್ಟ್ರಗಳು ಪರ್ಯಾಯ ಚಿಕಿತ್ಸಾ ಪದ್ಧತಿ ಮೊರೆ ಹೋಗುತ್ತಿವೆ.
ಒಂದು ಸಮೀಕ್ಷೆಯ ಪ್ರಕಾರ, ಅಲೋಪಥಿಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿ ಅಥವಾ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಖನ್ನು ಮೂಲದಿಂದಲೇ ಗುರುತಿಸಿ ಅದಕ್ಕೆ ಪರಿಹಾರ ಹುಡುಕಬೇಕೆಂಬ ಉಮೇದಿನಲ್ಲಿ ಇಸ್ರೇಲ್ ನಲ್ಲಿ 15ದಿನಗಳಲ್ಲಿ 75 ಸಾವಿರ ಅಲೋಪತಿ ವೈದ್ಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ  ಅಲೋಪಥಿಕ್ ಚಿಕಿತ್ಸಾ ಪದ್ಧತಿ ಕೆಲಸಕ್ಕೆ ಬಾರದ್ದು ಎಂಬ ನಿರ್ಧಾರ ತಳೆದವರಂತೆ ಜಮೀನಿನಲ್ಲಿ ಶುದ್ಧ ಆಹಾರ, ಗಿಡ ಮೂಲಿಕೆ ಬೆಳೆಯೋ ಪ್ರಯತ್ನ ಶುರುಮಾಡಿದ್ದಾರೆ. ಈ ಮೂಲಕ ಪರ್ಯಾಯ ಚಿಕಿತ್ಸಾ ಪದ್ಧತಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಪರಿಣಾಮ, ಅತ್ಯಂತ ಆರೋಗ್ಯಕರವಾದ ದೇಶವಾಗಿ ಇಸ್ರೇಲ್ ಮಾರ್ಪಾಡಾಗುತ್ತಿದೆ. ಗಿಡ ಮೂಲಿಕೆ, ಶುದ್ಧ ಆಹಾರ  ಬೆಳೆಸುವುದರೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಉತ್ಕೃಷ್ಟ ಕೊಡುಗೆ ನೀಡಿದ ಹೆಗ್ಗಳಿಕೆ ಆಯುರ್ವೇದದ್ದು. ದುರದೃಷ್ಟವೆಂದರೆ ಇವೆಲ್ಲವನ್ನೂ ಜಗತ್ತಿಗೆ ಪರಿಚಯಿಸಿದ ನಮ್ಮ ನಾಡಿನಲ್ಲಿ ಆಯುರ್ವೇದದ ಬಗ್ಗೆ ಗಮನಾರ್ಹ ಪ್ರಯೋಗಗಳು ನಡೆಯುತ್ತಿಲ್ಲ.
ಭಾರತದ ಮಟ್ಟಿಗೆ ಆಯುರ್ವೇದ ಹಾಗೂ ಅದರ ಶೇ.45ರಷ್ಟು ಉತ್ಪನ್ನಗಳು ಹಣ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ(ಹೇರ್ ಆಯಿಲ್, ತೈಲ, ಚೂರ್ಣ ಇಂತಹ ಉತ್ಪನ್ನಗಳು)  ಚರಕ, ಸುಶೃತರು ನೀಡಿದ ಆಯುರ್ವೇದ ಚಿಕಿತ್ಸೆಯ ನಿಜವಾದ ಸತ್ವ ಅಥವಾ ಅದರಿಂದ ಆಗುತ್ತಿರುವ ಪ್ರಯೋಗಗಳು ಶೂನ್ಯ ಎಂಬುದು ಸರ್ವವಿದಿತ. ಇನ್ನು ಆಯುರ್ವೇದದ ಉತ್ಪನ್ನಗಳಿಗೆ ಎಂ.ಆರ್.ಪಿ ನಿಯಂತ್ರಣವೇ ಇಲ್ಲ ಎಂದರೆ ನಂಬುತ್ತೀರಾ? ಅದೊಂದು ರೀತಿಯಲ್ಲಿ ಪ್ರಚಾರದ ಉತ್ಪನ್ನಗಳಾಗಿ ಮಾರ್ಪಾಡುಗುತ್ತಿವೆ ಉದಾಹರಣೆಗೆ ಆಯುರ್ವೇದದ ವೈದ್ಯರಿಂದ ತಮ್ಮ ಉತ್ಪನ್ನಗಳನ್ನು ಪ್ರಮೋಟ್ ಮಾಡಿಸುವುದು. ಪ್ರಮೋಟ್ ಮಾಡುವ ವೈದ್ಯರಿಗೆ ಹಣ ನೀಡಬೇಕಲ್ಲಾ ಆದಕ್ಕೆ ಉತ್ಪನ್ನಗಳಿಗೆ ಒಂದಕ್ಕೆ ಎರಡರಷ್ಟು ಬೆಲೆ ನಿಗದಿಪಡಿಸುತ್ತಾರೆ. ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಬೆಲೆ. ಹೀಗಿರುವಾಗ ಆಯುರ್ವೇದದ ಉದ್ಧಾರವಾದರೂ ಹೇಗೆ ಸಾಧ್ಯ? ಆಯುರ್ವೇದದ ಪರಿಸ್ಥಿತಿ ಹಣ ಮಾಡುವ ಉದ್ದೇಶದಿಂದ ಕೂಡಿದರೆ ಅಲೋಪಥಿಕ್ ವೈದ್ಯರಿಗೂ ಆಯುರ್ವೇದದ ವೈದ್ಯರಿಗೂ ವ್ಯತ್ಯಾಸವೇನು ಬಂತು?
ಹೇರ್ ಆಯಿಲ್, ತೈಲ ಇತ್ಯಾದಿಗಳ ಮಟ್ಟದಲ್ಲೇ ಆಯುರ್ವೇದ ಸೀಮಿತಗೊಂಡರೆ ಅದು ಹೇಗೆ ತಾನೇ ಪರ್ಯಾಯ ಚಿಕಿತ್ಸಾ ಪದ್ಧತಿಗೆ ಲಾಯಕ್ಕಾದೀತು? ನಮ್ಮ ಪುರಾತನ ಚಿಕಿತ್ಸಾ ಪದ್ಧತಿಯಲ್ಲಿ ಖಂಡಿತವಾಗಿಯೂ ಪರ್ಯಾಯ ಚಿಕಿತ್ಸಾಪದ್ಧತಿಗೆ ಅರ್ಹವಾದ ಅಂಶಗಳಿದೆ. ಹಾಗೆಯೇ ಅದನ್ನು ಪ್ರಯೋಗಾತ್ಮವಾಗಿ ಬಳಸಿಕೊಳ್ಳುವುದಕ್ಕೆ ತಾತ್ವಾರವೂ ಇದೆ. ಇತರ ಕ್ಷೇತ್ರಗಳಂತೆಯೇ ಆಯುರ್ವೇದದಲ್ಲೂ ತುಂಬಿರುವ ಆಲಸ್ಯವನ್ನು ತೊಲಗಿಸಿ, ಸಂಶೋಧನೆಯಲ್ಲಿ ತೊಡಗಿಸಿದರೆ ಅದರಿಂದ ಆಗುವ ಪರಿಣಾಮಗಳೇ ಪರ್ಯಾಯ ಚಿಕಿತ್ಸಾ ಪದ್ಧತಿಗೆ ನಾಂದಿಯಾಗಲಿದೆ.
