Wednesday, 11 February 2015

ಬಿಜೆಪಿಗೆ ದೆಹಲಿಯಲ್ಲಿ ವಿಪಕ್ಷ ಸ್ಥಾನ ಇಲ್ಲ, ಕರ್ನಾಟಕದಲ್ಲಿ ಇದ್ದರೂ ಪ್ರಯೋಜನವಿಲ್ಲ!



ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ, ಆಂತರಿಕ ಭಿನ್ನಮತ.

ಇಂಥದ್ದೇ ಅಂಶಗಳನ್ನು ಮುಂದಿಟ್ಟುಕೊಂಡು 2013ರಲ್ಲಿ ದೆಹಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದೇ ಇದ್ದ ಪ್ರಮುಖ ಕಾರಣಗಳನ್ನು  ವಿಶ್ಲೇಷಿಸಲಾಗಿತ್ತು. ಯಾವುದೇ ಪಕ್ಷಗಳಾದರೂ ಪ್ರತಿ ಚುನಾವಣೆಯಲ್ಲೂ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆ ಎದುರಿಸಲು ಯತ್ನಿಸುತ್ತವೆ. ವಿಪರ್ಯಾಸವೆಂದರೆ ದೆಹಲಿ ಚುನಾವಣೆ ಮಟ್ಟಿಗೆ ಬಿಜೆಪಿ ಮಾತ್ರ ಹೊಸ ತಪ್ಪುಗಳೊಂದಿಗೆ ಹಿಂದಿನ ಚುನಾವಣೆಯ ತಪ್ಪುಗಳನ್ನೇ ಮುಂದುವರೆಸಿತ್ತು! ಪರಿಣಾಮ 2015ರ ದೆಹಲಿ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಿದೆ.

ದೆಹಲಿ ಒಂದು ರಾಜ್ಯವೇ ಅಲ್ಲ, ಅಲ್ಲಿ ನಡೆಯುವ ಚುನಾವಣೆ ದೇಶದ ರೆಫರೆಂಡಮ್ ಅಲ್ಲ, ದೆಹಲಿ ಚುನಾವಣೆ ಫಲಿತಾಂಶದಿಂದ ಮೋದಿ ಇಮೇಜ್  ಡ್ಯಾಮೇಜ್ ಆಗಿಲ್ಲ ಎಂದು ಎಷ್ಟೇ ಸಮರ್ಥನೆ ನೀಡಬಹುದು. ಆದರೆ ದೆಹಲಿ ಚುನಾವಣೆಯನ್ನು ಗೆಲ್ಲಲು ಇದ್ದ ಅವಕಾಶವನ್ನು ಬಿಜೆಪಿ ಹಾಳುಮಾಡಿಕೊಂಡಿತ್ತು ಎಂಬುದನ್ನಂತೂ ತಳ್ಳಿಹಾಕಲು ಸಾಧ್ಯವಿಲ್ಲ. ಮೋದಿ ಹೆಸರಿನಲ್ಲಿ ಮಹಾರಾಷ್ಟ್ರ ಗೆದ್ದದ್ದಾಯಿತು, ಹರ್ಯಾಣದಲ್ಲೂ ಅಧಿಕಾರಕ್ಕೆ ಬಂದಾಗಿದೆ. ಜಾರ್ಖಂಡ್ ನಲ್ಲೂ ಜಯಭೇರಿ ಭಾರಿಸಿದ್ದೇವೆ, ಮೋದಿ ಅವರ ವರ್ಚಸ್ಸನ್ನೇ ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಕ್ಕೆ ಬೆಳೆದದ್ದಾಗಿದೆ, ಮೋದಿ ಹೆಸರಿನ ಮೂಲಕವೇ ಗೆಲುವೆಂಬುದನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆ ಬಿಜೆಪಿಯ ಕೆಲವು ಘಟಕಗಳಿಗೆ ನೆತ್ತಿಗೇರತೊಡಗಿದೆ. ದೆಹಲಿಯ ನಂತರದ ಸ್ಥಾನದಲ್ಲಿ ಕರ್ನಾಟಕವೂ ನಿಂತಿದೆ!

ಕರ್ನಾಟಕದ ಬಿಜೆಪಿ ಘಟಕವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ದೆಹಲಿಯ ಮಿನಿ ಬಿಜೆಪಿ ಘಟಕ ಕಾಣಿಸುತ್ತದೆ. ಒಳಗೊಳಗೇ ಇರುವ ಭಿನ್ನಾಭಿಪ್ರಾಯ. ಚುನಾವಣೆ ತಯಾರಿ, ಕೇಂದ್ರ ಸರ್ಕಾರದ ಯೋಜನೆಗಳನ್ನಾಗಲೀ ಮತದಾರರಿಗೆ ತಲುಪಿಸುವ ವಿಚಾರದಲ್ಲಿ ಎಚ್ಚರ ವಹಿಸುವ ನಾಯಕರನ್ನು ನೋಡಿದರೆ ಕರ್ನಾಟಕ ಬಿಜೆಪಿ ಘಟಕವೂ ದೆಹಲಿಯ ಮಿನಿ ಬಿಜೆಪಿ ಘಟಕವನ್ನೇ ನೆನಪಿಸುತ್ತಿದೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ ಜಾರಿಯಾದ  ಜನ್-ಧನ್ ಯೋಜನೆ, ಬೆಲೆ ಇಳಿಕೆ, ಹಣದುಬ್ಬರ ಇಳಿಕೆ, ದೆಹಲಿ ಗದ್ದುಗೆಯನ್ನೇ ಅಲ್ಲಾಡಿಸಲು ಸಾಮರ್ಥ್ಯವಿರುವ ಈರುಳ್ಳಿ-ಆಲೂಗೆಡ್ಡೆ ಬೆಲೆ ಇಳಿಕೆ, ತರಕಾರಿ ಬೆಲೆ ಇಳಿಕೆಯಂತಹ, ದೆಹಲಿ ಜನರನ್ನು ಸುಲಭವಾಗಿ ತಲುಪಬಲ್ಲ, ಅನೇಕ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ, ಉಳಿದ ಯಾವ ನಾಯಕರಾದರೂ ಅದನ್ನು ಜನರಿಗೆ ಮನವರಿಕೆ ಮಾಡಲು ಯತ್ನಿಸಿರುವ ಉದಾಹರಣೆಗಳಿವೆಯೇ?

ಬಿಜೆಪಿಯ ಉಳಿದ ನಾಯಕರಿಗೆ ಗೆಲುವಿನ ಮದ ಎಷ್ಟಿತ್ತೆಂದರೆ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿದಿದ್ದರೂ ಪಕ್ಷವನ್ನು ಯಾರು ಮುನ್ನಡೆಸಬೇಕು, ಯಾರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಬೇಕೆಂಬ ಯೋಚನೆಗಳಿಗೆ ತಿಲಾಂಜಲಿಯಿತ್ತಿದ್ದರು. ಅತ್ತ ಆಮ್ ಆದ್ಮಿ ಪಕ್ಷದವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ, ಮೋದಿ ಅವರನ್ನು ತೆಗೆಳುವುದರ ಜೊತೆಗೆ ತಮ್ಮ ಪ್ರಚಾರದ ಕೆಲಸವನ್ನು ಸಾಂಗವಾಗಿ ನಡೆಸುತ್ತಿದ್ದರು. ಆದರೆ ಇತ್ತ ಸಾಲು ಸಾಲು ವಿಧಾನಸಭೆ ಚುನಾವಣೆ ಗೆದ್ದು ಮೋದಿ ಅಲೆಯಲ್ಲೇ ತೇಲುತ್ತಿದ್ದ  ಬಿಜೆಪಿ ನಾಯಕರು ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಅಪ್ ಡೇಟ್ ಮಾಡುವ ಬದಲು ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸುವುದನ್ನೇ ಪೂರ್ಣಾವಧಿ ಕೆಲಸವಾಗಿಸಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಇನ್ನೊಂದು ತಿಂಗಳಿರಬೇಕಾದರೆ ಡಾ.ಹರ್ಷವರ್ಧನ್ ಅವರನ್ನು ಸಿ.ಎಂ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಆದರೆ ಈ ಬಾರಿ ಪಕ್ಷದವರನ್ನು ಕಡೆಗಣಿಸಿ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಂಬಂಧವೇ ಇಲ್ಲದವರನ್ನು ಕರೆತಂದು ಪಕ್ಷದ ಸದಸ್ಯತ್ವದ ಜೊತೆಯಲ್ಲೇ ಸಿ.ಎಂ ಅಭ್ಯರ್ಥಿ ಹುದ್ದೆಯನ್ನೂ ದಯಪಾಲಿಸಿದ್ದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದ ಶೇ.29ರಷ್ಟು ಮತಗಳು ಈಬಾರಿ ಆಮ್ ಆದ್ಮಿ ಪಕ್ಷದತ್ತ ಹೊರಳಿದ್ದು ಬಿಜೆಪಿಯೇತರ ಮತಗಳು ಒಗ್ಗೂಡಿರುವ ಕಾರಣ ಪಕ್ಷಕ್ಕೆ ಸೋಲುಂಟಾಗಿದೆ ಎಂಬ ಸಿದ್ಧ ಉತ್ತರವಟ್ಟುಕೊಂಡು ಬಿಜೆಪಿ ಸೋಲಿನ ವಿಮರ್ಶೆಯನ್ನು ಒಂದೇ ಏಟಿಕೆ ಮುಗಿಸಿ ಬಿಡಬಹುದು.  ಆದರೆ ಬಿಜೆಪಿಗೆ ಇಂಥದ್ದೊಂದು ಅಪಾಯ ಎದುರಾಗುವ ಲಕ್ಷಣಗಳು ಗೋಚರಿಸಿದ್ದು ಇದೇ ಮೊದಲೇ? ಲೋಕಸಭಾ ಚುನಾವಣೆಯಲ್ಲೇ ಈ ಪ್ರಯೋಗ ನಡೆದಿತ್ತು. ಬಿಹಾರದಲ್ಲಿ ಆರ್.ಜೆ.ಡಿ. ಜೆಡಿಯು, ಕಾಂಗ್ರೆಸ್ ಒಗ್ಗೂಡಿತ್ತು. ಆದರೆ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಗರಣದ ಆರೋಪ ಹೊತ್ತಿದ್ದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರಕ್ಕೇರಿಸುವವರೆಗೂ ಬಿಜೆಪಿ ರಾಷ್ಟ್ರೀಯ ನಾಯಕರ ವಿಳಂಬ ಹಾಗೂ ತಪ್ಪು ನಿರ್ಧಾರಗಳನ್ನು ಹೀನಾಯವಾಗಿ ಜರಿಯುವ ಕಾಲವಿತ್ತು. ಈಗ ಮಾಜಿ ಬಿಜೆಪಿ ವರಿಷ್ಠರಿಗೂ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿ ವರಿಷ್ಠರಿಗೂ ಇರುವ  ವ್ಯತ್ಯಾಸವಾದರೂ ಏನು?

ರಾಷ್ಟ್ರ ರಾಜಧಾನಿ ಎಂಬ ಕಾರಣಕ್ಕೆ ಬಿಜೆಪಿಗೆ ದೆಹಲಿ ಎಷ್ಟು ಪ್ರತಿಷ್ಠೆಯ ಕಣವಾಗಿತ್ತೋ, ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ ಕರ್ನಾಟಕವೂ ಅಷ್ಟೇ ಪ್ರತಿಷ್ಠೆಯ ಕಣವಾಗಿದೆ. ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಪಣತೊಟ್ಟಿರುವ ಅಮಿತ್ ಶಾ ಗೆ ದಕ್ಷಿಣ ಭಾರತವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕಾದ ಅನಿವಾರ್ಯತೆ ಇದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ಅವಕಾಶಗಳಿರುವುದು ಸಧ್ಯದ ಮಟ್ಟಿಗೆ ಕರ್ನಾಟಕದಲ್ಲಿ ಮಾತ್ರ. ಆದರೆ ಬಿಜೆಪಿ ಪಾಲಿಗೆ ಎರಡನೇ ದೆಹಲಿ ಘಟಕವಾಗಿರುವ ಕರ್ನಾಟಕದಲ್ಲೂ ಆ ಅವಕಾಶಗಳನ್ನು ಗಾಳಿಗೆ ತೂರುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕದಲ್ಲಿ ವಿರೋಧ ಪಕ್ಷ ಇರುವುದು ಗೋಚರವಾಗುವಂತಹ ಘಟನೆಗಳು ನಡೆದಿದೆಯಾ ಹೇಳಿ? ಮೂಢನಂಬಿಕೆ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಮಸೂದೆ ವಾಪಸ್, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ಭಾವನಾತ್ಮಕ ವಿಷಯಗಳಲ್ಲಿ ಎದುರಾದ ಪ್ರತಿರೋಧಗಳಿಂದ ಸರ್ಕಾರ ಕೆಲವು ಸಂದರ್ಭಗಳಲ್ಲಿ ತನ್ನ ನಿರ್ಧಾರಗಳನ್ನು ಬದಲಿಸಿಕೊಂಡಿದ್ದಿದೆ. ಸಿದ್ದರಾಮಯ್ಯ ಸರ್ಕಾರ ಏನಾದರೂ ಮಣಿದಿದ್ದರೆ ಅದು ಈ ವಿಷಯಗಳಿಗೆ ಎಂಬುದು ಗಮನಾರ್ಹ. ಆದರೆ ಅದು ಸಂಪೂರ್ಣವಾಗಿ ಬಿಜೆಪಿಯ ಹೋರಾಟದ ಫಲ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಮೂಢನಂಬಿಕೆ ಕಾಯ್ದೆ, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ವಿಷಯಗಳಲ್ಲಿ ಸಾರ್ವಜನಿಕ ವಲಯದಲ್ಲೇ ಒಂದು pressure group ಕ್ರಿಯೇಟ್ ಆಗಿತ್ತು. ಸಿದ್ದರಾಮಯ್ಯ ಸರ್ಕಾರ ಮಣಿದಿದ್ದು ಆ pressure groupಗೆ.  ಸಿದ್ದರಾಮಯ್ಯ ಸರ್ಕಾರ ಶಾದಿ ಭಾಗ್ಯ ಹೆಸರಿನಲ್ಲಿ ಧರ್ಮಾಧಾರಿತ ರಾಜಕಾರಣ ಮಾಡಿ ಕೇವಲ ಒಂದು ವರ್ಗಕ್ಕೆ ಮಾತ್ರ ಯೋಜನೆಯನ್ನು ಮೀಸಲಿಟ್ಟಿತ್ತು. ಕೆಂಡಾಮಂಡಲರಾಗಿದ್ದ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರಕ್ಕೆ ನೀರಿಳಿಸಿದ್ದರು. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷದಲ್ಲಿ ಗಟ್ಟಿ ಧ್ವನಿ ಎತ್ತುವ ನಾಯಕನೇ ಇಲ್ಲದಂತಾಯಿತು.  ಅದಾದ ನಂತರ ಎಷ್ಟೋ ಸಂದರ್ಭದಲ್ಲಿ ಮಾಧ್ಯಮಗಳೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದೆ. ರಾಜ್ಯದ್ಲಲಿ ಬಿಜೆಪಿಯ ಜಡತ್ವ ಯಾವ ಮಟ್ಟದಲ್ಲಿದೆ ಎಂದರೆ ಕೇಂದ್ರದಲ್ಲಿ ತಮ್ಮದೆ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯ ಸರ್ಕಾರ ಬಸ್ ದರ ಇಳಿಕೆ ಮಾಡಲು ಮಾಧ್ಯಮಗಳು  ಒತ್ತಡ ಹೇರಬೇಕಾಯಿತು!.

