Sunday 27 November 2016

ವಿದ್ಯಾರಣ್ಯರು-ವೇದಾಂತ ದೇಶಿಕರು ಅದೈತ-ವಿಶಿಷ್ಠಾದ್ವೈತದ ಅಪೂರ್ವ ಸಂಗಮ



ನಾಥಮುನಿ ಪವಿತ್ರ ಗ್ರಂಥಗಳನ್ನು ಪುನಃ ಪಡೆದರೆ, ಅದನ್ನು ಯಮುನ ಮುನಿ ವ್ಯಾಪಕವಾಗಿ ಪ್ರತಿಪಾದಿಸಿದರು. ನಂತರ ಬಂದ ರಾಮಾನುಜಾಚಾರ್ಯರು ಅದನ್ನು ವ್ಯಾಖ್ಯಾನಿಸಿದರೆ ಆ ನಂತರದ ದಿನಗಳಲ್ಲಿ ವಿಜ್ಞಾನ ರೂಪದಲ್ಲಿ ಕ್ರಮಬದ್ಧಗೊಳಿಸುವುದಕ್ಕಾಗಿ ಅವುಗಳನ್ನು ವೇದಾಂತ ದೇಶಿಕರಿಗೆ ನೀಡಲಾಯಿತು. ಇದು 13ನೇ ಶತಮಾನದಲ್ಲಿದ್ದ ಶ್ರೀವೈಷ್ಣವ ಸಿದ್ಧಾಂತದ ಆಚಾರ್ಯ ವೇದಾಂತ ದೇಶಿಕರ ಬಗೆಗಿನ ವರ್ಣನೆ. ವೇದಾಂತ ದೇಶಿಕರು ಶ್ರೀವೈಷ್ಣವ ಆಚಾರ್ಯರಾಗಿದ್ದರೂ ಅವರ ಕವಿತ್ವ, ತರ್ಕ, ಭೋಧನೆಗಳನ್ನು ಜೀವಿಸುತ್ತಿದ್ದ ಜೀವನ ಕ್ರಮದಿಂದ ಅನೇಕ ಅದ್ವೈತ ತತ್ವದ ಅನುಯಾಯಿಗಳು ವೇದಾಂತ ದೇಶಿಕರನ್ನು ಅತ್ಯಂತ ಪೂಜನೀಯ ಭಾವನೆಯಿಂದ ಕಾಣುತ್ತಾರೆ. ಶ್ರೇಷ್ಠ ಅದ್ವೈತ ವಿದ್ವಾಂಸರಾಗಿದ್ದ ಅಪ್ಪಯ್ಯ ದೀಕ್ಷಿತರಂತೂ ವೇದಾಂತ ದೇಶಿಕರನ್ನು "ಕವಿ-ತಾರ್ಕಿಕ ಸಿಂಹಂ" (ಕವಿ- ತಾರ್ಕಿಕರ ನಡುವಿನ ಸಿಂಹ) ಅಂದರೆ ತರ್ಕಬದ್ದವಾಗಿ ವಾದ ಮಾಡುವುದರಲ್ಲಿ ಅವರನ್ನು ಮೀರಿಸಲು ಸಾಧ್ಯವಿರಲಿಲ್ಲ ಎಂದು ಬಣ್ಣಿಸಿ ನಮಿಸಿದ್ದಾರೆ.

ಅಪ್ಪಯ್ಯ ದೀಕ್ಷಿತರು ವೇದಾಂತ ದೇಶಿಕರ ಕವಿತ್ವ- ತರ್ಕದ ವಿದ್ವತ್ ಪ್ರೌಢಿಮೆಯನ್ನು ವರ್ಣನೆ ಮಾಡುತ್ತಾ ಹೀಗೆ ಹೇಳುತ್ತಾರೆ. "ಇತ್ಥಂ ವಿಚಿನ್ತ್ಯ ಸರ್ವತ್ರ ಭಾವಾಃ ಸಂತಿ ಪದೇ ಪದೇ ಕವಿ ತಾರ್ಕಿಕ ಸಿಂಹಸ್ಯ ಕಾವ್ಯೇಷು ಲಲಿತೇಷ್ವಪಿ". ಅಂದರೆ ವೇದಾಂತ ದೇಶಿಕರ ಅತ್ಯಂತ ಸರಳ ಹಾಗೂ ಮೃದು ರಚನೆಯ ಪ್ರತಿ ಹಂತದಲ್ಲೂ ಪ್ರತಿ ಪದಗಳಲ್ಲೂ ಕವಿತ್ವದ ಶ್ರೇಷ್ಠತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು. ವೇದಾಂತ ದೇಶಿಕರು ಕೇವಲ ಕವಿತ್ವ-ತರ್ಕದ ವಿದ್ವತ್ತಿನ ಗಣಿಯಾಗಿರಲಿಲ್ಲ, ಅವರಲ್ಲಿ ಮಾನವ ಬುದ್ಧಿಶಕ್ತಿ ಪ್ರಜ್ಞೆಗೆ ತಿಳಿದ ಎಲ್ಲಾ ಕಲೆ-ವಿಜ್ಞಾನದ ಆಳವಾದ ಜ್ಞಾನದ ಬ್ರಹ್ಮಾಂಡವೇ ಇತ್ತು ಅದು ತಾತ್ವಿಕ ವೈಭವ, ನೈತಿಕ ಶ್ರೇಷ್ಠತೆ ಮತ್ತು ಸೌಂದರ್ಯದ ವೈಭವದಿಂದ ಕಂಗೊಳಿಸುತ್ತಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಅದಕ್ಕಾಗಿಯೇ ಅವರನ್ನು ಸರ್ವತಂತ್ರ ಸ್ವತಂತ್ರ( ಎಲ್ಲಾ ಕಲೆಗಳ ನಿಪುಣ) ಎಂದು ಶ್ರೇಷ್ಠ ವಿದ್ವಾಂಸರು ಬಣ್ಣಿಸಿದ್ದಾರೆ.      

ವೇದಾಂತ ದೇಶಿಕರ ಒಂದು ವೈಶಿಷ್ಟ್ಯವೇನೆಂದರೆ ಅವರು ತಮ್ಮ ಕವಿತ್ವವನ್ನು ತತ್ವಜ್ಞಾನದಿಂದ ಶ್ರೀಮಂತಗೊಳಿಸಿದ್ದರು. ತತ್ವಶಾಸ್ತ್ರವನ್ನು ಕವಿತ್ವದಿಂದಲೂ ಅಲಂಕೃತಗೊಳಿಸಿದ್ದರು. ಅವರು ಬೋಧನೆಗಳನ್ನೇ ಜೀವಿಸುತ್ತಿದ್ದರು. ಗೃಹಸ್ಥರಾಗಿದ್ದರೂ ಸಂತಶ್ರೇಷ್ಠ, ಋಷಿತುಲ್ಯರಂತೆ ಜೀವಿಸಿದ್ದರು. ಮುಘಲರ ಆಕ್ರಮಣದಿಂದ ಸನಾತನ ಧರ್ಮವನ್ನು ರಕ್ಷಿಸುವುದಕ್ಕೆ ವಿಜಯನಗರ ಸಾಮ್ರಾಜ್ಯಸ್ಥಾಪನೆಗೆ ಯತಿಗಳಾಗಿ ಸನ್ಯಾಸಿಗಳಾಗಿ, ದೇವತಾ ಸದೃಷ್ಯ ಸಂತರಾಗಿ ವಿದ್ಯಾರಣ್ಯರು ಮಾರ್ಗದರ್ಶನ ನೀಡಿದ್ದರು. ವಿದ್ಯಾರಣ್ಯರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರೂ ಸಹ ವಿದ್ಯಾರಣ್ಯರಂತೆಯೇ ಸನಾತನ ಧರ್ಮದ ರಕ್ಷಣೆಯ ವಿಷಯದಲ್ಲಿ ಅವಿಸ್ಮರಣೀಯರಾಗಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಯಾವೆಲ್ಲಾ ಘಟನೆಗಳು ವಿದ್ಯಾರಣ್ಯರನ್ನು ಇನ್ನಿಲ್ಲದಂತೆ ಕಾಡಿದ್ದವೋ ಅಂಥಹದ್ದೇ ಘಟನೆಗಳು ವೇದಾಂತ ದೇಶಿಕರ ಜೀವನದಲ್ಲಿಯೂ ನಡೆದಿದೆ. ಸಿದ್ಧಾಂತದ ಕವಲು  ಯಾವುದಾದರೇನಂತೆ ಅವುಗಳೆಲ್ಲದಕ್ಕೂ ಬುಡವಾಗಿರುವ ಸನಾತನ ಧರ್ಮದ ಸಂಸ್ಥಾಪನೆಯೊಂದೇ ವಿದ್ಯಾರಣ್ಯರಿಗೂ ಅವರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರಿಗೂ ಇದ್ದ ಗುರಿಯಾಗಿತ್ತು. ವಿದ್ಯಾರಣ್ಯರು ಸನಾತನ ಧರ್ಮದ, ಆ ಧರ್ಮದ ಜ್ಞಾನವಾರಿಧಿಯಾಗಿದ ಗ್ರಂಥಗಳ ಏಳ್ಗೆಗೆ ಹೇಗೆ ಅವಿರತ ಶ್ರಮವಹಿಸಿದ್ದರೋ ಅವರ ಸಹಪಾಠಿಗಳಾಗಿದ್ದ ವೇದಾಂತರೂ ಸಹ ಹಾಗೆಯೇ ಇದ್ದರು, ವಿದ್ಯಾರಣ್ಯರಂತೆಯೇ ಶ್ರಮಿಸಿದ್ದರು. ಅದು 1327,  ದೆಹಲಿ ಸುಲ್ತಾನನ ಸೇನಾಪತಿಯಾಗಿದ್ದ ಮಲಿಕ್ ಕಾಫರ್ ಶ್ರೀರಂಗಂ ಮೇಲೆ ಆಕ್ರಮಣ ಮಾಡುತ್ತಾನೆ. ಶ್ರೀರಂಗಂ ನಲ್ಲಿದ್ದ ಶ್ರೀವೈಷ್ಣವರು ಸ್ವಭಾವತಃ ಸಾತ್ವಿಕರು. ಮುಸಲ್ಮಾನರ ದಾಳಿಯಿಂದಾಗಿ ದೇವಾಲಯ, ವಿಗ್ರಹಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಯಾವ ಸಾಧ್ಯತೆಗಳೂ ಇರಲಿಲ್ಲ. ದಾಳಿಯಿಂದ ದೇವಾಲಯಕ್ಕೆ ಉಂಟಾಗುವ ಹಾನಿಯನ್ನು ತಡೆಯಲು ಸುದರ್ಶನ ಭಟ್ಟಾರ್ ನೇತೃತ್ವದಲ್ಲಿ ದೇವಾಲಯಗಳಲ್ಲಿದ್ದ ಉತ್ಸವ ಮೂರ್ತಿಗಳನ್ನು ಹೊತ್ತು ಸುರಕ್ಷಿತ ಪ್ರದೇಶಗಳಿಗೆ ಹೊರಡುವುದಕ್ಕೆ ಅಲ್ಲಿನ ಆಚಾರ್ಯರುಗಳು ನಿರ್ಧರಿಸುತ್ತಾರೆ ಅಂತೆಯೇ ಪಿಳ್ಳೈ ಲೋಕಾಚಾರ್ಯರರೆಂಬ ಹಿರಿಯರ ನೇತೃತ್ವದ ಗುಂಪೊಂದು ಉತ್ಸವ ಮೂರ್ತಿಯನ್ನು ಹೊತ್ತು ತಿರುಪತಿಗೆ ಹೊರಡುವುದಕ್ಕೆ ಸಿದ್ಧವಾಗುತ್ತದೆ. ಮತ್ತೊಂದಷ್ಟು ಜನರ ತಂಡ ದೇವಾಲಯದಲ್ಲಿರುವ ವಿಗ್ರಹ ಮುಘಲ ದೊರೆಗಳ ಕಣ್ಣಿಗೆ ಬೀಳದಂತೆ ಮಾಡಲು ದೇವಾಲಯದ ಮೂಲವರದ ಎದುರು ಕಲ್ಲಿನ ಗೋಡೆ ಕಟ್ಟಲು ಮುಂದಾಗುತ್ತದೆ. ಆ ಸಂದರ್ಭದಲ್ಲಿ ವೇದಾಂತ ದೇಶಿಕರೂ ಸಹ ಶ್ರೀರಂಗಂ ನಲ್ಲೇ ಇದ್ದರು. ದೇವಾಲಯದ ರಕ್ಷಣೆಗಾಗಿ ಜೀವವನ್ನೂ ಪಣಕ್ಕಿಟ್ಟು ಹೋರಾಡಿದ್ದರು. ಸುದರ್ಶನ ಭಟ್ಟಾರ್ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಸೂತ್ರ ಪ್ರಕಾಶಿಕ ಎಂಬ ಗ್ರಂಥದ ಹಸ್ತಪ್ರತಿಗಳನ್ನು ಹೊತ್ತು ಕರ್ನಾಟಕದ ಸತ್ಯಮಂಗಲಂ ನಿಂದ ತಿರುನಾರಾಯಣಪುರಂ ನತ್ತ ಪ್ರಯಾಣ ಬೆಳೆಸಲು ಸಿದ್ಧರಾಗುತ್ತಾರೆ. ಆದರೆ ಆ ವೇಳೆಗೆ ಆಗಲೇ ಮುಘಲರು ರಕ್ಕಸರಂತೆ ಮೇಲರಗುತ್ತಾರೆ. ವೇದಾಂತ ದೇಶಿಕರ ಜೊತೆಗಿದ್ದ ಹಲವರನ್ನು ಪ್ರಾಣಿಗಳಂತೆ ತರಿದುಹಾಕುತ್ತಾರೆ. ಪ್ರಾಣ ಹೋಗುವ ಅಪಾಯವನ್ನು ಎದುರಿಸುತ್ತಿದ್ದ ವೇದಾಂತ ದೇಶಿಕರು ತಮ್ಮವರ ಹೆಣಗಳ ಮಧ್ಯದಲ್ಲೇ ಅವಿತು ಮುಘಲರ ಮತಾಂಧ ಕಣ್ಣಿನಿಂದ ತಪ್ಪಿಸಿಕೊಂಡು ತಿರುನಾರಾಯಣಪುರಂ( ಇಂದಿನ ಮೇಲುಕೋಟೆ) ಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀರಂಗಂನ ಇತಿಹಾಸದ ವೈಭವದ ಆರಾಧನೆಯನ್ನು ಮರುಕಳಿಸುವಂತೆ ಪ್ರಾರ್ಥಿಸಿ ವೇದಾಂತ ದೇಶಿಕರು ಪ್ರಸಿದ್ಧ ಅಭೀತಿ ಸ್ತವ ಎಂಬ ಸ್ತೋತ್ರವನ್ನು ಬರೆದದ್ದು ಇದೇ ಸಂದರ್ಭದಲ್ಲೇ. ವೇದಾಂತ ದೇಶಿಕರು ಶ್ರೀರಂಗಂ ನಲ್ಲಿ ಪುನಃ ಹಳೆಯ ವೈಭವವನ್ನು ಮರುಕಳಿಸುವಂತೆ ಪ್ರಾರ್ಥಿಸಿ ಕೇವಲ ಅಭೀತಿ ಸ್ಥಾವಂ ಎಂಬ ಶ್ಲೋಕಗಳ ಗುಚ್ಛವನ್ನು ಬರೆದು ಅದು ನನಸಾಗುವುದಕ್ಕೆ ಸತತ 12 ವರ್ಷಗಳು ಕಾಯುತ್ತಾರೆ. ಇಂದಿನ ಮೇಲುಕೋಟೆಯಾಗಿರುವ ತಿರುನಾರಾಯಣಪುರಂನ ಸತ್ಯಕಾಲಂ ಎಂಬ ಗ್ರಾಮದಲ್ಲಿ ವೇದಾಂತ ದೇಶಿಕರು ಬದುಕಿದ್ದ 12 ವರ್ಷ ಅವರಿಗೆ ನೆರಳು ನೀಡಿದ್ದ ಅಶ್ವತ್ಥ ಮರವನ್ನೂ ಈಗಲೂ ನಾವು ನೋಡಬಹುದಾಗಿದೆ. ವೇದಾಂತ ದೇಶಿಕರು ಶ್ರೀರಂಗಂ ನ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾದು ಕುಳುತುಕೊಳ್ಳುತ್ತಿದ್ದ ಕಲ್ಲಿನ ಚಪ್ಪಡಿಯನ್ನು ಗ್ರಾಮದ ವಾದಿರಾಜ ದೇವಾಲಯದಲ್ಲಿ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ಅಷ್ಟೇ ಅಲ್ಲದೇ, ಶ್ರೀರಂಗಂ ನಲ್ಲಿ ದೇವರ ವಿಗ್ರಹ ಪುನಃ ಪ್ರತಿಷ್ಠಾಪನೆಯಾಗಿ ಮತ್ತೆ ಹಳೆಯ ಆಚರಣೆಗಳು ಪ್ರಾರಂಭವಾದವು ಎಂಬ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿರುವಂತೆ ಆಚಾರ್ಯರ ಚಿತ್ರವನ್ನು ಕಾಣಬಹುದಾಗಿದೆ.