ಕಣ್ಣಿಗೆ ರಾಚುವಂತೆ ಇಷ್ಟೇಲ್ಲಾ ನ್ಯೂನತೆಗಳಿದ್ದರೂ ಭಾರತದ ಪುರಾತನ ಚಿಕಿತ್ಸಾ ಪದ್ಧತಿ ವಿದೇಶಿಗರನ್ನು ಆಕರ್ಷಿಸುತ್ತಿದೆ. ಡೆಂಗ್ಯೂ( ಅಲೋಪಥಿಯಲ್ಲಿ ಈ ವರೆಗೂ ಪರಿಣಾಮಕಾರಿ ಔಷಧಿ ಇಲ್ಲ), ಕ್ಯಾನ್ಸರ್, ಹೃದ್ರೋಗ, ಸೇರಿದಂತೆ ಮಾರಣಾಂತಿಕ ರೋಗಗಳಿಗೆ ಆಯುರ್ವೇದದ ಚಿಕಿತ್ಸೆ ಮೂಲಕ ದೊರೆಯುವ ಪರಿಹಾರದ ಮುಂದೆ ಇಂಗ್ಲೀಶ್ ಪದ್ಧತಿ ಚಿಕಿತ್ಸೆ ನಿರುತ್ತರವಾಗುತ್ತದೆ. ಇಂದಿಗೂ ಅದೆಷ್ಟೋ ಮಂದಿ ಕ್ಯಾನ್ಸರ್ ಪೀಡಿತರು ಆಯುರ್ವೇದ, ಯೋಗ ಚಿಕಿತ್ಸಾ ಪದ್ಧತಿಯಿಂದ ಜೀವಂತವಾಗುಳಿದಿದ್ದು, ಸೋ ಕಾಲ್ಡ್ ಅಲೋಪಥಿಗೆ ದೊಡ್ಡ ಮಿಸ್ಟ್ರಿಯಾಗಿ ಕಾಡುತ್ತಿದ್ದಾರೆ. ಭಾರತೀಯ ಪುರಾತನ ಚಿಕಿತ್ಸಾ ಪದ್ಧತಿಯ ಹೀಗಿದೆ.
ಇನ್ನು ಕಾರ್ಯವ್ಯಸನಿಗಳಾಗಿರುವ ಅಮೆರಿಕಾದಂತಹ ರಾಷ್ಟ್ರಗಳಲ್ಲಂತೂ ಮನಸ್ಸಿಗೆ ಶಾಂತಿ ದೊರೆಯದೇ ಯೋಗ ಚಿಕಿತ್ಸೆಗಾಗಿ ಹಾತೊರೆಯುತ್ತಿದ್ದಾರೆ. ಜಗತ್ತಿನ ಪರಿಸ್ಥಿತಿ ಹೀಗಿರುವಾಗ  ಭಾರತ ಮತ್ತೊಮ್ಮೆ ವಿಶ್ವದ ಕೇಂದ್ರ ಬಿಂದುವಾಗಿದೆ. ಏಕೆಂದರೆ ಅಲೋಪಥಿಕ್ ಗೆ ಪರ್ಯಾಯ ಚಿಕಿತ್ಸಾ ಪದ್ಧತಿ ಜೀವಂತವಾಗಿರುವುದು ಭಾರತದಲ್ಲಿಯೇ. ಹೃದಯ ಕಸಿ ಸೇರಿದಂತೆ ಅಂಗಾಂಗ ಕಸಿ ಮಾಡಿ ಜೀವದಾನ ಮಾಡುವುದರಲ್ಲಿ ಅಲೋಪಥಿಯನ್ನು ಬಿಟ್ಟರೆ ಮತ್ತೊಂದು ಪರ್ಯಾಯ ಚಿಕಿತ್ಸೆ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಅಲೋಪಥಿ ಪದ್ಧತಿ ಪರಿಚಯಾಗುವುದಕ್ಕೂ ಮುನ್ನ 2ನೇ ಶತಮಾನದಲ್ಲೇ (ಕ್ರಿ.ಪೂ.600ರಲ್ಲೇ)  ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತರು ಶಸ್ತ್ರ ಚಿಕಿತ್ಸೆ, ಅಂಗಾಂಗಗಳ ಕಸಿ ಮಾಡಿದ್ದರು. ಹೀಗಿದ್ದ ಭಾರತ 20ನೇ ಶತಮಾನದ ಹೊತ್ತಿಗೆ ಅತಿಯಾದ ಅಲೋಪಥಿ ವ್ಯಾಪ್ತಿಗೊಳಪಟ್ಟು, ಪ್ರಾಚೀನಾ ಆಯುರ್ವೇದವನ್ನು ಅಳಲೆಕಾಯಿ ಪಂಡಿತ ನೀಡುವ ಔಷಧ ಪದ್ಧತಿಯೆಂದು ಹಂಗಿಸುವ ಸ್ಥಿತಿಗೆ ತಲುಪಿದೆ. ಇನ್ನು ಯಾರನ್ನಾದರೂ ಅಲೋಪಥಿಯ ಅಡ್ಡ ಪರಿಣಾಮದ ಬಗ್ಗೆ ಪ್ರಶ್ನಿಸಿ ಆಯುರ್ವೇದ ಚಿಕಿತ್ಸೆಗೆ ಸಲಹೆ ನೀಡಿದರೆ, ಆಯುರ್ವೇದದಲ್ಲಿ ಪರಿಣಾಮವೇ ಇರುವುದಿಲ್ಲ ಇನ್ನು ಅಡ್ಡಪರಿಣಾಮ ಎಲ್ಲಿಂದ ಬರಬೇಕೆಂಬ ಲೇವಡಿಯ ಮಾತು ಢಳವಾಗಿರುತ್ತವೆ.
