Monday, 13 April 2015

ಶೃಂಗೇರಿ ಶಿವಗಂಗಾ ಶಾರದಾ ಪೀಠದ 'ಪುರುಷೋತ್ತಮ' ಭಾರತೀ ಸ್ವಾಮಿಗಳು




ಟಾರು ಕಾಣದ ರಸ್ತೆಗಳು, ವಾಹನಗಳ ಸೌಕರ್ಯ ಇರದಿದ್ದ 16ನೇ ಶತಮಾನದ ಕಾಲ.  ಬೆಂಗಳೂರು, ಮೈಸೂರು, ತುಮಕೂರು ಪ್ರದೇಶಗಳಲ್ಲಿದ್ದ ಕೆಲವರನ್ನು ಹೊರತುಪಡಿಸಿ ಎಲ್ಲಾ ಆಸ್ತಿಕ ಜನರಿಗೆ ಅದ್ವೈತ ಪ್ರತಿಪಾದನೆಯ ನೆಲೆಬೀಡಾಗಿರುವ ಶೃಂಗೇರಿಯ ಗುರುಗಳನ್ನು ದರ್ಶಿಸುವುದೆಂದರೆ ಕೊಂಚ ಪ್ರಯಾಸದ ಮಾತೇ ಆಗಿತ್ತು. ಶೃಂಗೇರಿ ಗುರುಗಳು ಅಲ್ಲಿಗೆ ಬಂದರಷ್ಟೇ ದರ್ಶನ ಭಾಗ್ಯ, ಇಲ್ಲದೇ ಇದ್ದರೆ ತಾವಾಗಿಯೇ ದೂರದ ಶೃಂಗೇರಿಗೆ ಹೋಗುವುದು ದಿನಗಟ್ಟಲೆಯ ಮಾತಾಗಿತ್ತು.

ಶೃಂಗೇರಿ ಜಗದ್ಗುರುಗಳು ತಮ್ಮ ಹತ್ತಿರದಲ್ಲೇ ಇದ್ದ ಶಿಷ್ಯ ಸಮೂಹವನ್ನು ಆಶೀರ್ವದಿಸುವಂತೆಯೇ, ತಮ್ಮ ಜಿಗ್ನಾಸೆಗಳನ್ನು ಬಗೆಹರಿಸಿ, ಧರ್ಮಮಾರ್ಗದಲ್ಲಿ ಮುನ್ನಡೆಸಿ ಆಶೀರ್ವದಿಸುವ ಯತಿಗಳಿಗಾಗಿ ಶೃಂಗೇರಿಗೆ ದೂರವಿದ್ದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿರುವವರು ಕಾದಿದ್ದರು.  ಶೃಂಗೇರಿಯ 24ನೇ ಜಗದ್ಗುರುಗಳಾಗಿದ್ದ ಅಭಿನವ ನೃಸಿಂಹ ಭಾರತೀ ಸ್ವಾಮಿಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಶಿಷ್ಯ ಪರಿವಾರದಲ್ಲಿದ್ದ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿ ಶಾಖಾಮಠವನ್ನು ಅನುಗ್ರಹಿಸಿದರು.