ಕರ್ನಾಟಕದಲ್ಲಿ ಸರ್ಕಾರ-ವಿರೋಧ ಪಕ್ಷ ಎರಡೂ ಇಲ್ಲದಂತಾಗಿದೆ ರಾಜ್ಯದ ಪರಿಸ್ಥಿತಿ. ಅಧಿಕಾರದಲ್ಲಿರುವವರು ತೂಕಡಿಸುತ್ತಿರಬೇಕಾದರೆ  ರಾಜ್ಯದಿಂದ ಹಿರೋ ಕಂಪನಿ ಘಟಕ ಆಂಧ್ರದತ್ತ ನಡೆಯಿತು, ಎಸ್.ಐ ಮಲ್ಲಿಕಾರ್ಜುನ ಬಂಡೆ ಹತ್ಯೆಯಾಯಿತು, ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಅನ್ನ ಭಾಗ್ಯದಲ್ಲಿ ಅದೆಷ್ಟು ಮಂದಿ ಕನ್ನಾ ಹೊಡೆದರೋ ಗೊತ್ತಿಲ್ಲ. ಭಟ್ಕಳದಲ್ಲಿ ಉಗ್ರವಾದ ಬೆಳೆಯಿತು. ರಾಜ್ಯದ ಮುಖ್ಯಮಂತ್ರಿಗಳ ಹೊಣೆಗೇಡಿ ನೀತಿಯನ್ನು ರಾಷ್ಟ್ರೀಯ ಮಾಧ್ಯಮಗಳು ಕಟುವಾಗಿ ಟೀಕಿಸಿದವು. ಕೊನೆಗೆ ನಿದ್ದೆ ಮಾಡುವವರ ಸರ್ಕಾರದ ಸರ್ವಾಧಿಕಾರ ಒಂದು ಮಾಧ್ಯಮದ ಪ್ರಸಾರವನ್ನೇ ನಿಲ್ಲಿಸುವ ಮಟ್ಟಕ್ಕೆ ಬೆಳೆಯಿತು. ಇಷ್ಟೆಲ್ಲಾ ಆದರೂ ಸಿದ್ದರಾಮಯ್ಯಗಿಂತ ಜೋರಾಗಿ ನಿದ್ದೆ ಮಾಡುತ್ತಿದ್ದ ಬಿಜೆಪಿ ಎಚ್ಚರಗೊಂಡು ಜನರ ಮನಸ್ಸಿನಲ್ಲಿ ಉಳಿಯುವಂತಹ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಲಿಲ್ಲ. ವಿರೋಧ ಪಕ್ಷ ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿ ನಾಮ್ ಕೇ ವಾಸ್ತೆ ಪ್ರತಿಭಟನೆ ನಡೆಸಿತ್ತೇ ಹೊರತು. ಸರ್ಕಾರದ ಹುಚ್ಚುತನಕ್ಕೆ ಅಂಕುಶ ಹಾಕಿದ ಒಂದೇ ಒಂದು ಉದಾಹರಣೆಯನ್ನು ಕೊಡಿ ನೋಡೋಣ. ಇನ್ನು ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ರಾಜ್ಯಪಾಲರ ಅನುಮತಿ ಕೇಳುವುದಕ್ಕೂ ಬಿಜೆಪಿ ಮೀನಾ-ಮೇಷ ಎಣಿಸುತ್ತಿದೆ. ಇವೆಲ್ಲವೂ ಏನನ್ನು ಸೂಚಿಸುತ್ತದೆ?

ರಾಜ್ಯ ಬಿಜೆಪಿಯನ್ನು ನೋಡಿದರೆ ದೆಹಲಿಯಲ್ಲಿ ಯುಪಿಎ ಸರ್ಕಾರವಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನೆನೆಪಿಗೆ ಬರುತ್ತಿದೆ. 2009ರ ನಂತರ ಕಾಂಗ್ರೆಸ್ ಅದೆಷ್ಟೇ ಹಗರಣಗಳನ್ನು ಮಾಡಿದರೂ ದುರಾಡಳಿತ ನಡೆಸಿದ್ದರೂ ಬಿಜೆಪಿ ನಾಯಕರು ಯಾವತ್ತೂ ಕಾಂಗ್ರೆಸ್ ವಿರುದ್ಧ ಒಂದು ಗಟ್ಟಿ ಧ್ವನಿಯೆತ್ತಲಿಲ್ಲ. ಕಾಂಗ್ರೆಸ್- ಬಿಜೆಪಿಯ ನಿಲುವು ನೀನು ಹೊಡೆದಂಗೆ ಮಾಡು, ನಾ ಅತ್ತಂಗೆ ಮಾಡ್ತೀನಿ ಎಂಬಂತ್ತಿದ್ದವು. ರಾಜ್ಯ ಬಿಜೆಪಿಯದ್ದೂ ಅದೇ ಕಥೆಯಾಗಿದೆ. ಕಾಂಗ್ರೆಸ್ ನ ದೌರ್ಬಲ್ಯಗಳನ್ನು, ದುರಾಡಳಿತವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಸರ್ಕಾರದ ವಿರುದ್ಧ

ಇನ್ನು ದೆಹಲಿಯ ಐತಿಹಾಸಿಕ ಚುನಾವಣೆ ನಂತರ ಆಮ್ ಆದ್ಮಿ ಪಕ್ಷದ ದೃಷ್ಟಿ ಬಿಬಿಎಂಪಿ ಚುನಾವಣೆ ಮೇಲೆ ಬಿದ್ದಿದೆ. ಕಾಂಗ್ರೆಸ್ ಗೆ ತನ್ನ ಭವಿಷ್ಯದ ಬಗ್ಗೆ ಅರಿವಾಗಿದೆ. ದೆಹಲಿಯಲ್ಲಾದಂತೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತದಾರರಿಗೆ  ಕಾಂಗ್ರೆಸ್ ಬಿಟ್ಟರೆ ಬಿಜೆಪಿಯೇ ಬೇರೆ ದಾರಿ ಇಲ್ಲದ ಆಯ್ಕೆ ಎಂಬ ಭಾವನೆ ಹೋಗಿ ಮತ ಹಾಕಲು ಪರ್ಯಾಯ ಪಕ್ಷವೊಂದು ದೊರೆತಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಇಂತಹ ಸಂದರ್ಭದಲ್ಲೇ  ಮೋದಿ ಅಲೆ ಇಲ್ಲ ಎಂಬುದನ್ನು ನಿರೂಪಿಸುವುದಕ್ಕದರೂ ಬಿಜೆಪಿಯನ್ನು ಸೋಲಿಸಲು ಉಳಿದ ಎಲ್ಲಾ ಪಕ್ಷಗಳು ಕೈಜೋಡಿಸುವ ತಂತ್ರ ಅನುಸರಿಸಲು ಸಿದ್ಧವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಇನ್ನೂ ತಾನು ಏನನ್ನೂ ಮಾಡದೇ ಮೋದಿ ಅಲೆಯನ್ನೇ ಮುಂದಿಟ್ಟುಕೊಂಡು ಗೆಲುವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಂತಿದೆ. ದೆಹಲಿ ಬಿಜೆಪಿಯ ಬೇಜವಾಬ್ದಾರಿತನದಿಂದ ಈಗ ವಿಪಕ್ಷ ಸ್ಥಾನವೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ಸ್ಥಾನ ಇದ್ದೂ ಇಲ್ಲದಂತಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ ದೆಹಲಿಯಂತೆಯೇ ಅಧಿಕಾರಕ್ಕೆ ಬರಲು ಸಾಧ್ಯವಿದ್ದರೂ ಬೇಜವಾಬ್ದಾರಿತನದಿಂದ ಅವಕಾಶ ಕೈತಪ್ಪುವ ಸಾಧ್ಯತೆ ಇದೆ ಎಚ್ಚರ!

Friday, 30 January 2015

ಶೃಂಗೇರಿ ಶಿವಗಂಗಾ ಪೀಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳವರ ಆರಾಧನಾ ಮಹೋತ್ಸವ




ಬೆಂಗಳೂರಿನಿಂದ ಸುಮಾರು 54 ಕಿಮಿ ದೂರದಲ್ಲಿ ಬೃಹದಾಕಾರದ ಬೆಟ್ಟದಿಂದ ಸುತ್ತುವರೆದ ಪ್ರದೇಶ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು ಶಿವನ ಸಾನ್ನಿಧ್ಯದಲ್ಲಿ ಅಗಸ್ತ್ಯರು ಸ್ಥಾಪಿಸಿದ ಗಂಗೆ ಇರುವ ಪವಿತ್ರ ಕ್ಷೇತ್ರ. ಯೋಗಿಗಳ ತಪಸ್ಸಿಗೆ ಹೇಳಿ ಮಾಡಿಸಿದ ಸ್ಥಳ, ವಾಹನ ಸಂಚಾರವೇ ಇರದ ಕಾಲಘಟ್ಟ, ಆಗಲೇ ನೆಲಮಂಗಲದ ಬಳಿ ಇರುವ ಶಿವಗಂಗೆಯಲ್ಲಿ ಪ್ರಾರಂಭವಾಗಿದ್ದು ಶೃಂಗೇರಿಯ ಶಾಖಾ ಮಠವಾದ ಶೃಂಗೇರಿ ಶಿವಗಂಗಾ ಮಠ.

ಶೃಂಗೇರಿ ಶಿವಗಂಗಾ ಮಠ ಸ್ಥಾಪನೆಯಾಗಿದ್ದು, 1599ರಿಂದ 1622ರವರೆಗೆ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನರಸಿಂಹ ಭಾರತೀ ಸ್ವಾಮಿಗಳವರ ಕಾಲದಲ್ಲಿ. ಜಗದ್ಗುರುಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಪರಿವಾರದಲ್ಲಿದ್ದ ಶ್ರೀ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು,ನಾಲ್ಕು ದಿಕ್ಕಿನಿಂದಲೂ ನಾಲ್ಕು ಆಕಾರಗಳಾಗಿ(ಗಣೇಶ, ಲಿಂಗ, ನಂದಿ, ಸರ್ಪ) ಕಾಣುವ ಬೆಟ್ಟ ಇರುವ ಶಿವಗಂಗಾ ಕ್ಷೇತ್ರದಲ್ಲಿ ಶಂಕರ ಭಾರತಿ ಸ್ವಾಮಿಗಳು 1656ರಲ್ಲಿ ವಿದ್ಯಾಶಂಕರ ಎಂಬ ಯೋಗಪಟ್ಟ ನೀಡಿ ತಮ್ಮ ಶಿಷ್ಯರೊಬ್ಬರನ್ನು ಈ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.ಅದಕ್ಕಾಗಿಯೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ನಡೆದ ಶೃಂಗೇರಿ ಮಹಾಸ್ವಾಮಿಗಳವರ ಶಿಷ್ಯ ಸ್ವೀಕಾರ ಸಮಾರಂಭವೂ ಸೇರಿದಂತೆ ಈ ಹಿಂದೆ ಅದೆಷ್ಟೋ ಸಂದರ್ಭದಲ್ಲಿ ಇದು ಪ್ರಕಟವೂ ಆಗಿದೆ. ಶೃಂಗೇರಿ ಶಾಖಾ ಮಠದ ಈ ಗುರುಪರಂಪರೆಯಲ್ಲಿ 18ನೇ ಪೀಠಾಧಿಪತಿಗಳಾಗಿ ರಾರಾಜಿಸಿದವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು.


ಸೀತಾರಾಮ ಶರ್ಮ ಎಂಬುದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು. 1953ರ ವೈಶಾಖ ಶುದ್ಧ ದ್ವಾದಶಿಯಂದು ವೇದ ಬ್ರಹ್ಮ ವೆಂಕಟಸುಬ್ಬಯ್ಯ, ಸುಬ್ಬಲಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಗಳು ಪೂರ್ವಾಶ್ರಮದಲ್ಲಿ ಬಿ.ಎಸ್ಸಿ, ಎಲ್.ಎಲ್.ಬಿ ಬಿ.ಐ.ಎಂ.ಎಸ್(ದೆಹಲಿ ವಿಶ್ವವಿದ್ಯಾನಿಲಯ) ಪದವೀಧರರು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ) ಎಂಬಂತೆ ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರಾದರೂ ಅವರ ಲಕ್ಷ್ಯ ಇದ್ದದ್ದು ಮಾತ್ರ ಬ್ರಹ್ಮಜ್ನಾನಕ್ಕೆ ರಾಜಮಾರ್ಗವಾದ ಆಧ್ಯಾತ್ಮ ಚಿಂತನೆಯಲ್ಲಿ. ಸನಾತನ ಧರ್ಮದ ಆಚರಣೆ ಬಗ್ಗೆ ಅತೀವ ಆಸಕ್ತಿ, ವೇದಗಳ ಬಗ್ಗೆ ಅಚಲ ನಂಬಿಕೆ, ಶ್ರದ್ಧೆ, ಭಕ್ತಿ ಶ್ರೀಗಳವರಿಗೆ ವಿದ್ಯಾರ್ಥಿ ಜೀವನದಿಂದಲೂ ಕೌಟುಂಬಿಕ ವಾತಾವರಣದಲ್ಲೇ ಲಭಿಸಿತ್ತು. ಬಿ.ಎಸ್ಸಿ, ಎಲ್.ಎಲ್.ಬಿ ಹಾಗೂ ದೆಹಲಿಯ ವಿಶ್ವವಿದ್ಯಾನಿಲಯದಿಂದ ಬಿ.ಐ.ಎಂ.ಎಸ್ ಪದವಿ ಪಡೆದ ನಂತರ ಕೆಲಕಾಲ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಕಂಪನಿಯಲ್ಲಿ ಕೆಲಕಾಲ ವೃತ್ತಿ ಜೀವನ ನಡೆಸಿದರು. ಈ ಸಂದರ್ಭದಲ್ಲೇ ಗುರುಗಳಿಗೆ ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಸಂಶ್ರಯ ಪ್ರಾಪ್ತವಾಗಿತ್ತು.ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಶ್ರೀಗಳ ಮನಸ್ಸು ವೇದಾಧ್ಯಯನಕ್ಕಾಗಿ ಶೃಂಗೇರಿಯ ಶಾರದಾಂಬೆಯ ಸಾನ್ನಿಧ್ಯದತ್ತ ಹೊರಳಿತ್ತು. ತಂದೆ ತಾಯಿಯರ ಅನುಮತಿ ಪಡೆದು, ಶೃಂಗೇರಿಯಲ್ಲಿ ವೇದಾಧ್ಯಯನ ಮುಂದುವರೆದಿತ್ತು. ಇತ್ತ ಶಿವಗಂಗಾ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಆರೋಗ್ಯ ಹದಗೆಟ್ಟಿತ್ತು, ಪೀಠಕ್ಕೆ ಉತ್ತರಾಧಿಕಾರಿ ನೇಮಕ ತುರ್ತಾಗಿ ನಡೆಯಬೇಕಿತ್ತು. ಶೃಂಗೇರಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ಸೀತಾರಾಮ ಶರ್ಮರೇ ತಮ್ಮ ಉತ್ತರಾಧಿಕಾರಿಗಳೆಂದು ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರು ನಿಶ್ಚಯಿಸಿದ್ದರು.ಹಿರಿಯ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಸೀತಾರಾಮ ಶರ್ಮರನ್ನು ಬೆಂಗಳೂರಿಗೆ ಕರೆಸಲಾಯಿತು. 7-08-1982, ಆಶ್ವಯುಜ ಶುದ್ಧ ಪಂಚಮಿಯಂದು ಆತುರದ ಸಂನ್ಯಾಸ ನೀಡಿ ಸಚ್ಚಿದಾನಂದ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನೂ ನೀಡಲಾಯಿತು. ಕ್ರಮ ಸನ್ಯಾಸ ಸ್ವೀಕಾರದ ನಂತರ 26-10-1982ರಲ್ಲಿ ಶ್ರೀಗಳು ಶೃಂಗೇರಿ ಶಾಖಾ ಮಠ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತಗೊಂಡರು. ನಂತರ  31 ವರ್ಷಗಳ ಕಾಲ ಶಿವಗಂಗಾ ಪೀಠವನ್ನಲಂಕರಿಸಿದ್ದರು.