ಇತ್ತೀಚೆಗಷ್ಟೇ ಹೆಸರಾಂತ ಪತ್ರಿಕೆ ದಿ ಗಾರ್ಡಿಯನ್ ಪ್ರಕಟಿಸಿದ್ದ ವರದಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಆಕ್ಯುಪಂಕ್ಚರ್ ಹಾಗೂ ಭಾರತದ ಪ್ರಾಚೀನ ಆಯುರ್ವೇದವನ್ನು ಶಾಸನ ಬದ್ಧಗೊಳಿಸಿದೆ ಎಂದು ಹೇಳಿದೆ(http://www.theguardian.com/global-development-professionals-network/2014/sep/17/acupuncture-ayurveda-medicine-health-india). ಇದನ್ನೇ ಆಧಾರವಾಗಿಟ್ಟುಕೊಂಡು ಗಾರ್ಡಿಯನ್ ಪತ್ರಿಕೆ ಆಯುರ್ವೇದದ ಬಳಕೆಯ ಪ್ರಮಾಣದ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು ಶೇ.65ರಷ್ಟು ಗ್ರಾಮೀಣ ಭಾಗದ ಜನತೆ ಆರೋಗ್ಯ ರಕ್ಷಣೆಗೆ ಆಯುರ್ವೇದ ಹಾಗೂ ಔಷಧೀಯ ಸಸ್ಯಗಳನ್ನು ಬಳಸುತ್ತಾರೆ ಎಂದು ಹೇಳಿದೆ. ಇಷ್ಟೇ ಅಲ್ಲ ಪ್ರತಿ ದೇಶದಲ್ಲೂ ಇಂತಹ ಸಮೀಕ್ಷೆ ನಡೆಸಿರುವ ಪತ್ರಿಕೆ, ಆಫ್ರಿಕಾದಲ್ಲಿ ಶೇ.80ರಷ್ಟು ಜನರು, ಚೀನಾದಲ್ಲಿ ಶೇ.40ರಷ್ಟು ಜನರು ಸಾಂಪ್ರದಾಯಿಕ ಔಷಧವನ್ನೇ ಬಳಸುತ್ತಾರೆ ಎಂದು ವರದಿ ಮಾಡಿದೆ. ಗಾರ್ಡಿಯನ್ ನೀಡಿರುವ ವರದಿ  ಭಾರತದ ಮಟ್ಟಿಗೆ ಆಯುರ್ವೇದ ಪದ್ಧತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಜಾಗತಿಕ ದೃಷ್ಠಿಯಿಂದ ನೋಡಿದರೆ ಅಲೋಪಥಿತಿಯಿಂದ ಪರ್ಯಾಯ ಚಿಕಿತ್ಸಾ ಪದ್ಧತಿಯೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿರುವುದು ಸ್ಪಷ್ಟವಾಗುತ್ತದೆ. ಗಿಡ ಮೂಲಿಕೆಗಳ, ಪ್ರಕೃತಿದತ್ತವಾಗಿ ದೊರೆಯುವ ಜೀವ ಸೆಲೆಯಂತಿರುವ ಆಯುರ್ವೇದ, ಸಾಂಸ್ಕೃತಿಕ ಚಿಕಿತ್ಸಾ ಪದ್ಧತಿಯ ಮುಂದೆ  ಕೆಮಿಕಲ್ ಗಳಿಂದ ತಯಾರಾಗುವ ಇಂಗ್ಲೀಶ್ ಔಷಧ ಎಷ್ಟು ದಿನ ತಾನೆ ಅಸ್ಥಿತ್ವ ಉಳಿಸಿಕೊಳ್ಳಬಹುದು? ಆರ್ಥ್ರಿಟಿಸ್, ಸ್ಪಾಂಡಿಲೈಟಿಸ್, ಸ್ಲಿಪ್ ಡಿಸ್ಕ್, ಒತ್ತಡ, ಖಿನ್ನತೆ ವ್ಯಾಧಿಗಳಿಗೆ ಮುಂತಾದ ವ್ಯಾಧಿಗಳಿಗೆ ಅಡ್ಡ ಪರಿಣಾಮ ವಿಲ್ಲದೇ ಇರುವ ಔಷಧಗಳೇ ಇಲ್ಲ ಎಂಬುದು ಹಲವು ಆರೋಗ್ಯ ತಜ್ನರ ಅಭಿಪ್ರಾಯ. ಈ ಆಯಾಮದಿಂದ ನೋಡುವುದಾದರೆ ಅಲೋಪಥಿಯಂತೆ ಆಯುರ್ವೇದ ರೋಗ ವಕ್ಕರಿಸಿದಾಗ ಹೋಗಿ ವ್ಯಾಧಿಯನ್ನು ನಿವಾರಿಸಲೆಂದು ಬಳಸುವ ಚಿಕಿತ್ಸಾ ವಿಧಾನ ಅಲ್ಲ ಎಂದು ಹೇಳಬಹುದು. ಆಯುರ್ವೇದ ಎಂಬುದು ಸನಾತನ ಧರ್ಮದ ಜೊತೆ ಜೊತೆಗೇ ಬಂದಿರುವ ಜೀವನ ಶೈಲಿ. ಮತ್ತೊಂದು ರೀತಿಯಲ್ಲಿ ನಮ್ಮ ಪೂರ್ವಜರು ತಮ್ಮ ದಿನಚರಿಯಲ್ಲೇ ಆರೋಗ್ಯವನ್ನು ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿ ಚಿಕಿತ್ಸಾ ವಿಧಾನಗಳನ್ನು ಪಾಲಿಸುತ್ತಿದ್ದರು ತನ್ಮೂಲಕ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದರ ಬದಲು ರೋಗ ಬರದಂತೆಯೇ ಎಚ್ಚರ ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಯುರ್ವೇದ ಒಂದು ವಿಧವಾದ ಚಿಕಿತ್ಸಾ ಪದ್ಧತಿಯಾಗಿದ್ದರೂ ಸಹ ಅದು ಅಲೋಪಥಿಯಂತೆ ಇಂತಹ ಖಾಯಿಲೆಗೆ ಇಂಥಹದ್ದೇ ಚುಚ್ಚುಮದ್ದು ನೀಡಬೇಕೆಂಬ ನಿಯಮ ಹೊಂದಿಲ್ಲ. ಬದಲಾಗಿ ಪರಿಪೂರ್ಣ ಆರೋಗ್ಯ ಹೊಂದಲು ಅನುಕೂಲವಾಗಿದೆ.