ಅಭಿನವ ನೃಸಿಂಹ ಭಾರತೀ ಸ್ವಾಮಿಗಳವರ ಅಪ್ಪಣೆಯಂತೆ ಶಂಕರ ಭಾರತೀ ಸ್ವಾಮಿಗಳು ಶೃಂಗೇರಿ ಶಿವಗಂಗಾ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದರು. ಬೆಂಗಳೂರಿನ ನೆಲೆಮಂಗಲದ ಬಳಿಯ ಶಿವಗಂಗೆಯಲ್ಲಿ ಶೃಂಗೇರಿಯ ಶಾಖಾ ಮಠದ ಸ್ಥಾಪನೆಯಾಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೂ ಶೃಂಗೇರಿ ಶಿವಗಂಗಾ ಮಠದ ಗುರುಪರಂಪರೆ ನಡೆದುಕೊಂಡುಬಂದಿದೆ. ಆದ್ದರಿಂದಲೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. 1799ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಶೃಂಗೇರಿ ಮಠಕ್ಕೆ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಪೂರ್ಣಯ್ಯನವರು, ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ, ಶುಭ-ಸಮಾರಂಭಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶೃಂಗೇರಿ ಶಿವಗಂಗೆ ಮಠಕ್ಕೂ ಕೊಡುವಂತೆ ಆಜ್ಞಾಪಿಸಿದ್ದರ ಬಗ್ಗೆ,  ಉಲ್ಲೇಖಗಳಿವೆ. ಶೃಂಗೇರಿಯ ಶಾಖಾಮಠಗಳಲ್ಲಿ  ಶಿವಗಂಗೆಪೀಠ ಹೆಚ್ಚು ಮಹತ್ವಪಡೆದಿದೆ ಎಂಬುದಕ್ಕೆ ಇಂತಹ ಅನೇಕ ಉದಾಹರಣೆಗಳಿವೆ. 

ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಒಡಲಲ್ಲಿಟ್ಟುಕೊಂಡತಹ ಶಿವಗಂಗೆ ಕ್ಷೇತ್ರ ಶೃಂಗೇರಿಯ ಶಾಖಾ ಮಠ ಸ್ಥಾಪನೆಯಾಗುವುಕ್ಕೂ ಮುನ್ನವೇ ದಕ್ಷಿಣ ಕಾಶಿ ಎಂದು ಸುಪ್ರಸಿದ್ಧ. ಅಗಸ್ತ್ಯರು ತಪಸ್ಸು ಮಾಡಿದ, ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಳಿರುವ ಈ ಕ್ಷೇತ್ರದ ಪ್ರತಿಯೊಂದು ಚರಾಚರಗಳಲ್ಲೂ ಅದ್ವೈತವೇ ಗೋಚರಿಸುತ್ತದೆ.  ಪೂರ್ವಕ್ಕೆ ವೃಷಭಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿ, ದಕ್ಷಿಣಕ್ಕೆ ಲಿಂಗಾಕೃತಿ ಕಾಣುವುದು ಶಿವಗಂಗೆಯ ಬೆಟ್ಟದ ವೈಶಿಷ್ಟ್ಯ. ಗೆರೆ ಎಳೆದಂತೆ ಬೆಟ್ಟದ ಎದುರು ನಿಂತರೆ ಕಾಣುವುದೇ ಶೃಂಗೇರಿ ಶಿವಗಂಗಾ ಶಾರದಾಪೀಠ.  ಶೃಂಗೇರಿ ಪರಂಪರೆಯ ಯತಿಗಳನ್ನು ಭಗವಾನ್ ಶಂಕರನ ಸ್ವರೂಪವೆಂದೇ ತಿಳಿಯಲಾಗುತ್ತದೆ. ಶಿವಗಂಗಾ ಮಠದಲ್ಲಿ ನಿಂತು ಬೆಟ್ಟವನ್ನು ನೋಡಿದರೆ ಬೃಹದಾಕಾರದ ಬೆಟ್ಟ ನಂದಿಯ ಆಕಾರದಲ್ಲಿ ಕಾಣುತ್ತದೆ. ಹಾಗೆ ಕಂಡಾಗಲೆಲ್ಲಾ ಶಂಕರರ ಸ್ವರೂಪದಲ್ಲಿರುವ ಯತಿಗಳ ಮುಂದೆ ಶ್ರದ್ಧೆಯಿಂದ ಕುಳಿತ ನಂದಿ ಏನನ್ನೋ ಆಲಿಸುತ್ತಿದೆ ಎಂದೆನಿಸದೇ ಇರದು. ಆಧ್ಯಾತ್ಮ ಸಾಧನೆಗೆ ಪ್ರಶಸ್ತವೆಂಬಂತಿರುವ ಶೃಂಗೇರಿ ಶಿವಗಂಗಾ ಪೀಠ, ಶಂಕರ ಭಾರತೀ ಸ್ವಾಮಿಗಳಿಂದ, ಈಗಿನ ಪೀಠಾಧಿಪತಿಗಳಾದ ಪುರುಷೋತ್ತಮ ಭಾರತೀ ಸ್ವಾಮಿಗಳವರೆಗೆ ಸವಿಶೇಷ ಗುರು ಪರಂಪರೆಯನ್ನು ಹೊಂದಿದೆ.  ಲೋಕೋತ್ತರ ಪ್ರತಿಭಾ ಸಂಪನ್ನರನ್ನು, ತಪಶ್ಚಕ್ರವರ್ತಿಗಳನ್ನೂ ಕಂಡಿದೆ. ಈ ಪೀಠವನ್ನು ಅಲಂಕರಿಸಿದ್ದ ಈ  ಹಿಂದಿನ ಪೀಠಾಧಿಪತಿಗಳು, ಪುರುಶೋತ್ತಮ ಭಾರತೀ ಸ್ವಾಮಿಗಳ ಗುರುಗಳು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಂತೂ ಸನ್ಯಾಸ ಧರ್ಮಕ್ಕೆ ಅನ್ವರ್ಥವೆಂಬಂತಿದ್ದರು.  ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳಿಂದ ತಪಶ್ಚಕ್ರವರ್ತಿ ಎಂಬ ಬಿರುದನ್ನು ಪಡೆದರು.  ಮಹಾಪ್ರಾಜ್ಞರೂ, ಔದಾರ್ಯಾದಿ ಗುಣಾನ್ವಿತರೂ ಆಗಿದ್ದ ಗುರುಗಳು, ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ ಎಂಬ ಮಾತಿನಂತೆ ಲೌಕಿಕ ವಿದ್ಯೆಯಲ್ಲೂ, ಅಲೌಕಿಕದಲ್ಲೂ ಅನನ್ಯ ಸಾಧನೆ ಮಾಡಿದ್ದರು.  