ಸಂನ್ಯಾಸ ಧರ್ಮಕ್ಕೆ ಅನ್ವರ್ಥ ನಾಮದಂತಿದ್ದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರಿಂದ ಪ್ರಭಾವಿತರಾಗಿದ್ದರು. ಶ್ರೀರಾಮ ಅವರ ಆರಾಧ್ಯ ದೈವ. ಗುರುಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳವರು ಉಪದೇಶ ನೀಡಿದ್ದರು ಎಂಬುದು ವಿಶೇಷ. ಅದರ ಫಲವೆಂಬಂತೆ ಸಂನ್ಯಾಸಾಶ್ರಮ ಸ್ವೀಕರಿಸಿದ ನಂತರ ಸಚ್ಚಿದಾನಂದ ಭಾರತೀ ಸ್ವಾಮಿಗಳವರು, ತಪಸ್ಸು ವೈರಾಗ್ಯ, ಧರ್ಮಾಚರಣೆ, ಗುರುಭಕ್ತಿ, ಭಕ್ತಜನರನ್ನು ಆಶೀರ್ವದಿಸುವ ವಿಷಯದಲ್ಲಿ, ಅಷ್ಟೇ ಏಕೆ ಸಂನ್ಯಾಸಾಶ್ರಮ ಸ್ವೀಕಾರದಿಂದ ವಿದೇಹ ಮುಕ್ತಿವರೆಗೂ ಚಂದ್ರಶೇಖರ ಭಾರತೀ ಸ್ವಾಮಿಗಳ ಪ್ರತಿರೂಪದಂತಿದ್ದರು. ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನ ಚರಿತ್ರೆಯನ್ನು ಓದಿ, ಶಿವಗಂಗಾ ಗುರುಗಳ ದರ್ಶನ ಪಡೆದ ಅದೆಷ್ಟೋ ಭಕ್ತರಿಗೆ ಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಚಂದ್ರಶೇಖರ ಭಾರತೀ ಸ್ವಾಮಿಗಳೇ ಆವಿರ್ಭವಿತರಾಗಿದ್ದದ್ದು ನಿಸ್ಸಂದೇಹವಾಗಿ ಗೋಚರಿಸುತ್ತಿತ್ತು. ಚಂದ್ರಶೇಖರ ಭಾರತೀ ಸ್ವಾಮಿಗಳು ಹೀಗೆ ಇದ್ದಿರಬೇಕು ಎಂದೆನಿಸುತ್ತಿತ್ತು. ತಪಸ್ಸಿನಲ್ಲಂತೂ ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತೊಂದು ಅವತಾರದಂತೆಯೇ ಇದ್ದರು. ಶ್ರೀಗಳವರ ಅನುಷ್ಠಾನ ಎಷ್ಟೋ ದಿನಸಗಳ ಕಾಲ ಆಹಾರಗಳಿಲ್ಲದೇ ಸಾಗುತ್ತಿತ್ತು. ಈ ಎಲ್ಲಾ ಗುಣಗಳಿಂದಾಗಿಯೇ ತಮ್ಮ ವಿಜಯಯ ಯಾತ್ರೆಯ ಸಂದರ್ಭದಲ್ಲಿ ಶಿಷ್ಯ ಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಅನುಷ್ಠಾನ(ತಪಸ್ಸು) ಚಕ್ರವರ್ತಿಗಳೆಂಬ ಬಿರುದು ನೀಡಿದ್ದರು. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಅಲೌಕಿಕ ಸಾಧನೆ ಅಂತಹ ಶ್ರೇಷ್ಠವಾದದ್ದು. ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳ ಬಗ್ಗೆ ಅದೆಷ್ಟು ಗೌರವವಿತ್ತೋ ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಬಗ್ಗೆಯೂ ಅಷ್ಟೇ ಗೌರವಾದರಗಳಿದೆ. ಚಂದ್ರಶೇಖರ ಭಾರತೀ ಸ್ವಾಮಿಗಳವರು ಶೃಂಗೇರಿ ಪೀಠದ ಮಾಣಿಕ್ಯವಾದರೆ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಆ ಶೃಂಗೇರಿ ಶಾಖೆಯ ಶಿವಗಂಗಾ ಪೀಠದ ಮಾಣಿಕ್ಯ ಎಂಬುದು ನಿತ್ಯ ಸತ್ಯ ಹಾಗೆಯೇ ಸರ್ವವಿದಿತವಾದದ್ದು.ಇಂತಹ ಯತಿ ಶ್ರೇಷ್ಠರು ವಿದೇಹ ಮುಕ್ತಿ ಪಡೆದು ಈ ಮಾಘ ಶುದ್ಧ ತ್ರಯೋದಶಿ ಅಂದರೆ ಈ ಫೆ.1ಕ್ಕೆ 2ವರ್ಷವಾಗಲಿದೆ. ಜ.31 ಹಾಗೂ ಫೆ.1ರಂದು ಶೃಂಗೇರಿ ಶಿವಗಂಗಾ ಮಠದಲ್ಲಿ ಗುರುಗಳ ಆರಾಧನೆ ನಡೆಯಲಿದೆ. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಉತ್ತರಾಧಿಕಾರಿಗಳಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರು ಗುರುಗಳ ಆರಾಧನೆ ನಡೆಸಲಿದ್ದಾರೆ. ಆರಾಧನೆ ಹಿನ್ನೆಲಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾಖಾಪೀಠದಲ್ಲಿ ರಾರಾಜಿಸಿದ್ದ ಯತಿಶ್ರೇಷ್ಠರನ್ನು ಸ್ಮರಿಸೋಣ.

Wednesday, 28 January 2015

ಉದುರುತ್ತಿದೆ ಸ್ಟ್ರಿಂಗ್ ಆಫ್ ಪರ್ಲ್ ನ ಒಂದೊಂದೇ ಮುತ್ತು: ಇಳಿಯುತ್ತಿದೆ ಚೀನಾದ ಗತ್ತು!





 ಸ್ಟ್ರಿಂಗ್ ಆಫ್ ಪರ್ಲ್ಸ್!

ದಕ್ಷಿಣ ಏಷ್ಯಾದಲ್ಲಿ ಏಕಚಕ್ರಾಧಿಪತ್ಯ ಮೆರೆಯಲು ಸಹಾಯಕಾರಿಯಾಗುವುದಕ್ಕೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ಅಸ್ತಿತ್ವವನ್ನು ಸ್ಥಾಪಿವುದಕ್ಕೆ ಚೀನಾ ರೂಪಿಸಿದ್ದ ಕಾನ್ಸೆಪ್ಟ್..

ಹಿಂದೂ ಮಹಾಸಾಗರದ ಜಲಪ್ರದೇಶದಲ್ಲಿ ಬೃಹತ್ ಪ್ರಮಾಣದ ನೌಕಾ ನೆಲೆಯನ್ನು ಸ್ಥಾಪಿಸಿ, ದಕ್ಷಿಣ ಏಷ್ಯಾದ ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ, ಬಾಂಗ್ಲಾದೇಶ, ಪಾಕಿಸ್ತಾನ ಮಾಲ್ಡೀವ್ಸ್, ಮಾಯನ್ಮಾರ್, ವಿಯೆಟ್ನಾಮ್, ತೈವಾನ್ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಂಡು ಭಾರತವನ್ನು ನಿಯಂತ್ರಿಸುವುದು ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತುಗಳ ಮಾಲೆ) ನ ಉದ್ದೇಶ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿ ಹಿಂದೂ ಮಹಾಸಾಗರಕ್ಕೆ ತನ್ನದೇ ಮಹತ್ವವಿದ್ದು ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಹಿಂದೂ ಮಹಾಸಾಗರವನ್ನು ದಾಟಿಯೇ ಮುಂದೆ ಸಾಗುತ್ತದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ 35 ದೇಶಗಳು, 6 ದ್ವೀಪಗಳಿದ್ದು ಭಾರತವೇ ಇವುಗಳ ಪೈಕಿ ದೊಡ್ಡ ದೇಶ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿದ್ದ ರಾಜಕೀಯ ಸ್ಥಿತಿಗಳಿಂದ ಭಾರತ ಈ ಜಲಪ್ರದೇಶದ ಮೇಲಿದ್ದ ಹಿಡಿತ ಕಳೆದುಕೊಳ್ಳಬೇಕಾಗಿ ಬಂತು!

ಭಾರತದ ಗೊಂದಲಮಯ ಮತ್ತು ಕ್ಷೀಣ ವಿದೇಶಾಂಗ ನೀತಿಯ ಲಾಭ ಪಡೆದ ಚೀನಾ, ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳ ಮೇಲೆ ಒಂದೊಂದಾಗಿಯೇ ತನ್ನ ಹಿಡಿತ ಸಾಧಿಸಿತ್ತು. ಶ್ರೀಲಂಕಾ, ಪಾಕಿಸ್ತಾನ, ಮಾಯನ್ಮಾರ್, ಬಾಂಗ್ಲಾ, ಕಾಂಬೋಡಿಯಾದ ಸಹಾಯದಿಂದ ಚೀನಾ ನೌಕಾ ನೆಲೆಗಳನ್ನು ಸ್ಥಾಪಿಸಿದ್ದೇ ಆದರೆ ತೈಲ ವಹಿವಾಟು, ವ್ಯಾಪಾರ-ವಹಿವಾಟು ತನ್ನಿಚ್ಚಿಗೆ ತಕ್ಕಂತೆ ನಡೆಯುತ್ತದೆ. ಭಾರತ ತಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದೇ ಇದ್ದಲ್ಲಿ ತೈಲೋತ್ಪನ್ನಗಳು ಮತ್ತು ಇತರ ವಾಣಿಜ್ಯ ಸಾಮಾಗ್ರಿಗಳು ಹಿಂದೂ ಮಹಾಸಾಗರದಿಂದ ಭಾರತ ತಲುಪದಂತೆ ನೋಡಿಕೊಂಡರಾಯಿತು. ಹೇಗಿದ್ದರೂ ಹಿಂದೂ ಮಹಾಸಾಗರದಲ್ಲಿ ತನ್ನದೇ ಆಧಿಪತ್ಯವಿರಲಿದೆ, ಭಾರತದ ನೆರೆ ರಾಷ್ಟ್ರಗಳು ತಾನು ಹೇಳಿದಂತೆಯೇ ಕೇಳುತ್ತದೆ ಎಂಬುದು ಚೀನಾ ನಿಲುವಾಗಿತ್ತು. ಭಾರತ ಸರ್ಕಾರದ ಬೇಜವಾಬ್ದಾರಿತನವೂ ಚೀನಾದ ನಿಲುವಿಗೆ ಪೂರಕವಾಗಿತ್ತು. ಆದರೆ ಈಗ ಭಾರತದ ನಾಯಕತ್ವ ಹಾಗೂ ರಾಜಕೀಯ ಸ್ಥಿತಿ ಎರಡೂ ಬದಲಾಗಿದೆ. ಚೀನಾ ಎಂತಹ ಕೃತ್ರಿಮ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅವಕಾಶವಾದಿ ಅಮೆರಿಕಾಗೆ ಚೀನಾವನ್ನು ಬಗ್ಗುಬಡಿಯುವ ಅನಿವಾರ್ಯತೆ ಇದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರೇ ಬಂದು ಭಾರತದ ಪ್ರಧಾನಿಯೊಂದಿಗೆ ಚೀನಾ ನೌಕಾ ನೆಲೆ ಸ್ಥಾಪಿಸುತ್ತಿರುವ ಬಗ್ಗೆ ಚರ್ಚೆ ನಡೆಸುತ್ತಾರೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಭಾರತದೊಂದಿಗೆ ಅಮೆರಿಕಾ ಮಾತನಾಡಿದ ನಂತರವಂತೂ ಸ್ಟ್ರಿಂಗ್ ಆಫ್ ಪರ್ಲ್ಸ್ ಬಿಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೂ ಅಡ್ಡಿ ಉಂಟಾಗಿದೆ.

ಭಾರತದ ನೆರೆ ರಾಷ್ಟ್ರಗಳಲ್ಲಿ ನೌಕಾ ನೆಲೆ ಸ್ಥಾಪಿಸಿ ಏಷ್ಯಾ ಭಾಗದ ಭದ್ರತೆಗೇ ಕುತ್ತು ತರುವ ಚೀನಾದ ಕುತಂತ್ರ ಗೊತ್ತಿದ್ದರಿಂದಲೇ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ವಿದೇಶ ಪ್ರವಾಸ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಭೂತಾನ್, ನೇಪಾಳ, ಫಿಜಿ, ಜಪಾನ್, ಮಾಯನ್ಮಾರ್ ನೊಂದಿಗೆ. ಓರ್ವ ಭಾರತದ ಪ್ರಧಾನಿ ಈ ಎಲ್ಲಾ ರಾಷ್ಟ್ರಗಳಿಗೂ ಭೇಟಿ ನೀಡಿ ಹಲವು ದಶಕಗಳೇ ಕಳೆದುಹೋಗಿದ್ದರೂ ಈ ಎಲ್ಲಾ ದೇಶಗಳಲ್ಲೂ ಅತ್ಯಾದರ ಸ್ವಾಗತ, ಯಶಸ್ಸು ಸಿಕ್ಕಿತು. . ಭಾರತ ಹಾಗೂ ಈ ನೆರೆ ರಾಷ್ಟ್ರಗಳ ಸಂಬಂಧ ಹೀಗಿರಬೇಕಾದರೆ ಮಧ್ಯದಲ್ಲಿ ಚೀನಾವೂ ತಲೆ ಹಾಕುತ್ತದೆ. ಅವಕಾಶ ಸಿಕ್ಕರೆ ಅದರ 'ಪರಮಮಿತ್ರ' ಪಾಕಿಸ್ತಾನವೂ ಈ ನೆರೆ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತದೆ.

ಹಾಗೆ ನೋಡಿದರೆ ದ್ವಿಪಕ್ಷೀಯ ಮಾತುಕತೆಗಿಂತ ಮೋದಿ ಚೀನಾಕ್ಕೆ ನೀಡಿದ ಮೊದಲ ಬಹುದೊಡ್ಡ ಹೊಡೆತವೆಂದರೆ ನೇಪಾಳ ಹಾಗೂ ಜಪಾನ್ ಗೆ ತೆರಳಿ ಯಶಸ್ವಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು. ನೇಪಾಳ ಮೋದಿ ಭೇಟಿಗೂ ಮುನ್ನವೇ ಚೀನಾದ ಪರವಾಗಿ ವಾಲುತ್ತಿದ್ದ ದೇಶ. ನೇಪಾಳದಲ್ಲಿ ತನ್ನ ಅಧಿಪತ್ಯ ಸಾಧಿಸಲು ಚೀನಾ ಆ ದೇಶಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಾ ಬಂದಿದೆ ಹಾಗೂ ಮಾವೋವಾದಿಗಳನ್ನು ತನ್ನತ್ತ ಸೆಳೆದು ಮಾವೋ ಸರಕಾರ ಸ್ಥಾಪಿಸುವ ಹುನ್ನಾರವೂ ನಡೆಸಿತ್ತು. ಮೋದಿ ಭೇಟಿ ಬಳಿಕ ನೇಪಾಳ ಚೀನಾಕ್ಕಿಂತಲೂ ಭಾರತಕ್ಕೆ ಹತ್ತಿರವಾಗತೊಡಗಿದೆ. ಮೋದಿಯವರ ಜಪಾನ್ ಭೇಟಿ ಸಂದರ್ಭದಲ್ಲಂತೂ ಚೀನಾಕ್ಕೆ ದಿಕ್ಕೇ ತೋಚಿದಂತಾಗಿತ್ತು. ಮಯಾನ್ಮಾರ್, ಭೂತಾನ್, ಭೇಟಿಗಳಿಂದಲೂ ಚೀನಾಕ್ಕೆ ಆತಂತವಾಗಿತ್ತು. ನಿಮಗೆಲ್ಲಾ ನೆನಪಿರಬಹುದು, ಮೋದಿ ನೆರೆ ರಾಷ್ಟ್ರಗಳೊಂದಿಗೆ ಬೆಸೆಯುತ್ತಿದ್ದ ಸಂಬಂಧಗಳಿಂದ ತನ್ನ ಬಗ್ಗೆ ಆತಂತಗೊಂಡಿದ್ದ ಚೀನಾ ಡಿ.21ರಂದು ನಡೆದ ಜಿಎಂಎಸ್ ಸಮಿತ್ ಶೃಂಗಸಭೆಯಲ್ಲಿ ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್, ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡುವುದಾಗಿ ಆಮಿಷವೊಡ್ಡಿತ್ತು.

ಇವೆಲ್ಲವೂ ಸಾಮಾನ್ಯ ಸಂಗತಿ. ವಾಸ್ತವವಾಗಿ ಚೀನಾಗೆ ತಡೆಯಲಾರದ ಪೆಟ್ಟು ಬಿದ್ದದ್ದು ತನ್ನ ಪರಮಾಪ್ತನಾಗಿದ್ದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಸೋಲಿನಿಂದ. ರಾಜಪಕ್ಸೆ ಅಧಿಕಾರದಲ್ಲಿದ್ದಾಗಿನಿಂದ, ಸೋಲುವವರೆಗೂ ಚೀನಾದ ಹಿತಾಸಕ್ತಿಗೆ ತಕ್ಕಂತೆಯೇ ನಡೆಯುತ್ತಾ, ಪಾಕಿಸ್ತಾನವನ್ನೂ ಮಿತ್ರನಾಗಿಸಿಕೊಂಡು ಭಾರತಕ್ಕೆ ಈ ಎರಡೂ ರಾಷ್ಟ್ರಗಳಿಂದಾಗಬೇಕಿದ್ದ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೀಗೇ ಬಿಟ್ಟರೆ ಭಾರತದ ಹಿತಾಸಕ್ತಿಗೇ ಧಕ್ಕೆಯುಂಟಾಗುತ್ತದೆ ಎಂಬುದನ್ನು ತಿಳಿದಿದ್ದ ಮೋದಿ ಸರ್ಕಾರ, ತನ್ನನ್ನು ಹಾಗೂ ಶ್ರೀಲಂಕಾವನ್ನು ಚೀನಾದ ಕೃತ್ರಿಮತೆಯಿಂದ ರಕ್ಷಿಸಿಕೊಳ್ಳಲು ರಾಜಪಕ್ಷೆಯನ್ನು ಸೋಲಿಸಲು ಅಗತ್ಯವಿದ್ದ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿತ್ತು. ಸಧ್ಯಕ್ಕೆ ಶ್ರೀಲಂಕಾ ಚೀನಾದ ವಸಾಹತುಶಾಹಿಗೆ ವಿರುದ್ಧವಾಗಿರುವ ದೇಶವಾಗಿ ತಿರುಗಿಬಿದ್ದಿದೆ. ಬಾಂಗ್ಲಾದೇಶ ಭಾರತದ ದ್ವೇಷ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ. ನೇಪಾಳ ಹಾಗೂ ಶ್ರೀಲಂಕಾ ಭಾರತದ ಪರ ತಿರುಗಿರುವುದೇ ಈಗ ಚೀನಾಕ್ಕೆ ಎದುರಾಗಿರುವ ಬಹುದೊಡ್ಡ ಸವಾಲಾಗಿದೆ.