ಬಲವಂತವಾಗಿ ಮತಾಂತರಗೊಂಡವರನ್ನು ಪುನಃ ಸನಾತನ ಧರ್ಮಕ್ಕೆ ವಾಪಸ್ ಕರೆದುಕೊಂಡು ಬಂದು ಕ್ಷತ್ರಿಯರಲ್ಲದ ಯುವಕರಿಗೆ ವಿಜಯನಗರ ಸಾಮ್ರಾಜ್ಯದ ಪಟ್ಟಕಟ್ಟಿ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ವಿದ್ಯಾರಣ್ಯರು ಹೇಗೆ ಎತ್ತಿ ಹಿಡಿದಿದ್ದರೂ, ವೇದಾಂತ ದೇಶಿಕರೂ ಸಹ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ಆಚರಣೆಯಲ್ಲಿ ಜಾರಿಗೆ ತಂದವರು. ವೇದಾಂತ ದೇಶಿಕರು ತಿರುನಾರಾಯಣಪುರಂ (ಮೇಲುಕೋಟೆ)ಗೆ ತೆರಳಿದ 12 ವರ್ಷಗಳ ಬಳಿಕ ಶ್ರೀರಂಗಂ ನಲ್ಲಿ ಪರಿಸ್ಥಿತಿ ಸುಧಾರಿಸಿ ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆ, ಆಚರಣೆಗಳಲ್ಲೆವೂ ಹಿಂದಿನಂತೆಯೇ ನಡೆಯಲು ಪ್ರಾರಂಭವಾಗುತ್ತದೆ. ಈ ವೇಳೆ ದೇವಾಲಯದಲ್ಲಿ ಭಗವಂತನ ದಿವ್ಯ ಮಹಿಮೆ ವಿಶೇಷಗಳನ್ನು ಕೊಂಡಾಡುವ ದಿವ್ಯ ಪ್ರಬಂಧಂ ನ್ನು ಪಠಿಸುವುದಕ್ಕೆ ಮಡಿವಂತರಿಂದ ಅಡ್ಡಿ ಉಂಟಾಗುತ್ತದೆ. ಅದರಲ್ಲಿ ಬ್ರಾಹ್ಮಣೇತರ ಆಳ್ವಾರುಗಳಿಂದ ದ್ರಾವಿಡ ಭಾಷೆಯಲ್ಲಿ ರಚಿಸಲ್ಪಟ್ಟಿದ್ದನ್ನೂ ಸೇರಿಸಲಾಗಿದೆ ಹಾಗೂ ಅಲ್ಲಿನ ಮಡಿವಂತರಿಗೆ ನಿಷಿದ್ಧವಾಗಿದ್ದ ಕಾಮನೆಗಳೊಂದಿಗೆ ವ್ಯವಹರಿಸುತ್ತವೆ ಎಂಬುದು ಪ್ರಧಾನ ಕಾರಣವಾಗಿತ್ತು. ಆದರೆ ಧರ್ಮವೇ ದೇಹಧರಿಸಿದಂತಿದ್ದ ವೇದಾಂತ ದೇಶಿಕರು ಮಡಿವಂತರೊಂದಿಗೆ ವಾದಿಸಿ ದಿವ್ಯ ಪ್ರಬಂಧಂ ವೇದಗಳಿಗೆ ಸರಿಸಮನಾದದ್ದು ಎಂದು ಮನವರಿಕೆ ಮಾಡಿಕೊಡುತ್ತಾರೆ. ಅಂದಿನಿಂದ ಭಾಷೆಯನ್ನೇ ಪ್ರಧಾನವಾಗಿಸದೇ, ಬ್ರಾಹ್ಮಣೇತರರು ರಚಿಸಿದ್ದೆಂಬ ಬೇಧವಿಲ್ಲದೇ ದೇವರ ಸನ್ನಿಧಿಯಲ್ಲಿ ದಿವ್ಯ ಪ್ರಬಂಧದ ಪಠಣ ಸಾಗಿದೆ. ಅಷ್ಟೇ ಅಲ್ಲ, ಉತ್ಸವಾಚರಣೆಗಳಲ್ಲಿ ಆಳ್ವಾರ್ ರನ್ನು ಗೌರವಿಸುವ ಅಧ್ಯಯನ ಉತ್ಸವದ ಅಭ್ಯಾಸವನ್ನು ಮರು ಸ್ಥಾಪಿಸಿದ್ದೂ ಸಹ ಇದೇ ವೇದಾಂತ ದೇಶಿಕರೇ. ವೇದಾಂತ ದೇಶಿಕರ ತರ್ಕ ನಿರ್ಣಯದ ವಿದ್ವತ್ ಗೆ ವಿದ್ಯಾರಣ್ಯರು ಹಾಗೂ ದ್ವೈತಿಗಳಾಗಿದ್ದ ಅಕ್ಷೋಭ್ಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ವಿದ್ಯಾರಣ್ಯರು ಹಾಗೂ ಅಕ್ಷೋಭ್ಯರ ನಡುವೆ ನಡೆದ ತರ್ಕದ ನಿರ್ಣಯಕ್ಕೆ ವೇದಾಂತ ದೇಶಿಕರೇ ನಿಲ್ಲುತ್ತಾರೆ. ಇಬ್ಬರ ವಾದಗಳನ್ನು ಆಲಿಸಿದ ನಂತರ ವಿದ್ಯಾರಣ್ಯರು ತಮ್ಮ ಬಾಲ್ಯದ ಗೆಳೆಯನಾಗಿದ್ದರೂ ಪ್ರಮಾಣಗಳನ್ನು ಆಧರಿಸಿ ಅಕ್ಷೋಭ್ಯರದ್ದೇ ಸರಿಯಾದ ವಾದ ಎಂಬ ನಿರ್ಣಯಕ್ಕೆ ಬಂದು ವಿವಾದವನ್ನು ಬಗೆಹರಿಸುತ್ತಾರೆ ವೇದಾಂತ ದೇಶಿಕರು.

