Thursday 16 May 2019

ಜೀವನ್ಮುಕ್ತ ಸಂತ: ಶೃಂಗೇರಿ ಶಿವಗಂಗಾ ಪೀಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳು



ಬೆಂಗಳೂರಿನಿಂದ ಸುಮಾರು 54 ಕಿಮಿ ದೂರದಲ್ಲಿ ಬೃಹದಾಕಾರದ ಬೆಟ್ಟದಿಂದ ಸುತ್ತುವರೆದ ಪ್ರದೇಶ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು ಶಿವನ ಸಾನ್ನಿಧ್ಯದಲ್ಲಿ ಅಗಸ್ತ್ಯರು ಸ್ಥಾಪಿಸಿದ ಗಂಗೆ ಇರುವ ಪವಿತ್ರ ಕ್ಷೇತ್ರ. ಯೋಗಿಗಳ ತಪಸ್ಸಿಗೆ ಹೇಳಿ ಮಾಡಿಸಿದ ಸ್ಥಳ, ವಾಹನ ಸಂಚಾರವೇ ಇರದ ಕಾಲಘಟ್ಟ, ಆಗಲೇ ನೆಲಮಂಗಲದ ಬಳಿ ಇರುವ ಶಿವಗಂಗೆಯಲ್ಲಿ ಪ್ರಾರಂಭವಾಗಿದ್ದು ಶೃಂಗೇರಿಯ ಶಾಖಾ ಮಠವಾದ ಶೃಂಗೇರಿ ಶಿವಗಂಗಾ ಮಠ.

ಶೃಂಗೇರಿ ಶಿವಗಂಗಾ ಮಠ ಸ್ಥಾಪನೆಯಾಗಿದ್ದು, 1599ರಿಂದ 1622ರವರೆಗೆ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನರಸಿಂಹ ಭಾರತೀ ಸ್ವಾಮಿಗಳವರ ಕಾಲದಲ್ಲಿ. ಜಗದ್ಗುರುಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಪರಿವಾರದಲ್ಲಿದ್ದ ಶ್ರೀ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು,ನಾಲ್ಕು ದಿಕ್ಕಿನಿಂದಲೂ ನಾಲ್ಕು ಆಕಾರಗಳಾಗಿ(ಗಣೇಶ, ಲಿಂಗ, ನಂದಿ, ಸರ್ಪ) ಕಾಣುವ ಬೆಟ್ಟ ಇರುವ ಶಿವಗಂಗಾ ಕ್ಷೇತ್ರದಲ್ಲಿ ಶಂಕರ ಭಾರತಿ ಸ್ವಾಮಿಗಳು 1656ರಲ್ಲಿ ವಿದ್ಯಾಶಂಕರ ಎಂಬ ಯೋಗಪಟ್ಟ ನೀಡಿ ತಮ್ಮ ಶಿಷ್ಯರೊಬ್ಬರನ್ನು ಈ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.ಅದಕ್ಕಾಗಿಯೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ನಡೆದ ಶೃಂಗೇರಿ ಮಹಾಸ್ವಾಮಿಗಳವರ ಶಿಷ್ಯ ಸ್ವೀಕಾರ ಸಮಾರಂಭವೂ ಸೇರಿದಂತೆ ಈ ಹಿಂದೆ ಅದೆಷ್ಟೋ ಸಂದರ್ಭದಲ್ಲಿ ಇದು ಪ್ರಕಟವೂ ಆಗಿದೆ. ಶೃಂಗೇರಿ ಶಾಖಾ ಮಠದ ಈ ಗುರುಪರಂಪರೆಯಲ್ಲಿ 18ನೇ ಪೀಠಾಧಿಪತಿಗಳಾಗಿ ರಾರಾಜಿಸಿದವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು.