ಹೀಗೆ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಸರಿನಲ್ಲಿ ಒಂದೊಂದೇ ದೇಶಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಭಾರತವನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಚೀನಾದ ಕನಸು ಕಮರುತ್ತಿದೆ. ಸ್ಟ್ರಿಂಗ್ ಆಫ್ ಪರ್ಲ್ಸ್ ಗೆ ಪೋಣಿಸಿದ್ದ ಒಂದೊಂದೆ ಮುತ್ತುಗಳು ಈಗ ಚೀನಾದ ಹಿಡಿತದಿಂದ ಉದುರುತ್ತಿವೆ. ಸಧ್ಯಕ್ಕೆ ಚೀನಾಗೆ ಹೇಳಿಕೊಳ್ಳಬಹುದಾದ ಆಪ್ತ ರಾಷ್ಟ್ರವೆಂದು ಉಳಿದಿರುವುದು ಕೇವಲ ಪಾಕಿಸ್ತಾನ ಮಾತ್ರ. ಅಂದಹಾಗೆ ನೆರೆ ರಾಷ್ಟ್ರಗಳನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎನ್ನುವುದಕ್ಕೆ ಚೀನಾದ ಆರ್ಥಿಕತೆಯೂ ಕುಸಿಯುತ್ತಿದೆ. ಆಂತರಿಕ ಭಯೋತ್ಪಾದನೆ ಹತ್ತಿಕ್ಕುವ ಕಾರಣ ಮುಂದಿಟ್ಟುಕೊಂಡು ಪಾಕಿಸ್ತಾನ ಕೇಳಿದಾಗಲೆಲ್ಲಾ ದುಡ್ದು ಸುರಿಯುವಷ್ಟು ಮೂರ್ಖತನ ಚೀನಾ ತೋರಲಾರದು. ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಐಎಂಎಫ್ ವರದಿ ಪ್ರಕಾರ 2016ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಚೀನಾದ ಆರ್ಥಿಕತೆಯನ್ನು ಮೀರಿ ಬೆಳೆಯುತ್ತದೆ ಎಂದು ಹೇಳಿದೆ. ಇನ್ನು ಪಾಕಿಸ್ತಾನ ಹೊರತುಪಡಿಸಿ ಉಳಿದ ನೆರೆರಾಷ್ಟ್ರಗಳೇಕೆ ಆರ್ಥಿಕ ಸಹಾಯಕ್ಕಾಗಿ ಚೀನಾದತ್ತ ಮುಖಮಾಡುವ ಸ್ಥಿತಿ ಎದುರಾಗುತ್ತದೆ? ಇಷ್ಟೆಲ್ಲಾ ಒಂದೆಡೆ ಅಮೆರಿಕಾ ಭಾರತ ತನಗೆ ಬೆಸ್ಟ್ ಫ್ರೆಂಡ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದರೆ, ಚೀನಾದ ಸ್ಥಿತಿ ಚೋರ ಗುರುವಿಗೆ ಚಂಡಾಲ ಶಿಷ್ಯ ಎಂಬಂತಾಗಿದೆ. ಅದಕ್ಕಾಗಿಯೇ ಚೀನಾ ಪಾಕಿಸ್ತಾನವನ್ನು ತನ್ನ ಸಾರ್ವಕಾಲಿಕ ಆಪ್ತಮಿತ್ರ ಎಂದು ಬಣ್ಣಿಸುತ್ತಿದೆ.

Tuesday, 20 January 2015

ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಯಾವುದಾದರೂ ಕಾರ್ಯಕ್ರಮವೊಂದಕ್ಕೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಅವರನ್ನು ಪರಿಚಯಿಸಬೇಕಾದರೆ ಇವರಿಗೆ ಇಂತಿಷ್ಟು ರೋಗಗಳಿವೆ, ರೋಗಿಷ್ಠರು, ದಡ್ಡರು ಆದರೂ ಅವರು ಅಷ್ಟೊಂದು ಸಾಧನೆ ಮಾಡಿದ್ದಾರೆ ಎಂಬ ವ್ಯಕ್ತಿ  ಪರಿಚಯಕ್ಕೆ ಪ್ರತಿಕ್ರಿಯೆ ಹೇಗಿರಬಹುದು?  ದೇಶದ ಯುವಕರ ಆರಾಧ್ಯ ದೈವ ವಿವೇಕಾನಂದರನ್ನು ರೋಗಿಷ್ಠ, ಪೆದ್ದ ಎಂಬ ಪದಪುಂಜಗಳನ್ನು ಪ್ರಯೋಗಿಸಿದ್ದ ಮಾಜಿ ಪತ್ರಕರ್ತ, ಹಾಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಕೇಳಬೇಕಿದೆ

3 ವರ್ಷಗಳ ಹಿಂದಿನ ಲೇಖನಕ್ಕೆ ಇಂದಿಗೂ ಆಕ್ಷೇಪಗಳ ಪ್ರತಿಕ್ರಿಯೆಗಳು ಬರುತ್ತಿದೆಯೆಂದರೆ, ಲೇಖನದಲ್ಲಿ ಸ್ವಾಮಿ ವಿವೇಕಾನಂದರನ್ನು ಎಷ್ಟರ ಮಟ್ಟಿಗೆ ಕೆಟ್ಟದಾಗಿ ಚಿತ್ರಿಸಿದ್ದರೆಂಬುದನ್ನು ಊಹಿಸಿಕೊಳ್ಳಿ. ಸಾಮಾನ್ಯ ನಾಗರಿಕನಿಗೇ ರೋಗಿಷ್ಠ, ಪೆದ್ದ, ದಡ್ಡ ಎಂದು ಸಂಬೋಧಿಸಿದರೆ ತಡೆಯಲಾರದ ಸಿಟ್ಟು ಬರುತ್ತದೆ. ಅಂಥದ್ದರಲ್ಲಿ ಇಡೀ ದೇಶದ ಯುವಚೈತನ್ಯದ ಮೂರ್ತರೂಪವನ್ನು ಅಂತಹ ಕನಿಷ್ಠ ಪದಗಳಿಂದ ಪರಿಚಯಿಸಿದರೆ ಪ್ರತಿಕ್ರಿಯೆಯೂ ಅಷ್ಟೇ ಕನಿಷ್ಠವಾಗಿರುವುದು ಸಹಜ. ಕನಿಷ್ಠ ಪದಗಳಿಂದ ಟೀಕಿಸುವವರು ಅದೇ ಮಟ್ಟದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮಾನಸಿಕವಾಗಿಯೂ ಸಿದ್ಧರಿರಬೇಕಲ್ಲವೇ? 

ನಿಮಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ದಿನಗಳು ನೆನಪಿರಬೇಕಲ್ಲವೇ? ಸರ್ಕಾರದ ಸಾಲು ಸಾಲು ಹಗರಣಗಳಿಂದ ರೋಸಿ ಹೋಗಿದ್ದ ಜನರು ಸರ್ಕಾರವನ್ನು ನೇರಾ ನೇರ ಟೀಕಿಸಲು ಮುಂದಾದರು, ಬರಹಗಾರರು, ವಿಶ್ಲೇಷಕರ ಆಕ್ರೋಶಗಳಿಗೆಲ್ಲಾ ವೇದಿಕೆಯಾಗಿದ್ದು ಪ್ರಿಂಟ್ ಅಥವಾ ದೃಷ್ಯ ಮಾಧ್ಯಮಗಳು, ಸಾಮಾನ್ಯ ಜನರಿಗೆ ಸರ್ಕಾರದ ವಿರುದ್ಧವಿದ್ದ ತಮ್ಮ ಆಕ್ರೋಶವನ್ನು ಹೊರಹಾಕಲು ಇದ್ದದ್ದು ಒಂದೇ ವೇದಿಕೆ ಅದೇ, ಈ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಟ್ವಿಟರ್, ಕಾಂಗ್ರೆಸ್ ನ ಹಗರಣಗಳು ಒಂದೆಡೆಯಾದರೆ ಅದನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೂ ವಾದ ಮಂಡಿಸುತ್ತಿದ್ದ ಕಾಂಗ್ರೆಸ್ ನ ಮುಖಂಡರಾದ ದಿಗ್ವಿಜಯ್ ಸಿಂಗ್, ಸಂಜಯ್ ಝಾ ಮುಂದಾದವರ ಆಧಾರ ರಹಿತ ತರ್ಕಗಳಿಂದ ಜನರು ಹೈರಾಣಾಗಿದ್ದರು. ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಕಂಡುಬಂದಿತ್ತು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್  ವ್ಯಂಗ್ಯ ಚಿತ್ರಗಳಿಗಂತೂ ಲೆಕ್ಕವೇ ಇರಲಿಲ್ಲ.

ತನ್ನ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳು ಟೀಕಿಸಿದ್ದೇ ತಡ, ಇದು ಸ್ವೀಕಾರಾರ್ಹವಲ್ಲ ಎಂದು ಯುಪಿಎ ಸರ್ಕಾರ ಗುಡುಗಿತ್ತು. ಫೇಸ್ ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಅಂದಿನ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಕಪಿಲ್ ಸಿಬಲ್ ನೀಡಿದ್ದ ಎಚ್ಚರಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕದಲ್ಲಿ ಯುಪಿಎ ಸರ್ಕಾರದ ತದ್ರೂಪು ಕ್ರಮ ನಡೆಯುತ್ತಿದೆ! ಅಂದು ಸಚಿವರು ಲಾರ್ಜ್ ಸ್ಕೇಲ್ ನಲ್ಲಿ ಇಡೀ ಫೇಸ್ ಬುಕ್ ಗೇ ಎಚ್ಚರಿಕೆ ನೀಡಿದ್ದರು, ಇಂದು ಮುಖ್ಯಮಂತ್ರಿ ಸಲಹೆಗಾರರು ಸ್ಮಾಲ್ ಸ್ಕೇಲ್ ನಲ್ಲಿ ಫೇಸ್ ಬುಕ್ ನ ಗುಂಪು ಅಥವಾ ಅದರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಯುಪಿಎ ಸರ್ಕಾರ ರಾಷ್ಟ್ರಮಟ್ಟದಲ್ಲಿ ಮಾಡಿದ್ದನ್ನು ಮುಖ್ಯಮಂತ್ರಿ ಸಲಹೆಗಾರರು ರಾಜ್ಯಮಟ್ಟದಲ್ಲಿ ಮಾಡಿದ್ದಾರೆಂಬುದನ್ನು ಬಿಟ್ಟರೆ ಹೆಚ್ಚಿನ ವ್ಯತ್ಯಾಸವಿಲ್ಲ. 

ಸಾಮಾನ್ಯ ಜನರು ಅಪ್ ಲೋಡ್ ಮಾಡಿದ ಚಿತ್ರಗಳಿಗೆ ಫೇಸ್ ಬುಕ್ ಮೇಲೆ ಕ್ರಮ ಕೈಗೊಳ್ಳುವುದು ಸಾಧುವೇ ಎಂಬುದು ಅಂದಿನ ಪ್ರಶ್ನೆಯಾಗಿತ್ತು? ಇಂತಹ ಚಿತ್ರಗಳನ್ನು ಫೇಸ್ ಬುಕ್, ಗೂಗಲ್ ಪ್ಲಸ್ ಅಥವಾ ಬ್ಲಾಗ್ ಗಳಲ್ಲಿ ಹಾಕಿದ್ದು ಸರಿಯೋ ತಪ್ಪೋ ಎಂಬ ಚರ್ಚೆಗಿಂತ ಅಂದು ಜನರಲ್ಲಿದ್ದ ಹತಾಷ ಭಾವನೆಯೇ ಪ್ರಮುಖ ವಿಷಯವಾಗಿತ್ತು. ಮುಖ್ಯಮಂತ್ರಿ ಸಲಹೆಗಾರರ ಸೋಷಿಯಲ್ ಮೀಡಿಯಾ ನಿಯಂತ್ರಣ ಪ್ರಯತ್ನವನ್ನು ನೋಡಿದರೆ ಇಅವತ್ತು ಇಂತಹದ್ದೇ ಪ್ರಶ್ನೆ ಉದ್ಭವಿಸುತ್ತಿದೆ.

ಪಾಲಿಮೆಂಟ್ ನ್ನು ಕಮೋಡ್ ರೀತಿ ಚಿತ್ರಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದವರು, ಇಂದು ವಿವೇಕಾನಂದರ ಲೇಖನದ ಬಗ್ಗೆ ಬಂದ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದ ಪದಗಳನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಸುಮ್ಮನಿದ್ದುಬಿಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ?

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಜರಿದದ್ದು ಬೆದರಿಕೆ, ಸಂಚು, ಶಾಂತಿ ಕಡದುವ ಪ್ರಯತ್ನ ಹೇಗಾಗುತ್ತದೆ? ವಿವೇಕಾನಂದರನ್ನು ರೋಗಿಷ್ಠ, ದಡ್ಡ ಎಂದೆಲ್ಲಾ ಜರಿದು ಯುವಜನತೆಯ ಶಾಂತಿಯನ್ನು ಕದಡಿದ್ದು ಯಾರು? ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಬೊಬ್ಬೆ ಹೊಡೆದು ತಮ್ಮನ್ನು ಟೀಕಿಸಿದವರ ಮೇಲೆ ಕೇಸ್ ಹಾಕಿ ಅವರದ್ದು ನಾಯಿಪಾಪಾಡಾಗುವಂತೆ ಮಾಡುತ್ತೇನೆ ಎನ್ನುವುದೂ ಬೆದರಿಕೆಯ ಮತ್ತೊಂದು ರೂಪವಲ್ಲವೇ? ತಾವು ವಿವೇಕಾನಂದರನ್ನು ರೋಗಿಷ್ಠ ಎಂದು ಕರೆದರೆ ತಮ್ಮನ್ನು ಮತ್ತೊಬ್ಬರೂ ಅದೇ ರೀತಿಯ ಪದಗಳಿಂದ ಸಂಬೋಧಿಸಬಾರದು ಎನ್ನುವುದು ಯಾವ ರೀತಿಯ ನ್ಯಾಯ? ಯಾರೋ ಓರ್ವ ತನ್ನ ಕಾಮೆಂಟಿನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಆರೋಪಿಸುವವರು  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕರಾವಳಿಯ ಮಧ್ಯಮ ವರ್ಗದ ಜನತೆಯನ್ನು ಷಂಡರೆಂದು ಕರೆಯುವುದರ ಮೂಲಕ, ಪ್ರಧಾನಿಯ ಬಗ್ಗೆ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಪುಂಜಗಳನ್ನು ಪ್ರಯೋಗಿಸುವುದರ ಮೂಲಕ ಯುವ ಜನತೆಗೆ ಯಾವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದೀರಿ?

ಇಷ್ಟಕ್ಕೂ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಇಂಥದ್ದೊಂದು ಪ್ರಶ್ನೆ ಖಂಡಿತಾ ಕೇಳಬೇಕಿದೆ. ನಿಮಗೆ ಪ್ರಭಾ ಬೆಳವಂಗಲಾ ಪ್ರಕರಣ ಖಂಡಿತಾ ನೆನಪಿರುತ್ತದೆ. ಅಂದೂ ಸಹ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಕೇಸ್ ದಾಖಲಿಸಲು ಸಹಾಯ ಮಾಡಿದ್ದರು. ಇರಲಿ, ಅದಾದ ನಂತರ ಮುಖ್ಯಮಂತ್ರಿ ಸಲಹೆಗಾರರಿಗೆ ಅವಾಚ್ಯ ಶಬ್ದಗಳು ಕೇಳಿಸಿದ್ದು ತಮ್ಮನ್ನು ಟೀಕಿಸಿದ ನಂತರವೇ. ಹಾಗಾದರೆ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಸಲಹೆಗಾರರಿಗೆ ಹಾಗೂ ಅವರಿಗೆ ಬೇಕಾದರವ ವಿರುದ್ಧ ಅವಹೇಳನ ನಡೆದರೆ ಮಾತ್ರ ಅದು ಚಾರಿತ್ರ್ಯ ವಧೆಯಾಗುತ್ತದೆಯೋ? ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪದಗಳಲ್ಲಿ ಲೇಖನ ಬರೆದಿದ್ದು ಅವರ ಚಾರಿತ್ರ್ಯವಧೆಯಾಗುವುದಿಲ್ಲವೇ? ಅದು ಶಾಂತಿ ಕದಡುವ, ಅಪರಾಧವಾಗುವುದಿಲ್ಲವೇ? ಕೇಸ್ ಯಾರ ಮೇಲೆ ದಾಖಲಿಸಬೇಕು ಹೇಳಿ? 