ಇತ್ತ ಶ್ರೀರಂಗಕ್ಕೆ ಮೊದಲಿನ ಕಳೆ ಬಂದು ಭಕ್ತ ಸಮೂಹ  ಮತ್ತೆ ಮೊದಲಿನಂತೆ ದೇವರ ಸೇವೆಯಲ್ಲಿ ತೊಡಗುವ ವೇಳೆಗೆ ವೇದಾಂತದೇಶಿಕರಿಗೆ ತೊಂಬತ್ತೈದು ವರ್ಷ ವಯಸ್ಸು. ಶ್ರೀರಂಗನಾಥನ ಸೇವೆಯಲ್ಲೇ ನಿರತರಾದ ವೇದಾಂತ ದೇಶಿಕರು ಇಳಿವಯಸ್ಸಿನಲ್ಲಿಯೂ ಹಿರಿಯ ಜ್ಞಾನಿಗಳ ಗ್ರಂಥಗಳನ್ನು, ಉಪದೇಶಗಳನ್ನು ಜನರಿಗೆ ವಿವರಿಸಿ ಹೇಳುತ್ತಿದ್ದರು. ದೇವಾಲಯದಲ್ಲಿ ಉತ್ಸವಗಳು ಸಾಂಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಆಗ ಆಚಾರ್ಯರು ಬರೆದ ಶ್ರೇಷ್ಠವಾದ ಕೃತಿ ‘ರಹಸ್ಯತ್ರಯಸಾರ. ಇಷ್ಟೆಲ್ಲಾ ಮಾಡಿದ ವೇದಾಂತ ದೇಶಿಕರು ತಮ್ಮದೇ ಸಿದ್ಧಾಂತದ ಅನುಯಾಯಿಗಳಿಂದ ಸಮಸ್ಯೆಗಳನ್ನೂ ಎದುರಿಸಬೇಕಾಗಿ ಬಂತು.  ವೇದಾಂತ ದೇಶಿಕರಿಗೆ ಬಹಳ ಪ್ರಿಯವಾದ ಶ್ರೀರಂಗದಲ್ಲಿ ಅವರನ್ನು ಆಚಾರ್ಯಪೀಠಕ್ಕೆ ನೇಮಿಸಲಾಯಿತು. ಡಿಂಡಿಮ ಹಾಗೂ ಕೃಷ್ಣಮಿಶ್ರ ಎಂಬ ಕವಿಗಳನ್ನು ವಾದದಲ್ಲಿ ಜಯಿಸಿದ ದೇಶಿಕರಿಗೆ ಶ್ರೀರಂಗನಾಥನ ಸಮ್ಮುಖದಲ್ಲಿ ‘ಸರ್ವತಂತ್ರ ಸ್ವತಂತ್ರ’, ‘ಕವಿತಾರ್ಕಿಕ ಕೇಸರೀ’ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಯಿತು. ಶಂಕರರನ್ನು ಕಂಡು ಅನೇಕರಿಗೆ ಅಸೂಯೆ ಉಂಟಾದಂತೆಯೇ ವೇದಾಂತ ದೇಶಿಕರ  ಇವರ ಪಾಂಡಿತ್ಯ, ವೈರಾಗ್ಯ ಮತ್ತು ವಿನಯಗಳನ್ನು ಕಂಡು ಅನೇಕರಿಗೆ ಇವರ ಮೇಲೆ ಅಸೂಯೆ ಉಂಟಾಯಿತು, ದೇಶಿಕರ ಸಹನೆ ಹೆಚ್ಚಿದಷ್ಟೂ ಅವರೊಂದಿಗೆ ಇದ್ದವರ ಅಸೂಯೆ ಹೆಚ್ಚಾಗತೊಡಗಿತ್ತು. ದೇಶಿಕರನ್ನು ವಾದದಲ್ಲಿ ಸೋಲಿಸಬೇಕೆಂದು ಪಟ್ಟುಹಿಡಿದ ಶ್ರೀವೈಷ್ಣವರೇ ಕೆಲವರು ಆಚಾರ್ಯರನ್ನು ವಾದಕ್ಕೆ ಕರೆದರು. ‘‘ನಮ್ಮನಮ್ಮಲ್ಲಿ ವಾದವೇಕೆ? ನಾನು ವಾದಕ್ಕೆ ಸಿದ್ಧನಿಲ್ಲ’’ ಎಂದುಬಿಟ್ಟರು ದೇಶಿಕರು. ದೇಶಿಕರಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ದೇಶಿಕರ ಮನೆಯ ಬಾಗಿಲಿಗೆ ಪಾದರಕ್ಷೆಗಳ ತೋರಣವನ್ನು ಅವರು ಕಟ್ಟಿದರು. ಆದರೆ ದೇಶಿಕರು ಸಹನಾಮೂರ್ತಿಗಳು, ಅವರು ಕೋಪಿಸಿಕೊಳ್ಳಲಿಲ್ಲ. ಬದಲಾಗಿ ನಾವು ಒಬ್ಬೊಬ್ಬರು ಒಂದೊಂದನ್ನು ಅನುಸರಿಸುತ್ತಾರೆ, ಕೆಲವರು ಕರ್ಮವನ್ನಾದರೆ ಮತ್ತೆ ಕೆಲವರು ಜ್ಞಾನವನ್ನು ಅನುಸರಿಸುತ್ತಾರೆ. ನಾವು ಹರಿದಾಸರ ಪಾದರಕ್ಷೆಗಳನ್ನು ಅನುಸರಿಸುತ್ತೇವೆ ಎಂದರು, ಕೊನೆಗೆ ಅಸೂಯೆಪಡುವ ಜನರ ಕಿರುಕುಳಕ್ಕೆ ಬೇಸತ್ತು ಶ್ರೀರಂಗದಿಂದ ಹೊರನಡೆದರು. ವೇದಾಂತ ದೇಶಿಕರು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲೇನು ಇರಲಿಲ್ಲ. ಬೋಧಿಸಿದಂತೆ ಜೀವಿಸಿದವರು ಸಂತ ಸದೃಷ್ಯರಾದವರಾದರೂ ಗೃಹಸ್ಥರಾಗಿದ್ದವರು. ಇತ್ತ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಬಾಲ್ಯದ ಸ್ನೇಹಿತ, ಸಹಪಾಠಿ ವೇದಾಂತ ದೇಶಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶಿಕರನ್ನು ಆಸ್ಥಾನಕ್ಕೆ ಕರೆಸಿಕೊಳ್ಳಲು ಯತ್ನಿಸಿದರು. ಆದರೆ ಪರಮ ವೈರಾಗಿಗಳಾಗಿದ್ದ ವೇದಾಂತ ದೇಶಿಕರು ವಿದ್ಯಾರಣ್ಯರಿಗೆ ’ವೈರಾಗ್ಯ ಪಂಚಕ’ವನ್ನೊಳಗೊಂಡ ಪತ್ರವನ್ನು ಬರೆದು ವಿನಮ್ರವಾಗಿಯೇ ವಿದ್ಯಾರಣ್ಯರ ಆಹ್ವಾವನ್ನು ನಿರಾಕರಿಸಿದರು.  ಇಂದು ಮಠಗಳು, ಸಂತರ ನಡುವೆ ನಡೆಯುತ್ತಿರುವ ಪೈಪೋಟಿ, ಧರ್ಮ ರಕ್ಷಣೆಯನ್ನು ನೆನಪಿಸಿಕೊಂಡಾಗ ಇಬ್ಬರು ಮಹಾನ್ ಯೋಗಿಗಳಾಗಿದ್ದ ವಿದ್ಯಾರಣ್ಯರ- ವೇದಾಂತ ದೇಶಿಕರ ಸ್ನೇಹ ಆದರ್ಶವಾಗಿ ನಮ್ಮೆದುರು ನಿಲ್ಲುತ್ತದೆ. ಸಾಮ್ರಾಜ್ಯವೊಂದರ ರಾಜಗುರುವಾಗಿದ್ದ ಸ್ನೇಹಿತ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುತ್ತೇನೆಂದು ಮುಂದೆ ಬಂದಾಗಲೂ ನಮ್ರತೆಯಿಂದ ನಿರಾಕರಿಸಿದ ವೇದಾಂತ ದೇಶಿಕರ ನಿಸ್ಪೃಹತೆ  ಸಂತರಿಗೆ ಸಾರ್ವಕಾಲಿಕ ಮೇಲ್ಪಂಕ್ತಿಯಾಗಿ ನಿಲ್ಲುತ್ತದೆ.  

Tuesday 8 November 2016

'ಅರ್ಥಕ್ರಾಂತಿ' ಇದು ವಿಶ್ವಗುರು ಭಾರತದ ಹೊಸ ಕ್ರಾಂತಿ



ಸ್ವಾತಂತ್ರ್ಯದ ನಂತರದಿಂದ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣದ ಉದಾಹರಣೆಯೇ ಇಲ್ಲ, ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಡಲಿಲ್ಲವೆಂಬುದನ್ನು ಹೊರತುಪಡಿಸಿದರೆ ಭಾರತದ ಆರ್ಥಿಕ ಸ್ಥಿತಿ-ಗತಿಗಳೂ ಸಹ ತೀರಾ ಹೇಳಿಕೊಳ್ಳುವ ಸ್ಥಿಯಲ್ಲಂತೂ ಇಲ್ಲವೇ ಇಲ್ಲ.

ಅಂದು ಗ್ರಾಮ ರಾಜ್ಯದ ಕನಸು ಕಂಡಿದ್ದ ಗುರುವಿಗೇ ತಿರುಮಂತ್ರ ಹಾಕಿದ ಭಾರತದ ಪ್ರಥಮ ಪ್ರಧಾನಿ  ನೆಹರುರವರ ರಷ್ಯನ್ ಸೊಷಿಯಲಿಸ್ಟ್ ಸಿದ್ಧಾಂತದ ಹೊಡೆತಕ್ಕೆ ಸಿಲುಕಿದರ ಪರಿಣಾಮ ಇಂದು ಭಾರತದ ಅರ್ಥ ವ್ಯವಸ್ಥೆಯೇ ’ಅನ’ರ್ಥವಾಗಿಬಿಟ್ಟಿದೆ. ಕೊನೆಗೆ ರೂಪಾಯಿ ಮೌಲ್ಯ, ರಾಜಕಾರಣಿಗಳ ಅದರಲ್ಲೂ ಪ್ರಮುಖವಾಗಿ ದೇಶದ ವಿತ್ತ ಸಚಿವರ ಕುಟುಂಬ ನಡೆಸುತ್ತಿರುವ ಉದ್ಯಮಕ್ಕೆ ಅನುಕೂಲಕರವಾಗಿ ಪರಿವರ್ತನೆಗೊಳ್ಳುವ ಸ್ಥಿತಿಗೆ  ಬಂದು ನಿಂತಿದೆ ಎಂದರೆ ನಮ್ಮ ದೇಶದ ಅರ್ಥ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಸ್ಫಷ್ಟವಾಗುತ್ತದೆ.

ಸುಮ್ಮನೆ ಯಾರನ್ನಾದರೂ ಭಾರತದ ಆರ್ಥಿಕತೆ ಬಗ್ಗೆ ಮಾತಿಗೆಳೆದು ನೋಡಿ... ಅರ್ಥವ್ಯವಸ್ಥೆಗೆ ಮೂಲಭೂತ ಕಂಟಕಗಳಾಗಿರುವ ’ಕಪ್ಪು ಹಣ’, ’ದಾವೂದ್ ಇಬ್ರಾಹಿಂ’ ರಂತಹ ಹಫ್ತಾ ವಸೂಲಿ, ಹೆಚ್ಚಿನ ತೆರಿಗೆ ವಿಧಿಸುವುದು ಇತ್ಯಾದಿಗಳ ಬಗ್ಗೆ ಧಾರಾಳ ಆಕ್ರೋಶ ವ್ಯಕ್ತವಾಗುತ್ತದೆ. ಒಂದಷ್ಟು ಟೀಕೆ ಟಿಪ್ಪಣಿಗಳು ಬಂದು ಹೋಗುತ್ತವೆ. ಇಲ್ಲವೇ ಈ ದೇಶದ ಹಣೆಬರಹವೇ ಇಷ್ಟು ಎನ್ನುತ್ತಾ ಹತಾಶ ಭಾವನೆಯಿಂದ ಕೈಚೆಲ್ಲಿ ಕುಳಿತುಬಿಡುತ್ತಾರೆ. ಭಾರತದ ಮಟ್ಟಿಗೆ ಇದೆಲ್ಲವೂ ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು ಎಂಬಂತಾಗಿಬಿಟ್ಟಿದೆ.

ಅದೃಷ್ಟವಶಾತ್, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶವಾಸಿಗಳಿಗೆ, ಭಾರತದ ಭವಿಷ್ಯದ ಬಗ್ಗೆ ಹೊಸದೊಂದು ಭರವಸೆ ಮೂಡುತ್ತಿದೆ. ರಾಜಕೀಯ ಬದಲಾವಣೆಯಾಗುವುದಂತೂ 100ಕ್ಕೆ 100 ಖಾತ್ರಿ ಎಂಬಂತಾಗಿದೆ. ಆದರೆ ರಾಜಕೀಯ ಬದಲಾವಣೆಯಷ್ಟೇ ಸಾಕೇ? ದೇಶದ ಆರ್ಥಿಕ ಸ್ಥಿತಿ ಬದಲಾದರೆ ತಾನೆ ದೇಶದಲ್ಲಿ ಸರ್ವಾಂಗೀಣ ಬದಲಾವಣೆಯಾಗಲು ಸಾಧ್ಯ..... ಲೋಕಸಭಾ ಚುನಾವಣೆಯಾದ ಬಳಿಕ ಸರ್ಕಾರ ಈಗಿರುವ ಸರ್ಕಾರ ಬದಲಾವಣೆಯಾಗುವುದರಲ್ಲಿ ಅನುಮಾನವೇ ಬೇಡ ಎಂಬ ರೀತಿಯ ವಾತಾವರಣ ನಿರ್ಮಾಣವಾಗಿದೆ. ಅಂದರೆ ದೇಶಕ್ಕೆ ಅಂಟಿಕೊಂಡಿದ್ದ ಗಾಂಧಿ, ನೆಹರೂ ಕುಟುಂಬದ ಮುಕ್ತಿ ಪಡೆದು ರಾಜಕಾರಣಕ್ಕೆ ಕಾಯಕಲ್ಪ ನೀಡಿದಂತಾಯಿತು. ಆದರೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ದೃಷ್ಠಿಯಿಂದ ಅದೇ ನೆಹರೂ ಖಾನ್ ದಾನ್ ಸೃಷ್ಠಿಸಿದ್ದ ಅರ್ಥವ್ಯವಸ್ಥೆಗೂ ಕಾಯಕಲ್ಪ ನೀಡುವುದೂ ಅತ್ಯಗತ್ಯ.... ರಾಜಕೀಯ ವಲಯದಲ್ಲೇನೋ ಹೊಸ ಕ್ರಾಂತಿಯುಂಟಾಗಿದ್ದಾಗಿದೆ ಆದರೆ ಅದರೊಂದಿಗೆ ಸಹಕರಿಸಬೇಕಾದ ಆರ್ಥಿಕ ವಲಯದಲ್ಲೂ ಕ್ರಾಂತಿಯಾಗಬೇಕಲ್ಲವೇ...?

ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಮನಸ್ಥಿತಿ ಗೋಚರವಾಗುತ್ತಿದೆ. ಭಾರತ ವಿಶ್ವಗುರು ಸ್ಥಾನವನ್ನಲಂಕರಿಸಲು ’ಅರ್ಥಕ್ರಾಂತಿ’ಯೇ ಸರಿಯಾದ ಮಾರ್ಗ ಎಂಬ ಮನೋಭಾವನೆ ಪ್ರಲೋಭಿಸತೊಡಗಿದೆ. ಆರ್ಥಿಕ ನೀತಿಗಳಿಗೆ ಕಾಯಕಲ್ಪವಿತ್ತು ದೇಶ ಹಿಂದೆಂದೂ ಕಂಡಿರದ ನೀತಿಗಳನ್ನು ರಚಿಸಬೇಕು ಇದು ಸಾಧ್ಯವಾಗುವುದು ಮುಂದಿನ ಸರ್ಕಾರ ಬಂದಾಗಲೇ ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದ್ದು ಜನತೆಗೆ ಇದರ ಉದ್ದೆಶ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಮಂಗಳೂರುನಗರಗಳಲ್ಲಿ ಇಂಥದ್ದೊಂದು ಪ್ರಯೋಗಾತ್ಮಕ ಕಾರ್ಯಕ್ರಮ ನಡೆದಿದೆ.