ಶೃಂಗೇರಿ ಶಿವಗಂಗಾ ಪೀಠಾಧಿಪತಿ ಪುರುಷೋತ್ತಮ ಭಾರತೀ ಸ್ವಾಮಿಗಳು:

ಇಂತಹ ಯತಿಪುಂಗವರಿದ್ದ ಗುರುಪರಂಪರೆಯಲ್ಲಿ 19ನೇ ಪೀಠಾಧಿಪತಿಗಳಾಗಿರುವವರು ಶ್ರೇಷ್ಠ ವಿದ್ವಾಂಸರಾದ ಪುರುಶೋತ್ತಮ ಭಾರತೀ ಸ್ವಾಮಿಗಳು. ಪೂರ್ವಾಶ್ರಮದಲ್ಲಿ  ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜೀಕೊಂಡೂರು ಮಂಡಲಂನ ವೆಲ್ಲಟೂರು ಗ್ರಾಮದಲ್ಲಿ ಕಮ್ಮಂಬಾಟಿ ಸೇತುಮಾಧವ ಅವಧಾನಿ ಮತ್ತು ಜಗನ್ಮಂಗಳ ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ 9ನೇ ಸೆಪ್ಟೆಂಬರ್ 1953 ಜನಿಸಿದರು.  ವಿಜಯವಾಡಗಳಲ್ಲಿ ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ವಿಜಯವಾಡದ ಶೃಂಗೇರಿ ಮಠದಲ್ಲಿ ತಮ್ಮ ತಂದೆಯವರಿಂದಲೇ ವೇದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಕೃಷ್ಣ ಯಜುರ್ವೇದ, ಕ್ರಮಂತಗಳನ್ನು ಪೂರ್ಣಗೊಳಿಸಿ ರಾಜಮಹೇಂದ್ರಿ, ಶೃಂಗೇರಿ ಮುಂತಾದ ಕಡೆಗಳಲ್ಲಿ ನಡೆದ ಹಲವಾರು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಿದ್ವಾನ್ ಮಂಕಾಬೂಡಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಹಾಗೂ ವೇಮೂರಿ ವೆಂಕಟೇಶ್ವರ ಸಿದ್ಧಾಂತಿ ಅವರ ಮಾರ್ಗದರ್ಶನದಲ್ಲಿ ಪಂಚ ಕಾವ್ಯ, ಜೋತಿಷ್ಯ ಶಾಸ್ತ್ರವನ್ನು ಕರತಲಾಮಲಕಗೊಳಿಸಿಕೊಂಡರು.