ತಮ್ಮನ್ನು ಕೆಟ್ಟ ಪದಗಳಿಂದ ಟೀಕಿಸಿರುವುದರ ಬಗ್ಗೆ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವುದರಿಂದ ಸ್ವಲ್ಪ ಇತರರ ವಿರುದ್ಧ ಬಳಕೆಯಾಗುತ್ತಿರುವ ಅವಾಚ್ಯ ಶಬ್ದಗಳ ಬಗ್ಗೆಯೂ ಗಮನ ಹರಿಸಲಿ, ಅಬರ ಪ್ರಭಾವಳಿಯಲ್ಲಿರುವವರೇ ಅನೇಕರು ಅಂತಹ ಶಬ್ದಗಳನ್ನು ಫೇಸ್ ಬುಕ್ ನಲ್ಲಿ ಮೆಸೇಜ್ ಮೂಲಕ ಬಳಸಿರಬಹುದು. ತಮ್ಮ ವಿರುದ್ಧ ಬಳಸಿದರೆ ಮಾತ್ರ ಅದು ಅವಾಚ್ಯ ಶಬ್ದ ಉಳಿದವರ ವಿರುದ್ಧ ಬಳಸಿದರೆ ಅದು ವಾಚ್ಯ ಎನ್ನಲು ಹೇಗೆ ಸಾಧ್ಯ? ಅವಾಚ್ಯ ಶಬ್ದಗಳ ಬಗ್ಗೆ ಅತೀವ ಕಾಳಜಿ ಇರುವವರು ತಮ್ಮ ನಿಂದನೆಗೆ ಸೇಡು ತೀರಿಸಿಕೊಳ್ಳುವುದಕ್ಕೆ ಮಾತ್ರ ಮುಂದಾಗದೇ ಯಾವುದೇ ಇಸಂ ಗಳಿಗೂ ಒಳಗಾಗದೇ ಯಾರೇ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಸ್ಥಿತಿ ನಿರ್ಮಿಸಲು ಅವರಿಗೆ ಸಾಧ್ಯವೇ? ಅಂತಹ ಸ್ಥಿತಿಯನ್ನು ನಿರ್ಮಿಸಿ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಗಳನ್ನು ಫೇಸ್ ಬುಕ್ ನಲ್ಲಿ ಅಲ್ಲ ಮಾಧ್ಯಮಗಳಲ್ಲೂ ಬಳಕೆಯಾಗದಂತೆ ನೋಡಿಕೊಳ್ಳಲಿ, 'ವಿವೇಕ'ವುಳ್ಳವರನ್ನು ಯಾರೂ ಟೀಕಿಸಿದಂತೆ ನೋಡಿಕೊಳ್ಳಲಿ, ಧರ್ಮಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುವವರನ್ನು ನಿಯಂತ್ರಿಸಲಿ  ಹಾಗಾಗುವುದಿಲ್ಲ ಎಂದಾದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಎಂದು ಕೇಳಬೇಕಾಗುತ್ತದೆ.

Tuesday, 6 January 2015

ಶ್ರೀ ಭಾರತೀ ತೀರ್ಥ ಗುರು ಕರಕಮಲ ಸಂಜಾತ....






ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠ ತನ್ನ ಅನೂಚಾನ ಗುರುಪರಂಪರೆಯ ಆಚರಣೆಗಳನ್ನು ಮುಂದಿನ ತಲೆಮಾರಿಗೆ ವಹಿಸುವ ಪ್ರಕ್ರಿಯೆ ಕಾಲ ಸನ್ನಿಹಿತವಾಗಿದೆ. ಆ ಗುರುಪರಂಪರೆಗೆ ನೂತನ ಗುರುಗಳ ಸೇರ್ಪಡೆಯಾಗಲಿದೆ. ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿ ಆಗಿದೆ. ಇನ್ನೇನಿದ್ದರೂ ತುರಿಯಾಶ್ರಮ ಸ್ವೀಕಾರವೊಂದೇ ಬಾಕಿ.

ತಿರುಪತಿ-ತಿರುಮಲ ದೇವಸ್ಥಾನ(ಟಿಟಿಡಿ) ವೇದಪಾಠಶಾಲೆಯ ಪ್ರಾಂಶುಪಾಲ ಹಾಗೂ ಧರ್ಮಪ್ರಚಾರ ಪರಿಷತ್ ನ ಯೋಜನಾ ಅಧಿಕಾರಿಯಾಗಿರುವ  ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿ-ಸೀತಾ ನಾಗಲಕ್ಷ್ಮಿ ದಂಪತಿಗಳ ದ್ವಿತೀಯ ಪುತ್ರರಾದ ಕುಪ್ಪಾ ವೆಂಕಟೇಶ್ವರ ಪ್ರಸಾದ್ ಶರ್ಮಾ(21) ಜ.22, 23ರಂದು ಶೃಂಗೇರಿಯಲ್ಲಿ ಯೋಗಪಟ್ಟ ಪಡೆಯಲಿದ್ದು ಶೃಂಗೇರಿ ಗುರುಗಳ ಉತ್ತರಾಧಿಕಾರಿಯಾಗಲಿದ್ದಾರೆ. ಕುಪ್ಪಾ ಕೌಂಡಿನ್ಯ ಶರ್ಮರು ವೆಂಕಟೇಶ್ವರ ಪ್ರಸಾದ ಶರ್ಮರ ಅಣ್ಣ, ಕೃಷ್ಣಪ್ರಿಯ ಅವರ ಅಕ್ಕ.

ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಶೃಂಗೇರಿ ಉತ್ತರಾಧಿಕಾರಿಗಳಾಗಲು ಅಗತ್ಯವಿರುವ ವೇದಾಭ್ಯಾಸ, ಕುಟುಂಬದ ವಾತಾವರಣದಲ್ಲೇ ಧಾರಾಳವಾಗಿ ದೊರೆತಿತ್ತು. ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವ ಕುಟುಂಬ. ತಿಳುವಳಿಕೆ ಬಂದಾಗಿನಿಂದಲೂ ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಸನ್ಯಾಸದಲ್ಲಿ ಅತೀವ ಆಸಕ್ತಿ. ಅಜ್ಜ ರಾಮಗೋಪಾಲ ಸೋಮಯಾಜಿಗಳ ಅಣ್ಣ ಕುಪ್ಪಾ ವೆಂಕಟಾಚಲಪತಿ ಸೋಮಯಾಜಿ ಅವರು ಶೃಂಗೇರಿ ಜಗದ್ಗುರುಗಳಾ ದ ಶ್ರೀ ಭಾರತೀ ತೀರ್ಥ ಸ್ವಾಮಿಗಳವರಿಂದ ಆಶೀರ್ವಾದ, ಅಪ್ಪಣೆ ಪಡೆದು ಸನ್ಯಾಸ ಸ್ವೀಕರಿಸಿ ಬ್ರಹ್ಮಾನಂದ ತೀರ್ಥರೆಂಬ ಯೋಗಪಟ್ಟ ಪಡೆದು ವಿಜಯವಾಡದಲ್ಲಿದ್ದರು ಎಂಬುದು ವಿಶೇಷ.

1993ರಲ್ಲಿ ತಿರುಪತಿಯಲ್ಲಿ ಜನಿಸಿದ ಕುಪ್ಪಾ ವೆಂಕಟೇಶ್ವರ ಶರ್ಮಾ ಅವರಿಗೆ 5ನೇ ವಯಸ್ಸಿನಲ್ಲೇ ಬ್ರಹ್ಮೋಪದೇಶ(ಉಪನಯನ)ವಾಗಿತ್ತು. ಸಂಸ್ಕೃತ ಪಂಡಿತರಾಗಿದ್ದ ಅಜ್ಜ ರಾಮಗೋಪಾಲ ವಾಜಪೇಯಯಾಜಿಗಳೇ ವೆಂಕಟೇಶ್ವರ ಶರ್ಮರಿಗೆ ವೇದಾಧ್ಯಯನದಲ್ಲಿ ಪ್ರಥಮ ಗುರುಗಳು. ಸಂಧ್ಯಾವಂದನೆ, ಪ್ರಾಥಮಿಕ ಪಾಠಗಳನ್ನು ಕಲಿತಿದ್ದು ಅಜ್ಜನಿಂದ  ತಂದೆ ಶಿವಸುಬ್ರಹ್ಮಣ್ಯ ಅವಧಾನಿಗಳ ಬಳಿ ವೇದಾಧ್ಯಯನವನ್ನು ಸಂಪೂರ್ಣವಾಗಿ ಮುಂದುವರೆಸಿದರು. ಶಿವಸುಬ್ರಹ್ಮಣ್ಯ ಅವಧಾನಿಗಳು ತಿರುಪತಿಯಲ್ಲೇ ನೆಲೆಸಿದ್ದು ಶಿಷ್ಯ ಸಮೂಹವನ್ನು ಹೊಂದಿದ್ದಾರೆ.

ವಿದ್ವತ್ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವೆಂಕಟೇಶ್ವರ ಪ್ರಸಾದ್ ಶರ್ಮಾ ಅವರದ್ದು, ಶೃಂಗೇರಿ ಪೀಠಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಎನ್ನಬಹುದು. ವೇದವಿದ್ಯೆಯಲ್ಲಿ ಪ್ರಕಾಂಡ ಪಾಂಡಿತ್ಯ. ಮಿತ ಭಾಷಿ, ಸದಾ ಅಧ್ಯಯನ ನಿರತ, ಲೌಕಿಕ ವ್ಯವಹಾರಗಳಲ್ಲಿ ಹೆಚ್ಚು ಗಮನ ಕೊಡದೇ ಇರುವ ಇಂತಹ ಅಂಶಗಳೇ ಅವರನ್ನು ಶೃಂಗೇರಿ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನದವರೆಗೂ ಕರೆತಂದಿದೆ. ಶಾಸ್ತ್ರಗಳಲ್ಲಿ ವೇದಾಂತವೇ ವೆಂಕಟೇಶ್ವರ ಪ್ರಸಾದ ಶರ್ಮ ಅವರ ನೆಚ್ಚಿನ ವಿಷಯ.  ವೆಂಕಟೇಶ್ವರ ಶರ್ಮರಿಗೆ ಭಾಗವತ ಸಪ್ತಾಹದಲ್ಲಿಯೂ ಆಸಕ್ತಿ ಇತ್ತು. ಆಂಧ್ರದಲ್ಲಿ ಕೃಷ್ಣಾನದಿ -ಬಂಗಾಳ ಕೊಲ್ಲಿ ಸಂಗಮವಾಗುವ ಹಂಸಲದೇವಿ ಎಂಬ ಪ್ರದೇಶದಲ್ಲಿ ರಾಮಗೋಪಾಲ ಸೋಮಯಾಜಿಗಳು ನಡೆಸುತ್ತಿದ್ದ ಭಾಗವತ ಸಪ್ತಾಹ ವೆಂಕಟೇಶ್ವರ ಶರ್ಮರು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಶೃಂಗೇರಿಗೆ ಆಗಮಿಸಿದ ಬಳಿಕ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳವರು ದಿನ ನಿತ್ಯ ನಡೆಸುವ ಚಂದ್ರಮೌಳೇಶ್ವರ ಪೂಜೆಯ ಸಂದರ್ಭದಲ್ಲಿ ಕೃಷ್ಣ ಯಜುರ್ವೇದವನ್ನು ಪಾರಾಯಣ ಮಾಡಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.

ಶೃಂಗೇರಿ ಪೀಠದ ನಮ್ಮ ಮುಂದಿನ ಪೀಠಾಧಿಪತಿಗಳು ಶಾಸ್ತ್ರಾಭ್ಯಾಸ ಮಾಡಲು ಇಲ್ಲಿಗೆ ಆಗಮಿಸಿದ್ದು2009ರಲ್ಲಿ.  2006 ರಿಂದ 2009 ಸಮಯದಲ್ಲಿ  ಶಿವಸುಬ್ರಹ್ಮಣ್ಯ ಅವಧಾನಿಗಳು ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಶೃಂಗೇರಿ ಮಠಕ್ಕೆ ಆಗಮಿಸುತ್ತಿದ್ದರು. ತಿರುಪತಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ  ವೆಂಕಟೇಶ್ವರ ಪ್ರಸಾದರು ತಂದೆಯ ಜೊತೆಯಲ್ಲಿ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳಾಗಿದ್ದ ಭಾರತೀ ತೀರ್ಥ ಸ್ವಾಮಿಗಳವರಿಂದ ಗಾಢ ಪ್ರಭಾವಕ್ಕೊಳಗಾದರು. ಒಂದಿನಿತೂ ತಡ ಮಾಡದೇ ಜಗದ್ಗುರುಗಳ ಸಾನಿಧ್ಯದಲ್ಲೇ ಶಾಸ್ತ್ರಗಳನ್ನು ಅಭ್ಯಸಿಸುವ ಇಂಗಿತ ವ್ಯಕ್ತಪಡಿಸಿದರು. ವಿದ್ಯಾರ್ಥಿಯ ಇಂಗಿತಕ್ಕೆ ಜಗದ್ಗುರುಗಳ ಅಂಕಿತವೂ ದೊರೆಯಿತು.  2009ರ ಜೂನ್ ನಿಂದ ಇತರ ವಿದ್ಯಾರ್ಥಿಗಳೊಂದಿಗೆ ಸಂಸ್ಕೃತ ಭಾಷೆ, ಶಾಸ್ತ್ರಾಧ್ಯಯನವೂ ಪ್ರಾರಂಭವಾಯಿತು. ಶೃಂಗೇರಿಯ ವಿದ್ವಾಂಸರಾದ ತಂಗಿರಾಲ ಶಿವಕುಮಾರ ಶರ್ಮ ಬಳಿ ಸಂಸ್ಕೃತ ಸಾಹಿತ್ಯ ಅಧ್ಯಯನ. ಸಂಸ್ಕೃತ ಪಾಂಡಿತ್ಯ ಪಡೆದ ಬಳಿಕ ಸ್ವತಃ ಜಗದ್ಗುರುಗಳೇ  ತರ್ಕಶಾಸ್ತ್ರವನ್ನು ಕಲಿಸಿದರು.

ಸತತ 5 ವರ್ಷಗಳು ನಡೆದ ಶಾಸ್ತ್ರ ಅಧ್ಯಯನದ ನಂತರ ಗುರುಭಕ್ತಿ, ವೇದಪಾಂಡಿತ್ಯ, ವೈರಾಗ್ಯವೇ ಮೊದಲಾದ  ಜಗದ್ಗುರುಗಳ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ ವೆಂಕಟೇಶ್ವರ ಪ್ರಸಾದರು ಶೃಂಗೇರಿ ಪೀಠಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ.  ಶೃಂಗೇರಿ ಜಗದ್ಗುರುಗಳು ಆಸಕ್ತಿ ವಹಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ಪೀಠಾಧಿಪತಿಗಳು ಸ್ವತಃ ಪಾಠ ಮಾಡುವ ವಿದ್ಯಾರ್ಥಿಗಳ ತಂಡದಲ್ಲೇ ಒಬ್ಬರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತಾರೆ. ಅಭಿನವ ವಿದ್ಯಾತೀರ್ಥರಿಂದ ಕಲಿತ ಸೀತಾರಾಮಾಂಜನೇಯಲು ಮುಂದೆ ಭಾರತೀ ತೀರ್ಥರಾಗಿ ಶೃಂಗೇರಿಯ ಉತ್ತರಾಧಿಕಾರಿಯಾದರು. ಈಗ ಭಾರತೀ ತೀರ್ಥರಿಂದಲೇ ಶಾಸ್ತ್ರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರು ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.  ಭಾರತೀ ತೀರ್ಥರಿಗೆ ಅವರ ಗುರುಗಳಾದ ಅಭಿನವ ವಿದ್ಯಾತೀರ್ಥರು ಸನ್ಯಾಸ ನೀಡುವ ಮೂಲಕ ಶೃಂಗೇರಿಯಲ್ಲಿ ಶಿಷ್ಯ ಪರಿಗ್ರಹ ಸಮಾರಂಭ ಬರೊಬ್ಬರಿ 40ವರ್ಷಗಳ ಹಿಂದೆ ನಡೆದಿತ್ತು. ಈಗ ಅಂಥದ್ದೇ ಒಂದು ಐತಿಹಾಸಿಕ ಘಟನೆಗೆ ಶೃಂಗೇರಿ ಭಕ್ತವೃಂದ ಸಾಕ್ಷಿಯಾಗಲಿದೆ.