ಆಧುನಿಕ ಚಿಕಿತ್ಸಾ ವಿಧಾನ ದೇಹದ ಮೇಲೇ ಕೇಂದ್ರೀಕೃತವಾಗಿರುವುದರಿಂದ ರೋಗಿಯ ಮನಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲೋಪಥಿಕ್ ಮಟ್ಟಿಗೆ ಈ ಅಂಶದ ಅಗತ್ಯವೂ ಬಹಳ ದೂರವಾಗಿಯೇ ಉಳಿದಿದೆ. ಆದರೆ ಆಯುರ್ವೇದದ ಮನಸ್ಸು, ಇಂದ್ರಿಯಗಳಿಗೆ ಚಿಕಿತ್ಸೆ ನೀಡುವುದೂ ಅತ್ಯಂತ ಪ್ರಮುಖ ವಿಷಯವಾದದ್ದು. ಇಂದಿನ ಆಧುನಿಕ ಯುಗದಲ್ಲೂ ಸಹ ಅಯುರ್ವೇದ ತನ್ನದೇ ಅಸ್ಥಿತ್ವವನ್ನು ಉಳಿಸಿಕೊಂಡು ಪರ್ಯಾಯ ಚಿಕಿತ್ಸಾ ಪದ್ಧನಿಯನ್ನು ಶೋಧಿಸುತ್ತಿರುವ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಕೇರಳದ ಆಯುರ್ವೇದ ಚಿಕಿತ್ಸೆ ಯುರೋಪ್ ನಿಂದ 600,000 ಜನ ಪ್ರವಾಸಿಗರನ್ನು ಆಕರ್ಶಿಸಿಸುವುದೇ ಇದಕ್ಕೆ ಉತ್ತಮ ನಿದರ್ಶನ. ಇಂತದ್ದೇ ಹಲವು ನಿದರ್ಶನಗಳು ಅಮೆರಿಕಾ, ಬ್ರೆಜಿಲ್ ನಲ್ಲಿಯೂ ಕಾಣಸಿಗುತ್ತದೆ. ಹೇಗೆ ಯೋಗಕ್ಕೆ ಅಮೆರಿಕಾ ಶರಣಾಗಿದೆಯೋ ಹಾಗೆಯೇ ಆಯುರ್ವೇದ ಪದ್ಧತಿಗೂ ಮಾರು ಹೋಗಿದೆ. ಇನ್ನು ಹಿಂದೊಮ್ಮೆ ಭಾರತದ ತುಂಡಾಗಿದ್ದ, ಬಗಲಲ್ಲೇ ಇರುವ ಬಾಂಗ್ಲಾ ಸಹ ಆಯುರ್ವೇದ ಕಾಲೇಜು ಆರಂಭಿಸಲು ತೀರ್ಮಾನಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಜಪಾನ್ ಈಗಾಗಲೇ 30 ವರ್ಷದಿಂದ ಆಯುರ್ವೇದ, ಯೋಗ ಚಿಕಿತ್ಸೆಯನ್ನು ಮುಂದುವರೆಸುತ್ತಿದೆ.  ಶ್ರೀಲಂಕಾ, ಬರ್ಮಾ ದೇಶಗಳಂತೂ ಆಯುರ್ವೇದದ ಶಕ್ತಿಗೆ ಅಚ್ಚರಿ ವ್ಯಕ್ತಪಡಿಸಿ ಅದರ ಹಿಂದೆ ಬಿದ್ದಿದ್ದಾರೆ. alternative medicines ಗಾಗಿ ಅಲೆದಾಡುತ್ತಿರುವ ಇಂತಹ ಸಂದರ್ಭದಲ್ಲಿ  ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಪುರಾತನ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ ಎಂದರೆ ಹೆಮ್ಮೆಯ ವಿಷಯವಲ್ಲವೇ?
ಇನ್ನು ಆಯುರ್ವೇದ ಎಂದಾಕ್ಷಣ ಹಿಗ್ಗಿ, ಎಲ್ಲವೂ ಸರಿ ಇದೆ ಎಂಬ ಭ್ರಾಂತು ಬೇಡ, ಸನಾತನ ಧರ್ಮದ ಕೊಡುಗೆಯನ್ನು ಅಪಪ್ರಚಾರ ಮಾಡಿ ಮೂಲ ತತ್ವಕ್ಕೇ ಮಸಿ ಬಳಿಯುವಂತಹ ಕೆಲಸ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿರುತ್ತದೆ. ಹಾಗೆಯೇ ಕೈಗೆ ಸಿಕ್ಕ ನಾರು-ಬೇರುಗಳನ್ನೆಲ್ಲಾ ತಂದು ಫುಟ್ ಪಾಥ್ ಮೇಲೆ ಕುಳಿತು ಆಯುರ್ವೇದದ ಬಣ್ಣ ಬಳಿದು ಅರಚುತ್ತಾ ಜನರ ದಿಕ್ಕು ತಪ್ಪಿಸುವವರೂ ಇದ್ದಾರೆ. ಇಂತಹವರಿಂದಲೇ ಆಯುರ್ವೇದ ಎಂದರೆ ಕನಿಷ್ಠ ಮಟ್ಟದ ಭಾವನೆ ಮೂಡುತ್ತದೆ. ಹಿಮಾಲಯದಲ್ಲಿ ಅಪೂರ್ವ ಗಿಡ ಮೂಲಿಕೆಗಳಿರುವುದೂ ನಿಜ, ಅದನ್ನು ಔಷಧಗಳಿಗೆ ತಯಾರು ಮಾಡಲೂ ಸಾಧ್ಯವಿದೆ. ಅಂದ ಮಾತ್ರಕ್ಕೆ ಸಿಕ್ಕ ಸಿಕ್ಕವರೆಲ್ಲ ಅದನ್ನು ತಯಾರು ಮಾಡು ಶುರು ಮಾಡಿಬಿಟ್ಟಿದ್ದಾರೆ ಮುಂದೊಂದು ದಿನ ಇದೇ ನಮಗೆ ಮುಳುವಾಗುವ ಸಾಧ್ಯತೆಗಳಿವೆ. ಹಾಗೆಂದ ಮಾತ್ರಕ್ಕೆ ರಾತ್ರೋ ರಾತ್ರಿ ಎಲ್ಲವನ್ನೂ ಆಯುರ್ವೇದ ಮಯಮಾಡಿಬಿಡಬೇಕೆಂದಲ್ಲ. ಏಕೆಂದರೆ ನಾವು ಪಾಶ್ಚಾತ್ಯ  ಜೀವನ ಶೈಲಿಗೆ ಬಹು ವರ್ಷಗಳಿಂದ ಒಗ್ಗಿ ಹೋಗಿದ್ದೇವೆ. ತಕ್ಷಣವೇ ಪ್ರಾಣ ಹೋಗುವ ಸ್ಥಿತಿ ಎಂದರೆ ಆಯುರ್ವೇದ ಬರಲಿ ಅಲೋಪಥಿ ಬೇಡ ಎನ್ನಲು ಸಾಧ್ಯವಿಲ್ಲ. ಇಂದಿನ ಜೀವನ ಶೈಲಿಗೆ ಪುರಾತನ ಚಿಕಿತ್ಸಾ ಪದ್ಧತಿಯಿಂದ ಅತಿ ವೇಗದಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬಂದುಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಬದಲಾಗಿ ಹಂತ ಹಂತವಾಗಿ ಜಾರಿಗೆ ತರುವ ಅಗತ್ಯವಿದೆ. ಈ ದೃಷ್ಥಿಯಿಂದಲೇ ಮೊನ್ನೆ ಸೆ.15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್(ಆಯುರ್ವೇದ, ಯೋಗ, ನ್ಯಾಚರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ) ಗೆ ಚಾಲನೆ ನೀಡುವ ನಿರ್ಧಾರ ಕೈಗೊಂಡಿದ್ದು ಅಲೋಪತಿ ಪದ್ಧತಿಯ ಚಿಕಿತ್ಸೆಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಈ ಯೋಜನೆ ಮೂಲಕ ಪ್ರಮುಖವಾಗಿ ದುರ್ಬಲ ಮತ್ತು ದೂರದ ಗುಡ್ಡಗಾಡಿನ ಪ್ರದೇಶಗಳಲ್ಲಿ ಈ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಆಯುಷ್ ಹೆಲ್ತ್ ಮಿಷನ್ ಮೂಲಕ, ಆಯುಷ್ ಆಸ್ಪತ್ರೆಗಳ ಹಾಗೂ ಔಷಧಾಲಯಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಲಿದೆ. ಸಾವಯವ ಕೃಷಿಯಿಂದ ಆಯುಷ್ ಚಿಕಿತ್ಸಾ ವಿಧಾನಕ್ಕೆ ಔಷಧ ತಯಾರಿಕೆಯಾಗಲಿದ್ದು  ಇದಕ್ಕೂ ಉತ್ತೇಜನ ದೊರೆಯಲಿದೆ. ಭಾರತದ ಪುರಾತನ ಚಿಕಿತ್ಸಾ ವಿಧಾನಗಳು ಜಗತ್ತು ಹುಡುಕುತ್ತಿರುವ ಅಲೋಪತಿಗೆ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿ ನಿಲ್ಲಲಿವೆ.