ಅರ್ಥಕ್ರಾಂತಿ, ದೇಶಕ್ಕೆ ಶಾಂತಿ: ಅರ್ಥಕ್ರಾಂತಿಯ ದೇಶದ ಆರ್ಥಿಕ ವ್ಯವಸ್ಥೆಯ ತಳಹದಿಯಿಂದ ಉಲ್ಬಣವಾಗಿರುವ ಖಾಯಿಲೆಗೆ ಸಂಜೀವಿನಿ ಸ್ವರೂಪವೇ ಸರಿ.  ತೆರಿಗೆ ಪದ್ಧತಿ ಬದಲಾವಣೆ, ಹೆಚ್ಚಿನ ಮುಖಬೆಲೆ ನೋಟುಗಳ ನಿಷೇಧ, ಹಾಗೂ ನಗದು ವಹಿವಾಟನ್ನು ಅತ್ಯಂತ ಕಡಿಮೆ ಬೆಲೆಗೆ ಇಳಿಸುವುದು... ಇದಿಷ್ಟನ್ನೇ ಪ್ರಧಾನ ಅಂಶಗಳನ್ನಾಗಿ ಪರಿಗಣಿಸಿ ರೂಪುಗೊಂದಿರುವ ಒಂದು ವಿನೂತನ ಆರ್ಥಿಕ ವ್ಯವಸ್ಥೆ. ಮತ್ತೊಂದು ಅರ್ಥದಲ್ಲಿ 1000, 500 ನೋಟುಗಳೇ ಜೀವನ ಎಂದು ಭಾವಿಸಿರುವ ಜೀವನ ಶೈಲಿಯನ್ನು ಸಾಮಾನ್ಯನ ಸ್ಥಿತಿಗೆ ಬದಲಾಯಿಸುವ ಯೋಜನೆ...

ಪ್ರತಿನಿತ್ಯ ನೂರಿನ್ನೂರು ರೂಪಾಯಿಗಾಳನ್ನು ದುಡಿಯುವ ವರ್ಗದ ಜನರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಜನಕ್ಕೆ 1000, 500 ಅನಿವಾರ್ಯವೇನೂ ಅಲ್ಲ, ಆದರೂ ಸಹ ಆರ್.ಬಿ.ಐ 1000 500 ನೋಟುಗಳನ್ನು ಪರಿಚಯಿಸಿದೆ. ಇದರಿಂದ ಆಗುತ್ತಿರುವ ಅನಾಹುತ ಎಂತದ್ದು ಗೊತ್ತೇ? ಯಾವಗ ಹೆಚ್ಚಿನ ಮುಖಬೆಲೆ ನೋಟುಗಳು ಲಭ್ಯವಾಗುತ್ತದೋ ಆಗ ಹಣ ಕಾಸಿನ ವ್ಯವಹಾರ ಬಹುತೇಕ ನಗದು ರೂಪದಲ್ಲೇ ನಡೆಯುತ್ತದೆ. 1000 ರೂ ಮುಖಬೆಲೆಯ 10-11 ನೋಟುಗಳಿದ್ದರೆ ಸಾಕು ಲಕ್ಷಗಟ್ಟಲೆ ವಹಿವಾಟು ನಡೆಸುವವರಿಗೆ, ಅನಾಯಾಸವಾಗಿ ಕೆಲಸ ನಡೆದುಹೋಗುತ್ತದೆ. ಯಾರ ಕೈಯಿಂದ ಯಾರಿಗೆ ದುಡ್ಡು ಹೋಯಿತು ಎಂಬುದರ ಬಗ್ಗೆ  ಅಧಿಕೃತ ಮಾಹಿತಿ ಸಿಗುವುದೇ ಕಷ್ಟ, ಹಲವು ಹಣಕಾಸಿನ ವ್ಯವಹಾರಗಳು ಲೆಕ್ಕಕ್ಕೇ ಸಿಗುವುದಿಲ್ಲ.

1000 ರೂಪಾಯಿ ಮುಖ ಬೆಲೆ ಹೊಂದಿರುವ ನೋಟುಗಳ ಕಂತೆ ಹೋಗಿ ಸಂತರಿಗಾದರೂ ಸೆರಬಹುದು, ಅಥವಾ ಮತಾಂಧ ಭಯೋತ್ಪಾದಿಗಳ ಕಿಸೆಯಲ್ಲೂ ಅಡಗಿ ಕೂರಬಹುದು. ನೋಟಿನ ಮುಖಬೆಲೆ ಹೆಚ್ಚಿದಷ್ಟೂ ಸಹ ಲಕ್ಷ ಲಕ್ಷ ರೂಪಾಯಿಗಳನ್ನು ಸಾಗಿಸುವುದು ಕಷ್ಟದ ಮಾತೇನಲ್ಲ. ಇದರಿಂದ ಮೊಟ್ಟಮೊದಲು ಲಾಭಪಡೆಯುವುದೇ ಭಯೋತ್ಪಾನೆ ಮತ್ತು ಭ್ರಷ್ಟಾಚಾರ. ಭಯೋತ್ಪಾದಕ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕವಾಗಲಿ ಅಥವಾ ಇನ್ನಾವುದೋ ಲೆಕ್ಕಕ್ಕೆ ಸಿಗುವಂತಹ ಮಾರ್ಗಗಳಿಂದಾಗಲಿ ಹಣ ಕಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೂಪಾಯಿಯ ಮುಖಬೆಲೆ ಭಯೋತ್ಪಾದನೆಗೆ ಸದ್ದಿಲ್ಲದೇ ಕುಮ್ಮಕ್ಕು ನೀಡುತ್ತಿದೆ. ಅಥವಾ ರೂಪಾಯಿ ಮುಖಬೆಲೆಯನ್ನು ಗರಿಷ್ಟ 50ರೂಪಾಯಿಗೆ ಇಳಿಕೆ ಮಾಡಬೇಕು ಜೊತೆಗೆ ನಗದು ವಹಿವಾಟಿಗೆ ಮಿತಿ ಹಾಕಬೇಕು   ಒಂದೇ ಬಾರಿ ಹೆಚ್ಚು ಹಣ ಸಾಗಣೆ ಮಾಡಲು ಸಾಧ್ಯವಾಗುವುದಿಲ್ಲ,  ಬೃಹತ್ ಮೊತ್ತದ ಹಣ ವರ್ಗಾವಣೆಗೆ ಬ್ಯಾಂಕ್ ಗಳ ಮೊರೆ ಹೋಗಬೇಕಾಗುತ್ತದೆ. ಸ್ವಾಭಾವಿಕವಾಗಿಯೇ ದೇಶದ್ರೋಹ ಚಟುವಟಿಕೆಗೆ ಕಡಿವಾಣ ಬೀಳುತ್ತದೆ.   ಭಯೋತ್ಪಾದನೆಯೊಂದೇ ಅಲ್ಲ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿರುವ ಭ್ರಷ್ಟಾಚಾರದ ನಿರ್ಮೂಲನೆ,ನಕಲಿ ನೋಟುಗಳ ಚಲಾವಣೆ ತಡೆಗೂ ಸಹ ಇದೇ ಸೂತ್ರ ಅನ್ವಯಿಸುತ್ತದೆ.

ನಗದು ರೂಪದಲ್ಲಿ  ನೇರ ವಹಿವಾಟು ನಡೆಯುತ್ತಿರುವುದರಿಂದ ಬ್ಯಾಂಕ್ ಗಳ ಆದಾಯಕ್ಕೂ ಸಹ ಹೊಡೆತ ಬೀಳುತ್ತಿದೆ. ಅಂದರೆ ಬ್ಯಾಂಕ್ ಗಳ ಮೇಲೆ ಹೊಡೆದ ಬಿದ್ದರೆ ದೇಶದ ಆರ್ಥಿಕ ಸ್ಥಿತಿಯ ಮೆಲೂ ಪರೋಕ್ಷ ಪರಿಣಾಮ ಇದ್ದೇಇರುತ್ತದೆ.  ದೇಶದ ಆರ್ಥಿಕತೆಗೆ ಪುನರುಜ್ಜೀವನ ಕಲ್ಪಿಸಿಕೊಡಲು ಬ್ಯಾಂಕ್ ಗಳ ಅಭಿವೃದ್ಧಿಯಲ್ಲಿಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.  ಬ್ಯಾಂಕ್ ಗಳಲ್ಲಿ ವಹಿವಾಟು ಹೆಚ್ಚಾದರೆ ತೆರಿಗೆ ವರಮಾನ, ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಬ್ಯಾಂಕ್ ಗಳಲ್ಲಿನ ವಹಿವಾಟು ಅಧಿಕಗೊಳಿಸಲು ರೂಪಾಯಿಯ ಹೆಚ್ಚಿನ ಮುಖಬೆಲೆ ಇಳಿಕೆ ಮಾಡಿದರೆ ಸಹಜವಾಗಿ ಬೃಹತ್ ಮೊತ್ತ ಪಾವತಿಸಬೇಕಾದರೆ ಬ್ಯಾಂಕ್ ಗಳ ಮೊರೆ ಹೋಗಲೇ ಬೇಕು, ತಮ್ಮ ವಹಿವಾಟಿನ ಮೊತ್ತಕ್ಕೆ ಸರಿಯಾದ ತೆರಿಗೆ ನೀಡಲೇ ಬೇಕು ಎಂಬುದು ಅರ್ಥಕ್ರಾಂತಿಯ ಮುಖ್ಯೋದ್ದೇಶ. ಇದರೊಂದಿಗೆ  ಸಂಗ್ರಹಣೆಯಾದ ತೆರಿಗೆ ಹಣವನ್ನು ಬ್ಯಾಂಕುಗಳು ತನ್ನ ಹಣಕಾಸು ವ್ಯವಹಾರದ ಪಾಲನ್ನು ಕಡಿತಗೊಳಿಸಿ ಕೇಂದ್ರ,ರಾಜ್ಯ ಮತ್ತು ಸ್ಥಳೀಯ ಆಡಳಿತಗಳಿಗೆ ನಿಗದಿ ಪಡಿಸಿ ಪಾಲನ್ನು ವರ್ಗಾಯಿಸುವ ವ್ಯವಸ್ಥೆ ಜಾರಿಗೆಯಾಗಬೇಕಿದೆ. ಇವೆಲ್ಲವೂ ಭಾರತದ ಆರ್ಥಿಕತೆಯ ಪುನರುತ್ಥಾನಕ್ಕೆ ನಾಂದಿಯಾಗಲಿದೆ.

ಅಮೆರಿಕಾ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಮುಳುವಾಗಿದ್ದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡುವ ಉದ್ದೇಶದಿಂದ ಅಮೆರಿಕಾ ಸಹ ಕೈಗೊಂಡಿದ್ದು ಹೆಚ್ಚಿನ ಮುಖ ಬೆಲೆಯ ನೋಟುಗಳನ್ನು ಹಿಂಪಡೆದುಕೊಳ್ಳುವುದು. ಇಂದಿಗೂ ಸಹ ಅಮೆರಿಕಾದಲ್ಲಿ 100 ಡಾಲರ್ ನ ಮುಖಬೆಲೆಯ ನೋಟೇ ಅಂತಿಮ. ಅಮೆರಿಕಾದ ಈ ನಿರ್ಧಾರದಿಂದ ಇಂದು ಅಷ್ಟಾಗಿ ಭಯೋತ್ಪಾದನೆಯ ಬಿಸಿ ತಟ್ಟುತ್ತಿಲ್ಲ.

ಇನ್ನು ತೆರಿಗೆ ವಿಷಯದಲ್ಲಿಯೂ ಭಾರತದ ದೇಶ ಸಾಕಷ್ಟು ಬದಲಾವಣೆ ತರುವುದು ’ಅರ್ಥಕ್ರಾಂತಿ’ಯೋಜನೆಯ ಮುಖ್ಯ ಉದ್ದೇಶ,ಪ್ರಸ್ತುತ 32 ಬಗೆಯ ತೆರಿಗೆ ಪದ್ಧತಿ ಹೊಂದಿರುವ ಭಾರತವನ್ನು ಏಕರೂಪ ತೆರಿಗೆ ಹೊಂದುವಂತೆ ಮಾಡಬೇಕು... ಬ್ಯಾಂಕ್ ನಲ್ಲಿ ಹಣ ತೆಗೆಯುವವರಿಂದ ಒಂದು ಮಿತಿಯವರೆಗೆ ಕನಿಷ್ಠ ತೆರಿಗೆ ವಿಧಿಸಿ ಉಳಿದಂತೆ ಅಂತಾರಾಷ್ಟ್ರೀಯ ವ್ಯಾಪಾರ ನಿಯಂತ್ರಣಕ್ಕಾಗಿ ಸೀಮಾ ಸುಂಕ ವಿಧಿಸುವ ಪದ್ಧತಿ ಮಾತ್ರ ಉಳಿಸಿಕೊಳ್ಳಬೇಕು. ಇವೆಲ್ಲದರ ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯ ಪುನರುತ್ಥಾನ ಸಾಧ್ಯ. ಹ್ಹಾ... ಇಷ್ಟೆಲ್ಲಾ ಮಾಡಿದ ಮೇಲೆ ಭಾರತ ಸಂಪೂರ್ಣ ಭ್ರಷ್ಟ ಮುಕ್ತವಾಗುತ್ತದೆ ಎಂದು ಖಾತ್ರಿ ಕೊಡಲು ಸಾಧ್ಯವಿಲ್ಲ. ಕಳ್ಳತನ ಮಾಡಲೇ ಬೇಕು ಎಂದು ನಿರ್ಧಸಿದವರನ್ನು ತಡೆಯಲು ಎಷ್ಟು ಪೊಲೀಸರಿದ್ದರೆ ಏನು ಪ್ರಯೋಜನ ಹಾಗೆಯೇ ಭ್ರಷ್ಟಾಚಾರ ನಡೆಸಲೇ ಬೇಕು ಎಂದು ಪಣತೊಟ್ಟರೆ ಅದನ್ನು ತಡೆಗಟ್ಟಲು ಯಾವ ವ್ಯವಸ್ಥೆಯಿಂದಲೂ ಸಾಧ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ, ’ಅರ್ಥಕ್ರಾಂತಿ’ ಎಂಬ ಹೊಸ ಅಧ್ಯಾಯದ ಮೂಲಕ ಭಾರತದಲ್ಲಿ ತಲೆದೋರಿರುವ ಭ್ರಷ್ಟಾಚಾರವನ್ನು ಬಹುತೇಕ ನಿರ್ಮೂಲನೆ ಮಾಡಬಹುದು.