ಪೀಠಾಧಿಪತಿಗಳಾಗುವವರಿಗೆ ನ್ಯಾಯ, ವಿಶೇಷ, ಸಾಂಖ್ಯ, ಯೋಗ, ಮೀಮಾಂಸ, ವೇದಾಂತವೇ ಮೊದಲಾದ ಭಾರತೀಯ ತತ್ತ್ವಶಾಸ್ತ್ರದ  6 ಬಗೆಯ ದರ್ಶನಗಳ ಸಂಪೂರ್ಣ ಅಧ್ಯಯನ ಕಡ್ಡಾಯ. ಶೃಂಗೇರಿಗೆ ಬಂದ ಆರಂಭದಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿರುವ ವೆಂಕಟೇಶ್ವರ ಪ್ರಸಾದರು, ಪ್ರಸ್ತುತ ಮೀಮಾಂಸೆ ವೇದಾಂತ ಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದಾರೆ. 22,23ರಂದು ನಡೆಯಲಿರುವ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಸ್ವತಃ ಭಾರತೀ ತೀರ್ಥ ಸ್ವಾಮಿಗಳು ಪ್ರಣವ ಮಹಾವಾಕ್ಯೋಪದೇಶ ನೀಡುವ ಮೂಲಕ ಶಿಷ್ಯ ಪರಿಗ್ರಹ ನಡೆಯುತ್ತದೆ. ಶೃಂಗೇರಿ ಗುರುಗಳ ಬಿರುದಾವಳಿಯಲ್ಲಿ ಹೇಳುವ ವ್ಯಾಖ್ಯಾನ ಸಿಂಹಾಸನಾಧೀಶ್ವರ ಎಂಬಂತೆ ಪ್ರಣವ ಮಹಾವಾಕ್ಯೋಪದೇಶದ ನಂತರ ವ್ಯಾಖ್ಯಾನ ಸಿಂಹಾಸನದ ಮೇಲೆ ಉತ್ತರಾಧಿಕಾರಿಗಳನ್ನು ಕೂರಿಸಿ ಸ್ವತಃ ಭಾರತೀ ತೀರ್ಥ ಮಹಾಸ್ವಾಮಿಗಳವರು ಅಭಿಷೇಕ ಮಾಡುತ್ತಾರೆ. ಈ ರೀತಿ ವ್ಯಾಖ್ಯಾನ ಸಿಂಹಾಸನದ ಮೇಲೆ ಯತಿಗಳನ್ನು ಕುಳ್ಳಿರಿಸಿ ಅಭಿಷೇಕ ಮಾಡುವುದು ಎರಡೇ ಬಾರಿ ಒಂದು ಹಿರಿಯ ಗುರುಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿದ ಸಂದರ್ಭದಲ್ಲಿ, ಮತ್ತೊಂದು ಅದೇ ಉತ್ತರಾಧಿಕಾರಿ ಮುಂದೆ ಪೀಠಾರೋಹಣ(ಪಟ್ಟಾಭಿಷೇಕ) ಮಾಡಿದ ಸಂದರ್ಭದಲ್ಲಿ. ಹಿರಿಯ ಶ್ರೀಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿ ವ್ಯಾಖ್ಯಾನ ಸಿಂಹಾಸನ ಕೂರಿಸಿದ ವೇಳೆ ಉತ್ತರಾಧಿಕಾರಿಗೆ ಯೋಗಪಟ್ಟ(ಸನ್ಯಾಸ ಆಶ್ರಮದ ಹೆಸರು)ವೂ ದೊರೆಯಲಿದೆ. ಆ ಕ್ಷಣದಲ್ಲಿ ಹಿರಿಯ ಜಗದ್ಗುರುಗಳಿಗೆ ಪ್ರೇರಣೆಯಾಗುವ  ಭಾರತೀ, ಸರಸ್ವತೀ, ಆಶ್ರಮ, ಗಿರಿ, ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ವನ ಎಂಬ ದಶನಾಮಗಳಲ್ಲಿ ಒಂದು ಯೋಗಪಟ್ಟವನ್ನು  ನೀಡುತ್ತಾರೆ. ಸನ್ಯಾಸದ ನಂತರವೂ ವೆಂಕಟೇಶ್ವರ ಪ್ರಸಾದರ ಶಿಕ್ಷಣ ಮುಂದುವರೆಯಲಿದ್ದು ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿಷಯಗಳೊಂದಿಗೆ ಸನ್ಯಾಸ ಧರ್ಮ, ಗುಪರಂಪರೆ ಬಗ್ಗೆಯೂ ಅಧ್ಯಯನ ನಡೆಯಲಿದೆ. ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಗೊಂಡಿರುವ ವೆಂಕಟೇಶ್ವರ ಪ್ರಸಾದ ಶರ್ಮರ ಸನ್ಯಾಸ ದೀಕ್ಷೆಯ ಕಾರ್ಯಕ್ರಮವನ್ನು ಸಮಸ್ತ ಭಕ್ತವೃಂದ ಎದುರು ನೋಡುತ್ತಿದ್ದು, ಜಗದ್ಗುರುಗಳಾದ ಭಾರತೀ ತೀರ್ಥರ ಕರಕಮಲ ಸಂಜಾತರು(ಉತ್ತರಾಧಿಕಾರಿ) ಶೃಂಗೇರಿ ಪೀಠದ 37ನೇ ಪೀಠಾಧಿಪತಿಗಳಿಗೆ ಸಿಗುವ ಯೋಗಪಟ್ಟದ ಬಗ್ಗೆ ಭಕ್ತಾದಿಗಳಲ್ಲಿ ಕುತೂಹಲ ಮೂಡಿದೆ.

||ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಂ ಅಸ್ಮದಾಚಾರ್ಯ ಪರ್ಯಂತಾಮ್  ವಂದೇ ಗುರು ಪರಂಪರಾಮ್||

Friday, 19 December 2014

ಗಾಂಧಿಯನ್ನು ಕೊಂದದ್ದು ಗೋಡ್ಸೆಯಾದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್!

ನರೇಂದ್ರ ಮೋದಿ ಅವರ ಆಡಳಿತ ಪ್ರಾರಂಭದ ದಿನದಿಂದಲೂ ಈವರೆಗೂ ಸರ್ಕಾರದ ವಿರುದ್ಧ ಪ್ರತಿಭಟಿಸಲು ವಿರೋಧಪಕ್ಷಗಳಿಗೆ ವಿಷಯವೇ ಸಿಕ್ಕಿಲ್ಲ. ಎರಡು ಅಂಕಿ ದಾಟದ ಕಾಂಗ್ರೆಸ್ಸಿಗರು ವಿಪಕ್ಷ ಸ್ಥಾನ ಪಡೆಯದೇ ಇದ್ದರೂ ಹೇಗಾದರೂ ಸರ್ಕಾರವನ್ನು ಹಣಿಯಲೇಬೇಕೆಂಬ ತೀರ್ಮಾನಕ್ಕೆ ಬಂದಿತ್ತು. ಒಂದಷ್ಟು ದಿನ ಕಪ್ಪು ಹಣದ ವಿಷಯ ಸಿಕ್ಕಿತಾದರೂ ಅದನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಲಿಲ್ಲ. ಆನಂತರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ನೀಡಿದ ವಿವಾದಾತ್ಮಕ ಹೇಳಿಕೆ ವಿಷಯದ ಬಗ್ಗೆ ಒಂದಷ್ಟು ದಿನ ಕಾಲಹರಣ ಮಾಡಿದರು. ಕೊನೆಗೆ ಸಾಕ್ಷಿ ಮಹಾರಾಜ್ ಗಾಂಧಿ ಬಗ್ಗೆ ಹೇಳಿಕೆ ನೀಡುವವರೆಗೂ ಕಾಂಗ್ರೆಸ್ ಗೆ ಸಂಸತ್ ನಲ್ಲಿ ಆಹಾರವಿಲ್ಲದಂತಾಗಿತ್ತು.

ವಿಪಕ್ಷದಲ್ಲಿದ್ದರೂ ಸರಿ, ಅಧಿಕಾರದಲ್ಲಿದ್ದರೂ ಸರಿ, ಅಸಲಿಯೋ ಅಥವಾ ನಕಲಿಯೋ ಒಟ್ಟಿನಲ್ಲಿ ಗಾಂಧಿ ಎಂಬ ಹೆಸರಿಲ್ಲದೇ ಕಾಂಗ್ರೆಸ್ಸಿಗರ ಅಸ್ಥಿತ್ವವೇ ಇಲ್ಲ. ತಮ್ಮ ಪಕ್ಷದವರನ್ನು ಹೊರತುಪಡಿಸಿ ಗಾಂಧಿ ಹೆಸರನ್ನು ಮತ್ತೊಬ್ಬರು ಹೇಳಿದರೂ ಸಹಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಅಂಥದ್ದರಲ್ಲಿ ಸಾಕ್ಷಿಮಹಾರಾಜರು, 'ಗಾಂಧಿಯನ್ನು ಕೊಂದಿದ್ದು ಗೋಡ್ಸೆ, ಆದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್ಸೇ' ಎಂದು ಸತತ ಒಂದು ವಾರ ಕಾಲ ಕಿರುಚುತ್ತಿದ್ದ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದರು!. ಗಮನಾರ್ಹ ವಿಷವೆಂದರೆ ಗಾಂಧಿ ಕೊಲೆಯ ಬಗ್ಗೆ ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡಿದರೂ ಸಹ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ವ್ಯಕ್ತವಾದ ಪ್ರತಿಭಟನೆ ಸಾಕ್ಷಿ ಮಹಾರಾಜರ ಹೇಳಿಕೆಗೆ ವಿರೋಧ ವ್ಯಕ್ತವಾಗಲಿಲ್ಲ. ಹಾಗಾದರೆ ಗಾಂಧಿ ತತ್ವಗಳನ್ನು ಕಾಂಗ್ರೆಸ್ಸಿಗರು ಕೊಲೆ ಮಾಡಲಿಲ್ಲವೇ? ಅದೇಕೆ ಮಾಡಲಿಲ್ಲ. ಸ್ವಾತಂತ್ರ್ಯ ನಂತರ ವಿಸರ್ಜನೆಯಾಗಬೇಕಿದ್ದ ಕಾಂಗ್ರೆಸ್, ರಾಜಕೀಯ ಪಕ್ಷವಾಗಿ ತಲೆ ಎತ್ತಿನಿಂತಿದ್ದೇ ಗಾಂಧಿ ತತ್ವದ ಸಮಾಧಿ ಮೇಲೆ! ಅರ್ಥಾತ್ ಹುಟ್ಟಿದ್ದೇ ಗಾಂಧಿ ತತ್ವದ ಕಗ್ಗೊಲೆಯ ಮೂಲಕ.

ದೇಶದ್ರೋಹದ ಕೆಲಸಗಳನ್ನು ಮಾಡಿ ಕೊನೆಗೆ ಸೋಗಲಾಡಿಗಳ ವೇಷದಲ್ಲಿ ಗಾಂಧಿ ತತ್ವಗಳನ್ನು ಮುಂದಿಟ್ಟು ಮತ ಬೇಡಿ ಅಧಿಕಾರಕ್ಕೆ ಬಂದರಲ್ಲ ಅದು ಗಾಂಧಿ ತತ್ವದ ಕೊಲೆಯಲ್ಲವೇ? 60ವರ್ಷ ನಿರಂತರವಾಗಿ ದೇಶದ ಜನರಿಗೆ ಮೋಸ ಮಾಡಿತ್ತಲ್ಲ ಅದು ಗಾಂಧಿ ತತ್ವಗಳ ಕೊಲೆಯಾದೀತು. ಗೋಹತ್ಯೆ, ಮತಾಂತರ ಎಂದಾಗ ಅರಚುತ್ತಾ ಅಲ್ಪಸಂಖ್ಯಾತರ ಪರ ವಹಿಸಿಕೊಂಡು ಮಾತನಾಡುತ್ತಾರಲ್ಲ ಅದು ಕೂಡ ಗಾಂಧಿ ತತ್ವದ ಕೊಲೆಯಾಗುತ್ತದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಬೇಕೆಂದ ಗಾಂಧಿ ಅವರ ಮಾತು ಮೀರಿ ನಡೆದರಲ್ಲಾ ಅದನ್ನು ಏನೆನ್ನಬೇಕು?
ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು ನೆನಪಾಗುತ್ತದೆ. I know you are here to kill me. Shoot, coward, you are only going to kill a man, ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಎಂದು ಹೇಳಿದ್ದ ಮಾತದು. ಇಲ್ಲಿ ಆ ಮಾತುಗಳು ನೆನಪಾಗುತ್ತವೆ. ಈ ನೆಲೆಗಟ್ಟಿನಿಂದ ನೋಡಿದರೆ ಗಾಂಧಿಯನ್ನು ಶಾಶ್ವತವಾಗಿ ಕೊಂದದ್ದು ದೇಹಕ್ಕೆ ಗುಂಡಿಟ್ಟುಕೊಂದ ನಾಥೂರಾಮ್ ಗೋಡ್ಸೆಯೋ ಅಥವಾ ವಿಚಾರಗಳಿಗೆ 60 ವರ್ಷಗಳಿಂದ slow poison ಉಣಿಸುತ್ತಾ ಬಂದ ಕಾಂಗ್ರೆಸ್ಸಿಗರೋ ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟಕ್ಕೂ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳು ಗಾಂಧಿಯನ್ನು ನಮ್ಮೊಂದಿಗಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಬಾಯ್ಬಿಟ್ಟರೆ ಗಾಂಧಿಗಿರಿಯನ್ನೇ ಉಸುರುವ ನಕಲಿ ಗಾಂಧಿಗಳು ದೇಶ ಲೂಟಿ ಮಾಡುವ ಮೂಲಕ ಗಾಂಧಿ ತತ್ವಗಳನ್ನು ಎಂದಿಗೋ ಕೊಲೆ ಮಾಡಿದರು!. ಆದರೆ ಎಲ್ಲವನ್ನೂ ಮಾಡಿದ ಕಾಂಗ್ರೆಸ್ಸಿಗರು ಮಾತ್ರ ಲೋಕಸಭೆಯಲ್ಲಿ ಕಿರುಚತೊಡಗಿದರು.

ಸಂಸತ್ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಿಷಯಗಳು ಚರ್ಚೆಯಾದ ಸಂದರ್ಭದಲ್ಲಿ ಗಾಂಧಿ ಹೆಸರನ್ನು ಗುತ್ತಿಗೆಗೆ ಪಡೆದಿರುವ ಕಾಂಗ್ರೆಸ್ಸಿಗರು ಅವರ ತತ್ವಗಳಿಗೇಕೆ ವಿರುದ್ಧವಾಗಿ ಮಾತನಾಡುತ್ತಾರೆ? ಸಾಧ್ವಿ ನಿರಂಜನ ಜ್ಯೋತಿ ಅವರು ಈ ದೇಶದಲ್ಲಿ ರಾಮನ ಮಕ್ಕಳು ಮಾತ್ರ ದೇಶದಲ್ಲಿರಬೇಕೆಂದು ಹೇಳಿದಾಗ ಗಾಂಧಿಯ ರಾಮರಾಜ್ಯದ ಕನಸಿನ ಆಯಾಮವನ್ನೂ ಮರೆತು ಸಂಸತ್ ನಲ್ಲಿ ಗದ್ದಲವೆಬ್ಬಿಸಿದರು. ರಾಜೀನಾಮೆ ಕೇಳಿದರು. ಕಾಂಗ್ರೆಸ್ಸಿಗರು ಗಾಂಧಿಜಿ ತತ್ವ ಹಾಗೂ ಆ ಹೆಸರನ್ನು ನಿತ್ಯನಿರಂತರವಾಗಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕಾ?