Monday 1 September 2014

ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?


ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣವನ್ನು ಹಣ ಪಡೆದು ಕೆಲವು ಸುದ್ದಿ ವಾಹಿನಿಗಳು ದಿನವಿಡೀ ಬಿತ್ತರಿಸುತ್ತವೆ!ಆ.10ರಂದು ನಡೆದ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಚಾರ ಸಂಕಿರಣದಲ್ಲಿ ಮಾಜಿ ಪತ್ರಕರ್ತ, ರಾಜ್ಯ ಸರ್ಕಾರದ ಮಾಧ್ಯಮ ಹಾಲಿ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಇಂತಹ ಹೇಳಿಕೆ ನೀಡಿಬಿಟ್ಟರು! ಮೋದಿ ಅವರದ್ದು ಅಸ್ವಾಭಾವಿಕ(ಕೃತಕ) ಜನಪ್ರಿಯತೆ ಎಂಬುದು ಸಿ.ಎಂ ಸಲಹೆಗಾರರ ವಿಚಾರವಾಗಿತ್ತು. ಅದನ್ನು ಹೇಳುವ ರೀತಿಯಲ್ಲಿ ಹೇಳಿದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲವೇನೊ.... ಸುದ್ದಿಯಲ್ಲಿರಲು ಹಪಹಪಿಸಿ ಲೋಕಸಭಾ ಚುನಾವಣೆಗೂ ಮುನ್ನ ಹಲವು ಸಾಹಿತಿಗಳು ಇಂತಹದ್ದೇ ಹೇಳಿಕೆ ನೀಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಪತ್ರಿಕೋದ್ಯಮದಲ್ಲಿ ಸುದೀರ್ಘ ಅವಧಿಯ ಅನುಭವ ಹೊಂದಿರುವ ಹಿರಿಯ ಪತ್ರಕರ್ತರೇ ಯಾವುದೋ ಪಕ್ಷವನ್ನು ಟೀಕಿಸುವ ಭರದಲ್ಲಿ ವೃತ್ತಿಧರ್ಮಕ್ಕೇ ಅಪಚಾರವೆಸಗುವುದೇ?

ಪ್ರಧಾನಿಯ ಜನಪ್ರಿಯತೆಯನ್ನು ಟಿಕಿಸುವ ಭರದಲ್ಲಿ ಪತ್ರಕರ್ತರೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಘನತೆಯನ್ನು ಹರಾಜುಹಾಕಿರುವುದು ಬಹುಶಃ ಇತಿಹಾಸದಲ್ಲೇ ಮೊದಲು! ಗಾಂಧಿ ಕುಟುಂಬಕ್ಕೆ ಇಂದಿಗೂ ನಿಷ್ಠರಾಗಿಯೇ ಉಳಿದುಕೊಂಡಿರುವ ಪತ್ರಕರ್ತ ಕುಮಾರ್ ಕೇಥ್ ಕರ್ ಸಹ ಈ ಮಟ್ಟಕ್ಕೆ ಇಳಿದಿರಲಿಲ್ಲ ಎಂದೆನುಸುತ್ತದೆ, ಅಮಿನ್ ಮಟ್ಟು ಅವರದ್ದು ಅವರನ್ನೂ ನಾಚಿಸುವಂತಹ ಹೇಳಿಕೆ.