ಮತ್ತೊಂದು ಮಜಬೂತಾದ ಸಂಗತಿಯೆಂದರೆ  ರೂಪಾಯಿಯ ಮುಖಬೆಲೆಯನ್ನು ಕಡಿತಗೊಳಿಸುವುದು ಸೇರಿದಂತೆ ಕೆಲ ವಿಷಯಗಳನ್ನು ಹೊರಪಡಿಸಿದರೆ ತೆರಿಗೆ ವಿಷಯದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಗದ್ದುಗೆ ಏರಲು ಸಿದ್ಧತೆ ನಡೆಸಿರುವ ಬಿಜೆಪಿಯೂ ಸಹ ’ಅರ್ಥಕ್ರಾಂತಿಯ’ ತೆರಿಗೆ ವಿಷಯದಲ್ಲಿ ಸಮಾನ ಮನಸ್ಥಿ ಹೊಂದಿದೆ.  ದೇಶದ ಅರ್ಥವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಅರ್ಥಕ್ರಾಂತಿ ಎಂಬ ಹೊಸ ಪ್ರಸ್ತಾವನೆಯತ್ತ  2014ರ ಲೋಕಸಭೆ ಚುನಾವಣೆಯ ನಂತರ ಅಧಿಕಾರಕ್ಕೆ ಬರಲಿರುವ ಸರ್ಕಾರ ಗಮನ ಹರಿಸಬೇಕಿದೆ. ಕಳೆದ 60 ವರ್ಷಗಳಿಂದ ನೆಹರೂ ಖಾನ್ ದಾನ್ ನೀಡಿರುವ ಅರ್ಥವ್ಯವಸ್ಥೆಯನ್ನೇ ಮುನ್ನಡೆಸಿಕೊಂಡು ಅನರ್ಥ ಮಾಡುವುದಕ್ಕಿಂತಲೂ ಅರ್ಥ ವ್ಯವಸ್ಥೆಗೇ ಮೇಜರ್ ಸರ್ಜರಿ ಮಾಡುವುದು ಒಳಿತು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅರ್ಥಕ್ರಾಂತಿ ಬಗ್ಗೆ ನೀಡಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಯೂ ಜನತೆ ಅರ್ಥಕ್ರಾಂತಿ ಭಾರತಕ್ಕೆ ಅರ್ಹವಾದದ್ದು ಎಂಬ ಅಭಿಪ್ರಾಯ ತಳೆದಿದ್ದಾರೆ. ಅಂದಹಾಗೆ ಅರ್ಥಕ್ರಾಂತಿ ಎಂಬ ಹೊಸ ಕ್ರಾಂತಿ ರುವಾರಿಯನ್ನು ಪರಿಚಯಿಸಿರುವುದು ನಮೋ ಬ್ರಿಗೇಡ್ ಸಂಸ್ಥೆ, ಅನಿಲ್ ಬೋಕಿಲ್ ಅರ್ಥಕ್ರಾಂತಿಯ ರುವಾರಿ.  ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಭಾರತಕ್ಕೆ 2-3  ವರ್ಷಗಳಲ್ಲಿ ಹೊಸ ಆರ್ಥಿಕ ನೀತಿ ಸಿಕ್ಕಿರುತ್ತದೆ .  ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಪೂರಕವಾಗಿ ಕೆಲಸ ಮಾಡುತ್ತದೆ.

Friday 15 July 2016

ಅಂದು ಸಿದ್ದರಾಮಯ್ಯನವರನ್ನು ಪ್ರೋತ್ಸಾಹಿಸಿದ್ದಕ್ಕೆ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದುಕೊಳ್ಳುತ್ತಿದೆಯೋ


ನಮ್ಮಲ್ಲಿ ವೀರರನ್ನು ಬಣ್ಣಿಸುವುದಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣವನ್ನು ಬಣ್ಣಿಸಲು "ಹೇಳುವುದನ್ನೇ ಮಾಡುತ್ತಾನೆ" ಎಂಬ ಮಾತನ್ನು ಬಳಸುತ್ತೇವೆ, ಈಗ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.  ಈಗ್ಗೆ ಮೂರು ವರ್ಷಗಳ ಹಿಂದೆ ನವನಿರ್ಮಾಣ ವೇದಿಕೆ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ "ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ" ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ" ಎಂಬ ಅಣಿ ಮುತ್ತುಗಳನ್ನು ಉದುರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತನ್ನು ಸತ್ಯ ಎಂದು ನಿರೂಪಿಸಲು ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಬಹುಶಃ ಅವರೊಬ್ಬರಿಗೇ ಗೊತ್ತಿರಬೇಕು.

ಇಂದಿನ ರಾಜಕಾರಣ, ಸರ್ಕಾರದ ಬಗ್ಗೆ ಜನರಲ್ಲಿ ರೇಜಿಗೆ ಹುಟ್ಟಿಸುವಷ್ಟು ತಮ್ಮ ಮಾತನ್ನು ನಿರೂಪಿಸಲು ಸಿದ್ದರಾಮಯ್ಯ ಶ್ರಮಿಸಿದ್ದಾರೆ.  ಅವರೇ ಹೇಳಿದಂತೆ ರಾಜಕೀಯದಲ್ಲಿ  ತಮ್ಮ ಅಸ್ಥಿತ್ವಕ್ಕಾಗಿ ಹಾಗೂ ಹಣಬಲ ತೋಲ್ಬಕ್ಕಾಗಿ ಸಿದ್ದರಾಮಯ್ಯನವರು ತತ್ವ ಸಿದ್ಧಾಂತಗಳೊಂದಿಗೆ ಮಾತ್ರವೇ ಅಲ್ಲ, ಕಾನೂನು ಸುವ್ಯಸ್ಥೆ, ಆಡಳಿತ, ಅಧಿಕಾರಿಗಳ ಜೀವದ ರಕ್ಷಣೆಯೊಂದಿಗೂ ರಾಜೀ ಮಾಡಿಕೊಂಡುಬಿಟ್ಟಿದ್ದಾರೆ!. ತಮ್ಮ ಪಕ್ಷಕ್ಕೆ ಫಂಡ್ ನೀಡುವ ಸಚಿವನ ಕಪಿಮುಷ್ಠಿಯಲ್ಲಿ ಸಿಲುಕಿಹಾಕಿಕೊಂಡ ಅಧಿಕಾರಿಗಳು ಸಾವಿಗೆ ಶರಣಾಗುತ್ತಿದ್ದಾರೆ ಎಂಬ ಬಗ್ಗೆ ಸಿದ್ದರಾಮಯ್ಯನವರಿಗೆ ಅರಿವಿಲ್ಲದೆಯೇ ಇಲ್ಲ. ಆದರೆ ಏನು ಮಾಡೊದು, ಸಿದ್ದರಾಮಯ್ಯ ತಮ್ಮನ್ನು ತಾವು, ತಮ್ಮ ಸಿದ್ಧಾಂತಗಳನ್ನು ಹಣಕ್ಕಾಗಿ ಮಾರಿಕೊಂಡು ಬಿಟ್ಟಿದ್ದೇನೆ ಅಂತಾ ಮೂರು ವರ್ಷಗಳ ಹಿಂದೆಯೇ ಘೋಷಿಸಿಬಿಟ್ಟಿದ್ದಾರಲ್ಲಾ?.

ಇಷ್ಟಕ್ಕೂ ಸಿದ್ದರಾಮಯ್ಯನವರು ಸಹ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲೇ ಇದ್ದ ವ್ಯಕ್ತಿ. ಸಚಿವರಾಗುವುದಕ್ಕೂ ಮುನ್ನ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಹೆಗಡೆಯವರು ಪ್ರೋತ್ಸಾಹಿಸಿದ ಸಿದ್ದರಾಮಯ್ಯನವರಿಗೇಕೆ ರಾಮಕೃಷ್ಣ ಹೆಗಡೆಯವರ ಆಡಳಿತ ಸ್ಪೂರ್ತಿಯಾಗಲಿಲ್ಲ? ಇಂದು ಮಾತೆತ್ತಿದರೆ ರಾಮಕೃಷ್ಣ ಹೆಗಡೆವರ, ಅರಸು ಅವರ legacy claim ಮಾಡುತ್ತಾರಲ್ಲಾ ಇವರಿಗೆ ಅಂತಹ ನೈತಿಕತೆಯಾದರೂ ಎಲ್ಲಿದೆ? ಸಿದ್ದರಾಮಯ್ಯನವರು ಅಧಿಕಾರಿಗಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯವಿದೆಯಾದರೂ, ಸ್ವತಃ ಯಾವುದೇ ಅಧಿಕಾರಿಯ ಸಾವಿಗೆ ಕಾರಣರಾದವರಲ್ಲ. ಆದರೆ ಪಕ್ಷಕ್ಕೆ ಹಣದ ಹೊಳೆ ಹರಿಸುವ ಅವರ ಸಚಿವರ ಸಂಪುಟದ ಸಚಿವನೊಬ್ಬ ಕಳೆದ 2 ವರ್ಷಗಳಲ್ಲಿ ಅದೆಷ್ಟು ಅಧಿಕಾರಿಗಳ ಸಾವಿಗೆ, ಕಿರುಕುಳಕ್ಕೆ ಕಾರಣವಾಗಿಲ್ಲ? ಶುದ್ಧ ರಾಜಕಾರಣಕ್ಕೆರಾಮಕೃಷ್ಣ ಹೆಗಡೆ ಅವರನ್ನು ಉದಾಹರಣೆ ನೀಡುವ ಸಿದ್ದರಾಮಯ್ಯನವರು ಸಂಪುಟದ ಸಚಿವರ ವಿರುದ್ಧ ಕೊಲೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಾಗ ಯಾವುದೇ ಮುಲಾಜಿಗೂ ಒಳಗಾಗದೇ ಅದೇ ರಾಮಕೃಷ್ಣ ಹೆಗಡೆಯವರ ನಡೆಯನ್ನೇಕೆ ಅನುಸರಿಸುವುದಿಲ್ಲ?