ಇನ್ನು ಮತಾಂತರದ ವಿಷಯದಲ್ಲಿಯೂ ಕಾಂಗ್ರೆಸ್ ಪಕ್ಷ ಎಂದಿಗೂ ನಡೆದುಕೊಂಡಿರುವುದು ಗಾಂಧಿ ತತ್ವಗಳಿಗೆ ವಿರುದ್ಧವಾಗಿಯೇ, ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯ ಧ್ವಂಸ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದ್ದರೂ ಇವರದ್ದೇ ಸರ್ಕಾರ ಇದ್ದಾಗ ಶಿಖಂಡಿಗಳಂತೆ ವರ್ತಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ 57 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿದನ್ನು ಮಾತ್ರ ಸಹಿಸಲಾಗಲಿಲ್ಲ. ಆಗ ಗಾಂಧಿ ತತ್ವಗಳ ಬಗ್ಗೆ ಕಾಂಗ್ರೆಸ್ಸಿಗರಿಗೆ ನೆನಪಾಗಲಿಲ್ಲ. ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಾದರೂ ಗಾಂಧಿ ತತ್ವಗಳನ್ನು ಕೊಂದಿದ್ದು ಮಾತ್ರ ತಾವೇ ಎಂದು ಮನಸ್ಸಾಕ್ಷಿ ಚುಚ್ಚಲಿಲ್ಲ. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆಗೆ ಪ್ರತಿಭಟಿಸುತ್ತಾರೆಂದರೆ ಕಾಂಗ್ರೆಸ್ಸಿಗರು ಅದೆಂಥಹ ನೈತಿಕ ಭ್ರಷ್ಟರಿರಬೇಕು?
ಇವೆಲ್ಲದ್ದಕ್ಕೂ ಮೀರಿದ ಗಾಂಧಿ ತತ್ವ ಅಂಹಿಸೆ, ಕಾಂಗ್ರೆಸ್ಸಿಗರು ಅದನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ? ಗಾಂಧಿಯನ್ನು ಹತ್ಯೆ ಮಾಡಿದವ ಬ್ರಾಹ್ಮಣ ಎಂಬ ಕಾರಣಕ್ಕೆ ಬಾಂಬೆಯಲ್ಲಿ ಅದೆಷ್ಟು ಬ್ರಾಹ್ಮಣರ ಮೇಲೆ ದಾಳಿ ನಡೆದಿಲ್ಲ? ಇಂದಿರಾ ಗಾಂಧಿಯನ್ನು ಕೊಂದವರ ಸಮುದಾಯದವರೆಂಬ ಕಾರಣಕ್ಕೆ ಅದೆಷ್ಟು ಸಿಖ್ಖರನ್ನು ಹತ್ಯೆ ಮಾಡಿಲ್ಲ? ಗಾಂಧಿ ತತ್ವಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ತಡೆಯಬಹುದಿತ್ತಲ್ಲ. ಇವೆಲ್ಲವನ್ನೂ ಬಿಡಿ, ದೇಶವನ್ನು ಕೇಕ್ ಕತ್ತರಿಸಿದ ರೀತಿಯಲ್ಲಿ ಕತ್ತರಿಸಿ ಹಂಚಿದಾಗ ಪಾಕಿಸ್ತಾನದಿಂದ ಭಾರತಕ್ಕೆ ಹೊರಟ ಹಿಂದೂ ಮಹಿಳೆಯರು ಮಾನ ಕಳೆದುಕೊಂಡು ಅಹಿಂಸಾವಾದಿಯಾದ ಗಾಂಧಿ ಎದುರೇ ಹೆಣಗಳಾಗಿ ಬಿದ್ದಾಗ ಕಾಂಗ್ರೆಸ್ಸಿಗರು ಅಹಿಂಸಾ ತತ್ವವನ್ನು ಮರೆತೇಬಿಟ್ಟಿದ್ದರು. ಹಾಗಾದರೆ ಇಷ್ಟೆಲ್ಲಾ ನಡೆದಾಗಲೂ ಸುಮ್ಮನಿದ್ದ ಕಾಂಗ್ರೆಸ್ಸಿನವರು ಗಾಂಧಿ ಬದುಕಿದ್ದಾಗಲೇ ಅವರ ಕೊಲೆ ಮಾಡಿದ್ದರು ಎಂಬುದು ಸಾಬೀತಾದಂತಾಯಿತು. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆ ನಿಜ ಅನ್ನಿಸಲಿಲ್ಲ. ಅಧಿಕಾರಕ್ಕಾಗಿ ಏನನ್ನೂ ಮಾಡಲು ತಯಾರಿರುವವರಿಗೆ ಗಾಂಧಿ ತತ್ವಗಳನ್ನು ಕೊಲ್ಲುವುದು ಕಷ್ಟದ ಕೆಲಸವಾಗದು. ಏಕೆಂದರೆ ಅವರಿಗೆ ತತ್ವ ಸಿದ್ಧಾಂತಗಳಿಗಿಂತ ಲೂಟಿ ಹೊಡೆಯುವುದೇ ಮುಖ್ಯ. ಲೂಟಿ ಹೊಡೆಯುವುದಕ್ಕೆ ಅಧಿಕಾರ ಮುಖ್ಯ, ಅಧಿಕಾರ ಹಿಡಿಯಲು ಮಾತ್ರ ಗಾಂಧಿ ತತ್ವಗಳು ಸೀಮಿತ. ಸಂಬಂಧವೇ ಇಲ್ಲದಿದ್ದರೂ ಹೆಸರಲ್ಲೇ ಗಾಂಧಿ ಎಂಬ ಪದ ಸೇರಿಸಿಕೊಂಡಿದ್ದಾರಲ್ಲಾ, ಇನ್ನು ತತ್ವಗಳನ್ನು ಕಟ್ಟಿಕೊಂಡು ಏನಾಗಬೇಕು? ಸಾಚಾಗಳಂತೆ ವರ್ತಿಸುವ ಕಾಂಗ್ರೆಸ್ಸಿಗರು ಗಾಂಧಿ ನೆನಪಿನಲ್ಲಿ ದೇಶಕ್ಕೆ ಉಪಯೋಗವಾಗುವ ಯೋಜನೆಗಳನ್ನು ನೀಡಿದ್ದಾರಾ? ಗಾಂಧಿಜಿ ಹೇಳುತ್ತಿದ್ದ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವುದಕ್ಕೂ 60 ವರ್ಷಗಳೇ ಬೇಕಾಯಿತು. ಅದೂ ಕಾಂಗ್ರೆಸ್ಸೇತರ ಪ್ರಧಾನಿಯಿಂದ. ರಾಜಕೀಯ ಕ್ಷೇತ್ರವನ್ನು ಕಲ್ಮಶಗೊಳಿಸಿದವರಿಂದ ಭಾರತವನ್ನು ಸ್ವಚ್ಛಗೊಳಿಸಲು ಹೇಗೆತಾನೇ ಸಾಧ್ಯ ಹೇಳಿ?
ತಾವಿದ್ದ ಕಾಂಗ್ರೆಸ್ ಪಕ್ಷ ದೇಶಕ್ಕೂ ತಮ್ಮ ತತ್ವ ಸಿದ್ಧಾಂತಗಳಿಗೂ ಮುಳುವಾಗುತ್ತದೆ ಎಂದು ಗಾಂಧಿಗೆ ಗೊತ್ತಿರಲಿಲ್ಲವೇ? ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳು ಗಾಂಧಿ ಬಳಿ ಅಳಲು ತೋಡಿಕೊಂಡಾಗ ನಿರಾಶ್ರಿತರ ಪರವಾಗಿ ಪ್ರಧಾನಿ ನೆಹರೂಗೆ ಅಪ್ಪಣೆ ಮಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಈ ವಿಷಯದಲ್ಲಿ ನೆಹರೂ ನಡೆದುಕೊಂಡ ರೀತಿಯಲ್ಲೇ ಗಾಂಧಿಗೆ ತಮ್ಮ ರಾಮರಾಜ್ಯದ ಕನಸನ್ನೂ ಸೇರಿಸಿ ಸಮಸ್ತ ತತ್ವಗಳಿಗೂ ಈ ಪಕ್ಷ ಕೊಳ್ಳಿ ಇಡಲಿದೆ ಎಂದು ಅರ್ಥವಾಗಬೇಕಿತ್ತು. ಒಂದು ವೇಳೆ ಅರ್ಥವಾಗಿದ್ದರೂ ಗಾಂಧಿ ಆ ವೇಳೆಗೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದರು. ಒಬ್ಬ ನಾಯಕನಿಂದ ಪ್ರಧಾನಿ ಹುದ್ದೆ ಗಿಟ್ಟಿಸಿಕೊಂಡ ಪಕ್ಷ ಆತ ಬದುಕಿದ್ದಾಗಲೇ ತನ್ನ ಗಾಡ್ ಫಾದರ್ ನ ತತ್ವಗಳಿಗೆ ತಿಲಾಂಜಲಿ ಅರ್ಪಿಸಿತ್ತು. ಆದರೂ ಶರೀರಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನೇ ಮುಂದಿಟ್ಟುಕೊಂಡು ಸಂಸತ್ ನಲ್ಲಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಹಾಗೂ ನೆಹರೂ ಕುಟುಂಬದ ಪ್ರತಿಯೊಂದು ನಡೆಯೂ ಗಾಂಧಿ ತತ್ವವನ್ನು ಕೊಲೆ ಮಾಡಿದೆ. ಭಾರತದ ಬಗ್ಗೆ ಭಾವನೆಗಳೇ ಇಲ್ಲದೇ ಹಿಂದೂವಾಗಿ ನನ್ನ ಹುಟ್ಟು ಆಕಸ್ಮಿಕ ಎಂದವರನ್ನು ವಿಪರೀತವಾಗಿ ತಲೆಮೇಲೆ ಕೂರಿಸಿಕೊಂಡಾಗ ತತ್ವಗಳನ್ನು ಬಲಿಕೊಡಬೇಕಾಗುತ್ತದೆ ಎಂಬುದಕ್ಕೆ ಗಾಂಧಿಗಿಂತಲೂ ಉತ್ತಮ ಉದಾಹರಣೆ ಬೇಕಿಲ್ಲ. ಗಾಂಧಿ ತತ್ವಗಳನ್ನು ಕಾಂಗ್ರೆಸ್ ಕೊಂದರೂ ಗೋಡ್ಸೆಯೇ ಗಾಂಧಿಯನ್ನು ಕೊಂದದ್ದು ಎಂದೆನಿಸುವುದು ಸಹಜ. ಕಾಂಗ್ರೆಸ್ ಗಾಂಧಿ ವಿಚಾರದಲ್ಲಿ ನಡೆದುಕೊಂಡಿದ್ದು ಅಧಿಕಾರಕ್ಕಾಗಿ, ಮತ ಗಳಿಸಲು ಬಳಸಿಕೊಂಡು ಎಸೆದದ್ದು ಎಲ್ಲದರ ಬಗ್ಗೆ ಅರಿವಿರುವವರು ಗೋಡ್ಸೆ ಮಾತ್ರ ಗಾಂಧಿಯನ್ನು ಕೊಂದ ಎನ್ನಲು ಸಾಧ್ಯವಿಲ್ಲ. ಗಾಂಧಿ ತತ್ವವನ್ನು ಕೊಂದಿದ್ದು ಕಾಂಗ್ರೆಸ್ ಎಂಬ ಸಾಕ್ಷಿಮಹಾರಾಜರ ಮಾತು ಸುಳ್ಳೆನ್ನಲು ಸಾಧ್ಯವಿಲ್ಲ.

Monday, 1 December 2014

ಶರಿಯತ್ ಕೋರ್ಟ್ ಗಳಿಗೇ ಮಾನ್ಯತೆ ಇಲ್ಲ ಎಂದಾದ ಮೇಲೆ ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವ ದರ್ದೇಕೆ?

ಈ ದೇಶದಲ್ಲಿ ಸಂವಿಧಾನಕ್ಕೆ ಪರ್ಯಾಯವಾದ ಮತ್ತೊಂದು ಕಾನೂನು ಚಾಲ್ತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ ಭದ್ರತೆಗೇ ಅಪಾಯವೊಡ್ಡುವ ಸ್ಥಿತಿ ಎದುರಾದಾಗ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಇಲ್ಲದಿದ್ದರೆ ಪರ್ಯಾಯ ಕಾನೂನಿನ ಪ್ರಕಾರ ಏನು ನಡೆದರೂ ಪಿಳಿಪಿಳಿ ನೋಡುತ್ತಾ ಕುಳಿತುಬಿಡುತ್ತೇವೆ. ಈ ಮಾತನ್ನು ಈಗೇಕೆ ಹೇಳಬೇಕಾಗಿದೆ ಎಂದರೆ ಪ್ರತಿಯೊಂದರಲ್ಲೂ ಪ್ರತ್ಯೇಕತೆಯಲ್ಲೇ ಜೀವನ ನಡೆಸುತ್ತಿರುವ ಅಲ್ಪಸಂಖ್ಯಾತರಿಗೆ ಶರಿಯತ್ ಕಾನೂನಿನ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭವಾಗಿರುವುದರಿಂದ.

ಅವರಿಗಾಗಿಯೇ ಪ್ರತ್ಯೇಕ ವಿವಾಹ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಅಪರಾಧ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಬ್ಯಾಂಕ್, ಅವರಿಗಾಗಿಯೇ ಪ್ರತ್ಯೇಕ ಪಕ್ಷ ಹೀಗೆ ಎಣಿಸುತ್ತಿದ್ದರೆ ಪ್ರತ್ಯೇಕತೆಯ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದರಲ್ಲೂ ಪ್ರತ್ಯೇಕತೆ ಬಯಸುವವರು ಈಗ ಮ್ಯುಚುಯಲ್ ಫಂಡ್ ಗೆ ಬಂದಿದ್ದಾರೆ. ಅದೂ ಶರಿಯತ್ ಪ್ರಕಾರ ಮಾಡಬೇಕಂತೆ! ಅವರೇನು ಕೇಳಿಲ್ಲ ಬಾಂಧವರನ್ನು ಮೆಚ್ಚಿಸಲು ನಮ್ಮದೇ ಎಸ್.ಬಿ.ಐ ಹಮ್ಮಿಕೊಂಡಿರುವ ಹೊಸ ಯೋಜನೆ!

ಪ್ರತ್ಯೇಕ ದೇಶ ಬೇಕು ಎಂದರು ಕೊಟ್ಟದ್ದು ಆಯಿತು. ಪ್ರತ್ಯೇಕ ವಿವಾಹ ಕಾಯ್ದೆ ಎಂದರು ಅಲ್ಪಸಂಖ್ಯಾತರ ಮತ ಗಿಟ್ಟುತ್ತದೆ ಎಂದು ಏನೂ ಹೇಳದೇ ಮೌನವಾಗಿದ್ದಾಯಿತು. ಪ್ರತ್ಯೇಕ ರಾಜ್ಯದಲ್ಲೂ ತಮ್ಮದೇ ವಿಚಿತ್ರ ಕಾನೂನು-ಕಟ್ಟಲೆ ಬೇಕು ಎಂದರು ದೇಶದ ಪಂಡಿತ-ಮಹಾತ್ಮರು ಅದಕ್ಕೂ ಒಪ್ಪಿದರು. ಹೀಗೆಯೇ ಕೇಳುತ್ತಾ ಹೋದಂತೆಲ್ಲಾ ಇಲ್ಲ ಎನ್ನದೇ ಕೊಟ್ಟಾಯಿತು. ಕಾಲ ಬದಲಾದಂತೆ ಕೇಳದೆಯೂ ಓಲೈಸುವ ಪದ್ಧತಿ ಜಾರಿ ಬಂತು. ಕೊಡುತ್ತಾ ಹೋದಂತೆಲ್ಲಾ ಕಿರುಚುವುದು ಹೆಚ್ಚಾಯಿತೇ ಹೊರತು ಎಲ್ಲರಲ್ಲೂ ಒಂದಾಗುವ ಭಾವನೆ ಮೂಡಲಿಲ್ಲ. ತಾವೂ ಈದೇಶದ ಪ್ರಜೆಗಳು, ತಮಗೂ ಈ ದೇಶದ ಸಂವಿಧಾನಾತ್ಮಕ ಕಾನೂನುಗಳು ಅನ್ವಯವಾಗುತ್ತವೆ ಹೊರತು ಧರ್ಮದ ಚೌಕಟ್ಟಿನಲ್ಲಿರುವ ಕಾನೂನು ಅನ್ವಯಿಸುವುದಿಲ್ಲ ಎಂದು ಅವರಿಗೆ ಅನ್ನಿಸಲೇ ಇಲ್ಲ...!

ಈ ದೇಶದಲ್ಲಿ ಏನಾಗುತ್ತಿದೆ? ಇಂತಹದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಏಕೆಂದರೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಶರಿಯತ್ ಕೋರ್ಟ್ ಗಳ ಕುರಿತು ಮಹತ್ವದ ತೀರ್ಪನ್ನು ನೀಡಿತ್ತು. ಶರಿಯತ್ ’ಕೋರ್ಟ್’ ಗಳಿಗೆ ಕಾನೂನಿನ ಅಡಿಯಲ್ಲಿ ಮಾನ್ಯತೆಯೇ ಇಲ್ಲವೆಂಬುದು ಆ ತೀರ್ಪಿನ ಸಾರಾಂಶ. ಆದರೂ ಶರಿಯತ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭಿಸಲಾಗುತ್ತಿದೆ.

ಶರಿಯತ್ ಕೋರ್ಟ್ ಗಳು ಹೊರಡಿಸುವ ಸೋ ಕಾಲ್ಡ್ ತೀರ್ಪುಗಳಿಂದ ರೋಸಿ ಹೋಗಿದ್ದ ಅದೆಷ್ಟೋ ಜನರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ದೇಶದ ಸಂವಿಧಾನಾತ್ಮಕ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವ ಶರಿಯತ್ ಕೋರ್ಟ್ ಹಾಗೂ ಕೋರ್ಟ್ ಗಳು ವಿಧಿಸುವ ಫತ್ವಾಗಳಿಗೆ ಕಾನೂನು ಮಾನ್ಯತೆ ಇಲ್ಲವೆಂದು ಘಂಟಾಘೋಷವಾಗಿ ಸುಪ್ರೀಂ ತೀರ್ಪು ನೀಡಿದೆ. ಅದು ಫತ್ವಾಗೆ ಮಾತ್ರ ಸೀಮಿತವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಹೇಳಿರುವುದು ಶರಿಯತ್ ಕೋರ್ಟ್ ಗಳು ಹೊರಡಿಸುವ ಫತ್ವಾಗಳಿಗಲ್ಲ ಸಂಪೂರ್ಣ ಶರಿಯತ್ ಕೋರ್ಟ್ ಗಳಿಗೆ. ಶರಿಯತ್ ಕೋರ್ಟ್ ಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದಾದ ಮೇಲೂ ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದಾದರೆ ಸ್ಥಳೀಯ ಪಂಚಾಯತ್ ಗಳು ಹೊರಡಿಸುವ ಕಾನೂನ ಪ್ರಕಾರವೂ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವೋ? ಪರಿಸ್ಥಿತಿ ಹೀಗಿರಬೇಕಾದರೆ ಕಾನೂನು ಮಾನ್ಯತೆಯೇ ಇಲ್ಲದ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರ ದರ್ದೇನು?.

ಶರಿಯತ್ ಕೋರ್ಟ್ ಗಳ ಮೇಲಿದ್ದ ಗಂಭೀರ ಆರೋಪವೇ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯಂತೆ ವರ್ತಿಸುತ್ತಿದೆ ಎಂಬುದು. ಮ್ಯುಚುಯಲ್ ಫಂಡ್ ಎನ್ನುವುದು ಎಷ್ಟೇ ಖಾಸಗಿ ವಿಷಯವಾದರೂ ಅದು ದೇಶದ ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಅಂಥದ್ದರಲ್ಲಿ ಭಾರತದ ನ್ಯಾಯಾಂಗಕ್ಕೆ ಪರ್ಯಾಯ ನ್ಯಾಯಾಂಗದಂತೆ ವರ್ತಿಸುತ್ತಿರುವ ಶರಿಯತ್ ಕೋರ್ಟ್ ಗಳಿಂದ ರಚಿತವಾದ ಕಾನೂನಿಗೆ ಅನುಗುಣವಾಗಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರಲ್ಲಿ ಅರ್ಥವಿದೆಯೇ?