ಇಂದು ಸನಾತನದ ಧರ್ಮದ ಗಣಿತ ಶಾಸ್ತ್ರದ (ವೇದಿಕ್ ಮ್ಯಾಥ್ಸ್) ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವವರಾಗಲಿ, ಅದರ ಮೇಲೆ ಪ್ರಭುತ್ವ ಸಾಧಿಸಿದವರನ್ನು ಕಾಣುವುದು ಅತಿ ವಿರಳ.   ಲೀಲಾವತಿ ಗಣಿತ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಮತ್ತೊಂದು ವೈಶಿಷ್ಟ್ಯ.  ಇನ್ನು ಶೃಂಗೇರಿ ಪೀಠದ ಶಾಖೆಗೆ ಪೀಠಾಧಿಪತಿಗಳಾಗುವವರಿಗೆ ತರ್ಕ ಶಾಸ್ತ್ರ, ವೇದಾಂತವೇ ಮೊದಲಾದ ವಿಷಯಗಳ ಬಗ್ಗೆ ಪಾಂಡಿತ್ಯವಿರಬೇಕು.  ಮಹಾಮಹೋಪಾಧ್ಯಾಯ ಮುದ್ದುಲಪಲ್ಲಿ ಮಾಣಿಕ್ಯಶಾಸ್ತ್ರಿಗಳ ಬಳಿ ತರ್ಕ ಪ್ರಕರಣ, ವೇದಾಂತ ಶಾಸ್ತ್ರ ಗ್ರಂಥ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಸೂತ್ರ ಭಾಷ್ಯ, ಪ್ರಸ್ಥಾನ ತ್ರಯ ಮುಂತಾದವುಗಳಲ್ಲಿ ಅದ್ಭುತ ಜ್ನಾನ ಸಂಪಾದಿಸಿಕೊಂಡಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಹಿರಿಮೆ. ಜ್ಞಾನ ಸಂಪನ್ನರಾದ ಶ್ರೀಗಳು ಶ್ರೀ ಶೃಂಗೇರಿ ಶಂಕರ ಮಠದ ವೇದ ಪಾಠಶಾಲೆಯಲ್ಲಿ ವೇದ ವಿದ್ಯೆಯನ್ನು ಅನೇಕಾನೇಕ ವಿದ್ಯಾರ್ಥಿಗಳಿಗೆ ಕಲಿಸಿದರು. ಅಷ್ಟೇ ಅಲ್ಲದೇ ತಮ್ಮ ಪುತ್ರರಾದ ಕಮ್ಮಂಬಾಟಿ ಆಂಜನೇಯಶರ್ಮ ಘನಪಾಠಿ ಮತ್ತು ಕಮ್ಮಂಬಾಟಿ ಸೇತುಮಾಧವಶರ್ಮ ಅವಧಾನಿ ಅವರಿಗೂ ಸಹ ವೇದ, ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೀಣರಾಗುವಂತೆ ತರಬೇತಿ ನೀಡಿ ಸ್ಮಾರ್ತ ಪರೀಕ್ಷಾಧಿಕಾರಿಯಾಗಿ ಸಲ್ಲಿಸಿದ್ದಾರೆ. 