ನಿಮಗೆ 1987 ರ ಆಗಸ್ಟ್ 16 ರಂದು ನಡೆದ ವಕೀಲ ಅಬ್ದುಲ್ ರಶೀದ್ ಅಪಹರಣ, ಹತ್ಯೆಯ ಪ್ರಕರಣ ನೆನಪಿರಬಹುದು. ಕೋಲಾರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವುದಕ್ಕೆ ಅನುಮತಿ ಪಡೆಯುವ ವಿಚಾರಕ್ಕೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಕೇರಳದ ಪಿ. ಸದಾಶಿವನ್ ಹಾಗೂ ಅಂದು ಹೆಗಡೆ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಆರ್.ಎಲ್ ಜಾಲಪ್ಪ ಅವರ ನಡುವೆ ಪೈಪೋಟಿ ನಡೆದು ತಿಕ್ಕಾಟ ಪ್ರಾರಂಭವಾಗುತ್ತೆ. ಕೊನೆಗೆ ಸದಾಶಿವನ್ ಅವರ ಪ್ರಕರಣವನ್ನು ನಿರ್ವಹಿಸುತ್ತಿದ್ದ ವಕೀಲ ಅಬ್ದುಲ್ ರಶೀದ್ ನ್ನು ಅಪಹರಣ ಮಾಡಿ ಹತ್ಯೆ ಮಾಡಲಾಗುತ್ತದೆ. ರಶೀದ್ ಕೊಲೆಯ ಆರೋಪ ಅಂದಿನ ಗೃಹ ಸಚಿವ ಆರ್ ಎಲ್ ಜಾಲಪ್ಪ, ಓರ್ವ ಐಪಿಎಸ್ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುತ್ತದೆ. ಹತ್ಯೆಯ ಪ್ರಕರಣದಲ್ಲಿ ಆರ್ ಎಲ್ ಜಾಲಪ್ಪ, ಹಾಗೂ ಆರೋಪಿಗಳಾದ ಪೊಲೀಸ್ ಅಧಿಕಾರಿಗಳನ್ನು ನಿರಪರಾಧಿಗಳೆಂದು ಕೋರ್ಟ್ ತೀರ್ಪು ಪ್ರಕಟಿಸಿದ್ದು ಆ ನಂತರದ ಮಾತು. ಆದರೆ ಇದಕ್ಕೂ ಮುನ್ನ ಅರೋಪ ಕೇಳಿಬಂದ ತಕ್ಷಣವೇ, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಯಾವುದೇ ಮುಲಾಜಿಗೂ ಒಳಗಾಗದೇ ಜಾಲಪ್ಪ ನವರಿಂದ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸುತ್ತಾರೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಾರೆ. ಈಗ ಹೇಳಿ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವು ಪ್ರಕರಣ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಡಿವೈಎಸ್ ಪಿ ಅನುಪಮಾ ಶೆಣೈ ಗೆ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಳ್ಳಬೇಕಿತ್ತು? ಒಮ್ಮೆಯಾದರೂ ಸಿದ್ದರಾಮಯ್ಯನವರು ಆರೋಪ ಕೇಳಿಬಂದ ಸಚಿವರಿಂದ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಸ್ವತಃ ಆದೇಶಿಸಿ ಸರ್ಕಾರದ ಘನತೆಯನ್ನು ಉಳಿಸಿದ ಉದಾಹರಣೆಗಳಿವೆಯಾ? ಸದನದಲ್ಲಿ ಉತ್ತರಿಸುತ್ತಾ,  ನಾನು ಈ ವರೆಗೂ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೇನೆ, ನಾವು ವಿಪಕ್ಷದಲ್ಲಿ ಬೇಡಿಕೆ ಇಟ್ಟಾಗ ಬಿಜೆಪಿಯವರು ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿಲ್ಲ ಎಂದು ಲೆಕ್ಕ ಕೊಡುತ್ತೀರಲ್ಲಾ, ಡಿಕೆ ರವಿ ಅವರ ಪ್ರಕರಣದಲ್ಲಿ ಸಾಕಷ್ಟು ಜನಾಂದೋಲನವೇ ನಡೆದು, ಇನ್ನೇನು ಜನರ ಸಹನೆಯ ಕಟ್ಟೆಯೊಡೆಯುತ್ತದೆ ಎಂಬಂತಾದಾಗ ಸಿಬಿಐ ಗೆ ವಹಿಸಿದ ನಿಮ್ಮ ಸರ್ಕಾರ ಸಂವೇದನೆಯೇ ಇಲ್ಲದಂತೆ ನಡೆದುಕೊಂದಿರುವ ಬಗ್ಗೆ ಎಂದಾದರೂ ಪ್ರಶ್ನಿಸಿಕೊಂಡಿದ್ದೀರಾ ಸಿದ್ದರಾಮಯ್ಯನವರೇ? ಒಂದು ಪ್ರಕರಾಣವನ್ನು ಸಿಬಿಐಗೆ ವಹಿಸುವುದು ಅಥವಾ ವಹಿಸದೇ ಇರುವ ಮಾತು ಹಾಗಿರಲಿ, ಪ್ರತಿ ಬಾರಿಯೂ ರಾಜ್ಯದಲ್ಲಿ ಅಧಿಕಾರಿಗಳ ನಿಗೂಢ ಸಾವು, ಆತ್ಮಹತ್ಯೆ ಪ್ರಕರಾಣಗಳಲ್ಲಿ ಸರ್ಕಾರ ತೋರುವ ಸಂವೇದನೆ ಮುಖ್ಯವಾಗುತ್ತದೆ,  ಸಂವೇದನೆಯನ್ನೇ ಕಳೆದುಕೊಂಡ ನಿಮ್ಮಂತಹ ನಾಯಕರು ಸರ್ಕಾರದ ಮುಖ್ಯಸ್ಥರಾದಾಗ ರಾಜಕಾರಣ ತನ್ನ ಹೇಗೆ ತಾನೆ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ?

ಇನ್ನು ನನ್ನ ಮಗನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದವರನ್ನು ಸುಮ್ಮನೆ ಬಿಡಕ್ಕಾಗುತ್ತಾ? ಅಂತಾ ಸುಭಗರಂತೆ ಕೇಳುತ್ತಾರಲ್ಲಾ? ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ರಾಮಕೃಷ್ಣ ಹೆಗಡೆಯವರು ತಮ್ಮ ಸ್ವಂತ ಮಗನ ವಿರುದ್ಧವೇ ತನಿಖೆಗೆ ಆದೇಶ ಮಾಡಿದ್ದರು. ಸಹೋದರ ಗಣೇಶ್ ಹೆಗಡೆ ಅಂತರ್ರಾಜ್ಯ ಅಕ್ಕಿ ಸಾಗಾಣೆ, ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗ ಅವರ  ವಿರುದ್ಧವೂ ತನಿಖೆ ಮಾಡಿಸಿದರು. ಹೇಳಿ ಸಿದ್ದರಾಮಯ್ಯನವರೇ "ನನ್ನ ಮಗನ ವಿರುದ್ಧ ವಿನಾಕಾರಣ ದೂರು ದಾಖಲಿಸಿದರೆ ಅವರನ್ನು ಸುಮ್ಮನೆ ಬಿಡೋಕಾಗುತ್ತಾ? ಅಂತ ಹೇಳುವ ಮೂಲಕ ನಿಮ್ಮ ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಇನ್ಸ್ ಪೆಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವಾ? ಹೆಗಡೆ ನೇತೃತ್ವದಲ್ಲಿ ಪಿಜಿಆರ್ ಸಿಂಧ್ಯಾ, ಜೀವರಾಜ್ ಆಳ್ವ, ರಾಚಯ್ಯ, ಬಿ. ಸೋಮಶೇಖರ್ ರಂತಹ ನಾಯಕರೊಂದಿಗೆ ಬೆಳೆದ ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಸಿದ್ದರಾಮಯ್ಯನವರೂ ಸೇರಿದಂತೆ ಕಾಂಗ್ರೆಸ್ ನಲ್ಲಿದ್ದ ಸಚಿವ ಸಂಪುಟದ ಬಹುತೇಕ ಜನರು ಮೂಲತಃ ಜನತಾ ಪರಿವಾದವರಾಗಿದ್ದರು ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಸ್ವಲ್ಪ ಮಟ್ಟಿಗೆ ಮೂಲ ಕಾಂಗ್ರೆಸ್ಸಿಗ, ವಲಸೆ ಕಾಂಗ್ರೆಸ್ಸಿಗ ಎಂಬ ಭಿನ್ನಮತವೂ ಪ್ರಾರಂಭವಾಗಿತ್ತು. ಅಷ್ಟೇ ಅಲ್ಲದೇ ಹೆಗಡೆ ಸಂಪುಟದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದ, ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಅಪಾರ ನಿರೀಕ್ಷೆಗಳಿದ್ದವು.

ಆದರೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಹೆಗಡೆಯವರೇ ಪ್ರೋತ್ಸಾಹಿಸಿದ್ದ ವ್ಯಕ್ತಿಯೊಬ್ಬ ಹೆಗಡೆಯವರೇ ಪ್ರಾರಂಭಿಸಿದ ಲೋಕಾಯುಕ್ತವನ್ನು ಕತ್ತುಹಿಸುಕಿ ಸಾಯಿಸಿದರು, ಗೂಂಡಾಗಳನ್ನು ಮಟ್ಟಹಾಕಲು ಹೆಗಡೆಯವರು ಗೂಂಡಾ ವಿರೋಧಿ ಕಾಯ್ದೆ ತಂದರೆ, ಸಿದ್ದರಾಮಯ್ಯನವರು ಪೊಲೀಸರನ್ನು, ದಕ್ಷಅಧಿಕಾರಿಗಳನ್ನು ಮುಗಿಸಲು ಸಚಿವ ಸಂಪುಟದಲ್ಲೇ ಗೂಂಡಾಗಳನ್ನು ಬೆಳೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಲ ಕಾಂಗ್ರೆಸ್ಸಿಗರನ್ನೂ ನಾಚಿಸುವಂತೆ ಇಂದು ರಾಜಕೀಯ ಅಸ್ಥಿತ್ವ, ಲಾಭಕ್ಕಾಗಿ, ಪಕ್ಷಕ್ಕೆ ಹಣ ಪೂರೈಕೆ ಮಾಡುವ, ಅಧಿಕಾರಿಗಳನ್ನು ಸಾವಿನ ಕೂಪಕ್ಕೆ ತಳ್ಳುವ ಪಕ್ಕದ ರಾಜ್ಯದಿಂದ ಇಲ್ಲಿಗೆ ಬಂದು ಆಶ್ರಯ ಪಡೆದಿರುವ ಸಚಿವನ ಪರ ವಕಾಲತ್ತು ವಹಿಸಿಕೊಳ್ಳುತ್ತಿರುವುದನ್ನು ನೋಡಿದರೆ, ರಾಮಕೃಷ್ಣ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದಿರಬೇಡ? ಅಂದು ಸಚಿವರ ವಿರುದ್ಧ ಆರೋಪ ಕೇಳಿಬಂದಾಗ ಮುಲಾಜಿಲ್ಲದೇ ಸಂಪುಟದಿಂದ ವಜಾಗೊಳಿಸುತ್ತಿದ್ದ ಎದೆಗಾರಿಕೆ ಹೊಂದಿದ್ದ ನಾಯಕನ ಆಡಳಿತವನ್ನು ನೋಡಿದ್ದ ರಾಜ್ಯದ ಜನತೆ, ಇಂತಹ ದರಿದ್ರ, ಉಸಿರುಗಟ್ಟಿಸುವ ಆಡಳಿತದ ಬಗ್ಗೆ ಅದೆಷ್ಟು ರೋಸಿಹೋಗಿದ್ದಾರೋ, ಛೆ!.....

also read @: http://bit.ly/29QKpQ5(Published in www.kannadaprabha.com)

Sunday 20 March 2016

ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿ, ಬಂಗಾಳಕ್ಕೆ ಸಿಕ್ಕಿದ್ದು ಕರಾಳ ರಾತ್ರಿ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ದಾಳಿ
_ಭಯೋತ್ಪಾದನೆಗೆ ಧರ್ಮವಿಲ್ಲ- ಕಮ್ಯುನಿಷ್ಟರು
26/11ರ ಮುಂಬೈ ದಾಳಿ, ದಾಳಿ ಮಾಡಿದ್ದು ಇಸ್ಲಾಮ್ ನ ಭಯೋತ್ಪಾದಕರು
-ಭಯೋತ್ಪಾದನೆಗೆ ಧರ್ಮವಿಲ್ಲ- ಬುದ್ಧಿಜೀವಿಗಳು, ಕಮ್ಯುನಿಷ್ಟರು
ಉಗ್ರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ
_ಭಯೋತ್ಪಾದನೆಗೆ ಧರ್ಮವಿಲ್ಲ!

ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಿ ಇಸ್ಲಾಂ ನ ಮೂಲಭೂತವದಿಗಳು, ಮತಾಂಧ ಉಗ್ರರು ದಾಳಿ ನಡೆಸಿದಾಗಲೆಲ್ಲಾ ’ಭಯೋತ್ಪಾದನೆಗೆ ಧರ್ಮವಿಲ್ಲ’ವೆಂಬ ಹೇಳಿಕೆ (ready made statement) ಸಿದ್ಧವಾಗಿರುತ್ತದೆ. ಇಂಥದ್ದೊಂದು ಹೇಳಿಕೆಯನ್ನು coin(ಪರಿಚಯಿಸಿದ್ದೇ)ಮಾಡಿದ್ದೇ ಈ ಕಮ್ಯುನಿಷ್ಟರು ಹಾಗೂ ಕಮ್ಯುನಿಷ್ಟರ ಕೃಪಾಪೋಷಿತ ಬುದ್ಧಿಜೀವಿಗಳು. ಭಯೋತ್ಪಾದಕರ ದಾಳಿ ನಡೆದಾಗಲೆಲ್ಲಾ ಇವರಿಂದ ಇಂಥಹ ಹೇಳಿಕೆ ಬರುವುದಾದರೂ ಯಾಕೆ ಅಂದುಕೊಂಡಿದ್ದೀರಿ? ಇಸ್ಲಾಮ್ ಗೆ ಪರ್ಯಾಯವಾದ, ಅಂಥಹದ್ದೇ ಒಂದು ಭಯೋತ್ಪಾದನೆಯನ್ನು ಇವರೂ ಪರಿಚಯಿಸಿದ್ದಾರೆ ಆದ್ದರಿಂದ…