ಇಷ್ಟಕ್ಕೂ ಎಸ್.ಬಿ.ಐ ಪ್ರಾರಂಭಿಸಿರುವ ಶರಿಯತ್ ಮ್ಯುಚುಯಲ್ ಫಂಡ್ ಯೋಜನೆ ಹೆಸರೇ ಹೇಳುವಂತೆ ಶರಿಯತ್ ಸಲಹಾ ಮಂಡಳಿಯ ಅಧೀನಕ್ಕೆ ಒಳಪಟ್ಟಿರುತ್ತದೆ.. ಅದರ ನಿರ್ವಹಣೆ ಶರಿಯತ್ ಕೋರ್ಟ್ ಗಳಲ್ಲಿರುವವರ ಅಣತಿಯಂತೆಯೇ ನಡೆಯಲಿದೆ. ಶರಿಯತ್ ಕೋರ್ಟ್ ಗಳು ಅಥವಾ ಧಾರ್ಮಿಕ ಮುಖಂಡರು ಅನುಮತಿ ನೀಡುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಹೂಡಿಕೆ ಮಾಡಿದ ನಂತರವೂ ಅದನ್ನು ಬಳಸುವುದಕ್ಕೂ ನಿಬಂಧನೆಗಳೂ ಇಲ್ಲದೇ ಇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮ್ಯುಚುಯಲ್ ಫಂಡ್ ನ ಹಣ ಯಾವುದಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಅಲ್ಲವೇ? ಇಸ್ಲಾಂ ನಲ್ಲಿ ಬಡ್ಡಿ ತೆಗೆದುಕೊಳ್ಳುವುದು, ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಮೊದಲಾದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೆಲವೊಂದು ವಿಷಯಗಳು ಸಮಾಜಕ್ಕೆ ಒಳಿತೆಂದೇ ಕಂಡರೂ, ಸರ್ಕಾರಿ ಸ್ವಾಮ್ಯದ ಇಡಿಯ ಒಂದು ಯೋಜನೆಯನ್ನು ಶರಿಯತ್ ಕಾನೂನಿನ ಆಧಾರದಲ್ಲಿ ರೂಪಿಸುವುದು ಪಾನ್ ಇಸ್ಲಾಂ, ಇಸ್ಲಾಂ ಬ್ರದರ್ ಹುಡ್ ಹೆಸರಿನಲ್ಲಿ ನಡೆಯುವ ಅದೆಷ್ಟೋ ವಿಚಾರಗಳ ದೃಷ್ಠಿಯಿಂದ ಭಾರತದ ಸಂವಿಧಾನಕ್ಕೆ ವಿರೋಧಿಯಾಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು?
ಧಾರ್ಮಿಕ ಸಂಘರ್ಷದಲ್ಲಿ ಇಸ್ಲಾಂ ನ ತೀವ್ರತೆಯನ್ನು ನೆನಪಿಸುವ ಇರಾಕ್ ನ ಐ.ಎಸ್.ಐ.ಎಸ್ ಸಂಘಟನೆಯ ಕಣ್ಣಮುಂದೆಯೇ ಇದೆ. ಇರಾಕ್ ನಲ್ಲಿ ತಮ್ಮದೇ ಕರೆನ್ಸಿ ಜಾರಿಗೆ ತರುವ ಮಟ್ಟಿಗೆ ವ್ಯವಸ್ಥೆಗೆ ಸೆಡ್ಡು ಹೊಡೆದು ಸದ್ದಿಲ್ಲದೇ ಹೇಗೆ ಪರ್ಯಾಯ ವ್ಯವಸ್ಥೆ ರೂಪಿಸುತ್ತಾರೆ ಎಂಬುದೂ ನಮಗೆ ಚೆನ್ನಾಗಿ ತಿಳಿದಿದೆ. ಇವೆಲ್ಲದ್ದೂ ಪಾನ್ ಇಸ್ಲಾಂ, ಅಥವಾ ಇಸ್ಲಾಂ ಬ್ರದರ್ ಹುಡ್ ಪರಿಣಾಮ ಬೀರಿದೆ ಎಂಬುದೂ ಪ್ರಮುಖ ಪ್ರಶ್ನೆಯಾಗಲಿವೆ.

ಇಸ್ಲಾಮ್ ಬ್ರದರ್ ಹುಡ್ ನ್ನು ವ್ಯಾಖ್ಯಾನಿಸಲು ಇರಾಕ್ ನ ಐ.ಎಸ್.ಐ.ಎಸ್ ನಿಂದ ಭಾರತಕ್ಕೆ ವಾಪಸ್ಸಾದ ಮುಂಬೈ ನ ಯುವಕನ ಪ್ರಕರಣ, ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್ ಧ್ವಜ ಹಾರಿಸಿದ್ದು, ತಮಿಳುನಾಡಿನಲ್ಲಿ ಟೀ ಶರ್ಟ್ ಗಳ ಮೇಲೆ ಧ್ವಜ ಇಸೀಸ್ ಧ್ವಜ ಪ್ರಿಂಟ್ ಆದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಒಂದು ವೇಳೆ ಶರಿಯತ್ ಕೋರ್ಟ್ ನ ನಾನೂನು ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಒಂದು ಯೋಜನೆಯೇ ಜಾರಿಗೆ ಬರುತ್ತದೆ ಎಂದಾರೆ ಅದೇ ಶರಿಯತ್ ಕೋರ್ಟ್ ಧರ್ಮದ ನೆಲೆಗಟ್ಟಿನಲ್ಲಿ ಒಪ್ಪುವ ಜಿಹಾದ್, ಭಯೋತ್ಪಾದನೆ, ಒಂದಕ್ಕಿಂತ ಹೆಚ್ಚು ಮದುವೆಯಂತಹ ವಿಷಯಗಳನ್ನೂ ಕಾನೂನು ಬದ್ಧ ಮಾಡಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದರೆ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೇಗೆ ಸಾಧ್ಯ?
ನೆನಪಿರಲಿ, ಮುಂಬೈ ದಾಳಿಯ ರುವಾರಿ, ಹಫೀಜ್ ಸಯ್ಯದ್, ಇದೇ ದಾಳಿಯಲ್ಲಿ ಅಪರಾಧ ಸಾಬೀತಾಗಿ ಗಲ್ಲಿಗೇರಿದ್ದ ಅಜ್ಮಲ್ ಕಸಬ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದೂ ಇದೇ ಧಾರ್ಮಿಕ ಚೌಕಟ್ಟು. ಏಕೆಂದರೆ ಅವರು ಧರ್ಮಕ್ಕಾಗಿ ಹೋರಾಟ ನಡೆಸಿ ವೀರಮರಣವನ್ನಪ್ಪಿದ್ದಾರೆ. ತನ್ನ ಧರ್ಮವನ್ನು ಬೆಳೆಸುವುದಕ್ಕೆ ಹೋರಾಡುವುದು ಧಾರ್ಮಿಕ ಕಾನೂನಿನಲ್ಲಿ ಪ್ರತಿಷ್ಠೆಯ ಪ್ರಶ್ನೆ. ಭಯೋತ್ಪಾದನೆ, ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಭಾರತೀಯ ಮುಸ್ಲಿಮರು ಒಪ್ಪುವುದಿಲ್ಲ ಎಂದು ಸಮರ್ಥನೆ ನೀಡಬಹುದು ಆದರೆ ಭಾರತೀಯ ಮುಸ್ಲಿಮರು ಶರಿಯತ್ ನ್ನು ಒಪ್ಪುವುದಿಲ್ಲ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಶರಿಯತ್ ಕಾನೂನಿನಲ್ಲಿ ನಿಷೇಧಿಸುವ ಅಂಶಗಳನ್ನು ಹೊರತುಪಡಿಸಿ ಹಾಗೆಯೂ ಓರ್ವ ವ್ಯಕ್ತಿ ಹೂಡಿಕೆ ಮಾಡಬಹುದು. ಅದಕ್ಕೆ ಪ್ರತ್ಯೇಕ ಕಾನೂನು ಇರುವ ಮ್ಯೂಚುಯಲ್ ಫಂಡ್ ಅಗತ್ಯವೇನು?
ಒಂದು ಸರ್ವೇ ಪ್ರಕಾರ, ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳ ಆಸ್ತಿ ಒಟ್ಟು 1.8ಟ್ರಿಲಿಯನ್ ಡಾಲರ್ ನಷ್ಟಿದೆ. ಅಂದರೆ ಬರೊಬ್ಬರಿ 112 ಲಕ್ಷ ಕೋಟಿಯಷ್ಟಿದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶದ ಓರ್ವ ಮುಸ್ಲಿಮನಿಗೆ ತೊಂದರೆಯಾದರೆ ಅರಬ್ ರಾಷ್ಟ್ರದಲ್ಲಿರುವ ಮತ್ಯಾರೋ ವ್ಯಕ್ತಿ ಸಹಾಯಕ್ಕೆ ಧಾವಿಸುತ್ತಾರೆ. ಇದನ್ನು ತಪ್ಪು ಎಂದು ಹೇಳಲಾಗದು, ಆದರೆ ಒಂದು ವೇಳೆ ವಿದೇಶಿ ಮುಸ್ಲಿಮರು ಮ್ಯುಚುಯಲ್ ಫಂಡ್ ಗೆ ಹಣ ನೀಡಿ ಸದ್ದಿಲ್ಲದೇ ಆಡಳಿತ, ಆರ್ಥಿಕತೆಯ ಮೇಲೆ ಹಿಡಿದ ಸಾಧಿಸುವ ಹುನ್ನಾರವಿದ್ದರೆ ಈ ಶರಿಯತ್ ಕಾನೂನಿನ ಅಡಿ ಪ್ರಾರಂಭವಾಗುವ ಮ್ಯುಚುಯಲ್ ಫಂಡ್ ನಿಂದ ದೇಶದ ಭದ್ರತೆಗೇ ಅಪಾಯ ಎಂಬುದು ನಮಗೇಕೆ ಅರ್ಥವಾಗುತ್ತಿಲ್ಲ. ಇಷ್ಟೆಲ್ಲಾ ಇದ್ದರೂ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಿದರೆ ಮುಂದೊಮ್ಮೆ ಭಾರತದ ಸಮಸ್ತ ಆರ್ಥಿಕತೆಯನ್ನು ಷರಿಯತ್ ಆಳುವುದಿಲ್ಲ ಎಂದು ನಂಬುವುದಾದರೂ ಹೇಗೆ? ಸರಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತದೆ. ಒಂದು ವೇಳೆ ಶರಿಯತ್ ಕಾನೂನಿಗೆ ವಿರುದ್ಧವಾಗಿ ಹೂಡಿಕೆ ಮಾಡಿದಲ್ಲಿ ಆತನ ವಿರುದ್ಧ ಫತ್ವಾ ಹೊರಡಿಸಲಾಗುತ್ತದೆ ಎಂಬ ಅಂಶವೂ ಇದೆ. ಹಾಗಾದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಬೆಲೆ ಏನು?

ಇಷ್ಟಕ್ಕೂ ಶರಿಯತ್ ಕಾನೂನಿನಡಿಯಲ್ಲಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವಂತಹ ಘನ ಕಾರ್ಯ ಮಾಡಲು ಹೊರಟಿರುವ ಎಸ್.ಬಿ.ಐ ನೀಡುರುವ ಸ್ಪಷ್ಟನೆಯಾದರೂ ಏನು? " ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬಹುತೇಕರು ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ" ಏಕೆಂದರೆ ಇಸ್ಲಾಂ ನ ಕಾನೂನು ಬಡ್ಡಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಆದ್ದರಿಂದ ಶರಿಯತ್ ಕೋರ್ಟ್ ಕಾನೂನಿನ ಪ್ರಕಾರವೇ ಮ್ಯುಚುಯಲ್ ಫಂಡ್ ನ ನಿಯಮಗಳನ್ನೇ ಬದಲಿಸಿಬಿಟ್ಟರೆ ಬಾಂಧವರನ್ನು ಮೆಚ್ಚಿಸಬಹುದು. ಇಸ್ಲಾಂ ಧಾರ್ಮಿಕ ಕಾನೂನಿನ ಪ್ರಕಾರ ಕಾಫಿರರು ಬದುಕಿರಲೇಬಾರದೆಂಬ ಕಾನೂನಿದೆ ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮೇತರರನ್ನು ಕೊಂದುಬಿಡಬಹುದೇ?

ಮ್ಯುಚುಯಲ್ ಫಂಡ್ ಯೋಜನೆ ರೂಪಿಸಿದ ಮಹಾನುಭಾವರು ಯೋಚಿಸಲೇಬೇಕಾದ ಪ್ರಮುಖ ಅಂಶವಿದು. ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬ್ಯಾಂಕಿಂಗ್ ನಿಂದ ದೂರ ಉಳಿದವರನ್ನು ಬ್ಯಾಂಕ್ ವ್ಯವಸ್ಥೆಯೊಂದಿಗೆ ಜೋಡಿಸಲು ಇರುವುದು ಇದೊಂದೇ ಮಾರ್ಗವೇ? ಹಾಗಿದ್ದರೆ ಪ್ರಧಾನಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಜನ್ ಧನ್ ಯೋಜನೆ ಯಾವ ಪುರುಷಾರ್ಥಕ್ಕೆ? ಜನ್-ಧನ್ ಯೋಜನೆಗೂ ಕೂಡ ಮುಸ್ಲಿಂ ಸಮುದಾಯದವರನ್ನು ಬ್ಯಾಂಕ್ ನೊಂದಿಗೆ ಜೋಡಿಸಲು ಸಾಧ್ಯವಾಗಿಲ್ಲ ಎಂದರೆ ಮುಸ್ಲಿಮರು ಭಾರತ ಸರ್ಕಾರದ ಯೋಜನೆಗಳನ್ನು ಧಿಕ್ಕರಿಸುತ್ತಿರಬೇಕು. ಇಲ್ಲ ಆ ಯೋಜನೆಗಳಿಗೆ ಮುಸ್ಲಿಂ ಸಮುದಾಯದವರನ್ನು ತಲುಪಲು ಸಾಧ್ಯವಾಗದೇ ಇರಬೇಕು. ಇದರಲ್ಲಿ ಯಾವುದು ಸತ್ಯ?

ಪ್ರತಿಯೊಂದೂ ಶರಿಯತ್ ನಂತೆಯೇ ನಡೆಯಬೇಕು ಎಂದಿದ್ದರೆ ಅದಕ್ಕಾಗಿಯೇ ಪಾಕಿಸ್ತಾನದಂತಹ ಪ್ರತ್ಯೇಕ ರಾಷ್ಟ್ರಗಳಿವೆ ಅಲ್ಲಿ ಮುಂದುವರೆಸಲಿ. ಆದರೆ ಭಾರತದ ಪ್ರಜಾಪ್ರಭುತ್ವವನ್ನು ಒಪ್ಪಿಯೂ, ಇಲ್ಲಿನ ಕಾನೂನನ್ನು ತಿರಸ್ಕರಿಸಿ ತಮ್ಮದೇ ಮತ್ತೊಂದು ಕಾನೂನು ಬೇಕೆಂದು ಪಟ್ಟುಹಿಡಿಯುವವರು ದೇಶಧ್ರೋಹಿಗಳಲ್ಲದೇ ಮತ್ತೇನು? ಎಲ್ಲರಿಗೂ ಒಂದೇ ಕಾನೂನು, ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದು ಇಡೀ ದೇಶವೇ ಒಂದಾಗಿರಲು ಬಯಸುತ್ತಿದ್ದರೆ ಅಧಿಕಾರಿ ವರ್ಗದಲ್ಲೇ ಶರಿಯತ್ ಕಾನೂನು, ಫತ್ವಾ ಗಳಿಗೆ ಅನುಗುಣವಾಗಿ ಯೋಜನೆ, ಕಾರ್ಯಕ್ರಮ, ಮ್ಯುಚುಯಲ್ ಫಂಡ್ ಇತ್ಯಾದಿಗಳನ್ನು ಪ್ರಾರಂಭಿಸುವ ಭಯಂಕರ ಆಲೋಚನೆ ಮೂಡಿದರೆ ಭಾರತ ಶ್ರೇಷ್ಠವಾಗಬಹುದೇನೋ ಗೊತ್ತಿಲ್ಲ. ಆದರೆ ಏಕ್ ಭಾರತ್ ಶ್ರೇಷ್ಠ್ ಭಾರತ್ ಆಗುವುದಕ್ಕಂತೂ ಸಾಧ್ಯವಿಲ್ಲ. ಹಾಗೂ ಭಾರತವನ್ನು ಏಕ್ ಎಂದು ಹೇಳುವ ಅವಕಾಶವೂ ಉಳಿಯುವುದಿಲ್ಲ! ಎಚ್ಚರ