ಸೀತಾರಾಮ ಶರ್ಮ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು. 1953ರ ವೈಶಾಖ ಶುದ್ಧ ದ್ವಾದಶಿಯಂದು ವೇದ ಬ್ರಹ್ಮ ವೆಂಕಟಸುಬ್ಬಯ್ಯ, ಸುಬ್ಬಲಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಗಳು ಪೂರ್ವಾಶ್ರಮದಲ್ಲಿ ಬಿ.ಎಸ್ಸಿ, ಎಲ್.ಎಲ್.ಬಿ ಬಿ.ಐ.ಎಂ.ಎಸ್(ದೆಹಲಿ ವಿಶ್ವವಿದ್ಯಾನಿಲಯ) ಪದವೀಧರರು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ) ಎಂಬಂತೆ ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರಾದರೂ ಅವರ ಲಕ್ಷ್ಯ ಇದ್ದದ್ದು ಮಾತ್ರ ಬ್ರಹ್ಮಜ್ನಾನಕ್ಕೆ ರಾಜಮಾರ್ಗವಾದ ಆಧ್ಯಾತ್ಮ ಚಿಂತನೆಯಲ್ಲಿ. ಸನಾತನ ಧರ್ಮದ ಆಚರಣೆ ಬಗ್ಗೆ ಅತೀವ ಆಸಕ್ತಿ, ವೇದಗಳ ಬಗ್ಗೆ ಅಚಲ ನಂಬಿಕೆ, ಶ್ರದ್ಧೆ, ಭಕ್ತಿ ಶ್ರೀಗಳವರಿಗೆ ವಿದ್ಯಾರ್ಥಿ ಜೀವನದಿಂದಲೂ ಕೌಟುಂಬಿಕ ವಾತಾವರಣದಲ್ಲೇ ಲಭಿಸಿತ್ತು. ಬಿ.ಎಸ್ಸಿ, ಎಲ್.ಎಲ್.ಬಿ ಹಾಗೂ ದೆಹಲಿಯ ವಿಶ್ವವಿದ್ಯಾನಿಲಯದಿಂದ ಬಿ.ಐ.ಎಂ.ಎಸ್ ಪದವಿ ಪಡೆದ ನಂತರ ಕೆಲಕಾಲ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಕಂಪನಿಯಲ್ಲಿ ಕೆಲಕಾಲ ವೃತ್ತಿ ಜೀವನ ನಡೆಸಿದರು. ಈ ಸಂದರ್ಭದಲ್ಲೇ ಗುರುಗಳಿಗೆ ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಸಂಶ್ರಯ ಪ್ರಾಪ್ತವಾಗಿತ್ತು.ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಶ್ರೀಗಳ ಮನಸ್ಸು ವೇದಾಧ್ಯಯನಕ್ಕಾಗಿ ಶೃಂಗೇರಿಯ ಶಾರದಾಂಬೆಯ ಸಾನ್ನಿಧ್ಯದತ್ತ ಹೊರಳಿತ್ತು. ತಂದೆ ತಾಯಿಯರ ಅನುಮತಿ ಪಡೆದು, ಶೃಂಗೇರಿಯಲ್ಲಿ ವೇದಾಧ್ಯಯನ ಮುಂದುವರೆದಿತ್ತು. ಇತ್ತ ಶಿವಗಂಗಾ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಆರೋಗ್ಯ ಹದಗೆಟ್ಟಿತ್ತು, ಪೀಠಕ್ಕೆ ಉತ್ತರಾಧಿಕಾರಿ ನೇಮಕ ತುರ್ತಾಗಿ ನಡೆಯಬೇಕಿತ್ತು. ಶೃಂಗೇರಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ಸೀತಾರಾಮ ಶರ್ಮರೇ ತಮ್ಮ ಉತ್ತರಾಧಿಕಾರಿಗಳೆಂದು ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರು ನಿಶ್ಚಯಿಸಿದ್ದರು.ಹಿರಿಯ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಸೀತಾರಾಮ ಶರ್ಮರನ್ನು ಬೆಂಗಳೂರಿಗೆ ಕರೆಸಲಾಯಿತು. 7-08-1982, ಆಶ್ವಯುಜ ಶುದ್ಧ ಪಂಚಮಿಯಂದು ಆತುರದ ಸಂನ್ಯಾಸ ನೀಡಿ ಸಚ್ಚಿದಾನಂದ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನೂ ನೀಡಲಾಯಿತು. ಕ್ರಮ ಸನ್ಯಾಸ ಸ್ವೀಕಾರದ ನಂತರ 26-10-1982ರಲ್ಲಿ ಶ್ರೀಗಳು ಶೃಂಗೇರಿ ಶಾಖಾ ಮಠ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತಗೊಂಡರು. ನಂತರ  31 ವರ್ಷಗಳ ಕಾಲ ಶಿವಗಂಗಾ ಪೀಠವನ್ನಲಂಕರಿಸಿದ್ದರು.