ಇಸ್ಲಾಮ್, ಭಯೋತ್ಪಾದನೆಯ ಹೊಸ ಆವಿಷ್ಕರವನ್ನು ಏನಾದರೂ ಕಲಿಯುವುದಿದ್ದರೆ ಅದು ಕಮ್ಯುನಿಷ್ಟರಿಂದ ಕಲಿಯಬೇಕು, ಭಯೋತ್ಪಾದನೆಯ ನವೀನ ಮಾದರಿಯ ಬಗ್ಗೆ ಪಾಠ ಹೇಳಿಕೊಡುವ ಗುರುವಿನ ಮಟ್ಟಕ್ಕೆ ಕಮ್ಯುನಿಷ್ಟರು ಬೆಳೆದಿದ್ದಾರೆ. ಅಂಥಹ ಭಯೋತ್ಪಾದನೆಯ ಮಾದರಿಯನ್ನು ಪಶ್ಚಿಮ ಬಂಗಾಳಕ್ಕೆ ಸತತ 20 ವರ್ಷಗಳ ಕಾಲ ಕಾಣಿಸಿರುವುದು ಕಾಮ್ರೆಡ್ ಗಳ ಹೆಗ್ಗಳಿಕೆ! ಇಸ್ಲಾಮ್ ಧರ್ಮದ ಮತಾಂಧರು ಮನುಷ್ಯತ್ವವನ್ನೇ ಮರೆತು ಕಾಫಿರರ ಕುತ್ತಿಗೆಗೆ ಕತ್ತಿ ಇಟ್ಟು ತಾನು ಹೇಳಿದಂತೆ ನಡೆಯಬೇಕೆಂದರೆ, ಕಾಮ್ರೆಡ್ ಗಳು ತಲೆ ಸವರುತ್ತಲೇ ಭಯೋತ್ಪಾದನೆ ಮಾಡಿರುತ್ತಾರೆ. ಮಾನವಿಯತೆಯ ಮೌಲ್ಯಗಳನ್ನು ಹೇಳಿಕೊಂಡೇ ಮಾರಣಹೋಮ ನಡೆಸುತ್ತಾರೆ. ಬಡತನದ ಹೆಸರಿನಲ್ಲೇ ಕಾಮ್ರೆಡ್ ಗಳು ತಮ್ಮ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಾರೆ. ಅವರು ಹೇಳುವುದನ್ನು ಕೇಳದೇ ಇದ್ದರೆ, ಅವರ ಪಕ್ಷಕ್ಕೆ  ಮತ ಹಾಕದೇ ಇದ್ದರೆ, ಪ್ರಜಾಪ್ರಭುತ್ವ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಕೈಯನ್ನೋ ಕಾಲನ್ನೋ ತುಂಡರಿಸುತ್ತಾರೆ. ಇವೆಲ್ಲಾ ಸುಖಾಸುಮ್ಮನೆ ಮಾಡುತ್ತಿರುವ ಆರೋಪಗಳಲ್ಲ. ಕಪೋಲಕಲ್ಪಿತವಂತೂ ಅಲ್ಲವೇ ಅಲ್ಲ. ಒಂದು ಕಾಲದಲ್ಲಿ ತಾನು ಇಂದು ಚಿಂತಿಸಿದ್ದನ್ನು ಮುಂದೊಂದು ದಿನ ಸಮಸ್ತ ಭಾರತ ಚಿಂತಿಸುತ್ತದೆ ಎಂಬ ಶ್ರೇಷ್ಠತೆ ಹೊಂದಿದ್ದ ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಕಾಣಿಸಿದ ಕರಾಳ ರಾತ್ರಿಗಳು ಇವೆಲ್ಲವನ್ನೂ ಹೇಳುತ್ತವೆ.

ಕಮ್ಯುನಿಷ್ಟ್ ಕೈಗೆ ಸಿಲುಕಿ 1970ರಲ್ಲಿ ಹತ್ಯೆಗೀಡಾದ ಬರ್ದಮಾನ್ ನ ಸೈನ್ ಬಾರಿ ಕುಟುಂಬದ ಮೂವರು ಸಹೋದರರ ರಕ್ತದ ಕಲೆಗಳು, ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಹಾಗೂ ಕಾಮ್ರೆಡ್ ಗಳ ಪಟಾಲಂ ಕರುಣಿಸಿದ ಕರಾಳ ರಾತ್ರಿಗಳನ್ನು ಸಾರಿ ಹೇಳುತ್ತವೆ. ಉಗ್ರತ್ವದಲ್ಲಿ ವರ್ಣನಾತೀತ ಸಾಹಸಗಾಥೆ ಹೊಂದಿರುವವರು ತಮ್ಮ ಪಾಲನ್ನು ಬಿಟ್ಟು  ಭಯೋತ್ಪಾದನೆಯ ಹೊಣೆಯನ್ನು ಹೇಗೆ ತಾನೆ ನಿರ್ದಿಷ್ಟ ಜನರಿಗೆ ಮೀಸಲಾಗಿಸಲು ಒಪ್ಪುತ್ತಾರೆ ಹೇಳಿ?
ಅಲ್ಲದೇ ಮತ್ತೇನು?

ದಿ ಸ್ಟೇಟ್ಸ್ ಮನ್ ಹಾಗೂ ಪಶ್ಚಿಮ ಬಂಗಾಳದ ಪತ್ರಕರ್ತರಾಗಿದ್ದ ಉದಯನ್ ನಂಬೂದರಿ ಬರೆದಿರುವ ’ಬೆಂಗಾಲ್ಸ್ ನೈಟ್ ವಿತೌಟ್ ಎಂಡ್’ ಪುಸ್ತಕದಲ್ಲಿ, ಕಾಮ್ರೆಡ್ ಗಳ ಕ್ರೌರ್ಯ, ಮಾನವೀಯತೆಯ ಬಗ್ಗೆಯೇ ಉಸಿರೆಂದು ಪೋಸು ಕೊಡುವ ಕಮ್ಯುನಿಷ್ಟರ ಕಪಟತೆ ಮುಖಕ್ಕೆ ರಾಚುತ್ತದೆ. “ಮಾನವೀಯತೆಯ ಬಗ್ಗೆ ಮಾತನಾಡುತ್ತಲೇ ಮಾರಣಹೋಮಗಳನ್ನು ನಡೆಸಿದ್ದೇವೆ, ಸಮಾನತೆ ಬಗ್ಗೆ ಮಾತನಾಡುತ್ತಲೇ ಭೂಮಿಯನ್ನು ಕಬಳಿಸಿ ಉಳ್ಳವರನ್ನೂ, ಉಳ್ಳವರ ಮೇಲೆ ಅವಲಂಬಿತರಾದ ಇಲ್ಲದವರನ್ನೂ ಬೀದಿಗೆ ತಂದಿದ್ದೇವೆ”. ನಮ್ಮ ಪಕ್ಷಕ್ಕೆ ಓಟು ಹಾಕದವರನ್ನು ಬೆದರಿಸಿದ್ದೇವೆ, ಆದ್ದರಿಂದಲೇ ಭಯೋತ್ಪಾದನೆಗೆ ಧರ್ಮವಿಲ್ಲ” ಎಂದು ಕಮ್ಯುನಿಷ್ಟ್ ಪ್ರಣೀತ ಭಯೋತ್ಪಾದನೆಯನ್ನು ನೇರಾ ನೇರವಾಗಿ ಹೇಳುತ್ತಲೇ ಇದ್ದಾರೆ. ಆದರೆ 2 ದಶಕಗಳ ಕಾಲ ಬಂಗಾಳದ ಜನತೆಗೆ ಅಸಹಾಯಕತೆಯಿಂದಲೂ ಮಂಕುಬುದ್ಧಿಯಿಂದಲೋ ಅರ್ಥವಾಗಿರಲಿಲ್ಲ, ಬಂಗಾಳದ ಹಾಗೆಯೇ ಇದು ಭಾರತದ ಜನರಿಗೂ ಅರ್ಥವಾಗುತ್ತಿಲ್ಲ.
ಕಮ್ಯುನಿಷ್ಟರ ಕ್ರೌರ್ಯವನ್ನು ವರ್ಣಿಸಲು ಸೈನ್ ಬಾರಿ ಕುಟುಂಬದ ಮೂವರು ಸಹೋದರರ ಮಾರಣಹೋಮದ ಕಥೆ, ಅಲ್ಲಿನ ಉಳುವವನಿಗೇ ಭೂಮಿ ಎಂಬ ಆದರ್ಶ ಯೋಜನೆಯಲ್ಲಿ ನಡೆದ ಅಕ್ರಮಗಳು, ಕೈಕತ್ತರಿಸಿ ಹೋಗುವ ಭಯದಿಂದ ವಿಧಿ ಇಲ್ಲದೇ ಸಿಪಿಐ(ಎಂ)ಗೆ ಓಟು ಹಾಕುವ ಮತದಾರರ ವ್ಯಥೆ, ಓಟ್ ರಿಗ್ಗಿಂಗ್ ಕಥೆಗಳೇ ಸಾಕು. ಇಸ್ಲಾಮ್ ನಲ್ಲಿ ಕಂಡುಬರುವ ಅಸಹನೆ, ತನ್ನದಲ್ಲದ ನಾಶ, ವಿನಾಕಾರಣ ಕೆಣಕುವುದು ಇವೆಲ್ಲವೂ; ಸುಮ್ಮನೆ ವೈಶಮ್ಯ ಬೆಳೆಸುವ, ಸುಮ್ಮನೆ ಇರುವವರನ್ನು ಕೆಣಕಿ ಬಂದ್ ಮಾಡಿಸುವ, ವಿನಾಕಾರಣ ಕ್ರಾಂತಿಯ ಹೆಸರಿನಲ್ಲಿ ಕ್ರೌರ್ಯ ಮೆರೆಯುವ ಕಮ್ಯುನಿಷ್ಟ್ ಕಾಮ್ರೆಡ್ ಗಳಲ್ಲೂ ಕಂಡುಬರುತ್ತದೆ. ಇವೆಲ್ಲವೂ ಮೇಲಿನ ಅಷ್ಟೂ ಘಟನೆಗಳಲ್ಲಿ ನಡೆದಿದೆ(ಈಗಲೂ ನಡೆಯುತ್ತಿವೆ). ಒಂದು ರೀತಿಯ ಟಿಪಿಕಲ್ ಇಸ್ಲಾಮಿಕ್ ಉಗ್ರವಾದದ ಮಾನಸಿಕತೆ ಎಂದುಕೊಳ್ಳಿ.

ಅದು ಡಿ.11, 1969, ಸೈನ್ ಬಾರಿ ಕುಟುಂಬದ ಸ್ನೇಹಿತನಾಗಿದ್ದ ಇಂದುಭೂಷಣ್ ಘಾರಿಯಾ ಅವರನ್ನು ಸಿಪಿಐ(ಎಂ) ಕಾರ್ಯಕರ್ತರು ರಾಜಕೀಯ ದ್ವೇಷಕ್ಕಾಗಿ ಹತ್ಯೆ ಮಾಡಿದ್ದರು. ಈ ಮೂಲಕ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದ ಹಿರಿಯ ಪುತ್ರ ನಬಾ ಸೈನ್ ನ ಹತ್ಯೆಯ ಸುಳಿವು ಸಿಕ್ಕಿತ್ತು. ಕೊಲೆ ಮಾಡುವುದರೊಂದಿಗೆ ಸೈನ್ ಬಾರಿ ಕುಟುಂಬದವರು ಭಯಭೀತರಾಗಿ ತಾವಿರುವ ಮನೆಯನ್ನೇ ತೊರೆದರು. ನಂತರ ಅವರ ಕುಟುಂಬಕ್ಕೆ ಸೇರಿದ ಭೂಮಿಯನ್ನು  ಭೂ ಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಕೃಷಿ ಭೂಮಿಯ ಮಾಲಿಕನಿಂದ ಕಸಿದುಕೊಂಡು ಕಬಳಿಸಿದ್ದರು ಈ ಕಮ್ಯುನಿಷ್ಟರು. ಇತ್ತ 1970 ರ ಮಾರ್ಚ್ ವೇಳೆಗೆ ಕಮ್ಯುನಿಷ್ಟರ ಅಟಾಟೋಪಗಳಿಂದ ಬೇಸತ್ತ ಪಶ್ಚಿಮ ಬಂಗಾಳದಲ್ಲಿ ಬಂಗಾಳ ಕಾಂಗ್ರೆಸ್- ಸಿಪಿಐ(ಎಂ) ಸಮ್ಮಿಶ್ರ ಸರ್ಕಾದ ಮುಖ್ಯಮಂತ್ರಿಯಾಗಿದ್ದ ಅಜೋಯ್ ಮುಖರ್ಜಿ ಮಾ.16ರಂದು ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಕಮ್ಯುನಿಷ್ಟರು ಮಾ.17ರಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದರು. ಇದೇ ದಿನ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದಲ್ಲಿ ನಾಮಕರಣ ಸಮಾರಂಭವೊಂದು ನೆಡೆಯುತ್ತಿತ್ತು. ಪ್ರತಿಭಟನೆಯ ನೆಪದಲ್ಲಿ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳಲು, ಶ್ರೀಮಂತವಾಗಿದ್ದ ಸೈನ್ ಬಾರಿ ಕುಟುಂದ ಭೂಮಿಯನ್ನು ಕಬಳಿಸಲು ಮುಂದಾದ ಮಾನವತಾವಾದಿ ಕಮ್ಯುನಿಷ್ಟರು, ಸಮಾರಂಭ ನಡೆಯುತ್ತಿದ್ದ ಮನೆಗೇ ನುಗ್ಗಿದ್ದರು, ಸೈನ್ ಬಾರಿ ಕುಟುಂಬದ ಮಗಳ ಮಗುವನ್ನೂ ಲೆಕ್ಕಿಸದೇ ಸಿಕ್ಕಸಿಕ್ಕವರ ಮೇಲೆಲ್ಲಾ ಹಲ್ಲೆ ನಡೆಸಿದರು. ನಬಾ ಸೈನ್ ಹಾಗೂ ಆತನ ಇಬ್ಬರು ಸಹೋದರರು, ಮನೆಯ ಅಥಿತಿಗಳಿಗೆ ರಿಕ್ಷಾ ಸೌಲಭ್ಯ ಒದಗಿಸಲು ಬಂದಿದ್ದ ಮೊಲೋಯ್ ಸೈನ್ ನನ್ನು ಹತ್ಯೆ ಮಾಡಿದ್ದರು, ಸೈನ್ ಬಾರಿ ಕುಟುಂಬದ ಸಹೋದರರ ರಕ್ತವನ್ನು ಅವರ ತಾಯಿಗೇ ಕುಡಿಸಿ ವಿಕೃತಿ ಮೆರೆದ ಚರಿತ್ರೆ ಕಮ್ಯುನಿಷ್ಟರದ್ದೇ…ಇದು ಕೇವಲ ಒಂದು ಘಟನೆ, 1968 ರಲ್ಲಿ 575, 1969 ರಲ್ಲಿ 575, 1970 ರಲ್ಲಿ 640 ಜನರು ಕಮ್ಯುನಿಷ್ಟರ ಅಧಿಕಾರವಿದ್ದ ಪಶ್ಚಿಮಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ!. ಇದು ಕಾಮ್ರೆಡ್ ಗಳ ರಕ್ತಪಾತದ ಕಥೆ. ತಮ್ಮ ಪಕ್ಷದ ನಾಯಕರನ್ನು ಹತ್ಯೆ ಮಾಡಿದರೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾತ್ರ ಪಶ್ಚಿಮ ಬಂಗಾಳದ ಸರ್ಕಾರದ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲ, ಇದು, ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿಗೆ ಸಾಕ್ಷಿ.
ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆಯ ಚುನಾವಣೆಯಲ್ಲಿ ಯಾರಾದರೂ ಕಾಂಗ್ರೆಸ್ ಗೆ ಅಥವಾ ಅನ್ಯ ಪಕ್ಷಕ್ಕೆ ಮತ ನೀಡದಂತೆ ತಡೆಯುವ ಕೌಶಲ್ಯವೂ ಕಮ್ಯುನಿಷ್ಟರಿಗೆ ಕರತಲಾಮಲಕವಾಗಿತ್ತು. ಬೆಂಗಾಲ್ಸ್ ನೈಟ್ ವಿತೌಟ್ ಎಂಡ್ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ/ ಮಾಜಿ ಶಾಸಕ ಅಫ್ತಾಬುದ್ದೀನ್ ಮಂಡೋಲ್ ನೀಡಿರುವ ಮಾಹಿತಿಯ ಪ್ರಕಾರ ಕಮ್ಯುನಿಷ್ಟರು ಪಂಚಾಯತ್ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆ ವೆರೆಗೂ ಓಟ್ ರಿಗ್ಗಿಂಗ್ ಮಾಡುವುದರಲ್ಲಿ ಮಹಾನಿಸ್ಸೀಮರು! ಅಸಲಿಯತ್ತೇನೆಂದರೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಕಮ್ಯುನಿಷ್ಟರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವನ ಕೈ ಕತ್ತರಿಸಿದ ಉದಾಹರಣೆಯೂ ಇದೆ. ಹಾಗಂತ ಅವರೇನು ಭಾರಿ ಅಂತರದಿಂದ ಗೆಲ್ಲುವಂತೆ ಓಟ್ ರಿಗ್ಗಿಂಗ್ ಮಾಡುತ್ತಿರಲಿಲ್ಲ, ಯಾರಿಗೂ ಅನುಮಾನ ಬಾರದಂತೆಯೇ ಓಟ್ ರಿಗ್ಗಿಂಗ್ ಮಾಡಿ ಬಹುಮತ ಗಳಿಸುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಖಂಡುವಾ ಎಂಬ ಪ್ರದೇಶವಿದೆ ಅಲ್ಲಿ ಇರುವವರೆಲ್ಲಾ ಕಮ್ಯುನಿಷ್ಟರ ತಲೆ ಕಂಡರೆ ಆಗದವರೇ, ಆದರೂ ಗ್ರಾಮದ 5 ಕಿ.ಮಿ ಪ್ರದೇಶದಲ್ಲಿರುವ ಬೂತ್ ಗಳನ್ನು ರಿಗ್ ಮಾಡಿ ಮತ ಪಡೆಯುತ್ತಾರೆ. ಒಟ್ಟಿನಲ್ಲಿ ಓಟ್ ರಿಗ್ಗಿಂಗ್ ಮಾಡುವುದು ಕಮ್ಯುನಿಷ್ಟರ ಗೆಲುವಿನ ಗುಟ್ಟು.