ಭಾರತ ಕಂಡ ಪ್ರಸಿದ್ಧ ಪತ್ರಕರ್ತ ಅರುಣ್ ಶೌರಿ, ರಾಮನಾಥ್ ಗೋಯೆಂಕಾ, ಆಮ್ ಆದ್ಮಿಯ ಅಶುತೋಶ್ ಸೇರಿದಂತೆ ಪತ್ರಕರ್ತರೂ ಸಹ ನಿರ್ದಿಷ್ಟಪಕ್ಷಗಳ ಪರವಾಗಿ ಮಾತನಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಅವರ್ಯಾರೂ ಪತ್ರಿಕಾರಂಗದ ಮಾನವನ್ನೆಂದಿಗೂ ಹರಾಜು ಹಾಕಿರಲಿಲ್ಲ. ಇಷ್ಟಕ್ಕೂ ಪೇಯ್ಡ್ ಮೀಡಿಯಾ ಅಥವಾ ಏಕಪಕ್ಷೀಯವಾಗಿ ಸುದ್ದಿ ಬಿತ್ತರಿಸುವ ಬಗ್ಗೆ ಹೇಳಿಕೆಗಳನ್ನು ನೀಡಲು ಅಮಿನ್ ಮಟ್ಟು ಅವರಿಗೆ ಅರ್ಹತೆ ಏನಿದೆ? ಏಕೆಂದರೆ 2012ರ ನವೆಂಬರ್ 5ರಂದು(11/05/2012) ಪ್ರಜಾವಾಣಿ ಪತ್ರಿಕೆಯಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ
'ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ'ಶೀರ್ಷಿಕೆಯ ಲೇಖನ ಅವರಿಗೆ ಗಾಂಧಿ ಕುಡಿಯ ಬಗ್ಗೆ ಇರುವ ಅತೀವ ಕಳಕಳಿಯನ್ನು 'ಅನಾವರಣ'ಗೊಳಿಸಿತ್ತು. (http://www.prajavani.net/columns/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%AD%E0%B2%B5%E0%B2%BF%E0%B2%B7%E0%B3%8D%E0%B2%AF-%E0%B2%85%E0%B2%B5%E0%B2%B0-%E0%B2%95%E0%B3%88%E0%B2%AF%E0%B2%B2%E0%B3%8D%E0%B2%B2%E0%B2%BF%E0%B2%AF%E0%B3%87-%E0%B2%87%E0%B2%A6%E0%B3%86)

2012ರ ವೇಳೆಗೆ ಯುಪಿಎ ಸರ್ಕಾರದ ಬಂಡವಾಳ ದೇಶದ ಜನತೆಗೆ ಗೊತ್ತಾಗಿಹೋಗಿತ್ತು. ಪ್ರಥಮ ಅವಧಿಯಲ್ಲೇ ಹಗರಣಗಳ ಪಟ್ಟಿಯನ್ನೇ ಹೊತ್ತುಕೊಂಡಿತ್ತು ಕಾಂಗ್ರೆಸ್ ಸರ್ಕಾರ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದ ಜನತೆ ಸುಮಾರು 60 ವರ್ಷಗಳಿಂದ ನಡೆದುಕೊಂಡು ಬಂದಿದ್ದ ವಂಶಪಾರಂಪರ್ಯ ರಾಜಕಾರಣದಿಂದ ರೋಸಿಹೋಗಿದ್ದರು. ಆದರೂ ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆಂದು ಹೇಳುವ ಮೂಲಕ ಈ ಅಂಕಣದಲ್ಲಿ ಮಾಧ್ಯಮಗಳಿಂದ ಯುವರಾಜನೆಂದೇ ಕರೆಸಿಕೊಳ್ಳುತ್ತಿದ್ದ, ದೇಶದ ಜನತೆ ಪಾಲಿಗೆ ಬೇಡವಾಗಿದ್ದ ರಾಹುಲ್ ಗಾಂಧಿಯನ್ನು, ಅತಿ ಪ್ರಮೋಟ್ ಮಾಡಲು ಸೂಕ್ಷ್ಮವಾಗಿ ಯತ್ನಿಸಿದ್ದರು ಅಮಿನ್ ಮಟ್ಟು ಸಾಹೇಬರು, ಅಮಿನ್ ಮಟ್ಟು ಅವರೂ ಹಣ ಪಡೆದು ಬರೆದಿದ್ದೀರಾ ಎಂದು ಆರೋಪ ಮಾಡುವುದು ಅನ್ಯರಿಗೆ ಸುಲಭದ ಕೆಲಸ. ಮೋದಿ ರಾಷ್ಟ್ರರಾಜಕಾರಣಕ್ಕೆ ಬರುವುದಕ್ಕೂ ಮುನ್ನ( ಅಂದರೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ) ರಾಹುಲ್ ಗಾಂಧಿ ಕುಳಿತರೆ ನಿಂತರೆ, ಮಾಧ್ಯಮಗಳು ಯುವರಾಜನೆಂದೇ ಸಂಬೋಧಿಸಿ ಸಕಲ ರಾಜಮರ್ಯಾದೆಗಳನ್ನಿತ್ತು ಗೌರವಿಸಿದಾಗ ಮುಖ್ಯಮಂತ್ರಿಗಳ ಸಲಹೆಗಾರರಾದ ಅಮಿನ್ ಮಟ್ಟು ಅವರಿಗೆ ಮಾಧ್ಯಮಗಳ ಬಗ್ಗೆ ಹಣ ಪಡೆದು ಸುದ್ದಿ ಬಿತ್ತರಿಸುತ್ತಿದ್ದ ಅನುಮಾನ ಬರಲೇ ಇಲ್ಲ.

ಇರಲಿ, ಪ್ರಜಾಪ್ರಭುತ್ವದ ಅತೀವ ಕಾಳಜಿ ಹೊಂದಿದವರು ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ? ಒಂದು ವೇಳೆ ವಂಶಪರಂಪರೆಯಿಂದ ರಾಜಕಾರಣವನ್ನು ಒಪ್ಪಿಕೊಂಡಿರುವ ಜನತೆಯ ನಿರ್ಧಾರವನ್ನು ಅಮಿತ್ ಮಟ್ಟು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದೇ ಆದರೆ, ಅದೇ ಜನತೆ 2014ನೇ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಒಪ್ಪಿದ್ದಾರಲ್ಲಾ ಅದನ್ನು ಸಾರಾಸಗಟಾಗಿ ನಿರಾಕರಿಸಿ ಮಾಧ್ಯಮಗಳ ಮೇಲೇಕೆ ವೃಥಾ ಅಪವಾದ ಮಾಡುತ್ತಾರೆ? ಅಥವಾ  ವಂಶಾಡಳಿತವನ್ನು ಒಪ್ಪಿಕೊಳ್ಳುವಂತೆ ಮಾಡಿದ್ದ ಮಾಧ್ಯಮಗಳು ನಿಷ್ಠೆ ಬದಲಿಸಿ ವಂಶಾಡಳಿತದ ವಿರುದ್ಧ ಇರುವ ಮೋದಿ ಅವರ ಭಾಷಣಗಳನ್ನು ಪ್ರಸಾರ ಮಾಡುತ್ತಿದೆ ಎಂಬುದು ದಿನೇಶ್ ಅಮಿನ್ ಮಟ್ಟು ಅವರ ವಾದವೇ? ರಾಜಕೀಯ ಟೀಕೆಗಳಿಗೆ ಮಾಧ್ಯಮಗಳ ಘನತೆಯನ್ನೇಕೆ ಕುಗ್ಗಿಸುತ್ತೀರಿ? ಬಹುತೇಕ ಮಾಧ್ಯಮಗಳು, ಟಿ.ಆರ್.ಪಿ ಸರ್ಕ್ಯುಲೇಶನ್ ಗೋಸ್ಕರ ಹೇಳಿಕೆಗಳಿಗಾಗಿ ರಾಜಕೀಯ ವ್ಯಕ್ತಿಗಳನ್ನು ಪೀಡಿಸುತ್ತವೆ ಎಂಬುದು ತಿಳಿದಿದೆ. ಇನ್ನೂ ಕೆಲವೊಂದು ಮಾಧ್ಯಮಗಳು  ಸ್ಪಷ್ಟವಾಗಿ ಹೇಳಬೇಕೆಂದರೆ ದೇಶಕ್ಕೆ ಮಾರಕವಾಗಿರುವ ನಕ್ಸಲರ ಬಗ್ಗೆ ಮಾನವೀಯ ಕಾಳಜಿ ಪ್ರದರ್ಶಿಸಿದ್ದ, ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಹಣ ಮಾಡುತ್ತಿದ್ದ, ಆನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ  ತೆಹಲ್ಕಾ ದಂತಹ ಕೆಲವು ಮಾಧ್ಯಮಗಳು ಹುಟ್ಟಿಕೊಂಡಿರುವುದೇ ಹಣ ಮಾಡಲು ಎಂಬ ಆರೋಪವೂ ಇದೆ(yellow journalism) ನೀವು ಆರೋಪಿಸುವುದಾದರೆ, ಅದ್ಯಾವ ಮಾಧ್ಯಮ ಹಣ ಪಡೆದಿಯೋ ನಿರ್ದಿಷ್ಟವಾಗಿ ಉಲ್ಲೇಖಿಸಿದರೆ ಬೇರೆ ಮಾಧ್ಯಮಗಳ ಮರ್ಯಾದೆ ಉಳಿಯುತ್ತದೆ. ಇಲ್ಲದೇ ಇದ್ದರೆ ಮಾಧ್ಯಮಗಳೇ ಹೀಗೆ ಎಂಬ ಸಾರ್ವತ್ರಿಕ ಅಭಿಪ್ರಾಯ ಮೂಡುವುದಿಲ್ಲವೇ?