(ವಿಡಿಯೋ ಕೃಪೆ:  sri sacchidananda bharathi mahaswamiji  facebook page


ಸಂನ್ಯಾಸ ಧರ್ಮಕ್ಕೆ ಅನ್ವರ್ಥ ನಾಮದಂತಿದ್ದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರಿಂದ ಪ್ರಭಾವಿತರಾಗಿದ್ದರು. ಶ್ರೀರಾಮ ಅವರ ಆರಾಧ್ಯ ದೈವ. ಗುರುಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳವರು ಉಪದೇಶ ನೀಡಿದ್ದರು ಎಂಬುದು ವಿಶೇಷ. ಅದರ ಫಲವೆಂಬಂತೆ ಸಂನ್ಯಾಸಾಶ್ರಮ ಸ್ವೀಕರಿಸಿದ ನಂತರ ಸಚ್ಚಿದಾನಂದ ಭಾರತೀ ಸ್ವಾಮಿಗಳವರು, ತಪಸ್ಸು ವೈರಾಗ್ಯ, ಧರ್ಮಾಚರಣೆ, ಗುರುಭಕ್ತಿ, ಭಕ್ತಜನರನ್ನು ಆಶೀರ್ವದಿಸುವ ವಿಷಯದಲ್ಲಿ, ಅಷ್ಟೇ ಏಕೆ ಸಂನ್ಯಾಸಾಶ್ರಮ ಸ್ವೀಕಾರದಿಂದ ವಿದೇಹ ಮುಕ್ತಿವರೆಗೂ ಚಂದ್ರಶೇಖರ ಭಾರತೀ ಸ್ವಾಮಿಗಳ ಪ್ರತಿರೂಪದಂತಿದ್ದರು. ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನ ಚರಿತ್ರೆಯನ್ನು ಓದಿ, ಶಿವಗಂಗಾ ಗುರುಗಳ ದರ್ಶನ ಪಡೆದ ಅದೆಷ್ಟೋ ಭಕ್ತರಿಗೆ ಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಚಂದ್ರಶೇಖರ ಭಾರತೀ ಸ್ವಾಮಿಗಳೇ ಆವಿರ್ಭವಿತರಾಗಿದ್ದದ್ದು ನಿಸ್ಸಂದೇಹವಾಗಿ ಗೋಚರಿಸುತ್ತಿತ್ತು. ಚಂದ್ರಶೇಖರ ಭಾರತೀ ಸ್ವಾಮಿಗಳು ಹೀಗೆ ಇದ್ದಿರಬೇಕು ಎಂದೆನಿಸುತ್ತಿತ್ತು. ತಪಸ್ಸಿನಲ್ಲಂತೂ ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತೊಂದು ಅವತಾರದಂತೆಯೇ ಇದ್ದರು. ಶ್ರೀಗಳವರ ಅನುಷ್ಠಾನ ಎಷ್ಟೋ ದಿನಸಗಳ ಕಾಲ ಆಹಾರಗಳಿಲ್ಲದೇ ಸಾಗುತ್ತಿತ್ತು. ಈ ಎಲ್ಲಾ ಗುಣಗಳಿಂದಾಗಿಯೇ ತಮ್ಮ ವಿಜಯಯ ಯಾತ್ರೆಯ ಸಂದರ್ಭದಲ್ಲಿ ಶಿಷ್ಯ ಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಅನುಷ್ಠಾನ(ತಪಸ್ಸು) ಚಕ್ರವರ್ತಿಗಳೆಂಬ ಬಿರುದು ನೀಡಿದ್ದರು. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಅಲೌಕಿಕ ಸಾಧನೆ ಅಂತಹ ಶ್ರೇಷ್ಠವಾದದ್ದು. ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳ ಬಗ್ಗೆ ಅದೆಷ್ಟು ಗೌರವವಿತ್ತೋ ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಬಗ್ಗೆಯೂ ಅಷ್ಟೇ ಗೌರವಾದರಗಳಿದೆ. ಚಂದ್ರಶೇಖರ ಭಾರತೀ ಸ್ವಾಮಿಗಳವರು ಶೃಂಗೇರಿ ಪೀಠದ ಮಾಣಿಕ್ಯವಾದರೆ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಆ ಶೃಂಗೇರಿ ಶಾಖೆಯ ಶಿವಗಂಗಾ ಪೀಠದ ಮಾಣಿಕ್ಯ ಎಂಬುದು ನಿತ್ಯ ಸತ್ಯ, ಸರ್ವವಿದಿತ.  ಇಂದು (16-05-2019) ವೈಶಾಖ ಶುದ್ಧ ದ್ವಾದಶಿ ಸಚ್ಚಿದಾನಂದ ಭಾರತಿ ಸ್ವಾಮಿಗಳ ಜಯಂತಿ. ಶ್ರೀಗಳವರ ತತ್ವಗಳು, ಧರ್ಮಾಚರಣೆ ನಮ್ಮೆಲ್ಲರಿಗೂ ಅನುಕರಣೀಯ.


Note:  ಶೃಂಗೇರಿ ಶಿವಗಂಗಾ ಪೀಠದ ಗುರುಪರಂಪರೆ ಕುರಿತು  ಶ್ರೀಮಠದ ಆಪ್  ನಲ್ಲಿ ಮತ್ತಷ್ಟು ವಿವರಗಳು ಲಭ್ಯವಿದೆ. ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