ಇನ್ನು ಇವರು ಭೂ ಸುಧಾರಣಾ ಕಾಯ್ದೆಯಲ್ಲಿ ನಡೆಸಿರುವ ಅಕ್ರಮಗಳಿಗೆ ಕೊನೆಯೇ ಇಲ್ಲ!, ಕಮ್ಯುನಿಷ್ಟರ ವಿರುದ್ಧ ಮಾತನಾಡುವವರ ಭೂಮಿಯನ್ನು ಭೂಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಬಡವರಿಗೆ ಹಂಚುತ್ತೇವೆ ಎಂದು ವಶಕ್ಕೆ ಪಡೆಯುವುದು ನಂತರ ಅದನ್ನು ಕಬಳಿಸುವುದು ಇವರಿಗೆ ಸಿದ್ಧಿಸಿರುವ  ಕಲೆ. ನೆಮ್ಮದಿಯಿಂದ ಇದ್ದ ಅದೆಷ್ಟೋ ಭೂಮಾಲಿಕರು ಇವರ ರಾಜಕೀಯ ವೈರಿ ಪಕ್ಷದ ಕಾರ್ಯಕರ್ತರೋ, ಸದಸ್ಯರೋ ಆಗಿದ್ದರೆಂದು ಅವರ ವಿರುದ್ಧ ಸುಳ್ಳು ಆರೋಪ ಹೊರೆಸಿ, ಟಿಎಂಸಿ ಸದಸ್ಯರು ಬಡವರ ಜಮೀನಿನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಭೂಮಿ ಕಬಳಿಸುತ್ತಿದ್ದರು, ಇವೆಲ್ಲವೂ ಕಮ್ಯುನಿಷ್ಟರ ಕೃಪಾಪೋಷಿತ ಅಧಿಕಾರಿಗಳ ಸಹಕಾರದಿಂದಲೇ ನಡೆಯುತ್ತಿತ್ತು.
ಪ್ರತಿ ವರ್ಷದ ಏಪ್ರಿಲ್ ನ ಕೊನೆಯ ದಿನದಂದು ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದಲ್ಲಿ ಸನ್ಯಾಸಿಗಳ ಗುಂಪೂಂದು ಮೌನ ಪ್ರತಿಭಟನಾ ಮೆರವಣಿಗೆ ನಡೆಸುತ್ತದೆ, ಈ ಪ್ರತಿಭಟನೆಯ ಕಾರಣದ ಹಿಂದಿರುವುದೂ ಕಮ್ಯುನಿಷ್ಟರ ಕೊಡುಗೆಯೇ. ಮಹಾನ್ ಮಾನವತಾವಾದಿಗಳಾಗಿರುವ ಕಮ್ಮಿನಿಷ್ಠರು ಗುಜರಾತ್ ನ ನರಮೇಧದ ಬಗ್ಗೆ ಈ ಕ್ಷಣಕ್ಕೂ ಎದೆಬಡಿದುಕೊಂಡು ಕಣ್ಣೀರಿಡುತ್ತಾರೆ, ತಪ್ಪೇ ಇಲ್ಲದವರನ್ನು ದೂಷಿಸುವುದನ್ನು ಇನ್ನೂ ಬಿಟ್ಟಿಲ್ಲ, ಹಾಗೆ ಮಾತನಾಡಿದಾಗಲೆಲ್ಲಾ  1982 ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದ ಆನಂದ್ ಮಾರ್ಗ್ ನಲ್ಲಿ ಮಾರ್ಕ್ಸ್ ವಾದಿಗಳಾಗಿದ್ದ ಒಂದಷ್ಟು ಮಂದಿ ದುರುಳರು 16 ಜನ ಸನ್ಯಾಸಿಗಳು ಹಾಗೂ ಒಬ್ಬ ಸನ್ಯಾಸಿನಿಯನ್ನು ನಡು ರಸ್ತೆಯಲ್ಲೆ ಸಜೀವ ದಹನ( ಆನಂದ್ ಮಾರ್ಗ್ ನರಮೇಧ) ಮಾಡಿ, ಅವರ ದೇಹಗಳನ್ನು ಬಿಜೋನ್ ಸೇತುವೆಯ ರೈಲ್ವೆ ಟ್ರ್ಯಾಕ್ ಮೇಲೆ ನೇತು ಹಾಕಿದ್ದ ಘಟನೆಯನ್ನು ಕಾಮ್ರೆಡ್ ಗಳು ನೆನೆಸಿಕೊಳ್ಳಲಿ ಅವರ ಸಂಘಟನೆ ಬಗ್ಗೆ, ಅವರ ಬಗ್ಗೆ ಅವರಿಗೇ ಅಸಹ್ಯ ಹುಟ್ಟುವುದು ಖಂಡಿತ. ಉಹೂ ಅದೂ ಆಗುವುದಿಲ್ಲ ಯಾಕೆ ಗೊತ್ತೇನು,  ಆನಂದ್ ಮಾರ್ಗ್ ನರಮೇಧ ನಡೆದಾಗ ಈಗಿನಂತೆ ಟಿವಿಗಳಿರಲಿಲ್ಲ. ಬ್ರೇಕಿಂಗ್ ನ್ಯೂಸ್ ಗಳಿರಲಿಲ್ಲ, ಆದರೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕಿದ್ದ ಮಾರ್ಕ್ಸ್ ವಾದವನ್ನು ಬೆಂಬಲಿಸುತ್ತಿದ್ದ ಸರ್ಕಾರದ ಮುಖ್ಯಸ್ಥ ಜ್ಯೋತಿ ಬಸು, “17 ಜನ ಸನ್ಯಾಸಿಗಳು ಮಕ್ಕಳ ಕಳ್ಳರೆಂಬ ವದಂತಿ ಇತ್ತು, ಆದ್ದರಿಂದ ಸನ್ಯಾಸಿಗಳನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ, ಅದೊಂದು ಸಾರ್ವಜನಿಕ ಆಕ್ರೋಶದಿಂದ ಉಂಟಾದ ಘಟನೆಯೆಂದು ನಾಚಿಕೆ ಇಲ್ಲದೇ” ಕ್ಷುಲ್ಲಕ ಘಟನೆ ಎಂಬಂತೆ ಹೇಳಿಕೆ ನೀಡಿದ್ದರು. ಗುಜರಾತ್ ಸರ್ಕಾರ ಭಯೋತ್ಪಾದಕಿ ಇಶ್ರಾತ್ ಜಹಾನ್ ಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಎದೆಬಡಿದುಕೊಂಡು ಕಣ್ಣೀರಿಡುತ್ತಾ ಪ್ರಧಾನಿಗೆ ಶಪಿಸುತ್ತಿದ್ದಾರಲ್ಲಾ, ಆನಂದ್ ಮಾರ್ಗ್ ನರಮೇಧದಂತಹ ಘಟನೆಗಳಿಗೇಕೆ ಇವರು ಕಣ್ಣೀರಿಡುವುದಿಲ್ಲ?

ಕೊನೆಯದಾಗಿ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಎರಡೂ ರಾಜ್ಯಗಳು ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಭಾರತದಲ್ಲೇ ಅತ್ಯಂತ ಶ್ರೇಷ್ಠತೆ ಹೊಂದಿದೆ, ಭಾರತೀಯತೆಯನ್ನು ಪ್ರತಿಬಿಂಬಿಸುವ, ಪ್ರತಿನಿಧಿಸುವ ಎಲ್ಲವನ್ನೂ ಈ ರಾಜ್ಯಗಳಲ್ಲಿ ಕಾಣಬಹುದು, ಭಾರತದ ಮುಕುಟವಾಗಿರುವ ಜಮ್ಮು-ಕಾಶ್ಮೀರ ನೆಹರು ಕಪಿಮುಷ್ಟಿಗೆ ಸಿಲುಕಿ ತನ್ನತನವನ್ನೇ ಕಳೆದುಕೊಂಡಿತು, ನೆಹರು ಭಾರತೀಯತೆಯ ಪ್ರತೀಕವಾಗಿದ್ದ ರಾಜ್ಯವನ್ನು ನಿರ್ನಾಮ ಮಾಡಿದರು, ನೆಹರುವಿಗೆ ಪ್ರೀತಿಪಾತ್ರವಾಗಿದ್ದ ಕಮ್ಯುನಿಸಂ,(ಕಮ್ಮಿ ನಿಷ್ಠೆ) ಭಾರತೀಯತೆಯ ಪ್ರತೀಕವಾಗಿದ್ದ, ಹೆಮ್ಮೆಪಡಲು ಎಲ್ಲವನ್ನೂ ಹೊಂದಿದ್ದ ಪಶ್ಚಿಮ ಬಂಗಾಳವನ್ನು ನಿರ್ನಾಮ ಮಾಡಿದೆ. ಈಗ ದೇಶ ಮುನ್ನಡೆಯುತ್ತಿರುವ ಕಾರಣದಿಂದ ಅಸ್ಥಿತ್ವದ ಬಗ್ಗೆ ಚಿಂತಾಕ್ರಾಂತರಾಗಿರುವ ಕಾಂಗ್ರೆಸ್ಸಿಗರು- ಕಮ್ಯುನಿಷ್ಟರು ಪಶ್ಚಿಮ ಬಂಗಾಳದ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್- ಕಮ್ಯುನಿಷ್ಟರು ಕಾಲಿಟ್ಟಲ್ಲೆಲ್ಲಾ ಅಲ್ಲಿ ಸಿಗುವುದು ಕರಾಳ ರಾತ್ರಿಯೇ ಹೊರತು ಭರವಸೆಯ ಬೆಳದಿಂಗಳಲ್ಲ. Die soon communism...