ಒಂದು ವೇಳೆ ನೀವು ಹೇಳುವ ಪ್ರಕಾರ ಮಾಧ್ಯಮಗಳು ಹಣ ಪಡೆದು ಸುದ್ದಿ ಬಿತ್ತರಿಸುವುದೇ ಆಗಿದ್ದರೆ, ಮೋದಿ ಹಣ ಕೊಟ್ಟ ಮರುಕ್ಷಣದಿಂದ ಮಾಧ್ಯಮಗಳೇ ಬದಲಾಗಿ ಹೋಗಬೇಕಿತ್ತು. ಹಾಗಾಯಿತೇ? ಊ ಹ್ಹು ಇಲ್ಲ. ಮೋದಿ ಪ್ರಧಾನಿಯಾಗುವವರೆಗೂ ಅವರನ್ನು ಹಣಿಯಲು ಮಾಧ್ಯಮಗಳು ಶಕ್ತಿ ಮೀರಿ ಪ್ರಯತ್ನಿಸಿದ್ದು ಜಗತ್ತಿಗೇ ಗೊತ್ತಿದೆ. ಸೋನಿಯಾ ಗಾಂಧಿ ಪ್ರಧಾನಿಯಾಗುವ ಊಹಾಪೋಹವೆದ್ದ ಸಂದರ್ಭದಲ್ಲಾಗಲೀ, ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಾಗಲಿ ಸಿಖ್ ನರಮೇಧ ನಡೆಸಿರುವುದರ ಬಗ್ಗೆ ಯಾವುದೇ ಮಾಧ್ಯಮಗಳೂ ಉಸಿರೆತ್ತಲಿಲ್ಲ. ಆದರೆ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗಿನಿಂದ ಹಿಡಿದು ಲೋಕಸಭಾ ಚುನಾವಣೆ ಫಲಿತಾಂಶ ಬರುವವರೆಗೂ ಚಾಲ್ತಿಯಲ್ಲಿದ್ದದ್ದು ಒಂದೇ ವಿಷಯ ಗುಜರಾತ್ ನರಮೇಧ. ಇಷ್ಟಾದರೂ ಮೋದಿಯಿಂದ ಹಣ ಪಡೆದು ಮಾಧ್ಯಮಗಳು ಪ್ರಚಾರ ನೀಡುತ್ತಿವೆ ಎನ್ನಲು ಹೇಗೆ ಸಾಧ್ಯ? ಒಂದು ವೇಳೆ ಸಿ.ಎಂ ಮೀಡಿಯಾ ಕಾರ್ಯದರ್ಶಿ ಹೇಳುವಂತೆ ಹಣ ನೀಡಿದ ಪಳಿಕವೂ ಮಾಧ್ಯಮ ಮೋದಿ ವಿರುದ್ಧವೇ ಮಾತನಾಡಲು ಸಾಧ್ಯವೇ? ಯೋಚಿಸಿ...

<b>ಇಷ್ಟಕ್ಕೂ ಮೋದಿ ಯಾರು</b>? ಅಮಿನ್ ಮಟ್ಟು ಅವರು ಆರೋಪ ಮಾಡಿರುವುದರಿಂದ ಇಂತಹ ಪ್ರಶ್ನೆ ಕೇಳಲೇಬೇಕಾಗಿದೆ.  ನರೇಂದ್ರ ಮೋದಿ ಯಾರು? ಮಾಧ್ಯಮಗಳು, ಭಾಷಣವನ್ನು ದಿನವಿಡೀ ಪ್ರಸಾರ ಮಾಡುವುದರಲ್ಲಿ ಅನುಮಾನ ಪಡಲು ಅಮಿನ್ ಮಟ್ಟು ಅವರು ಉಲ್ಲೇಖಿಸಿರುವ ಹೆಸರು ಯಾರೋ ಉಗ್ರ ಸಂಘಟನೆಯವರದ್ದೋ, ಅಥವಾ ಇನ್ನಾರೋ ಸಾಮಾನ್ಯನದ್ದೋ ಅಲ್ಲವಲ್ಲ. ದಿನವಿಡಿ ಪ್ರಸಾರವಾದದ್ದು  ಪ್ರಧಾನಿಯೊಬ್ಬರ ಭಾಷಣ ಅಷ್ಟೇ.

ಜನತೆ ನೀಡಿದ ಬಹುಮತದೊಂದಿಗೆ ಈ ದೇಶದ ಪ್ರಧಾನಿಯಾಗಿ  ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಧ್ವಜರೋಹಣ ನೆರವೇರಿಸಿ ಮಾತನಾಡಿದ್ದರು. ಹಲವಾರು ಕಾರಣಗಳಿಗೆ ಇದೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ಹಲವು ಮಾಧ್ಯಮಗಳು ಹಲವು ರೀತಿಯಲ್ಲಿ ಹಲವು ಸ್ವರೂಪಗಳಲ್ಲಿ ಅದನ್ನು ವರದಿ ಮಾಡಿದ್ದವು ಇದರಲ್ಲಿ ಪೇಯ್ಡ್ ನ್ಯೂಸ್ ಎಂದು ಆರೋಪಿಸಲು ಯಾವ ಅಂಶವಿದೆ? ಅಥವಾ ಪ್ರಧಾನಿ ಭಾಷಣವನ್ನು ಇಂತಿಷ್ಟೇ ಸಮಯ ಬಿತ್ತರಿಸಬೇಕೆಂಬ ನಿಯಮವೇನಾದರೂ ಇದೆಯೇ?