ಮೈಸೂರಿನೊಂದಿಗೆ ಉತ್ತಮ ಒಡನಾಟ:

ಪುರುಶೋತ್ತಮ ಭಾರತೀ ಸ್ವಾಮಿಗಳು ವಿಜಯವಾಡದವರಾಗಿದ್ದರೂ ಪೂರ್ವಾಶ್ರಮದಲ್ಲಿ ಶ್ರೀಗಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನಲ್ಲಿರುವ ಅವಧೂತ ದತ್ತಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿಗಳಾಗಿರುವ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು ಅಲ್ಲಿನ ವೇದ ಪಾಠಶಾಲೆಯಲ್ಲಿ ಬೋಧನಾ ಕಾರ್ಯವನ್ನು ಸಫಲವಾಗಿ ಕೈಗೊಂಡಿದ್ದರು.  ಸನಾತನದ ಧರ್ಮಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿ ವಿಷಯ ಸುಖಗಳಲ್ಲಿ ವಿರಕ್ತಿ ಹೊಂದಿ, ತುರೀಯಾಶ್ರಮವನ್ನು ಸ್ವೀಕರಿಸುವುದರ ಬಗೆಗೆ ಶೃಂಗೇರಿ ಜಗದ್ಗುರುಗಳಲ್ಲಿ ನಿವೇದಿಸಿಕೊಂಡರು. ಇತ್ತ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆರೋಗ್ಯವೂ ಹದಗೆಟ್ಟೆತ್ತು. ಶ್ರೀಗಳು 2013ರ ಫೆ.23ರಂದು ಬ್ರಹ್ಮೈಕ್ಯರಾದರು. ಶೃಂಗೇರಿ ಜಗದ್ಗುರುಗಳಾದ ಭಾರತಿ ತೀರ್ಥ ಸ್ವಾಮಿಗಳು ವಿಶಾಖ ಪಟ್ಟಣದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮೂಲಕ 2014ರ ಮಾ.3ರಂದು ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳಿಗೆ ತುರಿಯಾಶ್ರಮವನ್ನು ಅನುಗ್ರಹಿಸಿ, ಶ್ರೀ ಪುರುಶೋತ್ತಮ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನು ನೀಡಿದರು. ಪುರುಷೋತ್ತಮ ಭಾರತೀ ಸ್ವಾಮಿಗಳು ತಮ್ಮ ಪರಂಪರೆಯ ಗುರುಗಳಾದ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ವಿಧಿವತ್ತಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಲು ಸಾಧ್ಯವಾಗದೇ ಇದ್ದರೂ, ತಮ್ಮ ಗುರುಗಳ ಅಭಿದಾನವನ್ನೇ ಪಡೆದಿದ್ದ ಯತಿಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿದ್ದೂ ವಿಶೇಷ ಸಂಗತಿ. 2014ರ ಏಪ್ರಿಲ್ 24ರಂದು(ವಿಜಯ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆ ) ಪುರುಶೋತ್ತಮ ಭಾರತೀ ಸ್ವಾಮಿಗಳಿಗೆ ಶೃಂಗೇರಿ ಶಿವಗಂಗಾಪೀಠದ 19ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷೇಕ ನೆರವೇರಿತು. ನವಯತೀಶ್ವರರನ್ನು ಎದುರು ನೋಡುತ್ತಿದ್ದ ಶೃಂಗೇರಿ ಶಿವಗಂಗೆಯ ಶಾರದಾಪೀಠಕ್ಕೆ 'ಪುರುಷೋತ್ತಮ'ರಾದ ಪುರುಷೋತ್ತಮ ಭಾರತೀ ಸ್ವಾಮಿಗಳು ಪೀಠಾಧಿಪತಿಗಳಾದರು. ಅಂದು ಪುರುಶೋತ್ತಮ ಭಾರತೀ ಸ್ವಾಮಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದಿತ್ತು. 2015ರ ಏ.14ಕ್ಕೆ ಈ ಅವಿಸ್ಮರಣೀಯ ಘಟನೆಗೆ ಒಂದು ವರ್ಷ. ವಾರ್ಷಿಕೋತ್ಸವದ ಅಂಗವಾಗಿ ಈ ವರ್ಷ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತವೃಂದ ಎದುರು ನೋಡುತ್ತಿದೆ.

1 comment:

  1. Good article at the relevant time. Let more articles be published at a frequent interval of time to enlighten the history, essence of the past and the immediate past pontiffs and the activities of the Math to reach the true devotees at large.

    ReplyDelete