ಯಾವ ಕ್ಷೇತ್ರದಲ್ಲಾದರೂ ಹೊಸತೇನಾದರು ಕಂಡರೆ ಅದನ್ನು ತುಸು ಹೆಚ್ಚಾಗಿಯೇ ಬಿತ್ತರಿಸುವುದು ಮಾಧ್ಯಮಗಳ ಗುಣಧರ್ಮ, ಬೆಕ್ಕು-ನಾಯಿ ಸ್ನೇಹದಿಂದಿದ್ದರೆ ಅದನ್ನು ವಿದ್ಯುನ್ಮಾನ ಮಾಧ್ಯಮಗಳು ದಿನವಿಡೀ ಬಿತ್ತರಿಸಿ ಪ್ಯಾನಲ್ ಡಿಸ್ಕಷನ್ ನಡೆಸುವ ಕಾಲವಿದು. ಇನ್ನು ಸ್ವಾತಂತ್ರ್ಯ ದಿನಾಚರಣೆಯಂತಹ ವಿಶೇಷ ಸಂದರ್ಭದಗಳಲ್ಲಿ  ರಾಷ್ಟ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪದೇ ಪದೇ ತೋರಿಸುವುದು ಸಹಜ, ಪ್ರಧಾನಿ ಯಾರೇ ಆಗಿರಲಿ ಅವರ ಭಾಷಣದ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆ ನಡೆಸುವುದು ಟಿ.ವಿ ಮಾಧ್ಯಮಗಳ ಪದ್ಧತಿಯಾಗಿಬಿಟ್ಟಿದೆ. ನರೇಂದ್ರ ಮೋದಿ 2014 ಲೋಕಸಭಾ ಚುನಾವಣೆ ಫಲಿತಾಂಶದಲ್ಲೇ ದೇಶದ ಕೇಂದ್ರಬಿಂದುವಾಗಿದ್ದರು, ಇಂದಿರಾ ಗಾಂಧಿ ಅಂತಹ ವಂಶಪರಂಪರೆಯ ನಾಯಕಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಹುಮತದೊಂದಿಗೆ ಪ್ರಧಾನಿ ಹುದ್ದೆಗೆ  ಸಾಮಾನ್ಯನೊಬ್ಬ ಕೆಂಪು ಕೋಟೆ ಮೇಲಿಂದ ನಡೆಸುವ ಭಾಷಣ ಯಾರಿಗೇ ಆದರೂ ಕುತೂಹಲ ಮೂಡಿಸುವುದಿಲ್ಲವೇ ಹೇಳಿ ಮಾಧ್ಯಮ ಸಲಹೆಗಾರರೇ....? ಅದರಲ್ಲಿಯೂ ಪ್ರಧಾನಿ ಮೋದಿ ಅವರ ಭಾಷಣ ಪ್ರತಿಬಾರಿಗಿಂತಲೂ ವಿಭಿನ್ನವಾಗಿತ್ತು. ಗುಂಡು ನಿರೋಧಕ ಕವಚ ಬಳಸದೇ, ಬರೆದು ತಂದದ್ದನ್ನು ಓದದೇ ಭಾಷಣ ಮಾಡಿದ್ದೇ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೈಲೈಟ್ ಆಗಿತ್ತು. ಇದನ್ನೇ ಮಾಧ್ಯಮಗಳು ದಿನವಿಡಿ ಬಿತ್ತರಿಸಿ ಚರ್ಚೆ ನಡೆಸಿದ್ದವು. ತಪ್ಪೇನಿದೆ? ಕಳೆದ ಬಾರಿಯಂತೂ ಮಾಧ್ಯಮಗಳು ಮೋದಿ, ಮನಮೋಹನರ ಭಾಷಣಗಳನ್ನು ಹೋಲಿಸಿ ದಿನಗಟ್ಟಲೆ ಚರ್ಚೆ ನಡೆಸಿದ್ದವು. ಆಗ ನಿಮಗೆ ಮಾಧ್ಯಮಗಳ ಮೇಲೆ ಅನುಮಾನ ಬರಲಿಲ್ಲವೇ?

ಮಾಧ್ಯಮಗಳ ಮೇಲೆ ಗಂಭೀರ ಆರೋಪ ಮಾಡಿ ಜನರು ಪ್ರಜಾಪ್ರಭುತ್ವದ ನಾಲ್ಕನೇ ಅಂಗದಲ್ಲೂ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆ ನೀಡಿರುವ ದಿನೇಶ್ ಅಮಿನ್ ಮಟ್ಟು ಅವರು ರಾಜ್ಯ ಸರ್ಕಾರದ ಮಾಧ್ಯಮ ಸಲಹಾಗಾರನಾಗಿ ಕಾರ್ಯನಿರ್ವಹಿಸುವುದಕ್ಕೂ ಮುನ್ನ ಓರ್ವ ಪತ್ರಕರ್ತರಾಗಿದ್ದರು. ಈ ಹೇಳಿಕೆಯಿಂದ ದಿನೇಶ್ ಅಮಿನ್ ಮಟ್ಟು ಅವರ ಪ್ರಾಮಾಣಿಕತೆ ಬಗ್ಗೆಯೇ ಅನುಮಾನ ಮೂಡುವಂತಾಗಿದೆ. ಅವರೇ ನೀಡಿರುವ ಪೇಯ್ಡ್ ನ್ಯೂಸ್ ಹೇಳಿಕೆ ಪತ್ರಕರ್ತರ ಪ್ರಾಮಾಣಿಕತೆಯನ್ನೇ ಅಣಕಿಸುವಂತಿದೆ. ಮುಖ್ಯಮಂತ್ರಿಗಳ ಪತ್ರಿಕಾ ಸಲಹಗಾರರಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂತಹ ಹೇಳಿಕೆ ನೀಡಲು ಸರ್ಕಾರದಿಂದಲೋ ಅಥವಾ ಮುಖ್ಯಮಂತ್ರಿಗಳಿಂದಲೋ ನೀವು ಎಷ್ಟು ಹಣ ಪಡೆದಿದ್ದೀರಿ ಎಂದೂ ನಿಮ್ಮನ್ನು ಜನತೆ ಪ್ರಶ್ನಿಸಿದಬಹುದು. ಕಾಂಗ್ರೆಸ್ ಅಥವಾ ಇನ್ಯಾವುದೇ ನಿರ್ಧಿಷ್ಟ ಪಕ್ಷವನ್ನು ಸಮರ್ಥಿಸಿಕೊಳ್ಳಲೇಬೇಕೆಂಬ ಅನಿವಾರ್ಯತೆ ಇದ್ದರೆ, ಅಧಿಕೃತವಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಿಯೇ ಇಂತಹ ಆರೋಪ ಮಾಡಬಹುದು ಹಾಗಾದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಮೋದಿ ಟೀಕಿಸುವ ಭರದಲ್ಲಿ ಪತ್ರಕರ್ತರಾಗಿದ್ದುಕೊಂಡೇ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?